ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಲಿನ ಪರಾಮರ್ಶೆ ಆರಂಭಿಸಿದ ಬಿಜೆಪಿ; ಮೊದಲ ದಿನ 4 ಕ್ಷೇತ್ರಗಳ ಮುಖಂಡರ ಸಭೆ

ಹಲವರ ವಿರುದ್ಧ ಅಸಮಾಧಾನ
Published 5 ಜುಲೈ 2024, 23:22 IST
Last Updated 5 ಜುಲೈ 2024, 23:22 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಸೋಲಿಗೆ ಕಾರಣ ಹುಡುಕಲು ಬಿಜೆಪಿ ಶುಕ್ರವಾರದಿಂದ ಪರಾಮರ್ಶೆ ಆರಂಭಿಸಿದೆ. ಮೊದಲ ದಿನ ನಾಲ್ಕು ಕ್ಷೇತ್ರಗಳ ಮುಖಂಡರ ಸಭೆ ನಡೆಸಿದ್ದು, ಹೊಂದಾಣಿಕೆ, ಅಭ್ಯರ್ಥಿಗಳ ವರ್ಚಸ್ಸು ಮತ್ತು ಕೆಲವರ ಪಕ್ಷಾಂತರ ಸೋಲಿಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್‌ವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಯಚೂರು, ಕೊಪ್ಪಳ, ಕಲಬುರಗಿ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಕಾರಣವಾದ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್‌, ಪ್ರೀತಂಗೌಡ, ನಂದೀಶ್‌ರೆಡ್ಡಿ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು.

ಅಭ್ಯರ್ಥಿ ವಿರುದ್ಧವೇ ದೂರು: ‘ರಾಯಚೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ರಾಜಾ ಅಮರೇಶ್ವರ ಅವರಿಂದಾಗಿಯೇ ಸೋಲಾಗಿದೆ ಎಂದು ಮಾಜಿ ಸಂಸದ ಬಿ.ವಿ. ನಾಯಕ್‌ ಸೇರಿದಂತೆ ಅಲ್ಲಿನ ಕೆಲವು ಮುಖಂಡರು ದೂರಿದ್ದಾರೆ. ಹಾಲಿ ಸಂಸದರು ಸೋಲುತ್ತಾರೆ ಎಂಬ ವರದಿಗಳಿದ್ದರೂ ಅವರಿಗೆ ಮತ್ತೆ ಟಿಕೆಟ್‌ ನೀಡಿದ್ದು ತಪ್ಪು. ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್‌ ಮತಗಳು ಕೂಡ ವರ್ಗಾವಣೆ ಆಗಿಲ್ಲ ಎಂಬುದಾಗಿ ಕೆಲವರು ದೂರಿದರು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಿ.ವಿ.ನಾಯಕ್‌, ಬಿಜೆಪಿ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶಾಸಕ ಶಿವರಾಜ್‌ ಪಾಟೀಲ್‌ ಸೇರಿದಂತೆ ರಾಯಚೂರು ಜಿಲ್ಲೆಯ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್‌ ಸಭೆಗೆ ಗೈರಾಗಿದ್ದರು.

‘ಕರಡಿ ಪಕ್ಷಾಂತರದ ಹೊಡೆತ’: ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್‌ ಸೋಲಲು ಹಾಲಿ ಸಂಸದರಾಗಿದ್ದ ಕರಡಿ ಸಂಗಣ್ಣ ಪಕ್ಷಾಂತರ ಪ್ರಮುಖ ಕಾರಣ ಎಂದು ಅಲ್ಲಿನ ಕೆಲವರು ಪರಾಮರ್ಶೆ ಸಭೆಗೆ ಮಾಹಿತಿ ನೀಡಿದ್ದಾರೆ. ಹಿಟ್ನಾಳ್‌ ಕುಟುಂಬದ ಬಗೆಗಿನ ಅನುಕಂಪವೂ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರಣ ಎಂದು ಕೆಲವರು ಹೇಳಿದ್ದಾರೆ.

ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್‌, ಬಸವರಾಜ ಕ್ಯಾವಟರ್‌ ಸೇರಿದಂತೆ ಕೊಪ್ಪಳ ಜಿಲ್ಲೆಯ ಹಲವು ಮುಖಂಡರು ಸಭೆಯಲ್ಲಿದ್ದರು.

‘ಹೊಂದಾಣಿಕೆ ರಾಜಕಾರಣದಿಂದ ಸೋಲು’: ‘ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕೆಲವು ಮುಖಂಡರ ಹೊಂದಾಣಿಕೆ ರಾಜಕಾರಣದಿಂದಲೇ ನಮಗೆ ಸೋಲಾಗಿದೆ. ಯಾರು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ವಿಜಯೇಂದ್ರ ಮತ್ತು ರಾಧಾ ಮೋಹನ್‌ದಾಸ್‌ ಅಗರ್‌ವಾಲ್ ಅಸಮಾಧಾನ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

ಶಾಸಕ ಬಸವರಾಜ್‌ ಮತ್ತಿಮೂಡ್‌, ಮುಖಂಡರಾದ ರಘುನಾಥರಾವ್ ಮಲ್ಕಾಪುರೆ, ಮಣಿಕಂಠ ರಾಠೋಡ್‌, ನಿತಿನ್‌ ಗುತ್ತೇದಾರ್‌, ಚಂದು ಪಾಟೀಲ್‌ ಸೇರಿದಂತೆ ಹಲವರು ಸಭೆಯಲ್ಲಿದ್ದರು. ಸಂಸದರಾಗಿದ್ದ ಡಾ. ಉಮೇಶ್‌ ಜಾಧವ್‌ ವಿರುದ್ಧವೇ ಕೆಲವು ಮುಖಂಡರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT