ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ರಾಜೀನಾಮೆ ಕೊಡುವ ದಿನ ಹತ್ತಿರ: ಬಿ.ವೈ. ವಿಜಯೇಂದ್ರ 

Published 19 ಜುಲೈ 2024, 15:40 IST
Last Updated 19 ಜುಲೈ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ದಿನ ಹತ್ತಿರ ಬಂದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ವಿಧಾನಸಭೆಯ ಕಲಾಪದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ಈ ಹಗರಣದಲ್ಲಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಯವರ ಸಮ್ಮತಿ ಇಲ್ಲದೇ, ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆಗಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.

‘ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್‌ ಅವರಷ್ಟೇ ಅಲ್ಲ; ಇನ್ನೂ ದೊಡ್ಡವರ ಹೆಸರು ಮುಂದೆ ಬರಲಿದೆ. ಇದರಿಂದ ಆತಂಕಗೊಂಡಿರುವುದರಿಂದಲೇ ರಾಜ್ಯದ ಐವರು ಸಚಿವರು ಇ.ಡಿ ಮೇಲೆ ಆಪಾದನೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಸದನದಲ್ಲಿ ಉತ್ತರ ನೀಡುವಾಗ ಸತ್ಯ ಸಂಗತಿ ಮರೆ ಮಾಚಿ, ಸದನ ಮತ್ತು ರಾಜ್ಯದ ಜನತೆಗೆ ತಪ್ಪು ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿಯವರು ಈ ಹಗರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಈಗಾಗಲೇ ಇ.ಡಿ, ಸಿಬಿಐ ತನಿಖೆ ನಡೆಯುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಲೇಬೇಕಾಗುತ್ತದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ವಾಲ್ಮೀಕಿ ನಿಗಮದ ₹187 ಕೋಟಿಯನ್ನು ಶಾಸಕ, ಸಚಿವ, ಮುಖ್ಯಮಂತ್ರಿ ಸೇರಿ ಹಲವರು ಲೂಟಿ ಮಾಡಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಇದು ಜಾರಿ ನಿರ್ದೇಶನಾಲಯದ ಮಾಹಿತಿಯಿಂದ ಸ್ಪಷ್ಟವಾಗಿದೆ. ಲೂಟಿ ಆದ ಹಣ ಎಲ್ಲೆಲ್ಲಿ ಹೋಗಿದೆ? ಯಾವಾಗ ವಾ‍ಪಸ್‌ ತರುತ್ತೀರಿ’ ಎಂದು ಪ್ರಶ್ನಿಸಿದರು.

'ಮುಖ್ಯಮಂತ್ರಿ ವೀರಾವೇಶದ ಭಾಷಣ ಮಾಡಿ ತಮ್ಮ ಸರ್ಕಾರ ಭಾಗಿಯಾಗಿಲ್ಲ ಎಂದಿದ್ದಾರೆ. ಹಾಗಿದ್ದರೆ ಸಚಿವರು ರಾಜೀನಾಮೆ ಕೊಟ್ಟಿದ್ದು ಯಾಕೆ? ಬುದ್ದಿ ಇಲ್ಲದೇ ರಾಜೀನಾಮೆ ಕೊಟ್ಟರೆ? ₹89 ಕೋಟಿ ಲೂಟಿ ಆಗಿದೆ ಎಂದು ಒಪ್ಪಿಕೊಂಡಿದ್ದೀರಿ. ಆತ್ಮಹತ್ಯೆ, ಲೂಟಿಯ ತನಿಖೆ ಮಾಡುವುದು ಬಿಟ್ಟು, ನಿಮ್ಮ ಸರ್ಕಾರದಲ್ಲಿ ಹೀಗಾಗಿತ್ತು, ಹಾಗಾಗಿತ್ತು ಎಂದು ಹೇಳುವುದು ಎಷ್ಟು ಸರಿ? ಶೇ 40 ಸರ್ಕಾರ ಎಂದು ನಮ್ಮ ವಿರುದ್ಧ ಪೋಸ್ಟರ್‌ ಅಂಟಿಸಿದ್ದೀರಿ. 14 ತಿಂಗಳಾದರೂ ಆ ವಿಷಯದಲ್ಲಿ ಫಲಿತಾಂಶ ಬಂದಿದೆಯೇ?’ ಎಂದು ಪ್ರಶ್ನಿಸಿದರು.

‘ಧ್ವನಿ ಅಡಗಿಸಲು ಸಭಾಧ್ಯಕ್ಷರ ಯತ್ನ’

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿ ಸದಸ್ಯರು ಧ್ವನಿ ಎತ್ತಿದರೆ ಅವರನ್ನು ಒತ್ತಾಯಪೂರ್ವಕವಾಗಿ ಕೂರಿಸುವ ಕೆಲಸ ಸಭಾಧ್ಯಕ್ಷ ಯು.ಟಿ.ಖಾದರ್ ಮಾಡಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ದೂರಿದರು.

ಹಗರಣದ ವಿರುದ್ಧ ಧ್ವನಿ ಎತ್ತುವವರನ್ನು ದಮನ ಮಾಡಲು ಮಳೆ ಹಾನಿ ವಿಷಯವನ್ನು ಪ್ರಸ್ತಾವಕ್ಕೆ ಸಭಾಧ್ಯಕ್ಷರು ಅವಕಾಶ ನೀಡಿದರು. ಇದು ಸಭಾಧ್ಯಕ್ಷರಿಗೆ ಗೌರವ ತರುವ ಕೆಲಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಭಾಧ್ಯಕ್ಷರು ಸದನ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಸಭಾಧ್ಯಕ್ಷರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಸೋಮವಾರ ಅಧಿವೇಶನದಲ್ಲಿ ಈ ಕುರಿತು ಬಿಜೆಪಿ ನಿರ್ಣಯ ತೆಗೆದುಕೊಳ್ಳಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT