ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರ‍ಪ್ಪನ ಅಗ್ರಹಾರ ಜೈಲಿಗೆ ಮುನಿರತ್ನ

ಸೆ. 30ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್‌
Published : 17 ಸೆಪ್ಟೆಂಬರ್ 2024, 16:41 IST
Last Updated : 17 ಸೆಪ್ಟೆಂಬರ್ 2024, 16:41 IST
ಫಾಲೋ ಮಾಡಿ
Comments

ಬೆಂಗಳೂರು: ಜಾತಿ ನಿಂದನೆ ಹಾಗೂ ಗುತ್ತಿಗೆದಾರರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ಬಂಧಿತರಾಗಿ ಎರಡು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೇ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಬೆನ್ನಲ್ಲೇ, ವೈಯಾಲಿಕಾವಲ್‌ ಠಾಣೆ ಪೊಲೀಸರು ಬಿಗಿ ಭದ್ರತೆ ನಡುವೆ ಮುನಿರತ್ನ ಅವರನ್ನು ಕರೆದೊಯ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು. 

ಇದಕ್ಕೂ ಮೊದಲು, ಮುನಿರತ್ನ ಅವರನ್ನು ವೈದ್ಯಕೀಯ ಪರೀಕ್ಷೆಗೆ ಮಂಗಳವಾರ ಬೆಳಿಗ್ಗೆ ಒಳಪಡಿಸಲಾಗಿತ್ತು. ಬಳಿಕ ಅವರನ್ನು ಪೊಲೀಸರು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಎದುರು ಹಾಜರುಪಡಿಸಿದರು. 

ಮುನಿರತ್ನ ಪರ ಹಾಜರಾಗಿದ್ದ ವಕೀಲ ಅಶೋಕ ಹಾರನಹಳ್ಳಿ ಅವರು, ‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪೊಲೀಸರು 41ಎ ನೋಟಿಸ್ ನೀಡದೇ ಅರ್ಜಿದಾರರನ್ನು ಬಂಧಿಸಿದ್ದಾರೆ. ಇದು ರಾಜಕೀಯ ಪ್ರೇರಿತ. ಅರ್ಜಿದಾರರು ತಿರುಪತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇವರೇನೊ ಮಹಾ ಅಪರಾಧ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಏತನ್ಮಧ್ಯೆ ಮುನಿರತ್ನ ಅವರಿಗೆ ಜಾಮೀನು ಕೋರಿದ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದಕ್ಕೆ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ.ಎಸ್‌.ಪ್ರದೀಪ್‌, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ವಿಚಾರಣೆಯನ್ನು ಬುಧವಾರಕ್ಕೆ (ಸೆ.18) ಮುಂದೂಡಿದರು. ಅಂತೆಯೇ, ಮುನಿರತ್ನ ಅವರನ್ನು ಇದೇ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಮಾಹಿತಿ ಸಂಗ್ರಹ: ‘ಆರೋಪಿಯನ್ನು ಎರಡು ದಿನ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಆರೋಪಕ್ಕೆ ಸಂಬಂಧಿಸಿದಂತೆ ಮುನಿರತ್ನ ಅವರಿಂದ ಮಾಹಿತಿ ಕಲೆ ಹಾಕಲಾಗಿದೆ. ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಮೊದಲು ಹೇಗೆ ಪರಿಚಯ ಆದರು? ನಿಮ್ಮ ಮಧ್ಯೆ ಸಂಬಂಧ ಹೇಗಿತ್ತು? ಆಡಿಯೊದಲ್ಲಿ ಇರುವುದು ನಿಮ್ಮದೇ ಧ್ವನಿಯೇ ಎಂಬ ಪ್ರಶ್ನೆಗಳನ್ನು ಕೇಳಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಆಡಿಯೊ ತುಣುಕನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT