ಹಿಂದಿ ಭಾಷೆ ಕುರಿತು ಅಪಾರ ಅಭಿಮಾನ ಇರಿಸಿಕೊಂಡಿರುವವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾಷೆಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿರಬಹುದೆನಿಸುತ್ತಿದೆ. ಏಕೆಂದರೆ ಭಾಷೆಗೆ ಸಂಬಂಧಿಸಿದಂತೆ ಕೇಂದ್ರದ ಈಚೆಗಿನ ನಡೆಯೊಂದು ಇಂತಹದ್ದೊಂದು ಅನುಮಾನ ಮೂಡಿಸಿದೆ. ಭಾರತೀಯ ಜನತಾ ಪಕ್ಷದಲ್ಲಿಯೂ ಉದಾರವಾದಿ ಚಿಂತನೆ ಹೊಂದಿರುವವರು ಹಲವರಿದ್ದಾರೆ. ಈ ದೇಶದ ಬಗ್ಗೆ ಮಾತನಾಡುವಾಗಲೆಲ್ಲಾ ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆ ಬಗ್ಗೆ ಅವರಿಗೆ ಸ್ಪಷ್ಟತೆ ಇರುವಂತಿದೆ. ಆದರೆ ಅಂತಹವರು ಮಾತನಾಡುವುದೇ ಕಡಿಮೆ ಎಂಬುದೂ ಈ ಸಂದರ್ಭದಲ್ಲಿ ಎದ್ದು ಕಾಣುತ್ತಿದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಎರಡು ವಾರಗಳಾಗಿದ್ದಾಗ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸುತ್ತೋಲೆಯೊಂದು ತಲುಪಿತು. ಸಂಬಂಧಪಟ್ಟ ಇಲಾಖೆಗಳೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯನ್ನೇ ಹೆಚ್ಚಾಗಿ ಬಳಸಬೇಕೆಂದು ಅದರಲ್ಲಿ ಸೂಚನೆ ನೀಡಲಾಗಿತ್ತು. ಇದು ಹಿಂಬಾಗಿಲಿನಿಂದ ಭಾಷೆಯೊಂದನ್ನು ಹೇರುವ ಪ್ರಯತ್ನವಲ್ಲದೆ ಇನ್ನೇನೂ ಅಲ್ಲ. ಹಿಂದಿಯೇತರ ಭಾಷೆಯ ರಾಜ್ಯಗಳು ಕೇಂದ್ರದ ಈ ನಡೆಯ ವಿರುದ್ಧ ತಕ್ಷಣ ಧ್ವನಿ ಎತ್ತಿದವು. ಕೇಂದ್ರದ ಆಡಳಿತಗಾರರು ಕೂಡಲೇ ಸಮಜಾಯಿಷಿ ನೀಡುತ್ತಾ ‘ಆ ಸುತ್ತೋಲೆ ಹಿಂದಿ ಮಾತನಾಡುವ ರಾಜ್ಯಗಳಿಗಷ್ಟೇ ಸಂಬಂಧಿಸಿದ್ದು’ ಎಂದರು.

ಆದರೆ ಈ ಸ್ಪಷ್ಟೀಕರಣ ಯಾರಲ್ಲೂ ನಂಬಿಕೆ ಹುಟ್ಟಿಸುವಂತಿರಲಿಲ್ಲ. ನನಗನ್ನಿಸುವ ಮಟ್ಟಿಗೆ ಕೇಂದ್ರ ಸರ್ಕಾರವೇ ಭಾಷೆಗೆ ಸಂಬಂಧಿಸಿದಂತೆ ಜನರ ನಾಡಿಮಿಡಿತ ಹೇಗಿದೆ ಎಂದು ತಿಳಿದುಕೊಳ್ಳಲು ಹೀಗೆ ಮಾಡಿರಬಹುದು. ಹಿಂದಿ ಹೇರುವ ತಮ್ಮ ನಡೆಗೆ ಪ್ರತಿಭಟನೆಯ ಸದ್ದು ದೊಡ್ಡದಿದೆ ಎಂದು ಗೊತ್ತಾದ ತಕ್ಷಣ ಸರ್ಕಾರ ಹಿಂದಡಿ ಇಟ್ಟುಬಿಟ್ಟಿದೆ. ಆದರೆ ಆ ಸುತ್ತೋಲೆಯಿಂದ ಆಘಾತವಂತೂ ಆಗಿಬಿಟ್ಟಿದೆ. ಹಿಂದಿಯೇತರ ಭಾಷೆಗಳೇ ಪ್ರಬಲವಾಗಿರುವ ರಾಜ್ಯಗಳ ಮಂದಿಗೆ ಅಭದ್ರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಭಾಷೆಗೆ ಸಂಬಂಧಿಸಿದಂತೆ ತಮಗೆ ಪ್ರತಿಕೂಲವಾದ ಯಾವುದೇ ನಿಯಮ ಬರಬಹುದು ಎಂಬ ಭಯ ಅವರಲ್ಲಿ ಮೂಡಿರುವುದಂತೂ ಸತ್ಯ.

ಐವತ್ತರ ದಶಕದ ಕೊನೆಯಲ್ಲಿ ಮತ್ತು ಅರವತ್ತರ ದಶಕದ ಆರಂಭದಲ್ಲಿ ಭಾಷೆಗೆ ಸಂಬಂಧಿಸಿದಂತೆ ದೊಡ್ಡ ಘರ್ಷಣೆ ನಡೆದಿದ್ದು, ದೇಶದ ಪಾಲಿಗೆ ಇವತ್ತಿಗೂ ಅದು ದುಃಸ್ವಪ್ನವಾಗಿ ಕಾಡುತ್ತಿದೆ. ಅಂದು ಕೂಡಾ ಗೃಹ ಸಚಿವಾಲಯವು ಇಂಗ್ಲಿಷ್ ಬದಲು ಹಿಂದಿ ಬಳಸಲು ಸೂಚನೆ ನೀಡಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ. ಆ ದಿನಗಳಲ್ಲಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಕೇಂದ್ರದ ವಿರುದ್ಧ ವ್ಯಾಪಕ ಪ್ರತಿಭಟನೆ ಕಂಡು ಬಂದಿತ್ತು. ತಮಿಳುನಾಡಿನಲ್ಲಿ ಹಿಂದಿ ಭಾಷೆಯ ವಿರುದ್ಧವೇ ದೊಡ್ಡ ಆಂದೋಲನ ನಡೆದಿತ್ತು. ಆ ಸಂದರ್ಭದಲ್ಲಿ ಪ್ರತಿಭಟನೆಕಾರನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದ.

ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಆ ಘಟನೆಗಳಿಂದ ಬೇಸತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ದಿನಗಳಲ್ಲಿ ಪ್ರತಿಭಟನೆಯ ಬೆಂಕಿ ವೇಗವಾಗಿ ವ್ಯಾಪಿಸುತ್ತಿರುವಾಗ ಎಚ್ಚೆತ್ತುಕೊಂಡ ನೆಹರೂ ‘ಬಲವಂತವಾಗಿ ಹಿಂದಿ ಹೇರುವ ಉದ್ದೇಶ ಇಲ್ಲವೇ ಇಲ್ಲ’ ಎಂದಿದ್ದರು. ಹಿಂದಿಯೇತರ ಭಾಷಿಕರು ಸ್ವತಃ ಮುಂದೆ ಬಂದು ಹಿಂದಿ ಭಾಷೆಯನ್ನೇ ಬಳಸುತ್ತೇವೆ ಎಂದು ಹೇಳುವವರೆಗೆ ಕೇಂದ್ರದಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ಹಿಂದಿಯನ್ನು ಬಳಸುವುದಿಲ್ಲ ಎಂದೂ ನೆಹರೂ ಆಶ್ವಾಸನೆ ನೀಡಿದ್ದರು. ಅಂದು ನೆಹರೂ ಅವರು ಆಡಿದ್ದ ಮಾತುಗಳಿಂದ ಹಿಂದಿ ಭಾಷಿಕರೇ ಬಹುಸಂಖ್ಯಾತರಾಗಿರುವ ರಾಜ್ಯಗಳ ಜನರಿಗೆ ನಿರಾಸೆ ಉಂಟಾಗಿತ್ತು, ನಿಜ. ಆದರೆ ಹಿಂದಿಯೇತರ ಭಾಷೆಗಳಾಡುವ ಜನರೇ ಬಹುಸಂಖ್ಯಾತರಾಗಿರುವ ರಾಜ್ಯಗಳು ನಿರಾಳದ ಭಾವ ವ್ಯಕ್ತ ಪಡಿಸಿದ್ದವು.

ಪ್ರಧಾನಿ ನರೇಂದ್ರ ಮೋದಿಯವರು ಹಿಂದಿಯನ್ನು ಅತ್ಯಂತ ಸುಲಲಿತವಾಗಿ ಮಾತನಾಡುತ್ತಾರೆ. ಹಿಂದಿ ಅವರಿಗೆ ಅತ್ಯಂತ ಭದ್ರತೆಯ ಭಾವ ನೀಡುವುದಲ್ಲದೆ, ಆತ್ಮವಿಶ್ವಾಸ ತುಂಬುವಂತಹದ್ದಾಗಿದೆ. ಈಚೆಗಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ಅವರು ಹಿಂದಿಯಲ್ಲಿಯೇ ಮಾತನಾಡುತ್ತಾ ದೇಶದಾದ್ಯಂತ ಪ್ರವಾಸ ಮಾಡಿದ್ದರು.

ಇದೀಗ ಮೋದಿಯವರು, 1963ರಲ್ಲಿ ಆಗಿನ ಪ್ರಧಾನಿ ನೆಹರೂ ಅವರು ದೇಶಕ್ಕೆ ನೀಡಿದ್ದ ವಚನವನ್ನು ನೆನಪಿಸಿಕೊಳ್ಳಬೇಕು. ಇಡೀ ದೇಶದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡೂ ಆಡಳಿತದಲ್ಲಿ ಸಂಪರ್ಕ ಭಾಷೆಗಳಾಗಿ ಮುಂದುವರಿಯುತ್ತವೆ ಎಂದು ಅಂದು ನೆಹರೂ ನುಡಿದಿದ್ದರು. ‘ಇಂತಹ ದಿನದಿಂದ ಹಿಂದಿ ಭಾಷೆಯನ್ನು ದೇಶದಾದ್ಯಂತ ಕಡ್ಡಾಯವಾಗಿ ಬಳಸಬೇಕು ಎಂಬುದಾಗಿ ಯಾವುದೇ ಸರ್ಕಾರ ಹಿಂದೆಂದೂ ಗಡುವು ವಿಧಿಸಿರಲಿಲ್ಲ’ ಎಂಬುದನ್ನೂ ಮೋದಿಯವರು ಮನದಟ್ಟು ಮಾಡಿಕೊಳ್ಳಬೇಕು.

ಕೇಂದ್ರ ಸರ್ಕಾರದ ಮಟ್ಟಿಗೆ ಈ ದ್ವಿಭಾಷಾ ನೀತಿ ಮುಂದುವರಿಯುವ ಅಗತ್ಯವಿದೆ. ಆದರೆ ಬಿಜೆಪಿ ಬಹಳ ಅವಸರದಲ್ಲಿರುವಂತೆ ಕಾಣಿಸುತ್ತಿದೆ. ಇಂಗ್ಲಿಷ್ ಭಾಷೆಯನ್ನು ಕೆಲವೇ ಕೆಲವು ಕಡೆ ಬಳಸುವ ರೀತಿಯಲ್ಲಿ ಅದಕ್ಕೊಂದು ಕಡಿವಾಣ ಹಾಕುವ ಹುಮ್ಮಸ್ಸಿನಲ್ಲಿ ಆ ಪಕ್ಷದವರಿದ್ದಾರೆ. ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಮಂದಿ ಹಿಂದಿಯನ್ನು ಭಾರತ ಒಕ್ಕೂಟ ವ್ಯವಸ್ಥೆಯ ಭಾಷೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆ ಭಾಷೆಯನ್ನು ಕಲಿಯಲು ಅವರಿಗೆ ಸಮಯ ಬೇಕೇ ಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶ ಅಥವಾ ರಾಜಸ್ತಾನಗಳ ಜನರು ಮಾತನಾಡುವಷ್ಟು ನಿರರ್ಗಳವಾಗಿ ತಮಿಳುನಾಡಿನ ಮಂದಿ ಹಿಂದಿಯನ್ನು ಮಾತನಾಡಲು ಸಾಕಷ್ಟು ಕಾಲ ಬೇಕು ತಾನೆ?

ಈಗಾಗಲೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ಜನರು ಹಿಂದಿ ಭಾಷೆಯೂ ಒಂದು ವಿಷಯವಾಗಿ ಇರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ಕೃಷ್ಟತೆ ತೋರಿದ್ದಾರೆ. ಈ ಸ್ಪರ್ಧಿಗಳ ಮಾತೃಭಾಷೆಯಂತೂ ಹಿಂದಿ ಅಲ್ಲವೇ ಅಲ್ಲ. ಭಾರತದಲ್ಲಿ ಅರ್ಧ ಶತಮಾನದ ಹಿಂದಿದ್ದ ಸ್ಥಿತಿ ಇವತ್ತು ಇಲ್ಲ. ದೇಶದಲ್ಲಿ ಯಾವುದೇ ಭಾಷೆಯಲ್ಲಿ ಮಾತನಾಡುವ ಮಂದಿ ತಮ್ಮ ಭಾಷೆಯೇ ಶ್ರೇಷ್ಠ ಎಂದು ಭಾವಿಸುವ ಕಾಲ ಇದು. ಹಿಂದೆ ಭಾಷಾವಾರು ರಾಜ್ಯ ವಿಂಗಡಣೆಯ ಸಂದರ್ಭದಲ್ಲಿ ಕಂಡು ಬಂದ ಗೊಂದಲಗಳೇ ನಮಗೆ ಎಚ್ಚರಿಕೆಯ ಗಂಟೆಯಾಗಬೇಕಿತ್ತು. ವಿವಿಧತೆಯಲ್ಲಿ ಏಕತೆಯೇ ನಮ್ಮ ಒಕ್ಕೂಟ ವ್ಯವಸ್ಥೆಯ ಶಕ್ತಿಯಾಗಿದೆ ಎಂಬುದೂ ನಿಜ ತಾನೆ.

ಭಾರತದ ಸಂವಿಧಾನದಲ್ಲಿ 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಈ ಪಟ್ಟಿಯಲ್ಲಿರುವ ಪ್ರತಿ ಭಾಷೆಗೂ ಅದರದೇ ಆದ ಲಿಪಿ ಇದೆ. ಇವುಗಳೆಲ್ಲವೂ ರಾಷ್ಟ್ರೀಯ ಭಾಷೆಗಳೇ. ಆದರೆ ಇವುಗಳೆಲ್ಲದರ ನಡುವೆ ಹಿಂದಿ ಮತ್ತು ಇಂಗ್ಲಿಷ್ ಸಂಪರ್ಕ ಭಾಷೆಯಾಗಿವೆ. ಭಾಷಾ ಆಯೋಗಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯೇ ಇದನ್ನು ಹೇಳಿದೆ. ಇದೇ ಸಮಿತಿಯು ಹಿಂದಿಗೆ ಪ್ರಧಾನ ಭಾಷೆ ಎಂಬ ಮಾನ್ಯತೆ ನೀಡಿದರೆ, ಇಂಗ್ಲಿಷ್‌ಗೆ ಹೆಚ್ಚುವರಿ ಭಾಷೆ ಎಂಬ ಮಾನ್ಯತೆ ನೀಡಿದೆ.

ಇಂತಹ ಗೊಂದಲಗಳ ನಡುವೆ ಈ ದೇಶದಲ್ಲಿ ಭಾಷೆಗೆ ಸಂಬಂಧಿಸಿದಂತೆ ಜನಮತ ಗಣನೆ ನಡೆಸಿ ಒಂದು ನಿರ್ಧಾರಕ್ಕೆ ಬರುವವರೆಗೆ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯ. ಇದರ ಅರ್ಥ ಹಿಂದಿಯನ್ನು ಕಡೆಗಣಿಸಬೇಕೆಂದಲ್ಲ. ಇತರ ಭಾಷೆಗಳೂ ತಲೆ ಎತ್ತಿ ನಿಲ್ಲುವಂತಿರಬೇಕು ಮತ್ತು ಅಂತಹ ಭಾಷೆಗಳು ದ್ವೀಪಗಳಂತಾಗಬಾರದು ಅಷ್ಟೆ.

ಈ ಸಂದಿಗ್ಧ ಕಾಲಘಟ್ಟದಲ್ಲಿ ಹಿಂದಿ ಭಾಷೆಯ ಕಟ್ಟಾ ಅಭಿಮಾನಿಗಳು ತಾಳ್ಮೆಯಿಂದಿರಬೇಕು. ದೇಶದ ಎಲ್ಲಾ ಪ್ರದೇಶಗಳ ಮಂದಿ ಹಿಂದಿಯಲ್ಲಿ ಪ್ರಾವೀಣ್ಯ ಗಳಿಸುವವರೆಗೆ ಕಾಯುವ ಅಗತ್ಯವಿದೆ. ದೇಶದಲ್ಲಿ ತಮಿಳುನಾಡನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿಯೂ ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ಹಿಂದಿ ಸಿನಿಮಾಗಳಂತೂ ಈ ಭಾಷೆಯನ್ನು ದೇಶದಾದ್ಯಂತ ಜನಪ್ರಿಯಗೊಳಿಸಿವೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ. ಇವುಗಳನ್ನೆಲ್ಲಾ ಗಮನಿಸಿದರೆ ಇನ್ನು ಕೆಲವು ವರ್ಷಗಳಲ್ಲಿ ಹಿಂದಿಯೇತರ ಭಾಷೆಗಳಿರುವ ರಾಜ್ಯಗಳ ಜನರೂ ಹಿಂದಿಯಲ್ಲಿ ಉತ್ತಮವಾಗಿ ಸಂಭಾಷಣೆ ನಡೆಸುವ ಪ್ರಾವೀಣ್ಯ ಗಳಿಸಲು ಸಾಧ್ಯವಿದೆ.

ಭಾಷೆ ಒಂದು ಪರಿಣಾಮಕಾರಿ ಶಕ್ತಿ. ಉರ್ದುವಿನ ವಿರುದ್ಧ ಭುಗಿಲೆದ್ದ ಬಂಗಾಳಿ ಭಾಷೆಯೇ ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾಯಿತು. ಪಾಕಿಸ್ತಾನದಲ್ಲಿ ಬಲೂಚಿ ಭಾಷೆಯ ಬಗ್ಗೆ ಮಲತಾಯಿ ಧೋರಣೆಯಿಂದಾಗಿಯೇ ಬಲೂಚಿಸ್ತಾನ ಪ್ರಾಂತ್ಯಕ್ಕೆ ಸ್ವಾಯತ್ತೆ ನೀಡಬೇಕೆಂಬ ಆಂದೋಲನ ಅಲ್ಲಿ ದೊಡ್ಡದಾಗಿ ಬೆಳೆದಿದೆ.

ಪ್ರಸಕ್ತ ಕೆಲವು ಭಾಷೆಗಳು ನಶಿಸುತ್ತಿರುವ ಬಗ್ಗೆ ನಮ್ಮ ಆಡಳಿತಗಾರರು ಚಿಂತಿಸುವ ಅಗತ್ಯವಿದೆ. ಪಂಜಾಬ್ನ ಮನೆಗಳಲ್ಲಿ ಇವತ್ತು ಪಂಜಾಬಿ ಭಾಷೆಯಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲಿ ಮಾತೃಭಾಷೆಯ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದೆ. ತಮಗೆ ಉದ್ಯೋಗವಕಾಶ ಕಲ್ಪಿಸುವ ಮತ್ತು ಉತ್ತಮ ಬದುಕು ಕಟ್ಟಿಕೊಳ್ಳಲು ಪೂರಕವಾದ ಇಂಗ್ಲಿಷ್ ಭಾಷೆಯ ಬಗ್ಗೆಯೇ ಅಲ್ಲಿನ ಯುವಜನಾಂಗ ಹೆಚ್ಚು ಆಸಕ್ತಿ ತೋರುತ್ತಿದೆ.

ಮುಂದಾಲೋಚನೆಯಿಂದ ಕೂಡಿದ ಯೋಜನೆಗಳಿಲ್ಲದಿದ್ದರೆ ಮುಂದೊಂದು ದಿನ ಭಾರತದ ಇಂತಹ ಅನೇಕ ಭಾಷೆಗಳು ಕಳೆದು ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ದಿಸೆಯಲ್ಲಿ ನಮ್ಮ ಆಡಳಿತಗಾರರು ಯೋಚಿಸಬೇಕಾದುದು ಇಂದಿನ ಅನಿವಾರ್ಯಯಾಗಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.