ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡ್ರಗ್ಸ್‌ ನಿಯಂತ್ರಣಕ್ಕೆ ಗೃಹ ಸಚಿವ ಪರಮೇಶ್ವರ ನೇತೃತ್ವದಲ್ಲಿ ‘ಸಚಿವರ ಕಾರ್ಯಪಡೆ’

Published : 18 ಸೆಪ್ಟೆಂಬರ್ 2024, 19:51 IST
Last Updated : 18 ಸೆಪ್ಟೆಂಬರ್ 2024, 19:51 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತು (ಡ್ರಗ್ಸ್‌) ಪೂರೈಕೆ, ಮಾರಾಟ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಲು ಗೃಹ ಸಚಿವ ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. 

ಕಾರ್ಯಪಡೆ ರಚನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಮಿತಿ ಪ್ರತಿ ತಿಂಗಳು ಸಭೆ ನಡೆಸಿ ಮಾದಕವಸ್ತು  ಪೂರೈಕೆ, ಮಾರಾಟ, ಸೇವನೆ ಪ್ರಕರಣಗಳ ಕುರಿತು ಅವಲೋಕನ ನಡೆಸಲಿದೆ. ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ ಎಂದರು.

ಇದುವರೆಗೂ ಅಧಿಕಾರಿಗಳ ನೇತೃತ್ವದಲ್ಲಿ ಮಾದಕವಸ್ತು ಜಾಲದ ಮೇಲೆ ನಿಗಾ ಇಡಲಾಗುತ್ತಿತ್ತು. ಇದೇ ಮೊದಲ ಬಾರಿ ಸಚಿವ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುತ್ತಿದೆ. ಪ್ರತಿ ಠಾಣೆಯ ಠಾಣಾಧಿಕಾರಿಗಳಿಗೆ ಹೊಣೆ ನಿಗದಿ ಮಾಡಲಾಗುತ್ತದೆ. ಹೊಣೆ ನಿಭಾಯಿಸದ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲಾ ಸಮಿತಿಗಳನ್ನೂ ಸಕ್ರಿಯಗೊಳಿಸಲಾಗುತ್ತದೆ ಎಂದರು.

ಮಾದಕ ವಸ್ತು ಜಾಲದ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಶೇ 50ರಷ್ಟು ಬೆಂಗಳೂರು ಹಾಗೂ ಶೇ 22ರಷ್ಟು ಮಂಗಳೂರಿನಲ್ಲಿ ವರದಿಯಾಗಿವೆ. ಉಳಿದ ಶೇ 28ರಷ್ಟು ಪ್ರಕರಣಗಳು ರಾಜ್ಯದ ಇತರೆ ಜಿಲ್ಲೆಗಳಲ್ಲಿ ದಾಖಲಾಗಿವೆ. ಬೆಂಗಳೂರು ಪೂರ್ವ ವಲಯ ದಂಧೆಯ ತಾಣವಾಗಿದೆ. ಜಾಲದಲ್ಲಿ ತೊಡಗಿಸಿಕೊಂಡಿರುವವರಲ್ಲಿ ಭಾರತೀಯರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ವಿದೇಶಿರ ಸಂಖ್ಯೆ ಕಡಿಮೆ ಇದೆ. 2023ರಲ್ಲಿ 8,542 ಭಾರತೀಯರು, 106 ವಿದೇಶಿಯರನ್ನು ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಅಗತ್ಯಬಿದ್ದರೆ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಮಾದಕ ವಸ್ತು ಪೂರೈಕೆ ಮಾಡುವವರಿಗೆ ಕನಿಷ್ಠ 10 ವರ್ಷಗಳ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ನಿಗದಿ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.

Cut-off box - ವರ್ಷ;ಡ್ರಗ್ಸ್ ಪ್ರಕರಣಗಳು 2020;4047 2021;5783 2022;6378 2023;6692 2024 (ಸೆ.17ರವರೆಗೆ);2643

Cut-off box - ‘ಪ್ರಜಾವಾಣಿ’ ಓದ್ತೀರಾ: ಸಿಎಂ ಪ್ರಶ್ನೆ ಮಾದಕ ವಸ್ತುಗಳ ಹಾವಳಿ ಹಾಗೂ ನಿಯಂತ್ರಣ ಕುರಿತು ಬುಧವಾರ ನಡೆದ ಸಭೆಯಲ್ಲಿ ಈಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ‘ಸಿಲಿಕಾನ್‌ ಸಿಟಿ ಡ್ರಗ್ಸ್‌ ಮಾಫಿಯಾ ವ್ಯಾಪಕ’ ವಿಶೇಷ ವರದಿಯನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವರದಿಯ ಶೀರ್ಷಿಕೆ ಹಾಗೂ ಮೊದಲ ಪ್ಯಾರಾವನ್ನು ಓದಿದ ಅವರು ‘ನಿತ್ಯ ‘ಪ್ರಜಾವಾಣಿ’ ಓದುತ್ತೀರಾ?  ಡ್ರಗ್ಸ್‌ ಮಾಫಿಯಾ ವರದಿ ಗಮನಿಸಿದ್ದೀರಾ? ಗಮನಿಸಿದ್ದರೆ ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

Cut-off box - ನೋ ಇಂಗ್ಲಿಷ್‌ ಓನ್ಲಿ ಕನ್ನಡ.. ‘ನೋ ಇಂಗ್ಲಿಷ್‌ ಓನ್ಲಿ ಕನ್ನಡ.. ಇದು ಕರ್ನಾಟಕ. ನಾನು ಕನ್ನಡದಲ್ಲಷ್ಟೇ ಹೇಳೋದು. ನೀವು ಇಂಗ್ಲಿಷ್‌ ಹಿಂದಿಗೆ ಭಾಷಾಂತರಿಸಿಕೊಳ್ಳಿ. . .’ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯ ನಂತರ ಇಂಗ್ಲಿಷ್‌ನಲ್ಲೂ‘ಬೈಟ್‌’ ನೀಡುವಂತೆ ರಾಷ್ಟ್ರೀಯ ಸುದ್ದಿವಾಹಿನಿಗಳ ಪತ್ರಕರ್ತರು ಕೇಳಿದಾಗ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ.  ಮಾಧ್ಯಮ ಪ್ರತಿನಿಧಿಗಳು ಎಷ್ಟು ವಿನಂತಿಸಿದರೂ ಬೇರೆ ಭಾಷೆಗಳಲ್ಲಿ ವಿವರ ನೀಡಲು ನಿರಾಕರಿಸಿದ ಅವರು ಸ್ಥಳದಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT