ಒಂದು ಕಥೆಯೊಂದಿಗೆ ಶುರುಮಾಡೋಣ. ಒಂದೂರು, ಅಲ್ಲೊಂದು ಬಾವಿ. ಆ ಬಾವಿಯನ್ನೇ ಬಳಸಿಕೊಂಡು ಶಾಲೆಗೆ ಹೋಗುವ ಹುಡುಗ. ಅವನಿಗೊಬ್ಬಳು ಚಿಕ್ಕಮ್ಮ. ಚಿಕ್ಕಮ್ಮನ ಬಗ್ಗೆ ಈತನಿಗೆ ಪ್ರೀತಿ, ಗುಮಾನಿ ಮತ್ತು ಅಕ್ಕರೆ. ಒಂದು ದಿನ ಅದೇ ಊರಿನ ತರುಣನೊಬ್ಬ ಆ ಹುಡುಗನ ಕೈಗೊಂದು ಪತ್ರ ಕೊಡುತ್ತಾನೆ. ನೀನು ಈ ಪತ್ರವನ್ನು ನಿನ್ನ ಚಿಕ್ಕಮ್ಮನ ಕೈಗೆ ಕೊಡಬೇಕು ಎಂದು ಹೇಳುತ್ತಾನೆ.

ಆತನ ಕಣ್ಣಲ್ಲಿ ಆ ಹುಡುಗನಿಗೆ ವಿಚಿತ್ರ ಲಾಲಸೆಗಳು ಕಾಣಿಸುತ್ತವೆ ಅಥವಾ ಖಂಡಿಸುವಂತ ಹುಡುಗ ಅಂದುಕೊಳ್ಳುತ್ತಾನೆ. ಆ ಹುಡುಗನಿಗೆ ಕೆಟ್ಟ ಕುತೂಹಲ ಹುಟ್ಟುತ್ತದೆ. ಆತ ಆ ಪತ್ರದಲ್ಲಿ ಏನು ಬರೆದಿರಬಹುದು, ಏಕೆ ಅದನ್ನು ಚಿಕ್ಕಮ್ಮನಿಗೆ ಕೊಡಲಿಕ್ಕೆ ಹೇಳಿರಬಹುದು, ಒಂದು ಗಂಡು ಒಂದು ಹೆಣ್ಣಿಗೆ ಪತ್ರ ಏಕೆ ಬರೆಯಬೇಕು, ಅಂತಹ ಪತ್ರದಲ್ಲಿ ನನ್ನ ಜಗತ್ತಿಗೆ ನಿಲುಕದ್ದು ಏನಿರುತ್ತದೆ. ಕುತೂಹಲ ತಡೆಯಲಾರದೆ ಆತ ಆ ಪತ್ರವನ್ನು ಓದ ಬಯಸುತ್ತಾನೆ. ಅದಕ್ಕಾಗಿ ತಡಬಡಿಸುತ್ತಾನೆ. ದಾರಿಯಲ್ಲಿ ಸಿಗುವ ಬಾವಿಕಟ್ಟೆಯ ಬದಿಯಲ್ಲಿ ಕೂತು ಮೆಲ್ಲನೆ ಆ ಪತ್ರವನ್ನು ತೆರೆಯುತ್ತಾನೆ. ಅದರ ಮೊದಲ ಎರಡಕ್ಷರ ಓದುತ್ತಾನೆ.

‘ಪ್ರೀತಿಯ ಇಂದಿರಾ...’ ಎಂದು ಓದುತ್ತಿದ್ದಂತೆ ಗಾಬರಿಯಾಗುತ್ತದೆ. ಪಾಪಪ್ರಜ್ಞೆ ಕಾಡುತ್ತದೆ. ತಾನು ಹೀಗೆ ಮಾಡಬಾರದಿತ್ತು ಅನಿಸುತ್ತದೆ. ತಪ್ಪು ಮಾಡಿದೆ ಎಂಬ ಭೀತಿಯಲ್ಲಿ ನಡುಗುತ್ತಾನೆ. ಪತ್ರವನ್ನು ಹಾಗೆಯೇ ಒಳಗಿಡುತ್ತಾನೆ. ಆದರೆ, ಕವರ್ ಒಡೆದದ್ದಾಗಿದೆ. ಪತ್ರವನ್ನು ಚಿಕ್ಕಮ್ಮನಿಗೆ ತಲುಪಿಸುವಂತಿಲ್ಲ. ಒಡೆದ ಪತ್ರವನ್ನು ನೋಡಿದರೆ ಚಿಕ್ಕಮ್ಮ ರೇಗುತ್ತಾಳೆ. ತನ್ನ ಬಗ್ಗೆ ತಪ್ಪು ತಿಳಿಯುತ್ತಾರೆ. ಆ ಗೊಂದಲದಲ್ಲಿ ಆತ ಆ ಪತ್ರವನ್ನು ಹರಿದು ಚೂರು ಮಾಡಿ ಆ ಬಾವಿಗೆ ಎಸೆಯುತ್ತಾನೆ.

ಇಂತಹ ತಪ್ಪುಗಳನ್ನು ನಾವು ಮಾಡುತ್ತೇವೆ; ಮಾಡಿರುತ್ತೇವೆ. ವಿನಾಕಾರಣ ನಮಗೆ ಸಂಬಂಧಪಡದ ಸಂಗತಿಗಳಲ್ಲಿ ತಲೆ ತೂರಿಸಿರುತ್ತೇವೆ. ತಿದ್ದಲು ಹೋಗಿರುತ್ತೇವೆ. ಯಾರೋ ಬರೆದಿದ್ದನ್ನು ಬೇಗನೆ ಓದಿಬಿಡುತ್ತೇವೆ. ಒಬ್ಬ ಹೇಳಿದ್ದನ್ನು ಅವನು ಹೇಳಿದ ಹಾಗೆಯೇ ಮತ್ತೊಬ್ಬನಿಗೆ ಮಾಡಲು ಬಿಡುವುದಿಲ್ಲ. ಅದನ್ನು ನಾವು ವಿಶ್ಲೇಷಣೆ ಮಾಡುತ್ತೇವೆ. ಹಾಗೆ ವಿಶ್ಲೇಷಿಸುವಮಟ್ಟಿಗೆ ನಮ್ಮ ಅಭಿಪ್ರಾಯಗಳು ಅದಕ್ಕೆ ಸೇರಿಕೊಂಡು ಅದೊಂದು ಪ್ರಣಾಳಿಕೆಯಾಗಿ ಮಾರ್ಪಾಡಾಗಿರುತ್ತದೆ.

ಕಾವ್ಯವಾಗಿದ್ದದ್ದು ವಾದವಾಗಿ ಬದಲಾಗಿರುತ್ತದೆ. ವಾದಕ್ಕೊಂದು ಪ್ರತಿವಾದ ಹುಟ್ಟಿಕೊಳ್ಳುತ್ತದೆ. ಬದುಕಿನಲ್ಲಿ ಎಂತೆಂಥ ತಪ್ಪುಗಳನ್ನು ಮಾಡಬಹುದು ಅನ್ನುವುದಕ್ಕೆ ನಮ್ಮ ಕಣ್ಣುಗಳೇ ಉದಾಹರಣೆಗಳಿವೆ. ನಾವು ಮಾಡಿದ ಗಾಯಗಳು, ನಮಗೆ ಬೇರೆಯವರು ಮಾಡಿದ ಗಾಯಗಳು ನಮ್ಮನ್ನು ಅಣಕಿಸುತ್ತಿರುತ್ತವೆ. ಎಂದೂ ತಿದ್ದುಕೊಳ್ಳಲಾರದ ತಪ್ಪುಗಳನ್ನು ನಾವು ಬೇಕೆಂತಲೇ ಮಾಡಿರುತ್ತೇವೊ ಗೊತ್ತಿಲ್ಲ. ಒಂದಲ್ಲ ಒಂದು ಸಲ ಖಂಡಿತ ಅಂತಹ ತಪ್ಪು ನಮ್ಮ ಕುತೂಹಲ, ಅತಿಯಾಸೆ, ಅಧಿಕಪ್ರಸಂಗಗಳಿಂದಾಗಿ ಘಟಿಸಿರುತ್ತದೆ. ಕೆಲವೊಮ್ಮೆ ಅದು ಗೊತ್ತಿಲ್ಲದೆ ಆಗಿಹೋಗಿರುತ್ತದೆ.

ನಾನು ಒಮ್ಮೊಮ್ಮೆ ಸುಮ್ಮನೆ ಯೋಚಿಸುತ್ತಾ ಕೂರುತ್ತೇನೆ. ನಾನು ಮುರಿದುಕೊಂಡ ಸಂಬಂಧಗಳನ್ನು ನಿಜಕ್ಕೂ ಯಾರು ಮುರಿದಿರಬಹುದು, ಯಾರ ಪಿತೂರಿಯಿಂದ ಕೆಲವು ಸುಮಧುರ ಸಂಬಂಧಗಳು ಕಟುವಾಗಿರಬಹುದು, ಯಾವುದೋ ಕಾಣದ ಕೈ ಎರಡು ಜೀವಗಳ ನಡುವೆ ಅದ್ಯಾವುದೋ ಮಾಯಕದಲ್ಲಿ ಬಂದು ಇಲ್ಲಿರುವ ವಸ್ತುಗಳನ್ನೆಲ್ಲಾ ಕೊಂಚ ಸರಿಸಿ ಅಸ್ತವ್ಯಸ್ತ ಮಾಡಿ ಹೋಗಿರಬಹುದಲ್ಲವೇ?

ಮೇಲಿನ ಕಥೆ ಓದಿದಾಗ ನನಗೆ ಅದರ ಎರಡು ಆಯಾಮಗಳು ನೆನಪಾದವು. ಮೊದಲನೆಯದು ದಾಟಿಸಬೇಕಾದ ಮಾತುಗಳನ್ನು ದಾಟಿಸದೆ ಮಾಡುವ ದ್ರೋಹ. ಇನ್ನೊಂದು ದಾಟಿಸಬಾರದ ಮಾತುಗಳನ್ನು ದಾಟಿಸುವ ಮೂಲಕ ಮಾಡುವ ದ್ರೋಹ. ಎರಡೂ ಪರಿಣಾಮಕಾರಿಯಾದವುಗಳೇ. ಮಾತಿನಂತೆ ಮೌನ ಕೂಡ ಅಪಾಯಕಾರಿ. ಎಷ್ಟೋ ಸಲ ಮೌನದಿಂದಲೇ ನಾವು ನಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆಯುತ್ತಿರುತ್ತೇವೆ. ನಮಗೆ ಆತ ಬಹುಮುಖ್ಯದ ಮಾತು ಹೇಳಿದ್ದಾನೆ ಎಂದು ಗೊತ್ತಿರುತ್ತದೆ. ಮತ್ಯಾರೋ ಆತನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನಾವು ಅದನ್ನು ಪ್ರತಿಭಟಿಸಲಿಕ್ಕೆ ಹೋಗುವುದಿಲ್ಲ. ಒಬ್ಬನನ್ನು ಇನ್ನೊಬ್ಬ ಮೋಸಗಾರ ಅಂದಾಗ ಇಲ್ಲಾ ಅವನು ಪ್ರಾಮಾಣಿಕ ಅಂತಾ ವಾದಿಸಲಿಕ್ಕೆ ಹೋಗುವುದಿಲ್ಲ. ಇವರು ಅವರ ಬಗ್ಗೆ ಹೇಳಿದ ಮಾತಿಗೆ ನಾವು ಏಕೆ ಪ್ರತಿಕ್ರಿಯಿಸಬೇಕು ಎಂದು ಸುಮ್ಮನಾಗುತ್ತೇವೆ.

ಆದರೆ, ಅವನು ನಿನ್ನ ಬಗ್ಗೆ ಹೀಗೆ ಹೇಳಿದ ಅನ್ನುವುದನ್ನು ಆತನ ಬಳಿಗೆ ಹೋಗಿ ಹೇಳುತ್ತೇವೆ. ಇದು ನಾವು ಆ ವ್ಯಕ್ತಿಗೆ ಮಾಡುವ ಮಹಾದ್ರೋಹ. ಇಲ್ಲಿ ನಮ್ಮ ಮಾತು ಮತ್ತು ಮೌನ ಎರಡು ಗರಗಸದ ಹಾಗೆ ಹೋಗುತ್ತಲೂ, ಬರುತ್ತಲೂ ಆತನ ನಂಬಿಕೆಯನ್ನು ಕೊಯ್ಯುತ್ತಲೇ ಇರುತ್ತದೆ. ಇಂಥದ್ದನ್ನು ನಾವು ಸಾಮಾಜಿಕ ಜಾಲ ತಾಣದಲ್ಲೂ ಸಾಕಷ್ಟು ನೋಡುತ್ತೇವೆ. ನೀವು ಯಾರನ್ನಾದರೂ ಬ್ಲಾಕ್ ಮಾಡಿರುತ್ತೀರಿ ಎಂದಿಟ್ಟುಕೊಳ್ಳಿ. ಕೆಲವು ಕಾಲದ ನಂತರ ಅವನನ್ನು ನೀವು ಮರೆತುಬಿಟ್ಟಿರುತ್ತೀರಿ. ಆದರೆ, ಒಂದು ದಿನ ನಿಮ್ಮ ಗೆಳೆಯನೇ ಆತ ನಿಮ್ಮ ಬಗ್ಗೆ ಬರೆದಿದ್ದನ್ನು ನಿಮ್ಮ ಇನ್ಬಾಕ್ಸ್ಗೆ ಸುರಿಯುತ್ತಾನೆ. ಅಲ್ಲಿ ಮರೆತು ಹೋದ ಅಧ್ಯಾಯ ಮತ್ತೆ ತೆರೆದುಕೊಳ್ಳುತ್ತದೆ. ಮನಸ್ಸು ಕ್ಷಣಕಾಲ ವಿಚಲಿತವಾಗುತ್ತದೆ. ಕೆಲವು ಗಂಟೆಗಳ ಕಾಲ ಆ ವಿದ್ರೋಹ ಕಾಡುತ್ತದೆ.

ಜೀವನದಲ್ಲಿ ಸುಖವಾಗಿರುವುದಕ್ಕೆ ಇರುವ ಅತ್ಯಂತ ಸುಲಭ ಮಾರ್ಗವೆಂದರೆ ನಮ್ಮ ಬಗ್ಗೆ ಬರುವ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಕಿವುಡಾಗಿರುವುದು. ಹೊಗಳಿಕೆಯಂತೆ ತೆಗಳಿಕೆ ಕೂಡ ಅಪಾಯಕಾರಿ. ತೆಗಳಿಕೆಯಷ್ಟೇ ಹೊಗಳಿಕೆ ಕೂಡ ಅನಾಹುತಕಾರಿ. ತೆಗಳಿಕೆ ನಮ್ಮನ್ನು ಹಳ್ಳಕ್ಕೆ ಬೀಳಿಸಿದರೆ ಹೊಗಳಿಕೆ ಪಾತಾಳಕ್ಕೆ ತಳ್ಳುತ್ತದೆ. ನಮ್ಮ ಚರಿತ್ರೆಯಲ್ಲಿ ಹೊಗಳುಭಟರು ಎಂಬ ಕಲ್ಪನೆಯೇ ಇತ್ತು. ಅವರ ಕೆಲಸವೇ ಬಹುಪರಾಕ್ ಹಾಕುವುದು ಆಗಿದ್ದರಿಂದ ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.

ನಾವು ಕೂಡ ಹೊಗಳುವವರನ್ನು ಹೊಗಳುಭಟರೆಂದೇ ಪರಿಗಣಿಸಬೇಕು. ಅವರಿಗೆ ಹೊಗಳುವುದಕ್ಕೂ, ತೆಗಳುವುದಕ್ಕೂ ಸಂಬಳ ಸಂದಾಯವಾಗಿರುತ್ತದೆ ಎಂದೇ ತಿಳಿಯಬೇಕು. ಸುಮ್ಮನೇ ಕೂತು ನಾವು ಮುರಿದ ಸಂಬಂಧಗಳು ಯಾವುವು ಎಂದು ಲೆಕ್ಕ ಹಾಕಿಕೊಳ್ಳಿ. ಕನಿಷ್ಠ ಒಂದೈದಾದರೂ ಕೈಗೆ ಹತ್ತುತ್ತವೆ. ಕತ್ತಲಲ್ಲಿ ತುಳಿದು ಕೊಂದ ಚಿಟ್ಟೆಯಂತೆ ನಮಗೆ ಗೊತ್ತಿಲ್ಲದೆ ಎಷ್ಟೋ ಸಂಬಂಧಗಳು ನಮ್ಮಿಂದಲೇ ಅಸುನೀಗಿರುತ್ತವೆ. ನಾವು ಆ ಸಂಬಂಧಗಳನ್ನು ಮತ್ತೆ ಜೋಡಿಸಲಿಕ್ಕೂ ಆಗುವುದಿಲ್ಲ. ನಮ್ಮ ಭಯ ಹಾಗೆ ಮಾಡಲು ಬಿಡುವುದಿಲ್ಲ. ಹಾಗೆಯೇ, ಈ ಸಂಬಂಧ ಮುರಿದದ್ದು ಯಾರು ಅಂತಾ ಕೇಳಿದಾಗ ನಾವು ಅಡ್ಡಡ್ಡಾ ತಲೆ ಆಡಿಸುತ್ತೇವೆ. ನಮಗೆ ಗೊತ್ತೇ ಇಲ್ಲದಂತೆ ನಟಿಸುತ್ತೇವೆ. ಆದರೆ, ನಾವು ಮುರಿದ ಸಂಬಂಧಗಳು ಮುರಿದ ಮುಳ್ಳಿನಂತೆ ನಮ್ಮೊಳಗೆ ಪಾಪಪ್ರಜ್ಞೆಯಾಗಿ ಉಳಿದಿರುತ್ತವೆ.

ಒಳಗೇ ಮುರಿದ ಮುಳ್ಳು ಕ್ರಮೇಣ ಅಲರ್ಜಿಯಾಗಿ ಮನಸ್ಸು ಕೊಳೆಯುವುದಕ್ಕೆ ಆರಂಭವಾಗುತ್ತದೆ. ಆದರೆ, ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ನಡೆದಾಡುವ ತುರ್ತಿಲ್ಲದ ಮನುಷ್ಯನಿಗೆ ಕಾಲು ಚಲನೆ ಕಳೆದುಕೊಳ್ಳುವುದು ತಿಳಿಯುವುದಿಲ್ಲವಂತೆ. ನಾನು ಮೇಲೆ ಹೇಳಿದ ಕಥೆ ಹೀಗೆ ಮುಕ್ತಾಯಗೊಳ್ಳುತ್ತದೆ.

ಆ ಹುಡುಗ ತನ್ನ ಚಿಕ್ಕಮ್ಮನಿಗೆ ಪತ್ರ ಕೊಡುವುದಿಲ್ಲ. ಪತ್ರ ಬಂದ ಬಗ್ಗೆಯೂ ಹೇಳುವುದಿಲ್ಲ. ಇದಾಗಿ ಕೆಲವು ವರ್ಷಗಳ ನಂತರ ಆತ ಊರು ಬಿಡುತ್ತಾನೆ. ದೊಡ್ಡ ಕೆಲಸಕ್ಕೆ ಸೇರುತ್ತಾನೆ. ಅದಾಗಿ ಅದೆಷ್ಟೋ ವರ್ಷಗಳ ನಂತರ ಊರಿಗೆ ಮರಳಿದರೆ ಅವನಿಗೆ ಚಿಕ್ಕಮ್ಮ ಇನ್ನು ಮದುವೆಯಾಗಿಲ್ಲ ಅಂತಾ ಗೊತ್ತಾಗುತ್ತದೆ. ಚಿಕ್ಕಮ್ಮನ ಜೊತೆ ಮಾತನಾಡುತ್ತಿರುವಾಗ ಆಕೆಯೇ ತನ್ನ ಬದುಕಿನ ಕಥೆ ಹೇಳುತ್ತಾಳೆ.

ಆಕೆ ಒಬ್ಬನನ್ನು ಪ್ರೀತಿಸಿದ್ದಾಳೆ. ಆತನಿಂದ ಬರಬೇಕಾದ ಸಂದೇಶಕ್ಕಾಗಿ ಕಾದಿರುತ್ತಾಳೆ. ಆ ಸಂದೇಶ ಬಂದಿರುವುದಿಲ್ಲ. ಹೀಗಾಗಿ, ಆಕೆ ಮದುವೆಯಾಗದೆ ಉಳಿದಿರುತ್ತಾಳೆ. ಆ ಸಂದೇಶವೇ ಆ ಹುಡುಗನಿಗೆ ಆ ತರುಣ ಕೊಟ್ಟ ಪತ್ರ. ಅದು ಆಕೆಯ ಕೈ ಸೇರಿದ್ದರೆ ಏನಾಗುತ್ತಿತ್ತು. ಆಕೆ ಮದುವೆಯಾಗಿ ಸುಖವಾಗಿರುತ್ತಿದ್ದಳೇ. ಈತನಿಗೆ ಈಗ ಪಶ್ಚಾತ್ತಾಪ. ತಾನೇ ಅದಕ್ಕೆಲ್ಲಾ ಕಾರಣ ಎಂದು ಹೇಳಲಾರ; ಹೇಳದೆ ಇರಲಾರ. ಒಳಗೆ ಮುರಿದ ಮುಳ್ಳು ಚುಚ್ಚುತ್ತಲೇ ಇದೆ. ಆಕೆಗೆ ತನ್ನ ಪ್ರಿಯಕರ ಪತ್ರ ಕೊಟ್ಟದ್ದು ಗೊತ್ತಿಲ್ಲ. ಈತ ಅದನ್ನು ಹರಿದು ಎಸೆದದ್ದೂ ಗೊತ್ತಿಲ್ಲ. ಅವಳ ಕಣ್ಣಲ್ಲಿ ಪತ್ರ ಕಳುಹಿಸದೆ ಇದ್ದ ತನ್ನ ಪ್ರಿಯಕರನೇ ಖಳನಾಯಕ, ದ್ರೋಹಿ. ಸತ್ಯ ಹೇಳಿದರೆ ಈತ ದ್ರೋಹಿಯಾಗುತ್ತಾನೆ. ‘ಮುರಿದ ಮುಳ್ಳು ಮತ್ತು ತುಳಿದ ಚಿಟ್ಟೆ...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.