ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ: ನಿಸ್ಸಂಶಯವಾಗಿ ತನಿಖೆ ಅಗತ್ಯ; ಹೈಕೋರ್ಟ್

ತೀರ್ಪಿಗೆ ಎರಡು ವಾರ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ
Published : 24 ಸೆಪ್ಟೆಂಬರ್ 2024, 22:32 IST
Last Updated : 24 ಸೆಪ್ಟೆಂಬರ್ 2024, 22:32 IST
ಫಾಲೋ ಮಾಡಿ
Comments

ಬೆಂಗಳೂರು: ‘ನಿಸ್ಸಂಶಯವಾಗಿ ಈ ಪ್ರಕರಣದ ತನಿಖೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿರುವ ಹೈಕೋರ್ಟ್‌, ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಮಂಜೂರಾತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ.

‘ರಾಜ್ಯಪಾಲರ ಆದೇಶವನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ (ಪಿಸಿ ಕಾಯ್ದೆ) ಕಲಂ 17ಎ ಅಡಿಯಲ್ಲಿ ನಿರ್ಬಂಧಿತವಾಗಿ ಓದಬೇಕಿದೆಯೇ ಹೊರತು ಬಿಎನ್‌ಎಸ್‌ಎಸ್‌ ಕಲಂ 218ರ ಅಡಿಯಲ್ಲಿನ ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡಿರುವ ಆದೇಶವಾಗಿ ಅಲ್ಲ. ಮುಖ್ಯಮಂತ್ರಿಗಳ ವಿರುದ್ಧ ಪೊಲೀಸ್‌ ತನಿಖೆಗೆ ಸೀಮಿತವಾಗಿ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದನ್ನು ಪರಿಗಣಿಸಬೇಕಿದೆ’ ಎಂದು ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು. ಅದಕ್ಕಾಗಿ ಎರಡು ವಾರ ನಿಮ್ಮ ತೀರ್ಪಿಗೆ ತಡೆ ನೀಡಬೇಕು’ ಎಂಬ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ಮನವಿಯನ್ನು ನ್ಯಾಯಮೂರ್ತಿ ಅವರು ತಿರಸ್ಕರಿಸಿದರು.

ತೀರ್ಪಿನ ಮುಖ್ಯಾಂಶಗಳು

* ಸಾಮಾನ್ಯ ಸಂದರ್ಭಗಳಲ್ಲಿ ರಾಜ್ಯಪಾಲರು ಸಂವಿಧಾನದ 163ನೇ ವಿಧಿಯಂತೆ ಸಚಿವ ಸಂಪುಟದ ನೆರವು ಮತ್ತು ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಬೇಕು. ಆದರೆ, ಅಸಾಧಾರಣ ಸಂದರ್ಭಗಳಲ್ಲಿ ಅವರು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಬಹುದು. ಪ್ರಸ್ತುತ ಪ್ರಕರಣವು ಅಂತಹ ಒಂದು ವಿನಾಯಿತಿಯನ್ನು ಹೊಂದಿದ ಪ್ರಕರಣವಾಗಿದೆ. ರಾಜ್ಯಪಾಲರು ಸ್ವತಂತ್ರ ವಿವೇಚನೆಯಿಂದ ತನಿಖೆಗೆ ನೀಡಿರುವ ಆದೇಶದಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ. ರಾಜ್ಯಪಾಲರು ತಮ್ಮ ಕಚೇರಿಯ ಕಡತಗಳಲ್ಲಿ ನಿರ್ಧಾರದ ಹಿಂದಿನ ಕಾರಣಗಳನ್ನು ದಾಖಲಿಸಿದ್ದರೆ ಸಾಕು. 

* ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 17ಎ ಅಡಿ (ತನಿಖೆಗೆ) ಅನುಮತಿ ನೀಡುವುದಕ್ಕೂ ಮೊದಲು ವಿಚಾರಣೆ ಆಲಿಸಬೇಕು ಎಂಬುದು ಕಡ್ಡಾಯವಲ್ಲ. ಹಾಗೆ ಆಲಿಸಲು ಬಯಸುವುದು ಸಕ್ಷಮ ಪ್ರಾಧಿಕಾರಕ್ಕೆ (ರಾಜ್ಯಪಾಲರಿಗೆ) ಬಿಟ್ಟ ವಿಚಾರವಾಗಿರುತ್ತದೆ.

* ರಾಜ್ಯಪಾಲರು ಆತುರಾತುರವಾಗಿ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಅವರ ಆದೇಶವನ್ನು ದೋಷಯುಕ್ತವಾಗಿಸಿಲ್ಲ. ಆದೇಶವು ಕಲಂ 17ಎ ಗೆ ಮಾತ್ರವೇ ಸೀಮಿತವಾಗಿರುವಂತಹುದಾಗಿದೆ. 

* ಹಾಲಿ ಪ್ರಕರಣದಲ್ಲಿ ಯಾರೋ ಹೊರಗಿನವರು ಫಲಾನುಭವಿಗಳಾಗಿದ್ದಾರೆ ಎಂಬುದಿಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬಕ್ಕೆ ವರ್ಗದವರೇ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಖಂಡಿತವಾಗಿಯೂ ಇದು ತನಿಖೆಗೆ ಅಗತ್ಯವಾದ ಪ್ರಕರಣ.

* ಮುಡಾದ ನಿಯಮಗಳ ಪ್ರಕಾರ ಮೂರು ಎಕರೆಗಿಂತ ಹೆಚ್ಚು ಜಮೀನು ಕಳೆದುಕೊಂಡ ವ್ಯಕ್ತಿ 4,800 ಚದರ ಅಡಿ ವಿಸ್ತೀರ್ಣದ 40X60ರ ಎರಡು ನಿವೇಶನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 38,284  ಚದರ ಅಡಿ ನೀಡಲಾಗಿದೆ. 2 ನಿವೇಶನಗಳು 14 ಆಗಿವೆ. ದೂರುದಾರರಿಗೆ 4,800 ಚದರ ಅಡಿ ವಿಸ್ತೀರ್ಣದ ಜಮೀನು ಪಡೆಯಲು ಅರ್ಹತೆ ಇದ್ದವರಿಗೆ ಎಷ್ಟೊಂದು ನೀಡಲಾಗಿದೆ ಎಂಬುದು ಆಘಾತಕಾರಿಯಾಗಿದೆ. ದೂರುದಾರರ ಪತ್ನಿ ₹56 ಕೋಟಿ  ಮೌಲ್ಯದ 14 ನಿವೇಶನಗಳ ಮಾಲಕಿ ಆಗಿದ್ದಾರೆ.‌

* ಕೆಸರೆ ಗ್ರಾಮವು ಮೈಸೂರು ನಗರದಿಂದ 15 ಕಿಮೀ ದೂರದಲ್ಲಿದ್ದು ಮುಖ್ಯಮಂತ್ರಿಯವರ ಪತ್ನಿಗೆ ನಗರದ ಹೃದಯ ಭಾಗದಲ್ಲಿರುವ ವಿಜಯನಗರ ಮೂರನೇ ಸ್ಟೇಜ್‌ನಲ್ಲಿ ನಿವೇಶನ ಹಂಚಲಾಗಿದೆ. ಒಂದು ವೇಳೆ ಪರ್ಯಾಯ ನಿವೇಶನ ಹಂಚಿಕೆ ಮಾಡಬೇಕಿದ್ದರೆ ಕೆಸರೆಯಲ್ಲೇ ಅಥವಾ ಆ ಬಳಿಕ ನಿರ್ಮಾಣಗೊಂಡ ಯಾವುದಾದರೂ ಬಡಾವಣೆಯಲ್ಲಿ ನೀಡಬಹುದಿತ್ತೇ ಹೊರತು 1991ರಲ್ಲಿ ನಿರ್ಮಾಣವಾದ ವಿಜಯನಗರದ ಮೂರನೇ ಸ್ಟೇಜ್‌ನಲ್ಲಿ ನೀಡುವುದಲ್ಲ. ಆದ್ದರಿಂದ ಮುಖ್ಯಮಂತ್ರಿಯವರ ಅನುಕೂಲಕ್ಕಾಗಿ ಹೇಗೆ ಮತ್ತು ಯಾಕೆ ನಿಯಮವನ್ನು ಬಾಗಿಸಲಾಯಿತು ಎಂಬುದರ ಬಗ್ಗೆ ತನಿಖೆ ನಡೆಯುವ ಅಗತ್ಯವಿದೆ.

* ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ನಿ 50:50ರ ಅನುಪಾತದಲ್ಲಿ ಪರಿಹಾರ ಅಥವಾ ಪರಿಹಾರ ನಿವೇಶನ ನೀಡುವಂತೆ ಮುಡಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಈ ಮಾದರಿಯಲ್ಲಿ ಪರಿಹಾರ ಪ್ರಕಟಿಸುವಾಗಲು ನಿಯಮಗಳ ಉಲ್ಲಂಘನೆಯಾಗಿದೆ. 50:50ರ ಅನುಪಾತದಲ್ಲಿ ಪರಿಹಾರ ನೀಡುವ ಬಗ್ಗೆ ನಡೆದ ಮುಡಾ ಸಭೆಯಲ್ಲಿ ದೂರುದಾರರ ಮಗ (ಡಾ. ಯತೀಂದ್ರ) ಭಾಗಿಯಾಗಿದ್ದರು. ಆದರೆ ಸಭೆಯಲ್ಲಿ ಡಾ.ಯತೀಂದ್ರ ಮೌನವಾಗಿದ್ದರು ಎಂದು ದೂರುದಾರರ ಪರ ವಾದ ಮಂಡನೆ ಮಾಡಲಾಗಿದೆ. ಈ ವಾದ ಹಾಸ್ಯಾಸ್ಪದ. ಒಬ್ಬ ಕಾನೂನು ನಿರ್ಮಾತೃ, ಮಾಜಿ ಮುಖ್ಯಮಂತ್ರಿಯ ಮಗ ಮತ್ತು ಆಗಿನ ವಿರೋಧ ಪಕ್ಷದ ನಾಯಕನ ಮಗ ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಫಲಾನುಭವಿ ಅವರ ತಾಯಿಯಾಗಿದ್ದರು ಎಂಬುದು ಸ್ಪಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT