ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

31 ಸಾವಿರ ರೈತರಿಗೆ ಸಿಗದ ‘ಸಾಲ ಮನ್ನಾ’ದ ಲಾಭ: ಸಚಿವ ಕೆ.ಎನ್‌. ರಾಜಣ್ಣ

2017– 2018ರಲ್ಲಿನ ಘೋಷಣೆ, ₹232 ಕೋಟಿ ಅನುದಾನಕ್ಕೆ ಮತ್ತೆ ಪ್ರಸ್ತಾವ
Published 16 ಜುಲೈ 2024, 20:15 IST
Last Updated 16 ಜುಲೈ 2024, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ 2017 ಹಾಗೂ 2018ರಲ್ಲಿ ಘೋಷಿಸಿದ್ದ ಕೃಷಿ ಸಾಲ ಮನ್ನಾದ ಪ್ರಯೋಜನ 31 ಸಾವಿರ ರೈತರಿಗೆ ಇನ್ನೂ ಸಿಕ್ಕಿಲ್ಲ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಸ್‌. ರವಿ, ಬಿಜೆಪಿಯ ಸುನೀಲ್‌ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗಿದ್ದ ₹50 ಸಾವಿರ ಸಾಲ ಮನ್ನಾ ಪ್ರಯೋಜನವನ್ನು 21.57 ಲಕ್ಷ ರೈತರು, 2018ರಲ್ಲಿ ಘೋಷಿಸಿದ್ದ ₹1 ಲಕ್ಷ ಸಾಲ ಮನ್ನಾ ಪ್ರಯೋಜನವನ್ನು 17.37 ಲಕ್ಷ ರೈತರು ಪಡೆದುಕೊಂಡಿದ್ದರು. ಎರಡೂ ಸಾಲ ಮನ್ನಾಕ್ಕಾಗಿ ಸರ್ಕಾರ ಕ್ರಮವಾಗಿ ₹7,662.26 ಕೋಟಿ ಹಾಗೂ 7,987.47 ಕೋಟಿ ಬಿಡುಗಡೆ ಮಾಡಿತ್ತು ಎಂದರು.

ತಾಂತ್ರಿಕ ಕಾರಣಗಳಿಂದ 31 ಸಾವಿರ ರೈತರಿಗೆ ಸೌಲಭ್ಯ ಸಿಕ್ಕಿಲ್ಲ. ಅವರಿಗೆ ನೀಡಬೇಕಿರುವ ಮೊತ್ತ ₹167.51 ಕೋಟಿ, ಅರ್ಹತೆ ಗುರುತಿಸಲು ಬಾಕಿ ಇರುವ ರೈತರ ಬಾಬ್ತು ₹64.49 ಕೋಟಿ ಸೇರಿ ಒಟ್ಟು ₹232 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲರಿಗೂ ಪ್ರಯೋಜನ ದೊರಕಲಿದೆ ಎಂದು ಹೇಳಿದರು. 

ಶೂನ್ಯ ಬಡ್ಡಿದರದಲ್ಲಿ ₹25 ಸಾವಿರ ಕೋಟಿ ಸಾಲ:

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪ್ರಸಕ್ತ ಸಾಲಿನಲ್ಲಿ 35.10 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸಲಾಗುವುದು ಎಂದು ಹೇಳಿದರು. 

ಕಾಂಗ್ರೆಸ್‌ನ ದಿನೇಶ್‌ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2023–24ನೇ ಸಾಲಿನಲ್ಲಿ 29.26 ಲಕ್ಷ ರೈತರಿಗೆ ₹22,982 ಕೋಟಿ ಬೆಳೆ ಸಾಲ ವಿತರಿಸಲಾಗಿತ್ತು. 2024–25ನೇ ಸಾಲಿನಲ್ಲಿ ಬೆಳೆಸಾಲದ ಜೊತೆಗೆ ಪಶುಸಂಗೋಪನೆಗೆ ದುಡಿಯುವ ಬಂಡವಾಳ ಸಾಲ ಹಾಗೂ 90 ಸಾವಿರ ರೈತರಿಗೆ ₹2 ಸಾವಿರ ಕೋಟಿ ಮಧ್ಯಮ, ದೀರ್ಘಾವಧಿ ಸಾಲ ವಿತರಿಸಲಾಗುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT