ಬೆಂಗಳೂರು: ರಾಷ್ಟ್ರಧ್ವಜದ ಕುರಿತು ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪಟ್ಟು ಹಿಡಿದು, ಫೆ.16ರಿಂದ ಉಭಯ ಸದನಗಳಲ್ಲಿ ಧರಣಿ ನಡೆಸಿರುವ ಕಾಂಗ್ರೆಸ್ ಸದಸ್ಯರು, ಗುರುವಾರದಿಂದ ಅಹೋರಾತ್ರಿ ಧರಣಿ ಕುಳಿತಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆಯ ಒಳಗೆ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಬುಧವಾರ ಸಂಜೆ ಕಾಂಗ್ರೆಸ್ ನಾಯಕರು ಗಡುವು ವಿಧಿಸಿದ್ದರು. ಆದರೆ, ಕಾಂಗ್ರೆಸ್ ನಾಯಕರ ಬೇಡಿಕೆಗೆ ಬಿಜೆಪಿ ಸೊಪ್ಪು ಹಾಕಲಿಲ್ಲ. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು ಬೆಳಿಗ್ಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಮತ್ತು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಗದ್ದಲದ ಮಧ್ಯೆಯೂ ಪ್ರಶ್ನೋತ್ತರ ನಡೆಸಲಾಯಿತು. ‘ಬೇಕೇ ಬೇಕು ರಾಜೀನಾಮೆ ಬೇಕು. ದೇಶದ್ರೋಹಿ ಬಿಜೆಪಿ, ದೇಶದ್ರೋಹಿ ಈಶ್ವರಪ್ಪ, ಆರ್‌ಎಸ್‌ಎಸ್ ಕೈಗೊಂಬೆ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಅದಕ್ಕೆ ತಿರುಗೇಟು ನೀಡಲು ಬಿಜೆಪಿ ಸದಸ್ಯರು ತಮ್ಮ ಸ್ಥಾನ ಬಿಟ್ಟು ಮೊದಲ ಸಾಲಿಗೆ ಬಂದರು. ಆದರೆ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಜೆಪಿ ಶಾಸಕರತ್ತ ಗದರಿದರು. ‘ಪ್ರಶ್ನೋತ್ತರ ನಡೆಯುತ್ತಿದೆ. ಆಡಳಿತ ಪಕ್ಷದ ಸದಸ್ಯರು ಹೀಗೆ ಎದ್ದು ಬರುವುದು ಸರಿಯಲ್ಲ’ ಎಂದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ತಮ್ಮ ಪಕ್ಷದ ಶಾಸಕರನ್ನು ಹಿಂದಕ್ಕೆ ಕಳುಹಿಸಿದರು. ಪ್ರಶ್ನೋತ್ತರ ಬಳಿಕ ಕಲಾಪವನ್ನು ಮುಂದುವರಿಸಲು ಸಾಧ್ಯವಾಗದ ಕಾರಣಕ್ಕೆ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಭೋಜನ ವಿರಾಮದ ಬಳಿಕವೂ ಕಾಂಗ್ರೆಸ್ ಶಾಸಕರು ಧರಣಿ ಸ್ಥಳ ಬಿಟ್ಟು ಕದಲಲಿಲ್ಲ. ಆಗ ಸಭಾಧ್ಯಕ್ಷರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ವಿಧಾನಪರಿಷತ್ತಿನಲ್ಲಿ ಭೋಜನ ವಿರಾಮದ ಬಳಿಕ ಸಭಾಪತಿ ಹೊರಟ್ಟಿ ಇತ್ತೀಚೆಗೆ ಈಶ್ವರಪ್ಪ ಅವರು ಆಡಿದ ಮಾತಿನ ಕುರಿತು ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆಗೆ ಅವಕಾಶ ನೀಡಿ ಪರಿಸ್ಥಿತಿ ತಿಳಿಗೊಳಿಸಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಸದನ ನಿಯಂತ್ರಣಕ್ಕೆ ತರಲು ಸಾಧ್ಯವಾಗದ ಕಾರಣ ಶುಕ್ರವಾರಕ್ಕೆ ಮುಂದೂಡಿದರು.

ಆ ಬಳಿಕ ಕಾಂಗ್ರೆಸ್ ಸದಸ್ಯರು ಸಭೆ ಸೇರಿ ಎರಡೂ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರ ಜತೆ ಮಾತನಾಡಿ, ‘ನಾವು ರಾತ್ರಿ ಧರಣಿ ನಡೆಸುವುದರಿಂದ ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು. ಧರಣಿನಿರತ ಶಾಸಕರಿಗೆ ರಾತ್ರಿ ಸಸ್ಯಾಹಾರಿ ಊಟ, ಟಿ–ಕಾಫಿ, ಹಾಸಿಗೆ, ದಿಂಬು, ಹೊದಿಕೆ ವ್ಯವಸ್ಥೆ ಮಾಡಲಾಯಿತು.

ರಾತ್ರಿ 8 ಗಂಟೆ ಸುಮಾರಿಗೆ ಧರಣಿನಿರತರನ್ನು ಭೇಟಿಯಾದ ಸಭಾಧ್ಯಕ್ಷ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ ಮತ್ತಿತರರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಡಿ.ಕೆ.ಶಿವಕುಮಾರ್ ಅವರ ಜತೆ ಸಮಾಲೋಚಿಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಮನವಿಯನ್ನು ಕಾಂಗ್ರೆಸ್ ನಾಯಕರು ನಯವಾಗಿಯೇ ತಿರಸ್ಕರಿಸಿದರು.

‘ಈಗ ನೀವು ಅಹೋರಾತ್ರಿ ಧರಣಿ ಕೈಬಿಡಿ, ನಾಳೆ ಬೆಳಿಗ್ಗೆ ಕಲಾಪ ಆರಂಭವಾದಾಗ ಮುಂದುವರೆಸಿ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದರು. ‘ಧರಣಿ ಕೈಬಿಡುವಂತೆ ನಾವು ಎರಡು ಗಂಟೆಗಳ ಕಾಲ ಪ್ರಯತ್ನ ನಡೆಸಿದೆವು. ಆದರೂ ಅವರು ಅದಕ್ಕೆ ಬಗ್ಗಲಿಲ್ಲ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.