ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂಗಳ ಮೇಲಿನ ದಾಳಿ | ಭಾರತ ಅಪಪ್ರಚಾರ ನಡೆಸುತ್ತಿದೆ: ಮೊಹಮ್ಮದ್ ಯೂನಸ್

ದಾಳಿಗಳು ರಾಜಕೀಯ ಪ್ರೇರಿತವೇ ಹೊರತು ಕೋಮುದ್ವೇಷವಲ್ಲ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್
Published : 5 ಸೆಪ್ಟೆಂಬರ್ 2024, 14:17 IST
Last Updated : 5 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ಢಾಕಾ: ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ಬಗ್ಗೆ ಭಾರತ ಮಾಡುತ್ತಿರುವ ಪ್ರಚಾರ ‘ಉತ್ಪ್ರೇಕ್ಷೆಯಿಂದ ಕೂಡಿದೆ. ಹಿಂದೂಗಳ ಮೇಲಿನ ದಾಳಿ ರಾಜಕೀಯ ಕಾರಣಕ್ಕಾಗಿ ನಡೆದಿದೆಯೇ ಹೊರತು ಕೋಮುದ್ವೇಷಕ್ಕಾಗಿ ಅಲ್ಲ. ಈ ವಿಚಾರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿಸಿದ್ದೇನೆ’ ಎಂದು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಹೇಳಿದರು.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಹಿಂದೂಗಳ ಮೇಲೆ ನಡೆದ ದಾಳಿಗೆ ಹಲವು ಆಯಾಮಗಳಿವೆ. ಶೇಕ್‌ ಹಸೀನಾ ಮತ್ತು ಅವಾಮಿ ಲೀಗ್‌ ವಿರುದ್ಧ ದೇಶದಲ್ಲಿ ದಂಗೆ ಎದ್ದಿತ್ತು. ಇದೇ ವೇಳೆ ಹಸೀನಾ ಅವರನ್ನು ಬೆಂಬಲಿಸುವವರ ಮೇಲೆಯೂ ದಾಳಿಯಾಗಿದೆ. ಹಿಂದೂಗಳು ಹಸೀನಾ ಅವರ ಬೆಂಬಲಿಗರು ಎಂಬ ಗ್ರಹಿಕೆ ನಮ್ಮಲ್ಲಿದೆ. ಈ ಕಾರಣಕ್ಕಾಗಿಯೇ ದಾಳಿ ನಡೆದಿದೆ. ಹಾಗೆಂದ ಮಾತ್ರಕ್ಕೆ ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ವಿವರಿಸಿದರು.

‘ತಮ್ಮ ಮೇಲಿನ ದಾಳಿಯನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಹಿಂದೂ ಸಮುದಾಯದವರನ್ನು ನಾನು ಮಾತನಾಡಿಸಿದ್ದೇನೆ. ನೀವು ಈ ದೇಶದ ಪ್ರಜೆಗಳು. ನಿಮಗೆ ಇಲ್ಲಿ ಸಮಾನ ಹಕ್ಕಿದೆ. ಈ ಹಕ್ಕಿಗಾಗಿ ನೀವು ಪ್ರತಿಭಟಿಸಿ. ಆದರೆ, ತಾನು ಹಿಂದೂ ಎನ್ನುವ ಕಾರಣಕ್ಕೆ ಪ್ರತಿಭಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದೆ’ ಎಂದು ನೆನಪಿಸಿಕೊಂಡರು.

ಹಳಸಿದ ಬಾಂಧವ್ಯ: ‘ಭಾರತದೊಂದಿಗಿನ ಸಂಬಂಧವು ಹಳಸಿದೆ. ಇದನ್ನು ಸರಿಪಡಿಸಿಕೊಳ್ಳಲು ಎರಡೂ ದೇಶಗಳು ಯತ್ನಿಸಬೇಕಿದೆ. ಹಸೀನಾ ಅವರನ್ನು ಬಿಟ್ಟು ಬಾಂಗ್ಲಾದೇಶದಲ್ಲಿ ಇರುವವರೆಲ್ಲಾ ಇಸ್ಲಾಂ ಮೂಲಭೂತವಾದಿಗಳು. ಇವರೆಲ್ಲರೂ ಸೇರಿ ದೇಶವನ್ನು ಮತ್ತೊಂದು ಆಫ್ಗಾನಿಸ್ತಾನ ಮಾಡಿಬಿಡುತ್ತಾರೆ ಎಂಬೆಲ್ಲಾ ಸಂಕಥನಗಳಿಂದ ಭಾರತ ಹೊರಬರಬೇಕು. ಎಲ್ಲರಂತೆಯೇ ನಾವೂ ನೆರೆಯ ರಾಷ್ಟ್ರ ಎಂದು ತಿಳಿಯಬೇಕು. ಇದೇ ಎರಡೂ ದೇಶಗಳ ಸಂಬಂಧವು ಉತ್ತಮಗೊಳ್ಳಲು ಇರುವ ದಾರಿ’ ಎಂದರು.

‘ಹಸೀನಾ ಮೌನವಾಗಿರಬೇಕು’

‘ಶೇಕ್‌ ಹಸೀನಾ ಅವರನ್ನು ಹಸ್ತಾಂತರಿಸಿ ಎಂದು ನಾವು ಮನವಿ ಮಾಡುವವರೆಗೂ ಅವರು ನಿಮ್ಮಲ್ಲಿಯೇ ಆಶ್ರಯ ಪಡೆಯಲಿ. ಆದರೆ ಅಲ್ಲಿಯವರೆಗೂ ಅವರು ಮೌನವಾಗಿರಬೇಕು ಎಂಬುದು ನಮ್ಮ ಷರತ್ತು. ಇದನ್ನು ನಾವು ಭಾರತಕ್ಕೆ ಬಹಳ ದೃಢವಾಗಿ ಮತ್ತು ಸ್ಪಷ್ಟವಾಗಿ ಹೇಳಿದ್ದೇವೆ. ಭಾರತದಲ್ಲಿ ಕೂತು ಬಾಂಗ್ಲಾದೇಶಕ್ಕೆ ನಿರ್ದೇಶನ ನೀಡುವುದು ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು’ ಎಂದು ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ಹೇಳಿದರು. ‘ಹಸೀನಾ ಅವರು ನಮ್ಮ ದೇಶಕ್ಕೆ ಸಂಬಂಧಿಸಿ ಹೇಳಿಕೆ ನೀಡುವುದಕ್ಕೆ ಅವರೇನು ಸುಮ್ಮನೇ ಭಾರತದಲ್ಲಿ ಹೋಗಿ ಕುಳಿತಿಲ್ಲ. ಇಲ್ಲಿ ಎದ್ದ ದಂಗೆ ಜನರ ಆಕ್ರೋಶದ ಕಾರಣಕ್ಕಾಗಿ ಅವರು ಭಾರತಕ್ಕೆ ಓಡಿ ಹೋಗಿದ್ದಾರೆ. ಅವರು ಹೇಳಿಕೆ ನೀಡುವುದಕ್ಕೆ ಅವಕಾಶ ನೀಡುತ್ತಿರುವುದು ಬಾಂಗ್ಲಾದೇಶದೊಂದಿಗೆ ಭಾರತ ತೋರುತ್ತಿರುವ ಸ್ನೇಹಪರ ನಡವಳಿಕೆ ಅಲ್ಲ’ ಎಂದು ಟೀಕಿಸಿದರು. ‘ಬಾಂಗ್ಲಾದೇಶದಲ್ಲಿ ಹಸೀನಾ ಅವರು ಜನರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇಲ್ಲಿನ ಜನರಿಗೆ ನ್ಯಾಯ ಸಿಗಬೇಕು ಎಂದಾದರೆ ಹಸೀನಾ ಅವರನ್ನು ಇಲ್ಲಿಗೆ ಕರೆತರಲೇಬೇಕು. ಇಲ್ಲವಾದರೆ ನಮ್ಮ ಜನರು ಶಾಂತಿಯಿಂದ ಇರಲು ಸಾಧ್ಯವಿಲ್ಲ. ಅವರು ಇಲ್ಲಿ ನಡೆಸಿದ ದೌರ್ಜನ್ಯದ ಕುರಿತು ದೇಶದ ಜನರ ಮುಂದೆಯೇ ಹಸೀನಾ ವಿಚಾರಣೆ ನಡೆಯಬೇಕು’ ಎಂಬುದನ್ನು ಒತ್ತಿ ಹೇಳಿದರು.

‘ಅದಾನಿಯೊಂದಿಗಿನ ಒಪ್ಪಂದ: ಮರುಪರಿಶೀಲನೆ ಕುರಿತು ಚಿಂತನೆ’

‘ಭಾರತದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಪ್ರಮುಖವಾಗಿ ಉದ್ಯಮಿ ಗೌತಮ್‌ ಅದಾನಿ ಅವರೊಂದಿಗಿನ ವಿದ್ಯುತ್‌ ಯೋಜನೆಯ ಒಪ್ಪಂದವನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯವಿದೆ. ಕರಾರಿನಲ್ಲಿ ಏನಿದೆ ಕಾಮಗಾರಿ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಸಮಸ್ಯೆಗಳಿದ್ದರೆ ಪ್ರಶ್ನಿಸಲಾಗುತ್ತದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಮೊಹಮ್ಮದ್‌ ಯೂನಸ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT