ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾದ ಜಾತಿಗಣತಿ; ತೀವ್ರ ಜಟಾಪಟಿ

Published : 6 ಅಕ್ಟೋಬರ್ 2024, 23:30 IST
Last Updated : 6 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿಯ ಶಿಫಾರಸುಗಳನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಈ ವರದಿಯ ಬಿಡುಗಡೆ ಮತ್ತು ಅದರ ಶಿಫಾರಸುಗಳ ಜಾರಿ ಬಗ್ಗೆ ವಿರೋಧ ಪಕ್ಷಗಳ ಆಕ್ಷೇಪ ಒಂದೆಡೆಯಾದರೆ, ಕಾಂಗ್ರೆಸ್‌ ನಾಯಕರಲ್ಲಿನ ಭಿನ್ನ ನಿಲುವು ಮುನ್ನೆಲೆಗೆ ಬಂದಿದೆ. ‘ಜಾತಿಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದು ಡಿ.ಕೆ.ಸುರೇಶ್ ಅವರು ಈಚೆಗೆ ಹೇಳಿದ್ದಕ್ಕೆ ಕಾಂಗ್ರೆಸ್‌ನಲ್ಲೇ ದೊಡ್ಡ ಮಟ್ಟದ ಆಕ್ಷೇಪ ವ್ಯಕ್ತವಾಗಿದೆ. ವರದಿ ಜಾರಿಗೆ ಒತ್ತಾಯವೂ ವ್ಯಕ್ತವಾಗಿದೆ.

‘ಸರ್ಕಾರ ಬಿದ್ದರೆ ಬೀಳಲಿ ವರದಿ ಜಾರಿಗೆ ತನ್ನಿ’

ಸರ್ಕಾರ ಬೀಳುತ್ತದೆ ಎಂಬ ಭಯವೇ? ಸರ್ಕಾರ ಬಿದ್ದರೆ ಬೀಳಲಿ ಜಾತಿಗಣತಿ ವರದಿಯ ಶಿಫಾರಸುಗಳನ್ನು ಜಾರಿಗೆ ತರಲೇಬೇಕು. ನಾವು ಸರ್ಕಾರ ಉಳಿಸಿಕೊಂಡು ಅಧಿಕಾರ ಅನುಭವಿಸಲಷ್ಟೇ ಅಧಿಕಾರಕ್ಕೆ ಬಂದಿಲ್ಲ. ಇದನ್ನು ಜಾರಿಗೆ ತರುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಈ ವರದಿಯನ್ನು ಜಾರಿಗೆ ತರಲು ಕಾಂಗ್ರೆಸ್‌ ಸೇರಿದಂತೆ ಯಾವ ಪಕ್ಷವೂ ಇಚ್ಛಾಶಕ್ತಿ ತೋರಿಲ್ಲ. ನನ್ನ ಪಕ್ಷ ಸರಿಯಾಗಿ ಕೆಲಸ ಮಾಡಿಲ್ಲ ಎಂದಾದರೆ ನಾನು ಅದನ್ನು ಟೀಕಿಸದೇ ಇರುವುದಿಲ್ಲ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕರಾದ ರಾಹುಲ್‌ ಗಾಂಧಿ ಅವರು ಜಾತಿಗಣತಿ ನಡೆಸುತ್ತೇವೆ ಎಂದು ಎಲ್ಲೆಡೆ ದೃಢವಾಗಿ ಹೇಳುತ್ತಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಅದು ಇದೆ. ಹೀಗಿದ್ದಾಗ ಈಗಾಗಲೇ ಸಿದ್ಧವಿರುವ ವರದಿಯನ್ನು ಬಿಡುಗಡೆ ಮಾಡುವ ಜವಾಬ್ದಾರಿ ಸಿದ್ದರಾಮಯ್ಯ ಅವರ ಸರ್ಕಾರದ ಮೇಲೆ ಇದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ. ಯಾಕಾಗಿ ಮತ್ತು ಯಾವುದರ ಬಗ್ಗೆ ಎಚ್ಚರಿಕೆ ಇರಬೇಕು. ಅವರು ಯಾರಿಗೆ ಎಚ್ಚರಿಕೆ ನೀಡುತ್ತಿದ್ದಾರೆ? ಅವರು ಪಕ್ಷದ ಪ್ರಣಾಳಿಕೆಯನ್ನು ನೋಡಿದ್ದಾರೆಯೇ?
ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ

‘ಸಚಿವ ಸಂಪುಟ ಸಭೆಯ ಮುಂದಿಟ್ಟು ತೀರ್ಮಾನ’

ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದೊಂದು ವಿಚಿತ್ರ ಸಂದರ್ಭ. ಜಾತಿ ಜನಗಣತಿ ವರದಿಯನ್ನು ಸ್ವೀಕರಿಸದೇ ಇದ್ದರೆ ಸ್ವೀಕರಿಸಿಲ್ಲ ಎನ್ನುತ್ತಾರೆ. ಸ್ವೀಕರಿಸಿದರೆ ಈಗ ಯಾಕೆ ಎಂದು ವ್ಯಾಖ್ಯಾನಿಸುತ್ತಾರೆ. ವರದಿ ಸ್ವೀಕರಿಸಲು ವಿಳಂಬಕ್ಕೂ ಕಾರಣಗಳಿವೆ. ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಬೇಕೇ ಬೇಡವೇ ಎಂದು ತೀರ್ಮಾನಿಸುತ್ತೇವೆ. ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಬೇಕಿಲ್ಲವೆಂದು ಸಂಪುಟ ಸಭೆ ತೀರ್ಮಾನಿಸಿದರೆ ಮುಗಿಯಿತು. ಕೇಂದ್ರ ಸರ್ಕಾರದಿಂದಲೂ ಜನಗಣತಿ ನಡೆಯಲಿ. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಡಿಮೆ ಆಗಿದ್ದರೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ ಮತ್ತು ಬಳಸುತ್ತಾರೆ. ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ. ಆ ಮೇಲೆ ಡೋಣ. ರಾಜ್ಯ ಸರ್ಕಾರ ₹160 ಕೋಟಿ ವೆಚ್ಚ ಮಾಡಿದೆ. ಅದಕ್ಕೂ ಲೆಕ್ಕ‌ ಕೊಡಬೇಕು. ಇಲ್ಲದೇ ಇದ್ದರೆ ಸಿಎಜಿ ಕೂಡ ಆಕ್ಷೇಪ ವ್ಯಕ್ತಪಡಿಸಬಹುದು.
– ಜಿ.ಪರಮೇಶ್ವರ, ಗೃಹ ಸಚಿವ

‘ಮುಡಾ ಹಗರಣ ಬದಿಗೊತ್ತಲು ಜಾತಿಗಣತಿ ವಿಚಾರ ಮುಂದಕ್ಕೆ’

ಮುಡಾ ಹಗರಣವು ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂಥ ಸಮಯದಲ್ಲಿ ಹಗರಣ ಬದಿಗೊತ್ತಲು ಜಾತಿಗಣತಿ ವಿಚಾರವನ್ನು ಎತ್ತಲಾಗಿದೆ.  ಜಾತಿಗಣತಿಗೆ ನಮ್ಮ ವಿರೋಧವಿಲ್ಲ. ಆದರೆ ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಗಣತಿ ಮಾಡಲಾಗಿದೆ ಎಂದು ಶಾಮನೂರು ಶಿವಶಂಕರಪ್ಪರಂಥ ಕಾಂಗ್ರೆಸ್‌ ಮುಖಂಡರೇ ಹೇಳಿದ್ದಾರೆ. ವೈಜ್ಞಾನಿಕವಾಗಿ ಗಣತಿ ಮೊದಲು ನಡೆಯಲಿ. ಸಿದ್ದರಾಮಯ್ಯ ಅವರನ್ನು ಇಳಿಸಲು ಒಂದೂವರೆ ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲೇ ಪಿತೂರಿ ನಡೆದಿದೆ. ಮಾಗಡಿ ಬಾಲಕೃಷ್ಣ ಏನು ಮಾತನಾಡಿದ್ದಾರೆ? ಡಿ.ಕೆ. ಶಿವಕುಮಾರ್‌ ಏನು ಮಾತನಾಡಿದ್ದಾರೆ ಎಂದು ನೋಡಿದರೆ ಗೊತ್ತಾಗುತ್ತದೆ. ಮುಡಾ ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಎಸ್‌ಸಿಪಿ–ಟಿಎಸ್‌ಪಿ ಹಣ ಬೇರೆ ಯೋಜನೆಗಳಿಗೆ ಬಳಸಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂಬುದು ಬಿಜೆಪಿಯ ಹೋರಾಟವಾಗಿದೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

‘ಎಲ್ಲರಿಗೂ ಅಧಿಕಾರ ಸಿಗಲಿ’

ಗ್ರಾಮ ಪಂಚಾಯಿತಿ ಸದಸ್ಯರೂ ಆಗದ ಸಮುದಾಯಗಳು ರಾಜ್ಯದಲ್ಲಿವೆ. ಅವರು ದೇಶದ ಪ್ರಜೆಗಳಲ್ಲವೇ? ಅವರಿಗೂ ನ್ಯಾಯ ಸಿಗಬೇಕಿದ್ದರೆ ಜಾತಿ ಗಣತಿ ವರದಿ ಜಾರಿಯಾಗಬೇಕು. ಎಲ್ಲ ಸಮುದಾಯಗಳಿಗೆ ಅಧಿಕಾರ, ಸಂಪತ್ತು ಹಂಚಿಕೆ ಆಗಬೇಕಿದ್ದರೆ ವರದಿ ಬಿಡುಗಡೆ ಮಾಡಬೇಕು. ಜಾತಿಗಣತಿಯನ್ನು ವಿರೋಧ ಮಾಡುವ ಎರಡು ಬಲಿಷ್ಠ ಸಮುದಾಯಗಳಿಂದ 22 ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. 1.60 ಕೋಟಿ ಇರುವ ನಮ್ಮ ಸಮುದಾಯಗಳು ಸುಮ್ಮನಿರಬೇಕಾ? ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂದು ಹೊರಬರಲಿ. ರಾಜ್ಯದಲ್ಲಿ ಸಿದ್ದರಾಮಯ್ಯ ದಲಿತರ, ಶೋಷಿತರ ಪರ ಇದ್ದಾರೆ. ಮುಖ್ಯಮಂತ್ರಿ ಸ್ಥಾನಪಲ್ಲಟದ ಬಗ್ಗೆ ಅವರ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಒಂದು ವೇಳೆ ಬದಲಾವಣೆ ಮಾಡುವುದಿದ್ದರೆ ದಲಿತರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಬೇಕು.
-ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗಪೆದ್ದಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT