ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಚಲನವಲನ’ ಪದ್ಧತಿಗೆ ನೌಕರರ ವಿರೋಧ

Published 29 ಜೂನ್ 2024, 0:12 IST
Last Updated 29 ಜೂನ್ 2024, 0:12 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸರ್ಕಾರ ಸಚಿವಾಲಯ ನೌಕರರಿಗೆ ಸೀಮಿತವಾಗಿದ್ದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸ್ಥಳ ನಿಯುಕ್ತಿಗೊಳಿಸುವ ‘ಚಲನವಲನ’ ಪದ್ಧತಿಯನ್ನು ಸರ್ಕಾರ ನಗರ ಪ್ರದೇಶದ ವ್ಯಾಪ್ತಿಯ ನೌಕರರಿಗೂ ವಿಸ್ತರಿಸಿದೆ.

ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಸೇರಿದ ಸರ್ಕಾರಿ ನೌಕರರನ್ನು ಆವಶ್ಯಕತೆಗೆ ಅನುಗುಣವಾಗಿ ಸಚಿವಾಲಯದ ವ್ಯಾಪ್ತಿಯ ಯಾವುದೇ ಇಲಾಖೆಗೆ ವರ್ಗಾಯಿಸಲು ಬಹಳ ವರ್ಷಗಳ ಹಿಂದೆಯೇ ನಿಯಮ ರೂಪಿಸಲಾಗಿತ್ತು. ಇದಕ್ಕೆ ಸಾರ್ವತ್ರಿಕ ವರ್ಗಾವಣೆಯ ನಿಯಮಗಳು ಅನ್ವಯವಾಗುವುದಿಲ್ಲ. ಯಾವುದೇ ಸಮಯದಲ್ಲಾದರೂ ಅಗತ್ಯ ಕಾರಣ ನೀಡಿ ನೌಕರರನ್ನು ಸ್ಥಳ ನಿಯುಕ್ತಿ ಮಾಡಬಹುದು.

2013ರಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ವರ್ಗಾವಣಾ ಮಾರ್ಗಸೂಚಿಗಳಲ್ಲೂ ‘ಚಲನವಲನ’ ಪದ್ಧತಿ ಸಚಿವಾಲಯದ ನೌಕರರಿಗಷ್ಟೇ ಸೀಮಿತವಾಗಿತ್ತು. 2013ರ ವರ್ಗಾವಣಾ ಮಾರ್ಗಸೂಚಿಗಳನ್ನು ಈ ಬಾರಿ ಪರಿಷ್ಕರಿಸಿ ಮರು ಆದೇಶ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಆಯಾ ಇಲಾಖೆಗಳ ನೌಕರರನ್ನು ನಗರ ಪ್ರದೇಶದ ವ್ಯಾಪ್ತಿಯ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಸ್ಥಳ ನಿಯುಕ್ತಿಗೊಳಿಸಲು ಅವಕಾಶ ಮಾಡಿಕೊಟ್ಟಿದೆ.

‘ಒಬ್ಬ ಅಧೀಕ್ಷಕ ಸಾರ್ವತ್ರಿಕ ವರ್ಗಾವಣೆಯಲ್ಲಿ ಭಾಗವಹಿಸಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಗೆ ವರ್ಗವಾಗಿ ಬಂದರೆ, ಇಲಾಖೆಯ ಮುಖ್ಯಸ್ಥರು ಚಲನವಲನ ಪದ್ಧತಿಯನ್ನು ಬಳಸಿಕೊಂಡು ಕೆಲ ಸಮಯದಲ್ಲೇ ಅವರನ್ನು ಯಲಹಂಕದ ಉಪ ನಿರ್ದೇಶಕರ ಕಚೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರ್ಗಾಯಿಸಬಹುದು. ಸಚಿವಾಲಯ ನೌಕರರಾದರೆ ವಿಧಾನಸೌಧ, ವಿಕಾಸಸೌಧ ಹಾಗೂ ಸಚಿವಾಲಯ ಕಚೇರಿಗಳ ವ್ಯಾಪ್ತಿಗಷ್ಟೇ ಸೀಮಿತವಾಗಿರುತ್ತಾರೆ. ಬೇರೆ ಇಲಾಖೆಗಳು ನಗರ ಪ್ರದೇಶದ ಬೇರೆ ಬೇರೆ ಭಾಗದಲ್ಲಿರುತ್ತದೆ. ಇದರಿಂದ ಆ ನೌಕರರಿಗೆ ಸಾಕಷ್ಟು ಅನನುಕೂಲವಾಗುತ್ತದೆ’ ಎಂದು ವಿವಿಧ ಇಲಾಖೆಯ ನೌಕರರು ದೂರಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT