ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election Results: ‘ಉತ್ತರ’ದಲ್ಲಿ ಮತ್ತೆ ಅರಳಿದ ‘ಕಮಲ’

Published 4 ಜೂನ್ 2024, 23:56 IST
Last Updated 4 ಜೂನ್ 2024, 23:56 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ’ ಕ್ಷೇತ್ರದಲ್ಲಿ ಮತ್ತೆ ‘ಕಮಲ’ ಅರಳಿದೆ. 2019ರ ಚುನಾವಣೆಯಲ್ಲಿ ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈ ಬಾರಿ ಇಲ್ಲಿ ಗೆಲುವಿನ ನಗು ಬೀರಿದ್ದಾರೆ. ಬಿಜೆಪಿಯ ಈ ಭದ್ರಕೋಟೆಯನ್ನು ಛಿದ್ರ ಮಾಡಬೇಕೆಂದು ಹೊರಟಿದ್ದ ಕಾಂಗ್ರೆಸ್‌ನ ಎಂ.ವಿ. ರಾಜೀವ್ ಗೌಡ ಅವರ ಶತಾಯ ಗತಾಯ ಪ್ರಯತ್ನಕ್ಕೆ ಸೋಲಾಗಿದೆ.

‌ಉಡುಪಿ– ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಅವರ ವಿರುದ್ಧ ಕೆಲವರು ‘ಗೋ ಬ್ಯಾಕ್‌’ ಎಂದಿದ್ದರು. ಹೀಗಾಗಿ, ಹಾಲಿ ಸಂಸದ ಡಿ.ವಿ. ಸದಾನಂದ ಗೌಡರಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ, ಶೋಭಾ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆರಂಭದಲ್ಲಿ ಇಲ್ಲಿಯೂ ಶೋಭಾ ಅವರಿಗೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಬಾರಿಯೂ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿರೋಧದ ನಡುವೆಯು ಶೋಭಾ ಅವರು ಗೆದ್ದು ಬೀಗಿದ್ದಾರೆ.

ಮೋದಿ ಅಲೆ, ಬಿಜೆಪಿಯ ಸಾಂಪದಾಯಿಕ ಮತಗಳು ಶೋಭಾ ಅವರನ್ನು ಗೆಲುವಿನ ದಡ ಸೇರಿಸಿದೆ. ಪಂಚ ‘ಗ್ಯಾರಂಟಿ’ಗಳು ಕೈ ಹಿಡಿಯುವ ಜೊತೆಗೆ, ರಾಜೀವ್‌ ಗೌಡರ ‘ಪ್ರೊಫೆಸರ್’ ಹಿನ್ನೆಲೆ ಕೈ ಹಿಡಿಯಬಹುದೆಂಬ ಕಾಂಗ್ರೆಸ್‌ ನಾಯಕ ನಿರೀಕ್ಷೆ ಹುಸಿಯಾಗಿದೆ. ‘ಕೈ’ ನಾಯಕರ ಅಬ್ಬರದ ಪ್ರಚಾರ ಫಲ ಕೊಟ್ಟಿಲ್ಲ. 

ಹೊರಗಿನಿಂದ ಬಂದ ಸದಾನಂದ ಗೌಡರನ್ನು 2014 ಮತ್ತು 2019ರಲ್ಲಿ ಈ ಕ್ಷೇತ್ರದ ಜನ ಗೆಲ್ಲಿಸಿದ್ದರು. ಅದಕ್ಕೂ ಮೊದಲು, 2009ರಲ್ಲಿ ಬಿಜೆಪಿಯ ಡಿ.ಬಿ. ಚಂದ್ರೇಗೌಡ ಈ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಸಿ.ಕೆ. ಜಾಫರ್ ಷರೀಫ್ ಇಲ್ಲಿಂದ ಅತಿ ಹೆಚ್ಚು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್. ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ, ಪುಲಕೇಶಿನಗರ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿತ್ತು. ಉಳಿದವು ಬಿಜೆಪಿ ಪಾಲಾಗಿದ್ದವು. ಆದರೆ, ಲೋಕಸಭೆ ಚುನಾವಣೆಯಲ್ಲಿ ಹೆಬ್ಬಾಳ ಮತ್ತು ಪುಲಕೇಶಿನಗರದಲ್ಲಿ ಮಾತ್ರ ಕಾಂಗ್ರೆಸ್ (ರಾಜೀವ್‌ ಗೌಡ) ಮುನ್ನಡೆ ಸಾಧಿಸಿದ್ದಾರೆ. ಉಳಿದ ಎಲ್ಲ ಕಡೆಗಳಲ್ಲಿ ಶೋಭಾ ಅವರು ಮುನ್ನಡೆ ಪಡೆದಿದ್ದು, ಅದರಲ್ಲೂ ಯಶವಂತಪುರ ಕ್ಷೇತ್ರದಲ್ಲಿ ಅವರಿಗೆ ಭಾರಿ ಪ್ರಮಾಣದ ಮತ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT