ರಾಜನೀತಿಯ ತತ್ತ್ವಗಳ ಬಗ್ಗೆ ನೋಡುತ್ತಿದ್ದೆವು. ಹೇಗೆ ಕೋಸಲೆಯ ರಾಜ ಮತ್ತು ಪ್ರಜೆಗಳು ಪರಸ್ಪರ ಸಮಾನ ಹಿತಕ್ಕಾಗಿ ಕ್ರಿಯಾಶೀಲರಾಗಿದ್ದಾರೆ ಎನ್ನುವುದನ್ನು ತಿಳಿಸುವ ನೆಪದಲ್ಲಿ ಆದರ್ಶರಾಜ್ಯದ ಕಲ್ಪನೆಯನ್ನು ರಾಮಾಯಣ ಹೇಗೆ ಕಂಡರಿಸಿದೆ ಎನ್ನುವುದನ್ನೂ ನೋಡಿದೆವು. ಈ ಎಲ್ಲ ವಿವರಗಳ ಸಾರವನ್ನು ‘ಅರ್ಥಶಾಸ್ತ್ರ’ದ ಮಾತುಗಳು ಹೀಗೆ ಸಂಗ್ರಹಿಸಿವೆ:

ಪ್ರಜಾಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಮ್ |

ನಾತ್ಮಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂತು ಪ್ರಿಯಂ ಹಿತಮ್ ||

ರಾಜ್ಞೋ ಹಿ ವ್ರತಮುತ್ಥಾನಂ ಯಜ್ಞಃ ಕಾರ್ಯಾನುಶಾಸನಮ್ |

ದಕ್ಷಿಣಾವೃತ ಸಾಮ್ಯಂ ಚ ದೀಕ್ಷಿತಸ್ಯಾಭೀಷೇಚಮ್ ||

‘ದೇಶದಲ್ಲಿ ಪ್ರಜೆಗಳು ಸುಖವಾಗಿದ್ದರೆ ಅದೇ ರಾಜನ ಸುಖ. ಹೀಗೆಯೇ ಪ್ರಜೆಗಳ ಹಿತವೇ ರಾಜನ ಹಿತ. ಪ್ರಜೆಗಳಿಗೆ ಪ್ರಿಯವಾಗದೆ, ತನಗಷ್ಟೆ ಪ್ರಿಯವಾಗಿರುವಂಥದ್ದು ರಾಜನ ಹಿತ ಎನಿಸಿಕೊಳ್ಳದು. ಪ್ರಜೆಗಳಿಗೆ ಯಾವುದು ಪ್ರಿಯವಾದುದೋ ಅದೇ ರಾಜನ ಹಿತವಾಗುವುದು. ಸದಾ ಎಚ್ಚರದಿಂದ ಇರುವುದೇ ರಾಜನ ವ್ರತ. ರಾಜನು ತನ್ನ ಪಾಲಿನ ಕರ್ತವ್ಯಗಳನ್ನು ನಡೆಸುವುದೇ ಯಜ್ಞ ಎಂದು ಕರೆಸಿಕೊಳ್ಳುತ್ತದೆ. ಪ್ರತಿಯೊಂದು ಕಸುಬನ್ನೂ ಸಮಾನವಾಗಿ ಕಾಣುವುದೇ ದಕ್ಷಿಣೆ. ಇಂಥ ಅರ್ಹತೆಗಳನ್ನು ಯಾವನು ಪಡೆದಿರುತ್ತಾನೆಯೋ ಅವನಷ್ಟೆ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳಲು ಅರ್ಹ’.

ಇವು ಮೇಲಣ ಮಾತುಗಳ ಸಾರಾಂಶ.

ಮಹಾರಾಜ ದಶರಥನು ‘ಈಗ ಅಶ್ವಮೇಧಯಾಗವನ್ನು ಮಾಡುವುದೇ ನನ್ನ ಕರ್ತವ್ಯ’ ಎಂದು ತಿಳಿದು ಅದಕ್ಕಾಗಿ ತಯಾರಿ ನಡೆಸಿದ್ದಾನೆ. ಅವನ ಈ ಕರ್ತವ್ಯಬುದ್ಧಿಗೆ ಕಾರಣ ಸಿಂಹಾಸನಕ್ಕೆ ವಾರಸುದಾರರು ಇಲ್ಲ – ಎನ್ನುವ ಚಿಂತೆ. ಸರಳವಾಗಿ ಹೇಳುವುದಾದರೆ ಅವನಿಗೆ ಮಕ್ಕಳು ಇಲ್ಲ.

ರಾಮಾಯಣದ ಬಗ್ಗೆ ಏನೆಲ್ಲ ವಿಚಿತ್ರ ಟೀಕೆಗಳು ಬಂದಿವೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯನ್ನು ನೋಡಬಹುದು. ವಿದ್ವಾಂಸ ಎಚ್. ಡಿ. ಸಂಕಾಲಿಯಾ ಅವರ ಈ ಮಾತುಗಳನ್ನು ನೋಡಿ:

‘What is further interesting from our point of view is that while trying to justify or account for what had happened, the bard forgot that he had himself pictured a Golden Age during Dasaratha's rule. If this was actually so, why did this calamity happen, why was there no child born to any of his wives? In fact, these questions also face us in the Ayodhyakanda. However, very few of our ancient or modern commentators have taken note of this glaring discrepancy.’ (‘The Ramayana in Historical Perspective’)

(‘ನಮ್ಮ ದೃಷ್ಟಿಯಿಂದ ಕುತೂಹಲಕರವಾದ ಸಂಗತಿಯೆಂದರೆ, ನಡೆದ ಘಟನೆಯನ್ನು ಸಮರ್ಥಿಸುವ ಅವಸರದಲ್ಲಿ ಹಾಡುಗಬ್ಬದ ಕವಿಯು ತಾನು ದಶರಥನ ಕಾಲದಲ್ಲಿ ಸುವರ್ಣಯುಗವನ್ನು ಚಿತ್ರಿಸಿರುವೆನೆಂಬ ಅಂಶವನ್ನು ಮರೆತಿರುವುದು. ದಶರಥನ ಕಾಲ ನಿಜಕ್ಕೂ ಸುವರ್ಣಯುಗ ಹೌದಾದರೆ ಹೀಗೇಕೆ ಆಯಿತು? ಏಕೆ ಅವನ ಹೆಂಡಿರಲ್ಲಿ ಒಬ್ಬರಿಗೂ ಮಕ್ಕಳಾಗಲಿಲ್ಲ? ವಾಸ್ತವವಾಗಿ ಈ ಪ್ರಶ್ನೆಗಳು ಮತ್ತೆ ಅಯೋಧ್ಯಾಕಾಂಡದಲ್ಲಿ ನಮಗೆ ಎದುರಾಗುತ್ತವೆ. ಆದರೂ ಎದ್ದುಕಾಣುವ ಈ ವಿಸಂಗತಿಯನ್ನು ಗಮನಿಸಿದ ಪ್ರಾಚೀನ ಮತ್ತು ಆಧುನಿಕ ವ್ಯಾಖ್ಯಾನಕಾರರ ಸಂಖ್ಯೆ ಬಲು ಕಡಿಮೆಯೆ’.

(ಅನುವಾದ: ಮಹಾಬಲೇಶ್ವರ ರಾವ್)

ರಾಷ್ಟ್ರವೊಂದರ ಸಿರಿತನಕ್ಕೂ ಆ ರಾಜನಿಗೆ ಮಕ್ಕಳಾಗದಿರುವುದಕ್ಕೂ ಸಂಬಂಧ ಏನು – ಎಂಬ ಪ್ರಶ್ನೆ ನಮಗಿಲ್ಲಿ ಹುಟ್ಟದೇ?

ದಶರಥನು ಯಜ್ಞದ ಋತ್ವಿಜನನ್ನಾಗಿ ಆರಿಸಿಕೊಂಡದ್ದು ಋಷ್ಯಶೃಂಗನನ್ನು. ಅವನಿಗೊಂದು ಕಥೆಯಿದೆ. ಅವನು ವಿಭಾಂಡಕನ ಮಗ; ಹೆಣ್ಣಿನ ಸಂಪರ್ಕವೇ ಇಲ್ಲದೆ ಬೆಳೆದಿದ್ದವನು. ಅಂಥವನು ಮುಂದೆ ಗೃಹಸ್ಥಾಶ್ರಮವನ್ನು ಸ್ವೀಕರಿಸಿ, ಸುಖದಲ್ಲಿ ಮುಳುಗಿದ್ದವ. ಈಗ ಅವನು ದಶರಥ ಮಾಡುತ್ತಿರುವ ಯಜ್ಞಕ್ಕೆ ಋತ್ವಿಜನಾಗಿದ್ದಾನೆ.

ಯಜ್ಞಕ್ಕೆ ಸಿದ್ಧತೆಗಳು ನಡೆಯತೊಡಗಿದವು. ದಶರಥನ ಕೋರಿಕೆಯಂತೆ ವಸಿಷ್ಠರು ಯಾಗಶಾಲೆಯಿಂದ ಮೊದಲುಗೊಂಡು ಯಜ್ಞಾಶ್ವದ ಸಂಚಾರದ ತನಕ ಎಲ್ಲ ಕಾರ್ಯಗಳ ಮೇಲ್ವಿಚಾರಕರಾದರು. ಯಾಗಕರ್ಮಕ್ಕೆ ಬೇಕಾದ ಬ್ರಾಹ್ಮಣರಿಂದ ಹಿಡಿದು ಬಡಗಿಗಳ ತನಕ ಎಲ್ಲರನ್ನೂ ಅವರು ಬರಮಾಡಿಕೊಂಡರು; ಯಾರೆಲ್ಲ ಹಾಗೆ ಬಂದರು ಎನ್ನುವುದನ್ನು ರಾಮಾಯಣ ಪಟ್ಟಿ ಮಾಡಿರುವುದು ಸ್ವಾರಸ್ಯವಾಗಿದೆ: ‘ಹಿರಿಯ ಬ್ರಾಹ್ಮಣರು, ಯಾಗೋಪಕರಣಗಳ ನಿರ್ಮಾಣವನ್ನು ಬಲ್ಲ ಶಿಲ್ಪಿಗಳು, ಕರ್ಮಸ್ವರೂಪವನ್ನು ಬಲ್ಲ ಚಿತ್ರಕಾರರು, ಬಡಗಿಗಳು, ನೆಲವನ್ನು ಅಗೆಯುವವರು, ಲೆಕ್ಕಪತ್ರವನ್ನು ನೋಡಿಕೊಳ್ಳುವವರು, ಕುಶಲ ಕಲಾವಿದರು, ನಟರು, ನರ್ತಕರು, ಶಾಸ್ತ್ರವನ್ನು ಬಲ್ಲವರೂ ಜ್ಞಾನಿಗಳೂ ಆದ ಸಜ್ಜನರು.’ ಅವರೆಲ್ಲರಿಗೂ ಯಾಗದ ಕಾರಣವನ್ನು ವಿವರಿಸಿದರು. ಅನಂತರ ಅವರನ್ನು ಉದ್ದೇಶಿಸಿ ವಸಿಷ್ಠರು ಹೇಳಿದ ಮಾತುಗಳು ಉಲ್ಲೇಖಾರ್ಹವಾದವು:

‘ರಾಜಾಜ್ಞೆಯಂತೆ ನೀವೆಲ್ಲರೂ ಯಜ್ಞಕಾರ್ಯಕ್ಕೆ ನೆರವಾಗಬೇಕು. ಸಾವಿರಗಟ್ಟಲೆ ಇಟ್ಟಿಗೆಗಳನ್ನು ತರಬೇಕು. ಯಾಗಕ್ಕೆ ಬರುವ ರಾಜರು ಇಳಿದುಕೊಳ್ಳುವುದಕ್ಕೆ ತಕ್ಕ ಭವನಗಳ ನಿರ್ಮಾಣವಾಗಬೇಕು. ಬ್ರಾಹ್ಮಣರಿಗೆ ಯೋಗ್ಯವಾದ ನೂರಾರು ಗೃಹಗಳನ್ನು ಕಟ್ಟಬೇಕು. ಎಲ್ಲರಿಗೂ ಅನ್ನ, ಪಾನ, ಭಕ್ಷ್ಯಗಳ ಯೋಗ್ಯ ವ್ಯವಸ್ಥೆ ಇರಬೇಕು. ಹಾಗೆಯೇ ದೂರದೇಶದಿಂದ ಬರತಕ್ಕ ಇತರ ಜನರಿಗೋಸ್ಕರ ದೊಡ್ಡ ದೊಡ್ಡ ವಸತಿಗೃಹಗಳನ್ನು ನಿರ್ಮಿಸಿರಿ. ಅಶ್ವಶಾಲೆ, ಗಜಶಾಲೆ, ಶಯ್ಯಾಗೃಹ, ವಿದೇಶದಿಂದ ಬಂದ ಸೈನಿಕರಿಗೆ ತಕ್ಕ ವಾಸಗೃಹಗಳು – ಇವೆಲ್ಲವನ್ನೂ ಸಿದ್ಧಪಡಿಸಿರಿ. ಅವುಗಳಲ್ಲಿ ಬೇಕಾದಷ್ಟು ಆಹಾರಸಾಮಗ್ರಿಗಳೂ ಆವಶ್ಯಕವಾದ ಎಲ್ಲಾ ಪದಾರ್ಥಗಳೂ ಸಿದ್ಧವಾಗಲಿ. ನಗರವಾಸಿಗಳೂ ಗ್ರಾಮಾಂತರಗಳಿಂದ ಬರತಕ್ಕ ಪ್ರಜೆಗಳಿಗೂ ಒಳ್ಳೆಯ ಭೋಜನವನ್ನು ಒದಗಿಸತಕ್ಕದ್ದು. ವಿಧಿವತ್ತಾಗಿ ಮರ್ಯಾದೆಯಿಂದ ಸಂತರ್ಪಣೆಯನ್ನು ನಡೆಸಬೇಕಲ್ಲದೆ, ಇದೆಲ್ಲ ವಿನೋದವೆಂದು, ಹಗುರವಾಗಿ ಮಾತ್ರ ಭಾವಿಸಬಾರದು. ಎಲ್ಲ ವರ್ಣದವರನ್ನೂ ಚೆನ್ನಾಗಿ ಸತ್ಕರಿಸಿ ಯಥೋಚಿತವಾಗಿ ಗೌರವವನ್ನು ಸಲ್ಲಿಸತಕ್ಕದ್ದು. ಕಾಮಕ್ರೋಧಗಳಿಗೆ ವಶರಾಗಿ ಯಾರಿಗೂ ಅವಮಾನವನ್ನು ಮಾಡಕೂಡದು. ಇದಲ್ಲದೆ ಯಾಗಕಾರ್ಯದಲ್ಲಿ ತೊಡಗಿದವರಿಗೂ ಇತರ ಕಾರ್ಯಕರ್ತರಿಗೂ ವಿಶೇಷವಾಗಿ ಉಪಚಾರವನ್ನು ನಡೆಸಬೇಕು. ಅವರೆಲ್ಲರನ್ನೂ ಧನದಿಂದಲೂ ಭೋಜನದಿಂದಲೂ ತೃಪ್ತಿಪಡಿಸಬೇಕು. ಕೆಲಸವೆಲ್ಲವೂ ಸಾಂಗವಾಗಿ ನೆರವೇರುವಂತೆಯೂ ಯಾವುದಕ್ಕೂ ಕೊರತೆಯಾಗದಂತೆಯೂ ನೀವೆಲ್ಲರೂ ಪ್ರೀತಿವಿಶ್ವಾಸಗಳಿಂದ ನಿರ್ವಹಿಸಿರಿ.’

(ಅನುವಾದ: ಎನ್. ರಂಗನಾಥಶರ್ಮಾ)

ಇಲ್ಲಿ ಯಜ್ಞದ ಬಗ್ಗೆ ಉಲ್ಲೇಖ ಬಂದಿದೆ. ಒಂದಿಷ್ಟು ವಿವರಗಳನ್ನು ಇಲ್ಲಿ ನೋಡಬಹುದು.

ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ‘ಯಜ್ಞ’ ತುಂಬ ಪ್ರಮುಖವಾದ ಕಲಾಪ; ಇದರ ಜೊತೆಗೆ ಇನ್ನೆರಡು ಮುಖ್ಯ ವಿವರಗಳು ಎಂದರೆ ‘ದಾನ’ ಮತ್ತು ತಪಸ್ಸು’. ‘ತ್ರಯೋ ಧರ್ಮಸ್ಕಂಧಾ ಯಜ್ಞೋsಧ್ಯಯನಂ ದಾನಮಿತಿ’ ಎಂಬ ಒಕ್ಕಣೆ ವೇದವಾಙ್ಮಯದಲ್ಲಿಯೇ ಕಂಡುಬಂದಿದೆ – ‘ಧರ್ಮಕ್ಕೆ ಮೂರು ವಿಭಾಗಗಳು – ಯಜ್ಞ, ದಾನ ಮತ್ತು ಅಧ್ಯಯನ (= ತಪಸ್ಸು). ಈ ಮೂರು ತತ್ತ್ವಗಳ ಬಗ್ಗೆ ಸದ್ಯಕ್ಕೆ ಸ್ವಲ್ಪ ವಿವರಗಳನ್ನು ತಿಳಿಯಬಹುದು.

ವೇದದ ಭಾಗವಾಗಿರುವ ‘ಪುರುಷಸೂಕ್ತ’ದಲ್ಲಿ ಯಜ್ಞದ ವಿಶೇಷತೆಯನ್ನೂ ಮಹಿಮೆಯನ್ನೂ ಸೊಗಸಾಗಿ ವರ್ಣಿಸಲಾಗಿದೆ. ಅದರ ಒಂದು ಮಂತ್ರವನ್ನು ಇಲ್ಲಿ ನೋಡೋಣ:

ಯಜ್ಞೇನ ಯಜ್ಞಮಯಜಂತ ದೇವಾಃ

ತಾನಿ ಧರ್ಮಾಣಿ ಪ್ರಥಮಾ ನ್ಯಾಸನ್ |

ತೇ ಹ ನಾಕಂ ಮಹಿಮಾನಃ ಸಂಚತೇ

ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ||

ಇದರ ಸರಳಾರ್ಥ ಹೀಗೆ: ‘ದೇವತೆಗಳು ಯಜ್ಞದಿಂದ ಮಾಡಿದ ಯಜ್ಞವೇ ಸೃಷ್ಟಿಯ ಮೊದಲ ಧರ್ಮ ಎನಿಸಿಕೊಂಡಿತು. ಯಾವ ಯಜ್ಞದಿಂದ ದೇವತೆಗಳಿಗೆ ಸ್ವರ್ಗ ದಕ್ಕಿತೋ ಆ ಲೋಕವು ಅದನ್ನು ಆಚರಿಸುವವರಿಗೂ ಒದಗುತ್ತದೆ.’

ಯಜ್ಞದಿಂದ ಮಾಡಿದ ಯಜ್ಞ – ಎಂದರೇನು? ಇದನ್ನು ಮನನ ಮಾಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.