ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಗನಯಾನದಿಂದ ಆರೋಗ್ಯದ ಮೇಲೆ ಪರಿಣಾಮ: ಅಧ್ಯಯನ

ಬಾಹ್ಯಾಕಾಶದಿಂದ ಮರಳಿದ ನಂತರ ಟೆಲೊಮೇರ್‌ಗಳ ಉದ್ದದಲ್ಲಿ ಬದಲಾವಣೆ
Published 8 ಜುಲೈ 2024, 12:26 IST
Last Updated 8 ಜುಲೈ 2024, 12:26 IST
ಅಕ್ಷರ ಗಾತ್ರ

ಫೋರ್ಟ್‌ ಕೊಲಿನ್ಸ್‌: ಅತ್ಯಲ್ಪ ಕಾಲದ ಬಾಹ್ಯಾಕಾಶ ಯಾನವೂ ಗಗನಯಾತ್ರಿಗಳ ಜೈವಿಕ ಗಡಿಯಾರದ ಮೇಲೆ, ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ. 

ಈವರೆಗೆ ಕೇವಲ 600 ಜನರು ಮಾತ್ರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದಾರೆ. ಕಳೆದ ಆರು ದಶಕಗಳಲ್ಲಿ ಅತ್ಯಲ್ಪ ಕಾಲ ಅಂದರೆ 20 ದಿನಗಳಿಗೂ ಕಡಿಮೆ ದಿನ ಅಂತರಿಕ್ಷಕ್ಕೆ ಪ್ರಯಾಣಿಸಿರುವ ಗಗನಯಾತ್ರಿಗಳ ಪೈಕಿ ಅತಿ ಹೆಚ್ಚಿನವರು ಮಧ್ಯ ವಯಸ್ಸಿನ ‍ಪುರುಷರು.

ಇಂದು ಖಾಸಗಿ, ವಾಣಿಜ್ಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಬಾಹ್ಯಾಕಾಶ ಯಾನದ ಮಾರುಕಟ್ಟೆಯನ್ನು ಉತ್ತೇಜಿಸುತ್ತಿವೆ. ಮಾನವಸಹಿತ ಬಾಹ್ಯಾಕಾಶ ಯಾನದ ಹೊಸ ಯುಗಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಮುಂದಿನ ದಶಕದಲ್ಲಿ ಚಂದ್ರನ ಮೇಲೆ ಹಜ್ಜೆ ಇಡಲು ಮಾನವಕುಲ ಉತ್ಸುಕವಾಗಿದೆ. ಬಾಹ್ಯಾಕಾಶ ಅನ್ವೇಷಣಾ ಯೋಜನೆಗಳು, ಬಾಹ್ಯಾಕಾಶ ಪ್ರಯಾಣಿಕರು, ಬಾಹ್ಯಾಕಾಶ ಪ್ರವಾಸಿಗರೂ ಹೆಚ್ಚಲಿದ್ದಾರೆ. ಇಂಥ ಸಂದರ್ಭದಲ್ಲಿ ಇದರಿಂದ ಮಾನವನ ಆರೋಗ್ಯ ಮೇಲೆ ಉಂಟಾಗುವ ಪರಿಣಾಮಗಳ ಮೇಲೆ ಅಧ್ಯಯನವು ಬೆಳಕು ಚೆಲ್ಲಿದೆ. 

 ನಾಸಾದ ಅವಳಿಗಳ ಸಂಶೋಧನೆಯ ಭಾಗವಾಗಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿಸಲಾಗಿದೆ.

ಕೊಲೊರಾಡೊ ಸ್ಟೇಟ್‌ ವಿಶ್ವವಿದ್ಯಾಲಯದ ಪರಿಸರ ಮತ್ತು ರೇಡಿಯಾಲಜಿಕಲ್‌ ಹೆಲ್ತ್‌ ಸೈನ್ಸ್ ಇಲಾಖೆಯ ಕ್ಯಾನ್ಸರ್ ಜೀವಶಾಸ್ತ್ರಜ್ಞರು ಮತ್ತು ಸಹೋದ್ಯೋಗಿಗಳು  ಈ ಸಂಶೋಧನೆ ನಡೆಸಿದ್ದಾರೆ.

ಟೆಲೊಮೇರ್‌ಗಳ ಉದ್ದದಲ್ಲಿ ಬದಲಾವಣೆ:

ನಾಸಾ ತನ್ನ ಯೋಜನೆಗಾಗಿ ಗಗನಯಾತ್ರಿ ಸ್ಕಾಟ್‌ ಕಿಲೆ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅವರು 2015ರಿಂದ 2016ರ ವರೆಗೆ ಇದ್ದರು. ಇದೇ ಅವಧಿಯಲ್ಲಿ ಅವರ ಅವಳಿ ಸಹೋದರ, ಮಾಜಿ ಗಗನಯಾತ್ರಿ ಮಾರ್ಕ್‌ ಕಿಲೆ ಭೂಮಿಯ ಮೇಲೆ ಇದ್ದರು. ತಂಡವು  ಇಬ್ಬರ ರಕ್ತದ ಮಾದರಿಗಳನ್ನು ಪಡೆದಿತ್ತು. ಸ್ಕಾಟ್ ಅವರು ಬಾಹ್ಯಾಕಾಶದಲ್ಲಿ ಇದ್ದ ಸಂದರ್ಭದಲ್ಲಿ ಅವರ ಟೆಲೊಮೇರ್‌ಗಳು (ಕ್ರೋಮೊಝೋಮುಗಳ (ವರ್ಣತಂತು) ಕೊನೆಯಲ್ಲಿ ಇರುವ ರಕ್ಷಣಾ ಕ್ಯಾಪ್‌)  ಉದ್ದವಾಗಿತ್ತು. ಅವರು ಭೂಮಿಗೆ ಮರಳಿದ ನಂತರ ಟೆಲೊಮೇರ್‌ಗಳು ಚಿಕ್ಕದಾಗುತ್ತ ಬಂದವು. ಕೆಲವು ತಿಂಗಳ ನಂತರ ಸುಧಾರಿಸಿತು. ಆದಾಗ್ಯೂ ಬಾಹ್ಯಾಕಾಶ ಯಾನಕ್ಕೂ ಮೊದಲು ಇದ್ದಿದ್ದಕ್ಕಿಂತ ಕೊಂಚ ಚಿಕ್ಕದಾಗಿಯೇ ಇವೆ.

ಮತ್ತೊಮ್ಮೆ ಆರು ತಿಂಗಳ ಅಧ್ಯಯನ ಯೋಜನೆಗೆ ಕಳುಹಿಸಲಾಗಿದ್ದ 10 ಗಗನಯಾತ್ರಿಗಳ ಮೇಲೆ ಇಂಥದ್ದೇ ಅಧ್ಯಯನ ನಡೆಸಲಾಯಿತು. ಈ ಗಗನಯಾತ್ರಿಗಳ ವಯಸ್ಸು ಮತ್ತು ಲಿಂಗಕ್ಕೆ ಸರಿಹೊಂದುವ ನಿಯಂತ್ರಿತ ಗುಂಪೂ  ಸಹ ಇತ್ತು. ಆಗಲೂ ಬಾಹ್ಯಾಕಾಶ ಯಾನದ ಸಂದರ್ಭದಲ್ಲಿ ಮತ್ತು ಅವರು ಭೂಮಿಗೆ ಮರಳಿದ ಬಳಿಕ ಅವರ ಟೆಲೊಮೇರ್‌ಗಳ ಉದ್ದವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿಯೂ ಬಾಹ್ಯಾಕಾಶ ಯಾನದ ವೇಳೆ ಗಗನಯಾತ್ರಿಗಳ ಟೆಲೊಮೇರ್‌ಗಳು ಉದ್ದವಾಗಿತ್ತು. ಭೂಮಿಗೆ ಮರಳಿದ ನಂತರ ಚಿಕ್ಕದಾದವು ಎಂದು ತಿಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT