ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣದಿಂದ ದೇವೇಗೌಡ ಪುತ್ರಿ ಅನಸೂಯ ಮಂಜುನಾಥ್ ಕಣಕ್ಕೆ?

Published 4 ಜುಲೈ 2024, 1:16 IST
Last Updated 4 ಜುಲೈ 2024, 1:16 IST
ಅಕ್ಷರ ಗಾತ್ರ

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಮಗಳು ಅನಸೂಯ ಮಂಜುನಾಥ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಜೆಡಿಎಸ್‌ ರಾಜ್ಯಾಧ್ಯಕ್ಷ–ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ಹಿರಿಯ ನಾಯಕರು ಇದೇ ಶನಿವಾರ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್ ಕಣಕ್ಕೆ ಇಳಿದಿದ್ದರು. ಮಂಜುನಾಥ್ ಅವರ ಪರವಾಗಿ ಪತ್ನಿ ಅನಸೂಯ ಅವರು ರಾಮನಗರ, ಕನಕಪುರ ಮತ್ತು ಚನ್ನಪಟ್ಟಣಗಳಲ್ಲಿ ಮನೆ–ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಪ್ರಚಾರದ ವೇಳೆ ಅವರು ರೂಪಿಸಿದ್ದ ತಂತ್ರ ಮತ್ತು ಅವರ ಪ್ರಚಾರದ ವೈಖರಿಯನ್ನು ಪರಿಗಣಿಸಿ, ಉಪಚುನಾವಣೆಗೆ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಪಕ್ಷವು ಯೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಚನ್ನಪಟ್ಟಣದಿಂದ ಕಣಕ್ಕೆ ಇಳಿಯಲು ಆಸಕ್ತಿ ಇಲ್ಲ ಎಂಬುದನ್ನು ನಿಖಿಲ್‌ ಕುಮಾರಸ್ವಾಮಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮೂಲಕ ವಿಧಾನಪರಿಷತ್ತಿಗೆ ಆಯ್ಕೆಯಾಗಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ಸಾಧ್ಯತೆ ಕಡಿಮೆ. ಅವರು ವಿಧಾನಸಭೆಗೆ ಚುನಾಯಿತರಾದರೆ, ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಒಂದು ಸ್ಥಾನ ನಷ್ಟವಾಗಲಿದೆ ಎಂದೂ ಮೂಲಗಳು ಹೇಳಿವೆ.

ಅನಸೂಯ ಅವರನ್ನು ಜೆಡಿಎಸ್‌ ಕಣಕ್ಕೆ ಇಳಿಸಿದರೆ, ಕಾಂಗ್ರೆಸ್‌ ಎಚ್‌.ಕುಸುಮ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎಂಬ ಮಾತೂ ಚಾಲ್ತಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT