ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕಾಕ್‌ ಮಾದರಿ ಚಳವಳಿ

ಕಲಿಕಾ ಮಾಧ್ಯಮ: ಸಾಹಿತಿಗಳ ನಿರ್ಣಯ
Published : 7 ಮೇ 2014, 19:30 IST
ಫಾಲೋ ಮಾಡಿ
Comments

ಮೈಸೂರು: ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಗೋಕಾಕ್‌ ಚಳವಳಿ ಮಾದರಿಯಲ್ಲಿ  ಹೋರಾಟ ಆರಂಭಿಸಲು ಬುಧವಾರ ಇಲ್ಲಿ ನಿರ್ಣಯಿಸಲಾಯಿತು.

ನಗರದಲ್ಲಿ ಕನ್ನಡ ಕ್ರಿಯಾ ಸಮಿತಿ ಕರೆದಿದ್ದ ಸಭೆಯಲ್ಲಿ ಸಾಹಿತಿಗಳು, ವಿದ್ವಾಂಸರು, ರಂಗಕರ್ಮಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ಗುರುವಾರ (ಮೇ 8) ಬೆಳಿಗ್ಗೆ 11 ಗಂಟೆಗೆ ನಗರದ ಹೃದಯ ಭಾಗವಾದ ಕೆ.ಆರ್‌. ವೃತ್ತದಲ್ಲಿ ಕನ್ನಡ ಕ್ರಿಯಾ ಸಮಿತಿಯಡಿ ವಿವಿಧ ಕನ್ನಡಪರ ಸಂಘಟನೆಗಳ ಜತೆಗೂಡಿ ಮಾನವ ಸರಪಳಿ ರಚಿಸಿ, ಬೃಹತ್‌ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪ ಮಾತನಾಡಿ, ‘ಸುಪ್ರೀಂ ಕೋರ್ಟ್‌ ತೀರ್ಪು ಬಂದಾಗಿದೆ. ಅದನ್ನು ಬದಲಿ­ಸಲು ಆಗುವುದಿಲ್ಲ. ಸಂಸತ್‌ನಲ್ಲಿ ಮಸೂದೆ ಮಂಡಿಸಿ ವಿಧೇಯಕವನ್ನು ಪಾಸ್‌ ಮಾಡಬೇಕು. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸಬೇಕು. ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿ­ನಲ್ಲಿ ಏನಿದೆ ಗೊತ್ತಿಲ್ಲ.

ಆದರೆ, ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಜತೆ ಅವರು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ಅಲ್ಲದೆ, ಅಲ್ಲಿನ ಸಾಹಿತಿಗಳು, ವಿದ್ವಾಂಸರ ಅಭಿಪ್ರಾಯ ಸಂಗ್ರಹಿಸ­ಬೇಕು. ಕುಸ್ಮಾದಲ್ಲಿ ಸದಸ್ಯತ್ವ ಪಡೆದಿ­ರುವ ರಾಜಕಾರಣಿಗಳು ಮತ್ತು ಮಂತ್ರಿ­ಗಳನ್ನು ಪತ್ತೆ ಹಚ್ಚಿ, ಸಾಹಿತಿ­ಗಳೆಲ್ಲಾ ಒಗ್ಗಟ್ಟಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿಗಳನ್ನು ವಾಪಸು ಮಾಡಲಿ: ಜ್ಞಾನಪೀಠ, ಪದ್ಮಶ್ರೀ, ನಾಡೋಜ ಸೇರಿದಂತೆ ಎಲ್ಲ ಪ್ರಶಸ್ತಿಗಳನ್ನು ಸಾಹಿತಿಗಳು ವಾಪಸು ಮಾಡುವ ಮೂಲಕ ಹೋರಾಟದ ಹೆಜ್ಜೆ ಇಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯ ನಿರ್ಣಯವನ್ನು  ಸಾಹಿತಿ ಸಿ.ಪಿ. ಕೃಷ್ಣಕುಮಾರ್‌, ವಿದ್ವಾಂಸ ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ ಹಾಗೂ ರಂಗಕರ್ಮಿ ಸಿ. ಬಸವಲಿಂಗಯ್ಯ ಅನುಮೋದಿಸಿದರು.

ಮರುಪರಿಶೀಲನಾ ಅರ್ಜಿಗೆ ಸರ್ಕಾರ ಚಿಂತನೆ?
ಬೆಂಗಳೂರು:
ಭಾಷಾ ಮಾಧ್ಯಮದ ಕುರಿತು ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಕೋರ್ಟ್‌ ತೀರ್ಪಿನ ಬಗ್ಗೆ ತಜ್ಞರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಇದು ಮುಖ್ಯವಾಗಿ ಕಾನೂನಿನ ಪ್ರಶ್ನೆಯಾಗಿದೆ. ಸಂವಿಧಾನ ಪೀಠದ ಮುಂದೆ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸಿತ್ತು. ಸದ್ಯಕ್ಕೆ  ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಮಿಳುನಾಡಿನಲ್ಲಿ ಯಾವ ರೀತಿ ಭಾಷಾ ನೀತಿ ಅಳವಡಿಸಲಾಗಿದೆ ಎನ್ನುವ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT