ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್ ಜಪ್ತಿಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವೇ ಮೊದಲು

ದೆಹಲಿಯಲ್ಲೇ ಅತಿ ಹೆಚ್ಚು ಮೊಬೈಲ್‌ ಕಳವು
Published 25 ಜೂನ್ 2024, 20:17 IST
Last Updated 25 ಜೂನ್ 2024, 20:17 IST
ಅಕ್ಷರ ಗಾತ್ರ

ಹಾವೇರಿ: ಕಳೆದುಕೊಂಡ ಹಾಗೂ ಕಳ್ಳತನವಾದ ಸಾರ್ವಜನಿಕರ ಮೊಬೈಲ್‌ಫೋನ್‌ಗಳನ್ನು ಪತ್ತೆ ಮಾಡಿ ಜಪ್ತಿ ಮಾಡುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ, ಮೊಬೈಲ್ ಕಳವು ಆಗುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನವಾದ ಹಾಗೂ ಕಳೆದುಹೋದ ಮೊಬೈಲ್‌ಗಳ ಮಾಹಿತಿ ‘ಇ–ಲಾಸ್ಟ್’ ಆ್ಯಪ್ ಮತ್ತು ಕೇಂದ್ರ ಸರ್ಕಾರದ ‘ಸೆಂಟ್ರಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ (ಸಿಇಐಆರ್)’ ಜಾಲತಾಣದಲ್ಲಿ ದಾಖಲಿಸಲಾಗುತ್ತಿದೆ. ಇದನ್ನೇ ಆಧರಿಸಿ ತನಿಖೆ ನಡೆಸುತ್ತಿರುವ ರಾಜ್ಯದ ಪೊಲೀಸರು, ತಾಂತ್ರಿಕ ಸುಳಿವು ಆಧರಿಸಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮೊಬೈಲ್‌ಗಳನ್ನು ಜಪ್ತಿ ಮಾಡಿ ದೂರುದಾರರಿಗೆ ವಾಪಸು ಕೊಟ್ಟಿದ್ದಾರೆ.

‘ಇ–ಲಾಸ್ಟ್’ (2016) ಹಾಗೂ ‘ಸಿಇಐಆರ್’ ವ್ಯವಸ್ಥೆ (2023) ಜಾರಿಯಾದ ದಿನಗಳಿಂದ ರಾಜ್ಯದಲ್ಲಿ ಇದುವರೆಗೂ 2.45 ಲಕ್ಷ (2,45,876) ಮೊಬೈಲ್‌ ಕಳೆದುಹೋಗಿರುವುದಾಗಿ ದಾಖಲಾಗಿದೆ. ಇದರಲ್ಲಿ ಕಳ್ಳತನದ ಮೊಬೈಲ್‌ಗಳೂ ಇವೆ. ಮೊಬೈಲ್ ಕಳೆದುಕೊಂಡಿರುವ ಸಾರ್ವಜನಿಕರು, ಆನ್‌ಲೈನ್ ಮೂಲಕ ದೂರು ನೀಡಿದ್ದಾರೆ. ಹೀಗಾಗಿ,ಈ ಎಲ್ಲ ಮೊಬೈಲ್‌ಗಳನ್ನು ಪೊಲೀಸರು ಈಗಾಗಲೇ ಬ್ಲಾಕ್ (ನಿಷ್ಕ್ರಿಯ) ಮಾಡಿಸಿದ್ದಾರೆ.

ಬ್ಲಾಕ್ ಮಾಡಿರುವ ಮೊಬೈಲ್‌ಗಳ ಪೈಕಿ 1.20 ಲಕ್ಷ ಮೊಬೈಲ್‌ಗಳ ವಿಳಾಸವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಪೈಕಿ 41,534 ಮೊಬೈಲ್‌ಗಳನ್ನು ಜಪ್ತಿ ಮಾಡಿ ದೂರುದಾರರಿಗೆ ಹಿಂದಿರುಗಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿರುವ ಉಳಿದ ಮೊಬೈಲ್‌ಗಳ ಜಪ್ತಿಗೆ ಸ್ಥಳೀಯ ಪೊಲೀಸರ ನೆರವು ಪಡೆದಿದ್ದಾರೆ.

ಮೊಬೈಲ್ ಕಳ್ಳತನ: ದೆಹಲಿಯಲ್ಲಿ ಹೆಚ್ಚು:

ಮೊಬೈಲ್ ಜಪ್ತಿಯಲ್ಲಿ ತೆಲಂಗಾಣ ಎರಡನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಹೆಚ್ಚು ಮೊಬೈಲ್ ಕಳ್ಳತನವಾಗುತ್ತಿರುವ ರಾಜ್ಯಗಳ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಹಾಗೂ ತೆಲಂಗಾಣ, ಮೂರು–ನಾಲ್ಕನೇ ಸ್ಥಾನದಲ್ಲಿವೆ.

ದೇಶದಲ್ಲಿ ಕಳ್ಳತನವಾದ ಹಾಗೂ ಕಳೆದುಹೋದ ಒಟ್ಟು 17.66 ಲಕ್ಷ ಮೊಬೈಲ್‌ಗಳ ಬಗ್ಗೆ ದೂರುಗಳು ದಾಖಲಾಗಿವೆ. ಈ ಪೈಕಿ 10.14 ಲಕ್ಷ ಮೊಬೈಲ್ ಪತ್ತೆ ಮಾಡಲಾಗಿದ್ದು, 1.58 ಲಕ್ಷ ಮೊಬೈಲ್ ಜಪ್ತಿ ಮಾಡಲಾಗಿದೆ.

ಇ–ಲಾಸ್ಟ್
ಇ–ಲಾಸ್ಟ್

ಮೊಬೈಲ್‌ ಕಳ್ಳತನ ಹಾಗೂ ಕಳೆದುಹೋದಾಗ ಜನರು ಠಾಣೆಗೆ ಬರಬೇಕಿಲ್ಲ. ಇ–ಲಾಸ್ಟ್ ಹಾಗೂ ಸಿಇಐಆರ್ ಆನ್‌ಲೈನ್‌ ಮೂಲಕ ದೂರು ನೀಡಬಹುದು. ಪೊಲೀಸರು ತ್ವರಿತ ಕ್ರಮ ಕೈಗೊಂಡು ಮೊಬೈಲ್ ಪತ್ತೆ ಮಾಡುವರು.

–ಅಂಶುಕುಮಾರ್ ಹಾವೇರಿ ಜಿಲ್ಲಾ ಎಸ್ಪಿ

ಏನಿದು ಸಿಇಐಆರ್ ವ್ಯವಸ್ಥೆ?

ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಬ್ಲಾಕ್‌ ಮಾಡಿಸಲು ಕೇಂದ್ರ ಸರ್ಕಾರ ರೂಪಿಸಿರುವ ವ್ಯವಸ್ಥೆ. ಐಎಂಇಐ ನಂಬರ್ ಮೂಲಕ ಮೊಬೈಲ್ ಪತ್ತೆ ಮಾಡಲು ಈ ವ್ಯವಸ್ಥೆ ಅನುಕೂಲವಾಗಿದೆ. ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಯಾರಾದರೂ ತಕ್ಷಣವೇ ಜಾಲತಾಣಕ್ಕೆ ಭೇಟಿ ನೀಡಬೇಕು. ಮೊಬೈಲ್ ವಿವರಗಳನ್ನು ಐಎಂಇಐ ನಂಬರ್ ಹಾಗೂ ಒಟಿಪಿ (ಒನ್ ಟೈಂ ಪಾಸ್‌ವರ್ಡ್‌) ಸಮೇತ ದಾಖಲಿಸಬೇಕು. ನಂತರ ರಶೀದಿ ಸಿಗುತ್ತದೆ. ಈ ರೀತಿ ದೂರು ಸಲ್ಲಿಕೆ ನಂತರ ಸಂಬಂಧಪಟ್ಟ ಠಾಣೆಗೆ ಮಾಹಿತಿ ಹೋಗುತ್ತದೆ. ತಕ್ಷಣವೇ ಮೊಬೈಲ್ ಬ್ಲಾಕ್ ಆಗುತ್ತದೆ. ಜಾಲತಾಣದ ವಿಳಾಸ: https://www.ceir.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT