ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮಿಬ್ಬರ ದೇಹ ಎರಡಾದರೂ ಆತ್ಮವೊಂದೆ

101 ಕಮಾನುಗಳ ಸ್ವಾಗತ ಕೊಟ್ಟ ಗೆಳೆಯ; ನನ್ನ ಹುಟ್ಟು ಹಬ್ಬಕ್ಕೆ ಮನೆಗೆ ಬರುತ್ತಿದ್ದ
Published : 27 ಜುಲೈ 2017, 19:30 IST
ಫಾಲೋ ಮಾಡಿ
Comments

ನಮ್ಮದು ಹೆಚ್ಚು–ಕಡಿಮೆ 50 ವರ್ಷಗಳ ಸ್ನೇಹ. ಇಷ್ಟು ಸುದೀರ್ಘ ಅವಧಿಯ ಗೆಳೆತನ  ಐತಿಹಾಸಿಕ ದಾಖಲೆ ಇರಬಹುದು. ಧರ್ಮಸಿಂಗ್‌ ಎಂದರೆ ಖರ್ಗೆ; ಖರ್ಗೆ ಎಂದರೆ ಧರ್ಮಸಿಂಗ್‌ ಎಂದೇ ಜಗತ್ತು ಭಾವಿಸಿದೆ. ಅಷ್ಟರ ಮಟ್ಟಿಗೆ ನಾವಿಬ್ಬರೂ ಜಂಟಿಯಾಗಿದ್ದೆವು. ನಮ್ಮ ಹೆಸರುಗಳೂ ಜಂಟಿಯಾದವು.

ಕಲ್ಬುರ್ಗಿಯಿಂದ, ಬೆಂಗಳೂರಿಗೆ ಅಲ್ಲಿಂದ ದೆಹಲಿಯವರೆಗೆ ನಮ್ಮ ಹೆಸರುಗಳು ಜತೆಜತೆಗೇ ಪರಿಚಿತವಾದವು. ಅಕಸ್ಮಾತ್‌, ನಮ್ಮಿಬ್ಬರಲ್ಲಿ ಒಬ್ಬರನ್ನೇ ಭೇಟಿಯಾದವರು ಎದುರಿಗಿದ್ದರೂ ನಮ್ಮ ಕುಶಲೋಪರಿ ಕೇಳದೆ, ‘ಅವರೆಲ್ಲಿ?’ ಎಂದೇ ಮಾತಿಗೆಳೆಯುತ್ತಿದ್ದರು. ಅಷ್ಟರ ಮಟ್ಟಿಗೆ ನಾವು ಜತೆಯಾಗಿದ್ದೆವು.
ಅವರು ನನಗಿಂತ ವಯಸ್ಸಿನಲ್ಲಿ ಐದಾರು ವರ್ಷ ಹಿರಿಯರು.

ಆದರೂ ನಮ್ಮಿಬ್ಬರ ನಡುವಿನ ಹೊಂದಾಣಿಕೆಯೇ ಅಂಥದ್ದಿತ್ತು. ಕೆಲವು ವಿಷಯಗಳಲ್ಲಿ ನಾವು ಸಮಾನ ಮನಸ್ಕರಾಗಿದ್ದೆವು. ಹೊಟ್ಟೆಕಿಚ್ಚಿಗೆ ಆಸ್ಪದ ಇಲ್ಲದಂತೆ ನಾವಿಬ್ಬರೂ ಆ ಸ್ನೇಹವನ್ನು ನಿಭಾಯಿಸಿದೆವು. ಅಷ್ಟೂ ವರ್ಷಗಳ ಕಾಲ ನಮಗೆ ಕಷ್ಟಗಳೇ ಎದುರಾಗಲಿಲ್ಲ. ನಮ್ಮದು ಗೆಲುವು ಮತ್ತು ನಲಿವಿನ ಜೀವನ.

ಅಹಂಭಾವಕ್ಕೆ ನಮ್ಮಲ್ಲಿ ಜಾಗವೇ ಸಿಗಲಿಲ್ಲ. ನನಗೆ ಸಿಕ್ಕ ಅಧಿಕಾರ, ಅದು ಅವರದ್ದೇ. ಅವರಿಗೆ ಸಿಕ್ಕ ಅಧಿಕಾರ ಅದು ನನ್ನದೇ ಎಂದು ಇಬ್ಬರೂ ಭಾವಿಸಿದ್ದೆವು. ನಮ್ಮ ಸ್ನೇಹಕ್ಕೆ ಹುಳಿ ಹಿಂಡಲು ಬಂದವರನ್ನು ಎಂದೂ ನಂಬಲಿಲ್ಲ. ಬಹುಶಃ ಆ ನಂಬಿಕೆಯೇ ನಮ್ಮ ಸ್ನೇಹ ಇಷ್ಟು ವರ್ಷಗಳ ಕಾಲ ಹಚ್ಚಹಸಿರಾಗಿ ಇರಲು ಪ್ರಮುಖ ಸಾಧನವೂ ಕಾರಣವೂ ಆಯಿತು.

ನಾವಿಬ್ಬರೂ ಒಂದೇ ದೋಣಿಯ ಪಯಣಿಗರು. ಕಾಂಗ್ರೆಸ್‌ ಎಂಬ ದೊಡ್ಡ ದೋಣಿ ನಮ್ಮನ್ನು ಹೊತ್ತು ಸಾಗುತ್ತಿದ್ದರೂ, ಆ ಪಯಣ ಹೂವಿನ ಹಾಸಿಗೆ ಆಗಿರಲಿಲ್ಲ. ಘಟಾನುಘಟಿಗಳ ನಡುವೆ ನಮ್ಮ ಅಸ್ತಿತ್ವ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇತ್ತು.

101 ಕಮಾನುಗಳ ಸ್ವಾಗತ: 1976ರಲ್ಲಿ ನಾನು ಸಚಿವನಾದೆ. ಆಗ ಧರ್ಮಸಿಂಗ್‌ ತಾವೇ ಸಚಿವರಾದಷ್ಟು ಹಿರಿಹಿರಿ ಹಿಗ್ಗಿದ್ದರು. ಪ್ರಮಾಣ ವಚನ ಸ್ವೀಕರಿಸಿ ಕಲ್ಬುರ್ಗಿಗೆ ಮರಳಿದ ನನಗೆ ಅಚ್ಚರಿ ಕಾದಿತ್ತು. ನನ್ನನ್ನು ಸ್ವಾಗತಿಸೆಲೆಂದೇ ಒಂದು ಸಮಿತಿ ರಚಿಸಿ, ಅದಕ್ಕೆ ಅಧ್ಯಕ್ಷರಾಗಿದ್ದ ಅವರು, ಊರ ತುಂಬ 101 ಕಮಾನುಗಳನ್ನು ಹಾಕಿ ಭವ್ಯವಾಗಿ ಬರಮಾಡಿಕೊಂಡರು. ಈ ರೀತಿ ಅದೆಷ್ಟೋ ಬಾರಿ ಅವರು ದೊಡ್ಡತನ ಮೆರೆದಿದ್ದಿದೆ.

ಆಗಾಧ ನೆನಪಿನ ಶಕ್ತಿ: ಅದ್ಭುತವಾದ ನೆನಪಿನ ಶಕ್ತಿ ಧರ್ಮಸಿಂಗ್‌ ಅವರಿಗೆ ವರವಾಗಿತ್ತು. ಯಾರನ್ನಾದರೂ ಒಮ್ಮೆ ಪರಿಚಯಿಸಿಕೊಂಡರೆ ಕಡೆಯವರೆಗೂ ಅವರ ಹೆಸರು ಅವರ ಮಸ್ತಕದಲ್ಲಿ ದಾಖಲಾಗುತ್ತಿತ್ತು. ಕಂಡಕಂಡವರನ್ನೆಲ್ಲ ಹೆಸರುಹಿಡಿದು, ಸಲುಗೆಯಿಂದ ಮಾತಾಡುತ್ತಿದ್ದ ಅವರ ಗುಣ ನನಗೆ ಇಷ್ಟವಾಗುತ್ತಿತ್ತು.

ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ಅವರು ಮನೆಗೇ ಬಂದು ಶುಭಾಶಯ ಕೋರುತ್ತಿದ್ದರು. ಈಗ ಆರು ದಿನಗಳ ಹಿಂದೆ (ಜುಲೈ 21) ನನ್ನ ಜನ್ಮದಿನದಂದು  ಅನಾರೋಗ್ಯದ ನಡುವೆಯೇ ಮನೆಗೆ ಬಂದ ಅವರು ಶುಭ ಕೋರಿ ಮರಳಿದರು. ಅದೇ ನನ್ನ ಅವರ ಕೊನೆಯ ಭೇಟಿ.

‘ನೀವ್ಯಾಕೆ ಬಂದಿರಿ, ಹೇಳಿ ಕಳಿಸಿದ್ದರೆ ನಾನೇ ಬರುತ್ತಿದ್ದೆ’ ಅಂದರೂ ಅವರು ಕೇಳುತ್ತಿರಲಿಲ್ಲ. ಅವರ ಜನ್ಮದಿನಕ್ಕೆ ನಾನು ಶುಭ ಕೋರುವುದೂ ರೂಢಿ (ಡಿಸೆಂಬರ್‌ 25, ಕ್ರಿಸ್‌ಮಸ್‌ ದಿನ). ‘ನನ್ನ ಜನ್ಮದಿನವನ್ನು ಇಡೀ ಜಗತ್ತೇ ಆಚರಿಸುತ್ತದೆ. ನಿನ್ನ ಜನ್ಮದಿನವನ್ನು ನಾವಾದರೂ ಕೆಲವರು ಆಚರಿಸುತ್ತೇವೆ ಬಿಡು’ ಎಂದು ಪ್ರೀತಿಯಿಂದ ಹೇಳುತ್ತಿದ್ದರು.

ಅವರು ಮುಖ್ಯಮಂತ್ರಿಯಾದಾಗ ನಾನೇ ಮುಖ್ಯಮಂತ್ರಿ ಆದಷ್ಟು ಸಂತಸವಾಗಿತ್ತು. ಹಾಗಂತ ನನ್ನ ಇತಿಮಿತಿಗಳನ್ನು ಮೀರಿ ನಾನು ವರ್ತಿಸಲಿಲ್ಲ.
ನನ್ನಲ್ಲಿಲ್ಲದ, ಅವರ ಒಳ್ಳೆಯ ಗುಣವೆಂದರೆ ಅದು ತಾಳ್ಮೆ. ಅವರಷ್ಟು ತಾಳ್ಮೆ ನನಗಿರಲಿಲ್ಲ.

***

ಮೌನಕ್ಕೆ ಜಾರಿದ ಖರ್ಗೆ
ಗುರುವಾರ ಮಧ್ಯಾಹ್ನ 12 ಗಂಟೆ. ಲೋಕಸಭೆಯಲ್ಲಿ ವಿಪಕ್ಷಗಳು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದವು. ಇದ್ದಕ್ಕಿದ್ದಂತೆಯೇ ಹೊರಗಿನಿಂದ ಬಂದ ಸದಸ್ಯರೊಬ್ಬರು ಖರ್ಗೆ ಅವರ ಕಿವಿಯಲ್ಲಿ ಏನೋ ಉಸುರಿದರು. ಅದು ಬರಸಿಡಿಲಿನಂತಹ ಸುದ್ದಿ.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನಿಧನರಾಗಿರುವ ಆ ಸುದ್ದಿಯನ್ನು ಕೇಳಿದೊಡನೆಯೇ ಖರ್ಗೆ ಚಡಪಡಿಸತೊಡಗಿದರು. ಪಕ್ಕದಲ್ಲಿ ಕುಳಿತಿದ್ದ ಸೋನಿಯಾ ಗಾಂಧಿ ಅವರಿಗೆ ಈ ವಿಷಯ ತಿಳಿಸಿ ಸದನದಿಂದ ಹೊರ ನಡೆದರು.

ಆಪ್ತಮಿತ್ರನ ಅಗಲಿಕೆಯ ದುಃಖದಲ್ಲೇ ಹೊರಬಂದ ಅವರು, ಎದುರಾದ ಮಾಧ್ಯಮದವರೆದುರು ಕಣ್ಣೀರು ಸುರಿಸಿ, ನೆನಪುಗಳನ್ನು ಮೆಲುಕು ಹಾಕಿ ಸಫ್ದರ್‌ ಜಂಗ್‌ ರಸ್ತೆಯಲ್ಲಿನ ಮನೆಗೆ ಮರಳಿದರು.

ಮನೆಗೆ ಹೋದವರೇ ಯಾರೊಂದಿಗೂ ಮಾತನಾಡದೆ ಮೌನಕ್ಕೆ ಜಾರಿದರು. ಮತ್ತೆ ಮತ್ತೆ ಅತ್ತರು. ಟಿ.ವಿ.ಯಲ್ಲಿ ಗೆಳೆಯನ ನಿಧನದ ಸುದ್ದಿ ನೋಡಿ ದುಃಖ ತಡೆಯಲಾರದೆ ಕಣ್ಣೀರು ಸುರಿಸಿದರು.

ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕೆಲವೇ ದಿನಗಳಾಗಿದ್ದರೂ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಂಜೆ 4ಕ್ಕೆ ವಿಮಾನ ನಿಲ್ದಾಣದತ್ತ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT