ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಕ್ಸೊ ಆರೋಪ | ಬಿಎಸ್‌ವೈ ವಿರುದ್ಧ ಬಿಜೆಪಿ ಕ್ರಮ ಏಕಿಲ್ಲ: ದಿನೇಶ್ ಗುಂಡೂರಾವ್

Published : 8 ಅಕ್ಟೋಬರ್ 2024, 14:04 IST
Last Updated : 8 ಅಕ್ಟೋಬರ್ 2024, 14:04 IST
ಫಾಲೋ ಮಾಡಿ
Comments

ಬೆಂಗಳೂರು: ‘ಮಹಿಳೆಯರ ವಿಚಾರದಲ್ಲಿ ಬಿಜೆಪಿಯವರಿಗೆ ಸಹಾನುಭೂತಿ ಇರುವುದಾದರೆ ಪೋಕ್ಸೊ ಆರೋಪ ಎದುರಿಸುತ್ತಿರುವ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದುಹಾಕಲಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೋಕ್ಸೊ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಪ್ರಕರಣದಲ್ಲಿನ ನಿಲುವು, ಯಡಿಯೂರಪ್ಪನವರ ಪ್ರಕರಣದಲ್ಲಿ ಬಿಜೆಪಿಗೆ ಏಕಿಲ್ಲ. ಈ ದ್ವಂದ್ವ ನಿಲುವು ಏಕೆ’ ಎಂದು ಪ್ರಶ್ನಿಸಿದರು.

‘ಜಾನಿ ಮಾಸ್ಟರ್‌ಗೆ ನೀಡಿದ್ದ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಆದರೆ, ಅದೇ ರೀತಿಯ ಆರೋಪ ಹೊತ್ತಿರುವ ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ಮನಃಸ್ಥಿತಿ ಏನು. ಯಡಿಯೂರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕುತ್ತಿರುವುದು ಏಕೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಯಾಕೆ ಅವರನ್ನು ಉಳಿಸಿಕೊಂಡಿದ್ದಾರೆ’ ಎಂದು ಕೇಳಿದರು.

‘ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ತನಿಖೆಯಾಗಿ ಜುಲೈ ತಿಂಗಳಲ್ಲಿಯೇ 700 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ವಿಚಾರಣೆ ನಡೆಯಬೇಕಾಗಿದೆ. ಸಹಾಯಕ್ಕೆಂದು ಬಂದ ಬಾಲಕಿ ಮೇಲೆ ಕೆಟ್ಟ ಅನುಭವ ಆಗಿರುವ ಈ ಪ್ರಕರಣವನ್ನು ಬಿಜೆಪಿ ಹಗುರವಾಗಿ ಪರಿಗಣಿಸಿರುವುದು ದುರ್ದೈವ’ ಎಂದರು.

‘ಬಿಜೆಪಿ ನಾಯಕರ ಹೇಳಿಕೆ ಪ್ರಕಾರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬ್ಲ್ಯಾಕ್‌ ಮೇಲ್‌ ಕಾರಣಕ್ಕೆ ಯಡಿಯೂರಪ್ಪ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದೂ ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮಯ್ಯ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ವಕ್ತಾರ‌ ನಟರಾಜ್ ಗೌಡ ಉಪ‍ಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT