ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಬಳವೂ ಇಲ್ಲ; ಸೌಲಭ್ಯವೂ ಇಲ್ಲ!

ರಾಜ್ಯ ಸರ್ಕಾರದಿಂದ ‘ಆಹಾರ ಆಯೋಗ’ದ ನಿರ್ಲಕ್ಷ್ಯ? * ಹೆಸರಿಗಷ್ಟೆ ಸ್ಥಾನಮಾನ, ಭತ್ಯೆ
ಫಾಲೋ ಮಾಡಿ
Comments

ಬೆಂಗಳೂರು: ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ನೆರೆಯ ರಾಜ್ಯಗಳು ‘ಮಂತ್ರಿ’, ‘ಮುಖ್ಯ ಕಾರ್ಯದರ್ಶಿ’, ‘ಮುಖ್ಯ ಮಾಹಿತಿ ಆಯುಕ್ತ’ ಹುದ್ದೆಗೆ ಸರಿಸಮಾನ ಸ್ಥಾನಮಾನ ಮತ್ತು ವೇತನ ಸೌಲಭ್ಯ ನೀಡುತ್ತಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಐದು ತಿಂಗಳಿನಿಂದ ಸಂಬಳವನ್ನೇ ಕೊಟ್ಟಿಲ್ಲ!

ಸರ್ಕಾರವು ಆಯೋಗದ ಅಧ್ಯಕ್ಷರಿಗೆ ಹೆಸರಿಗಷ್ಟೆ ಕಾರ್ಯದರ್ಶಿ‌ಗೆ ಸಮಾನವಾದ ಸ್ಥಾನಮಾನ, ವೇತನ ಭತ್ಯೆ ನೀಡಿದೆ. ಅದೇ ರೀತಿ ಸದಸ್ಯರಿಗೆ ಜಂಟಿ ಕಾರ್ಯದರ್ಶಿಗೆ ಸಮಾನವಾದ ಸೌಲಭ್ಯ ನೀಡಿದೆ. ಆದರೆ, ಇದನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುವುದನ್ನು ಮರೆತಿದೆ ಎಂದು ಆಯೋಗದ ಸದಸ್ಯರು ದೂರಿದ್ದಾರೆ.

ಆಯೋಗ ರಚನೆಯಾಗಿದ್ದು 2017ರ ಜುಲೈ 5ರಂದು. ಆ ನಂತರ, ಅಧ್ಯಕ್ಷರು ಮತ್ತು ಸದಸ್ಯರಿಗೆ 2–3 ತಿಂಗಳಿಗೊಮ್ಮೆ ವೇತನ ಬಿಡುಗಡೆ ಮಾಡಲಾಗಿದೆ. 2018ರ ಸೆಪ್ಟೆಂಬರ್‌ನಿಂದ ಅದೂ ಸಿಕ್ಕಿಲ್ಲ. ಅಷ್ಟೇ ಅಲ್ಲ, ಆರನೇ ವೇತನ ಆಯೋಗದ ಶಿಫಾರಸಿನಂತೆ ಕಾರ್ಯದರ್ಶಿ‌ ಮತ್ತು ಜಂಟಿ ಕಾರ್ಯದರ್ಶಿಗಳ ವೇತನ, ಭತ್ಯೆ ಪರಿಷ್ಕರಿಸಲಾಗಿದೆ. ಅದರನ್ವಯ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವೇತನವೂ ಹೆಚ್ಚಳಗೊಳ್ಳಬೇಕು. ಆದರೆ, ಅದಕ್ಕೆ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

‘ಆಹಾರ ಭದ್ರತಾ ಕಾಯ್ದೆ’ ಅನ್ವಯ ವಿವಿಧ ರಾಜ್ಯಗಳಲ್ಲಿ ಈ ಆಯೋಗವನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದ ಬಳಿಕ ಸಿದ್ದರಾಮಯ್ಯ ಸರ್ಕಾರ ಈ ಆಯೋಗವನ್ನು ರಚಿಸಿದೆ. ಆಹಾರ ಇಲಾಖೆಯ ಆಯುಕ್ತಾಲಯದ ಕಟ್ಟಡದಲ್ಲಿ ಕಚೇರಿ ನೀಡಲಾಗಿದೆ. ಆದರೆ, ಗಾಳಿ, ಬೆಳಕು ಇಲ್ಲದ ಪುಟ್ಟ ಕೊಠಡಿಯೊಂದರಲ್ಲಿ ಅಧ್ಯಕ್ಷರು, ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕ ಸಿಬ್ಬಂದಿ ನೇಮಕವೂ ಆಗಿಲ್ಲ. ಎಲ್ಲ ಕೆಲಸಗಳನ್ನು ಅಧ್ಯಕ್ಷರು ಮತ್ತು ಸದಸ್ಯರೇ ಮಾಡುತ್ತಿದ್ದು, ಆಹಾರ ಇಲಾಖೆ‌ಯ ಇಬ್ಬರು ಹೊರಗುತ್ತಿಗೆ ನೌಕರರರು ನೆರವಿಗಿದ್ದಾರೆ!

ವಿಪರ್ಯಾಸವೆಂದರೆ, ಆಯೋಗದ ಕಾರ್ಯಚಟುವಟಿಕೆಗೆ ಮೈಸೂರು ಬ್ಯಾಂಕು ವೃತ್ತದ ಬಳಿ ಸುಸಜ್ಜಿತ ಕಟ್ಟಡವನ್ನು ವರ್ಷದ ಹಿಂದೆ ತಿಂಗಳಿಗೆ ₹ 1.75 ಲಕ್ಷಕ್ಕೆ ಬಾಡಿಗೆ ಪಡೆಯಲಾಗಿದೆ. ಅಲ್ಲಿಗೆ ಯಾವುದೇ ಪೀಠೋಪಕರಣ ಒದಗಿಸಿಲ್ಲ. ಹೀಗಾಗಿ, ಕಚೇರಿ ಇನ್ನೂ ಸ್ಥಳಾಂತರ ಆಗಿಲ್ಲ. ಅಧ್ಯಕ್ಷರಿಗೆ ಕಾರು ಖರೀದಿಸಲು ₹16 ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಅದನ್ನು ₹9 ಲಕ್ಷಕ್ಕೆ ಇಳಿಸಲಾಗಿತ್ತು. ಅದನ್ನೂ ನೀಡಿಲ್ಲ. ಅಧ್ಯಕ್ಷರಿಗೆ ಪ್ರತ್ಯೇಕವಾಗಿ ಹಳೆ ಇಂಡಿಕಾ ಕಾರು ಬಾಡಿಗೆ ನೀಡಲಾಗಿದ್ದು, ನಗರದ ನಾಲ್ಕು ದಿಕ್ಕುಗಳಲ್ಲಿ ನೆಲೆಸಿರುವ ಐವರು ಸದಸ್ಯರನ್ನು ಮತ್ತೊಂದು ಇಂಡಿಕಾ ಕಾರಿನಲ್ಲಿ ಕಚೇರಿಗೆ ಕರೆದೊಯ್ದು ಬಿಡಲಾಗುತ್ತಿದೆ.

ಮುಖ್ಯಮಂತ್ರಿಗೆ ಮನವಿ: ಆಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸ್ಥಾನಮಾನ ಮತ್ತು ಸೌಲಭ್ಯ ಹೆಚ್ಚಿಸಬೇಕಾದ ಅಗತ್ಯದ ಕುರಿತು 2018ರ ಫೆಬ್ರವರಿಯಲ್ಲೇ ಅಂದಿನ ಆಹಾರ ಇಲಾಖೆ ಸಚಿವ ಯು.ಟಿ. ಖಾದರ್‌ ಅವರಿಗೆ ವಿವರವಾದ ಮನವಿಯನ್ನು ಆಯೋಗ ಸಲ್ಲಿಸಿತ್ತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಇದೀಗ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮತ್ತೆ ಮನವಿ ಸಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ನಮಗ್ಯಾಕೆ ಈ ತಾರತಮ್ಯ?’
ರಾಜ್ಯದಲ್ಲಿ ಮಾಹಿತಿ ಆಯೋಗದ ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನ್ಯಾಯಮೂರ್ತಿಯ ಹಾಗೂ ಆಯುಕ್ತರಿಗೆ ಮುಖ್ಯ ಕಾರ್ಯದರ್ಶಿ ಸ್ಥಾನಮಾನ ನೀಡಲಾಗಿದೆ. ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ಮತ್ತು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧ್ಯಕ್ಷರು ಮತ್ತು ಸದಸ್ಯರಿಗೆ ಕ್ರಮವಾಗಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಮಾನ ನೀಡಲಾಗಿದೆ. ‘ನಮ್ಮದೂ ಸ್ವಾಯತ್ತ ಸಂಸ್ಥೆ. ನಮಗ್ಯಾಕೆ ಈ ತಾರತಮ್ಯ?’ ಎಂಬ ಆಹಾರ ಆಯೋಗದ ಸದಸ್ಯರು ಪ್ರಶ್ನಿಸಿದ್ದಾರೆ.

*
ಕಾರ್ಯಭಾರ ವ್ಯಾಪ್ತಿ, ಜವಾಬ್ದಾರಿ ಹೆಚ್ಚಿರುವುದರಿಂದ ರಾಜ್ಯ ಸರ್ಕಾರ, ಆಂಧ್ರಪ್ರದೇಶದಲ್ಲಿರುವಂತೆ ಸ್ಥಾನಮಾನ, ವೇತನ ಭತ್ಯೆ, ಸೌಲಭ್ಯ ನೀಡಬೇಕು
-ಡಾ.ಎನ್‌. ಕೃಷ್ಣಮೂರ್ತಿ, ಅಧ್ಯಕ್ಷರು, ಆಹಾರ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT