ಬೆಂಗಳೂರು/ಮಡಿಕೇರಿ: ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ರಾಜ್ಯದಾದ್ಯಂತ ಭಾನುವಾರ ನಡೆಯಬೇಕಿದ್ದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಶನಿವಾರ ಬೆಳಿಗ್ಗೆ ಮಡಿಕೇರಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಈ ಅಕ್ರಮಕ್ಕೆ ಕಾರಣನಾದ ಹಲವು ಹಗರಣಗಳ ಕಿಂಗ್ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿಯನ್ನು (68) ಬಂಧಿಸಿದ್ದಾರೆ.

ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ಭಾನುವಾರದ ಪರೀಕ್ಷೆಯನ್ನು ರದ್ದುಗೊಳಿಸಿರುವ ಇಲಾಖೆ, ಪರೀಕ್ಷೆಯ ಮುಂದಿನ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಹೇಳಿದೆ.

ವಿದ್ಯಾಮಂದಿರದಲ್ಲಿ ಸಿದ್ಧತೆ: ಶಿವಕುಮಾರಯ್ಯ ಹಾಗೂ ಆತನ ಸಹಚರ ಬಸವರಾಜು, ಶುಕ್ರವಾರ ರಾತ್ರಿ ನಾಲ್ಕು ಬಸ್ನಲ್ಲಿ ಉತ್ತರ ಕರ್ನಾಟಕ ಭಾಗದ 156 ಅಭ್ಯರ್ಥಿಗಳನ್ನು (ಆರು ಮಹಿಳೆಯರು) ಮಡಿಕೇರಿ ಜಿಲ್ಲೆ ಸೋಮವಾರ ಪೇಟೆಗೆ ಕರೆದೊಯ್ದಿದ್ದರು. ಅಲ್ಲಿರುವ ಕಲ್ಲಮಠದ ಶ್ರೀನಂಜುಂಡೇಶ್ವರ ವಿದ್ಯಾಮಂದಿರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ ಅವರು, ಅಲ್ಲೇ ಪ್ರಶ್ನೆಪತ್ರಿಕೆಗಳನ್ನು ಹಂಚಿ ಉತ್ತರವನ್ನೂ ಹೇಳಿಕೊಡುವ ಮೂಲಕ ಅಭ್ಯರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದರು.

ಈ ವಿಚಾರ ತಿಳಿದು ಬೆಳಿಗ್ಗೆ ವಿದ್ಯಾಮಂದಿರದ ಮೇಲೆ ದಾಳಿ ನಡೆಸಿದ ಸಿಸಿಬಿ ಎಸಿಪಿಗಳಾದ ಎಸಿಪಿ ಬಾಲರಾಜ್ ಹಾಗೂ ವೇಣುಗೋಪಾಲ್ ನೇತೃತ್ವದ ತಂಡಗಳು, ಶಿವಕುಮಾರಯ್ಯನನ್ನು ಸೆರೆ ಹಿಡಿದಿವೆ. ಈ ಹಂತದಲ್ಲಿ ಆತನ ಸಹಚರ ಬಸವರಾಜು ತಪ್ಪಿಸಿಕೊಂಡಿದ್ದಾನೆ. ಕೆಲ ಅಭ್ಯರ್ಥಿಗಳು ಮಹಡಿಯಿಂದ ಜಿಗಿದು ಓಡಿ ಹೋಗಿದ್ದಾರೆ. ಪೊಲೀಸರು 116 ಪರೀಕ್ಷಾರ್ಥಿಗಳು ಹಾಗೂ 7 ಚಾಲಕರನ್ನು ವಿದ್ಯಾಮಂದಿರದಲ್ಲೇ ಕೂಡಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆವರಣದಲ್ಲಿದ್ದ ಕಾರು ಹಾಗೂ ನಾಲ್ಕು ಬಸ್ಗಳನ್ನೂ ಜಪ್ತಿ ಮಾಡಿದ್ದಾರೆ.

₹ 8 ಲಕ್ಷಕ್ಕೆ ಡೀಲ್: ‘ತನಗೆ ಪ್ರಶ್ನೆಪತ್ರಿಕೆ ಸಿಕ್ಕಿರುವುದಾಗಿ ಏಜೆಂಟ್ಗಳ ಮೂಲಕ ಉದ್ಯೋಗಾಕಾಂಕ್ಷಿಗಳ ವಲಯದಲ್ಲಿ ಪ್ರಚಾರ ಮಾಡಿಸಿದ್ದ ಶಿವಕುಮಾರಯ್ಯ, ‘₹8 ಲಕ್ಷ ಕೊಟ್ಟರೆ ನಾವೇ ನಿಮ್ಮನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತೇವೆ’ ಎಂದು ನಂಬಿಸಿದ್ದ. ಅದಕ್ಕೆ ಒಪ್ಪಿ ಹಣ ಕೊಟ್ಟಿದ್ದ ಎಲ್ಲರನ್ನೂ ಮಡಿಕೇರಿಗೆ ಕರೆದೊಯ್ದಿದ್ದ. ‘ಯಾವುದೋ ಕಾರ್ಯಕ್ರಮಕ್ಕೆ ರಿಹರ್ಸಲ್ ನಡೆಸಲು ಕೊಠಡಿಗಳು ಬಾಡಿಗೆಗೆ ಬೇಕು’ ಎಂದು ವಿದ್ಯಾಮಂದಿರದ ಆಡಳಿತ ಮಂಡಳಿಗೆ ಸುಳ್ಳು ಹೇಳಿ ಕೊಠಡಿಗಳನ್ನು ಪಡೆದುಕೊಂಡಿದ್ದ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಅಭ್ಯರ್ಥಿಗಳಿಂದಲೇ ಸುಳಿವು: ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದಾಗಿ ಕೆಲ ಅಭ್ಯರ್ಥಿಗಳು ಎಡಿಜಿಪಿ ಔರಾದಕರ್ ಅವರಿಗೆ ಕರೆ ಮಾಡಿ ಹೇಳಿದ್ದರು.

ಕೂಡಲೇ ಬೆಂಗಳೂರು ಪೊಲೀಸ್ ಕಮಿಷನರ್ಗೆ ದೂರು ಕೊಟ್ಟಿದ್ದ ಎಡಿಜಿಪಿ, ಶಂಕಿತರ ಮೊಬೈಲ್ ಸಂಖ್ಯೆಗಳನ್ನೂ ನೀಡಿದ್ದರು. ತನಿಖೆ ಪ್ರಾರಂಭಿಸಿದ ಸಿಸಿಬಿ, ಸಿಡಿಆರ್ ಸುಳಿವಿನಿಂದ ಆ ಸಂಖ್ಯೆಗಳ ಜಾಡು ಹಿಡಿದು ಶನಿವಾರ ಬೆಳಿಗ್ಗೆ ದಾಳಿ ನಡೆಸಿದೆ.

ಶಿವಕುಮಾರಯ್ಯನ ಕರಾಳ ಚರಿತ್ರೆ

ಗುಬ್ಬಿ ತಾಲ್ಲೂಕಿನ ಶಿವಕುಮಾರಯ್ಯ, ಬಿಎಸ್ಸಿ ಹಾಗೂ ಬಿ.ಇಡಿ ಪದವೀಧರ. 1985ರಲ್ಲಿ ನಗರಕ್ಕೆ ಕಾಲಿಟ್ಟ ಈತ, ಶಿವಾಜಿನಗರ ಹಾಗೂ ಕಾಟನ್ಪೇಟೆಯ ಶಾಲೆಗಳಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದ. 2008ರಲ್ಲಿ ಪರೀಕ್ಷಾ ಅಕ್ರಮದಲ್ಲಿ ಮೊದಲ ಬಾರಿಗೆ ಈತನ ಹೆಸರು ಕೇಳಿಬಂತು. ಆ ನಂತರ ಶಿಕ್ಷಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಅದೇ ದಂಧೆ ಮುಂದುವರಿಸಿದ. ದೊಡ್ಡ ಜಾಲವನ್ನೇ ಕಟ್ಟಿದ.

2016ರಲ್ಲಿ ಪಿಯುಸಿ ಪರೀಕ್ಷೆಯ ಆರೂ ಪ್ರಶ್ನೆಪತ್ರಿಕೆಗಳನ್ನೂ ಸೋರಿಕೆ ಮಾಡಿದ್ದ. ಈ ಪ್ರಕರಣದಲ್ಲಿ ಸಿಐಡಿ ಪೊಲೀಸರು ಈತನನ್ನು ಬಂಧಿಸಿ, ಕೋಕಾ ಅಸ್ತ್ರವನ್ನೂ ಪ್ರಯೋಗಿಸಿದ್ದರು. 2017ರಲ್ಲಿ ಹೈಕೋರ್ಟ್ನಲ್ಲಿ ಜಾಮೀನು ಪಡೆದು ಆಚೆ ಬಂದಿದ್ದ ಶಿವಕುಮಾರಯ್ಯ, ಈಗ ಐದನೇ ಸಲ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಅಭ್ಯರ್ಥಿಗಳೂ ಆರೋಪಿಗಳು

‘ಪ್ರಶ್ನೆಪತ್ರಿಕೆಗಳ ತಯಾರಿ ಹಾಗೂ ಅವುಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸುವ ಪ್ರಕ್ರಿಯೆ ತುಂಬ ಗೋಪ್ಯವಾಗಿಯೇ ನಡೆಯುತ್ತದೆ. ಆದರೂ, ಶಿವಕುಮಾರಯ್ಯ ಅವುಗಳನ್ನು ಎಲ್ಲಿಂದ ಹಾಗೂ ಹೇಗೆ ಕದ್ದಿದ್ದ ಎಂಬುದನ್ನು ತಿಳಿಯಬೇಕಿದೆ. ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. 116 ಅಭ್ಯರ್ಥಿಗಳನ್ನೂ ಆರೋಪಿಗಳನ್ನಾಗಿ ಮಾಡುತ್ತೇವೆ’ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.