ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು: ಅರಣ್ಯದಲ್ಲಿ ಜೋಡಿ ಹಳಿ

ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ ರೈಲ್ವೆ ಇಲಾಖೆ
Published 7 ಆಗಸ್ಟ್ 2024, 16:51 IST
Last Updated 7 ಆಗಸ್ಟ್ 2024, 16:51 IST
ಅಕ್ಷರ ಗಾತ್ರ

ನವದೆಹಲಿ: ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗದ ವಿನ್ಯಾಸ ಬದಲಿಸಿರುವ ರೈಲ್ವೆ ಇಲಾಖೆ, ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸಲು ತೀರ್ಮಾನಿಸಿದೆ. 

‘ಯೋಜನೆಯ ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯದಲ್ಲಿ ದ್ವಿಪಥಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಲೋಕಸಭೆಗೆ ಬುಧವಾರ ತಿಳಿಸಿದರು. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು. ಪಶ್ಚಿಮ ಘಟ್ಟದ 108 ಕಿ.ಮೀ. ದಟ್ಟ ಅರಣ್ಯಗಳ ನಡುವೆ ಸಾಗುವ ಪ್ರಸ್ತಾವವಿರುವ ಈ ಯೋಜನೆ ಅನುಷ್ಠಾನಕ್ಕಾಗಿ 2 ಲಕ್ಷ ಮರಗಳ ಹನನ ಮಾಡಬೇಕಾಗುತ್ತದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.  

‘ಈ ಯೋಜನೆಗಾಗಿ ಹುಬ್ಬಳ್ಳಿ-ಕಿರಾವತಿ (47 ಕಿ.ಮೀ) ವಿಭಾಗದಲ್ಲಿ ಮಣ್ಣು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, 569.64 ಹೆಕ್ಟೇರ್ ಅರಣ್ಯ ಭೂಮಿಯ ಅರಣ್ಯ ಮತ್ತು ವನ್ಯಜೀವಿ ಅನುಮೋದನೆ ಹಾಗೂ ಸಂಬಂಧಿತ ವ್ಯಾಜ್ಯಗಳಿಂದಾಗಿ ಉಳಿದ ಕಾಮಗಾರಿ ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ವ್ಯಾಜ್ಯ ಇತ್ಯರ್ಥವಾಗಿರುವ ಕಾರಣ  ವನ್ಯಜೀವಿಗಳಿಗೆ ಪದೇ ಪದೇ ತೊಂದರೆಯಾಗುವುದನ್ನು ತಪ್ಪಿಸಲು ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದು ಸಚಿವರು ತಿಳಿಸಿದರು. ಡೆಹ್ರಡೂನ್‌ನ ವನ್ಯಜೀವಿ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ರೈಲ್ವೆ ಇಲಾಖೆಯು ಡಿಪಿಆರ್ ಸಿದ್ಧಪಡಿಸಿದೆ. 

ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆಯ ತಜ್ಞರ ಸಮಿತಿಯ ಶಿಫಾರಸಿನ ಪ್ರಕಾರವೇ ರೈಲ್ವೆ ಇಲಾಖೆ ಹೊಸ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಈಚೆಗೆ ತಾಕೀತು ಮಾಡಿತ್ತು. 

ದಟ್ಟ ಅರಣ್ಯಗಳ ನಡುವೆ ಸಾಗುವ ಈ ಯೋಜನೆಗೆ ಈಗಿನ ಸ್ವರೂಪದಲ್ಲಿ ಯೋಜನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ತಜ್ಞರ ಸಮಿತಿ, ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಅನುಷ್ಠಾನಕ್ಕೆ ರೈಲ್ವೆ ಇಲಾಖೆಯು ಹೊಸ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಲಹೆ ನೀಡಿತ್ತು. ಈ ಯೋಜನೆ ಅನುಷ್ಠಾನ ಮಾಡಿದರೆ ಅಪಾರ ಪ್ರಮಾಣದ ಕಾಡು ನಾಶವಾಗಲಿದೆ ಎಂದು 2022ರ ಹುಲಿ ಗಣತಿ ವರದಿಯಲ್ಲೂ ಎಚ್ಚರಿಸಲಾಗಿದೆ. 

ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರವು ಪರಿಸರ ಸಚಿವಾಲಯಕ್ಕೆ 2017ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಈ ಮಾರ್ಗ ನಿರ್ಮಾಣಕ್ಕೆ 595.64 ಹೆಕ್ಟೇರ್ ಅರಣ್ಯ ಬಳಕೆಯಾಗಲಿದೆ ಎಂದು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು. ಶರಾವತಿ ವನ್ಯಜೀವಿ ಧಾಮ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಈ ಮಾರ್ಗ ಹಾದು ಹೋಗಲಿದೆ ಎಂದೂ ಉಲ್ಲೇಖಿಸಿತ್ತು. 

‘ಶಿರೂರು, ವಯನಾಡ್ ಭೂಕುಸಿತ ನಂತರವೂ ಪಾಠ ಕಲಿತಿಲ್ಲ’
‘ಪರಿಷ್ಕೃತ ಪ್ರಸ್ತಾವನೆ ಯಾವ ಮಾರ್ಗದಲ್ಲಿ ಹಾದುಹೋಗಲಿದೆ ಎಂಬ ಮಾಹಿತಿ ನನಗಿಲ್ಲ. ಪಶ್ಚಿಮ ಘಟ್ಟದ ಮೂಲಕವೇ ಹೊಸ ಪ್ರಸ್ತಾವಿತ ಮಾರ್ಗದ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದರೆ ನನ್ನ ಸ್ಪಷ್ಟ ವಿರೋಧ ಇರಲಿದೆ. ಶಿರೂರು, ವಯನಾಡ್ ಭೂಕುಸಿತ ಘಟನೆಗಳ ನಂತರವೂ ಸರ್ಕಾರ ಪಾಠ ಕಲಿತಂತಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿರುವುದರ ಕುರಿತು ನಾವೆಲ್ಲರೂ ಅವಲೋಕನ ಮಾಡಿಕೊಳ್ಳುವ ತುರ್ತು ಅಗತ್ಯ ಇದೆ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಹೇಳಿದರು. ಈ ಯೋಜನೆ ವಿರೋಧಿಸಿ ಗಿರಿಧರ್ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT