‘ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ ಕತೆಗಳ ಮಾರಾಣಿ ಐರಾವತಿ’

- ಪಿ. ಲಂಕೇಶ್

ಯಾರಿಗೂ ಹೇಳಲಿಕ್ಕಾಗದೇ ಮುಚ್ಚಿಟ್ಟುಕೊಂಡ ಗಾಯಗಳನ್ನು ಒಬ್ಬೊಬ್ಬರಾಗಿ ಬಹಿರಂಗಗೊಳಿಸುತ್ತಿದ್ದಾರೆ. ಸಭ್ಯರೂ, ಸಂಭಾವಿತರೂ ಯಾವತ್ತೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ‘ಮೀ ಟೂ’ ಅಭಿಯಾನ ಅನೇಕರನ್ನು ಬಯಲಿಗೆಳೆಯುತ್ತಿದೆ. ತಮ್ಮ ಅಧಿಕಾರ, ದರ್ಪ, ಸಂಪತ್ತು ಮತ್ತು ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡವರು ಈಗ ಬೆಲೆ ತೆರುತ್ತಿದ್ದಾರೆ.

ಹೆಣ್ಮಕ್ಕಳು ಹೀಗೆ ದಿಟ್ಟತನದಿಂದ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳುವುದು ಪ್ರಜಾಪ್ರಭುತ್ವದ ಸೌಂದರ್ಯಗಳಲ್ಲಿ ಒಂದು. ಹೆಣ್ಮಕ್ಕಳು ಹೀಗೆ ಪ್ರಶ್ನೆ ಮಾಡಲು ಶುರುಮಾಡಿದ ತಕ್ಷಣ ರಾಜಕಾರಣಿಯೊಬ್ಬ ‘ಅವರೆಲ್ಲ ದುಡ್ಡು ತಗೊಂಡು ಹೀಗೆ ಮಾಡುತ್ತಿದ್ದಾರೆ’ ಎಂದು ಟೀಕಿಸುತ್ತಾನೆ. ‘ಯಾವತ್ತೋ ನಡೆದದ್ದನ್ನು ಈಗ ಹೇಳುತ್ತಿರುವುದು ಯಾಕೆ?’ ಎಂದು ಮತ್ಯಾರೋ ಕೊಂಕು ನುಡಿಯುತ್ತಾರೆ. ‘ಇದೆಲ್ಲ ವ್ಯವಸ್ಥಿತ ಹುನ್ನಾರ’ ಅಂತ ಮತ್ಯಾರೋ ಹೇಳುತ್ತಾರೆ.

ನಾವು ನೆನಪಿಡಬೇಕಾದ ಅಂಶವೊಂದಿದೆ. ಯಾವತ್ತೋ ಮಾಡಿದ ಮಾತ್ರಕ್ಕೆ ಅಪರಾಧ ಮನ್ನಾ ಆಗುವುದಿಲ್ಲ. ತಪ್ಪನ್ನು ಯಾವತ್ತು ಬೇಕಿದ್ದರೂ ತಪ್ಪು ಎಂದು ಹೇಳಬಹುದು. ಅನ್ಯಾಯವನ್ನು ಹೇಳಿಕೊಳ್ಳುವ ಧೈರ್ಯ ಅವರಿಗೆ ಬಂದಿದೆ ಅನ್ನುವುದನ್ನು ನಾವು ಮೆಚ್ಚುಗೆಯಿಂದ ನೋಡಬೇಕೇ ಹೊರತು, ಅವರನ್ನು ಸುಮ್ಮನಿರಿಸಬಾರದು.

ಯಾರ ವಿರುದ್ಧ ಅವರು ಬೆರಳು ತೋರುತ್ತಾರೋ ಅಂಥವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವಂತಾಗಬೇಕು. ನಮ್ಮ ಮನೆಯ ಮಗಳಿಗೆ ಇಂಥದ್ದೇನಾದರೂ ಆಗಿದ್ದರೆ ಆಗ ನಾವು ಈ ಪ್ರಶ್ನೆಗಳು ಎತ್ತುತ್ತಿದ್ದೆವಾ? ಶತಮಾನಗಳ ಹಿಂದೆ ಚರಿತ್ರೆಯಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸುತ್ತಾ ನಾವು ಈಗ ದ್ವೇಷ ಸಾಧಿಸುವ ಮಾತಾಡುತ್ತಿಲ್ಲವೇ? ಹಾಗಿದ್ದರೆ ಕೆಲವೇ ವರ್ಷಗಳ ಹಿಂದೆ ನಡೆದ ದ್ರೋಹವೊಂದನ್ನು ಬಹಿರಂಗಗೊಳಿಸುವುದರಲ್ಲಿ ತಪ್ಪೇನಿದೆ.

ಇಂಥದ್ದೇ ಒಂದು ವಸ್ತುವನ್ನಿಟ್ಟುಕೊಂಡು ನಾನು ಬರೆದಿದ್ದ ಕತೆಯೊಂದನ್ನು ಇಲ್ಲಿ ಕೊಡುತ್ತಿದ್ದೇನೆ:

ರೆಡ್ ಲೈಟ್ ಏರಿಯಾ

ಮುಂಬೈನ ಕಾಮಾಟಿಪುರದ ಓಣಿಯೊಂದರಲ್ಲಿ ಬೇನ್ಯ ಆತನ ಗೆಳೆಯನೊಡನೆ ನಿಂತಿದ್ದಾನೆ. ದೇಶದ ಎಲ್ಲಾ ರಾಜ್ಯಗಳ ಹೆಂಗಸರು ಬಾಡಿಗೆಗೆ ಸಿಗುವ ಏರಿಯಾ ಅದು. ಸಣ್ಣಗೆ ಹನಿಯುತ್ತಿರುವ ಮಳೆ. ಜಾತ್ರೆಯ ಸಡಗರದಂತೆ ಬಣ್ಣ ಬಣ್ಣದ ಲೈಟುಗಳು, ಪರದೆಗಳು, ಎಲ್ಲೆಡೆ ಕೇಳಿಬರುತ್ತಿರುವ ಮಾದಕ ಹಾಡುಗಳು. ಸಂಜೆ ಆರು, ಆರೂವರೆ ಇರಬೇಕು. ವಿಧವಿಧವಾದ ಬಣ್ಣ, ಭಾಷೆ, ಅಲಂಕಾರಗಳಿಂದ ಹೆಣ್ಣುಗಳು ಕಣ್ಣಲ್ಲೇ ಕಮಾನ್, ಕಮಾನ್ ಅಂತಿದ್ದಾರೆ. ತುಂಟ ನಗು. ಕೈ ತಟ್ಟಿ ಕರೆಯುತ್ತಿದ್ದಾರೆ. ‘ಎಲ್ಲಾ ಏರಿಯಾದ ಹೆಣ್ಣುಗಳು ಸಿಗ್ತವೆ’ ಅನ್ನುತ್ತಿದ್ದಾನೆ ಪಕ್ಕದಲ್ಲಿ ಬ್ರೋಕರ್. ‘ವಯಸ್ಸು ಕಮ್ಮಿಯಾದಷ್ಟೂ ರೇಟು ಜಾಸ್ತಿ ಸಾರ್’ ಅಂತ ಬ್ಯುಸಿನೆಸ್ ಮಾತಾಡ್ತಾ ಇದ್ದಾನೆ. ಯಾರೋ ಒಬ್ಬಳು, ತನ್ನ ಹೊಟ್ಟೆಪಾಡಿಗಾಗಿ ಹಣ ತೆಗೆದುಕೊಂಡು ಹಿಂದೆ ಮುಂದೆ ಗೊತ್ತಿರದವರ ಜೊತೆ ಮಲಗ್ತಾಳೆ. ಅದರಲ್ಲೂ ತನ್ನ ಭಾಗ ಕೇಳೋಕೆ ಒಬ್ಬನಿದ್ದಾನಲ್ಲ ಅಂತ ಯೋಚಿಸೋಕೆ ಹೆದರಿಕೆ ಆಗುತ್ತೆ.

ಗೆಳೆಯನ ಸುತ್ತ ಹತ್ತಾರು ಹೆಣ್ಣುಗಳು ನಿಂತಿದ್ದಾರೆ. ಅದರಲ್ಲಿ ಯಾರಾದರೂ ಒಬ್ಬರನ್ನು ಆರಿಸಿಕೊಳ್ಳಬಹುದು. ಆದರೆ ಅವನಿಗೆ ಯಾರೂ ಹಿಡಿಸಲಿಲ್ಲ. ಬೇರೊಬ್ಬಳ ಹೆಸರು ಹೇಳಿ ‘ಅವಳೇ ಬೇಕು’ ಅಂತ ಕೇಳುತ್ತಿದ್ದಾನೆ. ನೆನಪು ಇಟ್ಟುಕೊಂಡು ಕರೆಯುವಷ್ಟು ಅವನು ರೆಗ್ಯುಲರ್ ಕಸ್ಟಮರ್ ಅಂತ ಆ ಬೇನ್ಯನಿಗೆ ಆಶ್ಚರ್ಯ. ಮುಂಬೈಗೆ ಬಂದ ಈ ಎರಡು ಮೂರು ದಿನಗಳಲ್ಲಿ ‘ನನಗೆ ಸಂಬಂಧಿಗಳಿದ್ದಾರೆ’ ಅಂತ ಸುಳ್ಳು ಹೇಳಿ, ರಾತ್ರಿ ಹೋಗಿ ಬೆಳಗ್ಗೆ ಬರುತ್ತಿದ್ದದ್ದು ಇಲ್ಲಿಗೇ ಬರಲಿಕ್ಕೆ ಅಂತ ಅರ್ಥವಾಗುತ್ತಿದ್ದಂತೆ ಆ ಉಸಿರುಗಟ್ಟಿಸುವ ವಾತಾವರಣದಿಂದ ತಪ್ಪಿಸಿಕೊಂಡರೆ ಸಾಕು ಅನಿಸತೊಡಗಿತು.

ಅಷ್ಟರಲ್ಲಿ, ಅವನ ಗೆಳೆಯ ಕೇಳಿದ ಹೆಣ್ಣನ್ನು ಯಜಮಾನ ಕರೆತಂದ. ಹಿಂದಿಯಲ್ಲಿ ಅಸಹ್ಯವಾಗೇ ಬೈದುಕೊಂಡು ಬಂದಳು ಆ ಹೆಣ್ಣು. ‘ಈಗಾಗಲೇ 20 ಜನರ ಜೊತೆ ಮಲಗಿದ್ದಾಯ್ತು. ಇನ್ನು ಬೇರೆ ಯಾರನ್ನಾದ್ರೂ ಕಳುಹಿಸಿ’ ಅಂತ ಕಿರುಚುತ್ತಿದ್ದಾಳೆ. ‘₹ 100 ಜಾಸ್ತಿ ಕೊಟ್ರೆ ಬರ್ತಾಳೆ ಸಾರ್’ ಅಂತ ಗೆಳೆಯನ ಕಿವಿಯಲ್ಲಿ ಕತೆ ಹೊಡಿತಾ ಇದ್ದಾನೆ ಆ ಬ್ರೋಕರ್. ಕಾಮ ಸೂಸುವ ಕಣ್ಣುಗಳಲ್ಲಿ ತಲೆಯಾಡಿಸುತ್ತಿದ್ದಾನೆ ಗೆಳೆಯ. ಆ ಹದಿನೈದು ಹೆಣ್ಣುಗಳನ್ನು ತೋರಿಸಿ ‘ನೀನು ಯಾರಾದರೂ ಒಬ್ಬರನ್ನು ಆರಿಸಿಕೋ’ ಅಂದ. ‘ಇಲ್ಲ, ನನಗೆ ಇವೆಲ್ಲಾ ಹಿಡಿಸೋಲ್ಲ. ಪಕ್ಕದ ಹೋಟೆಲ್ನಲ್ಲಿ ಟೀ ಕುಡೀತಾ ಇರ್ತೀನಿ. ನೀನು ಮುಗಿಸಿಕೊಂಡು ಬಾ’ ಅಂತ ಹೇಳಿ ಹೊರಟ ಬೇನ್ಯ.

ತುಸು ಸಮಯದ ನಂತರ...

ದೂರದಲ್ಲಿ ಗೆಳೆಯ ಬರುತ್ತಿರುವಂತೆ ಕಾಣ್ತಿದೆ. ಅವನು ಹತ್ತಿರ ಬರುತ್ತಿದ್ದಂತೆ... ಬಲ ದವಡೆ ಊದಿದೆ, ಬಟ್ಟೆ ಹರಿದಿದೆ.

‘ಏನಾಯ್ತು’ ಅಂತ ಬೇನ್ಯ ಕೇಳಿದೊಡನೆ ತಲೆ ತಗ್ಗಿಸಿ ನಿಂತ ಗೆಳೆಯ. ‘ಏನಾಯ್ತೋ’ ಅಂತ ಒತ್ತಿ ಕೇಳಿದಾಗ... ‘ಸಾರಿ ಕಣೋ, ನೀನು ಭದ್ರವಾಗಿ ಇಟ್ಕೋ ಅಂತ ಕೊಟ್ಟ ಐದು ಸಾವಿರ ರೂಪಾಯಿಗಳನ್ನು ಚಡ್ಡಿ ಜೇಬಲ್ಲಿ ಇಟ್ಕೊಂಡಿದ್ದೆ. ಅವಳು ಅದನ್ನು ಕಿತ್ಕೊಂಡು ಬಿಟ್ಲು. ಕೇಳಿದ್ದಕ್ಕೆ ಗೂಂಡಾಗಳನ್ನು ಕರೆಸಿ ಹೊಡಿಸಿದಳು’ ಅಂತ ಮತ್ತೆ ತಲೆ ತಗ್ಗಿಸಿದ. ಗೆಳೆಯ ಆ ಕ್ಷಣದಲ್ಲಿ ಮಾತ್ರ ತಲೆ ತಗ್ಗಿಸಿದ. ಆದರೆ ತಾನು ಜೀವನ ಪೂರ್ತಿ ತಾಯಿ ಎದುರು ತಲೆ ತಗ್ಗಿಸಬೇಕೆಂಬ ಸತ್ಯದ ಅರಿವಾಗುತ್ತಿದ್ದಂತೆ ಮೂಕನಾದ ಬೇನ್ಯ. ತನಗೆ ಬೇಕಾದ ಐದುಸಾವಿರ ರೂಪಾಯಿಯನ್ನು ಅಮ್ಮನಿಂದ ಕೇಳಿ ತಂದಿದ್ದ. ಆ ಐದು ಸಾವಿರ ರೂಪಾಯಿಗಳನ್ನು ಗೆಳೆಯ ತನಗೆ ಇಷ್ಟವಾದ ಹೆಣ್ಣಿನ ಬಳಿ ಕಳೆದು
ಕೊಂಡಿದ್ದಾನೆ. ಅವಳು ಅವನಿಗೆ ಮೋಸ ಮಾಡಿದಳು, ಅವನು ನನಗೆ ಮೋಸ ಮಾಡಿದ, ನಾನು ನನ್ನ ತಾಯಿಗೆ ಮೋಸ ಮಾಡಿದೆ. ಒಂದು ವಿಷಯದ ಹಿಂದೆ ಎಷ್ಟೊಂದು ಮೋಸಗಳಿವೆ ಅಂತ ತತ್ತರಿಸಿದ.

ಅಮ್ಮನ ನೆನಪಾಯಿತು.

ತನ್ನ 20ನೇ ವಯಸ್ಸಿನ ತನಕ ಇವನು ಉದ್ಧಾರ ಆಗ್ತಾನೆ ಅಂತ ಯಾರಿಗೂ ನಂಬಿಕೆ ಇರಲಿಲ್ಲ. ಅಮ್ಮನಿಗೂ ನಂಬಿಕೆ ಇತ್ತೋ ಇಲ್ವೋ ಗೊತ್ತಿಲ್ಲ. ನನಗೋಸ್ಕರ ಹಲವು ಊರುಗಳಲ್ಲಿ, ಹಲವು ಮನೆಗಳಲ್ಲಿ ಕಸ, ಮುಸುರೆ ತಿಕ್ಕಿದವಳು ಅಮ್ಮ. ಆಗಾಗ ಅಮ್ಮ ಕೆಲಸ ಮಾಡುವ ಮನೆಗಳಿಗೆ ಅವಳನ್ನು ಭೇಟಿ ಮಾಡಲು ಹೋಗುತ್ತಿದ್ದ. ಅಮ್ಮನಿಗೆ ‘ನಾನು ಸಂಪಾದಿಸಿದ್ದು’ ಅಂತ ಒಂದು ಪೈಸೆ ಕೊಟ್ಟಿದ್ದಿಲ್ಲ. ಆಗ ಅವನ ಬದುಕು ಹಾಗಿತ್ತು. ಆದರೆ ಅವನು ಪ್ರತಿಬಾರಿ ಅಮ್ಮನನ್ನು ನೋಡಲು ಹೋದಾಗಲೂ ‘ಅಮ್ಮ ಅವನಿಗೆ ಕಾಸು ಕೊಡುತ್ತಿದ್ದಳು. ತುಂಬಾ ಅಸಹ್ಯವಾದ ಸತ್ಯ ಹೇಳಬೇಕು ಅಂದರೆ, ಕಾಸು ಬೇಕಾದಾಗೆಲ್ಲ ಅಮ್ಮನ ಮುಂದೆ ಹೋಗಿ ನಿಲ್ಲುತ್ತಿದ್ದ. ಮಕ್ಕಳಿಗಾಗಿಯೇ ಅಮ್ಮಂದಿರು ಹೇಗೆ ಹಣವನ್ನು ಉಳಿಸಿ, ಬಚ್ಚಿಟ್ಟಿರುತ್ತಾರೆ ಅನ್ನೋದೇ ಆಶ್ಚರ್ಯ.

ಅಮ್ಮ ಈಗ ಮುಂಬೈನ ದೊಡ್ಡ ಬಿಲ್ಡರ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಬಾಂದ್ರಾದಲ್ಲಿ ದೊಡ್ಡ ಬಂಗಲೆ ಅವರದು. ಆ ರಸ್ತೆಯಲ್ಲಿ ಗೆಳೆಯನ ಜೊತೆ ಹೋಗುತ್ತಿದ್ದಂತೆ ಹಲವು ಸೆಕ್ಯುರಿಟಿಗಳು ನಿಲ್ಲಿಸಿ ಪೂರ್ವಾಪರಗಳನ್ನು ವಿಚಾರಿಸಿದ್ದರು. ರಾಷ್ಟ್ರದ ದೊಡ್ಡ ಶ್ರೀಮಂತರು ಬದುಕುವ ಏರಿಯಾ ಅದು. ಬಂಗಲೆಯ ಗೇಟಿನ ಬಳಿ ಹೋಗಿ ಅಮ್ಮನ ಹೆಸರು ಹೇಳುತ್ತಿದ್ದಂತೆ. ಗೆಳೆಯನನ್ನು ಹೊರಗೆ ನಿಲ್ಲಿಸಿ ಇವನನ್ನು ಮಾತ್ರ ಒಳಗೆ ಬಿಟ್ಟಿದ್ದರು.

ಮನೆಯಲ್ಲಿ ಯಾರೋ ಮುಖ್ಯವಾದವರ ಜೊತೆ ಮಾತನಾಡುತ್ತಿದ್ದರು ಯಜಮಾನರು. ಗೋಡೆಯ ಆನಿಕೊಂಡು ಹೋಗುತ್ತಿದ್ದ ಬೇನ್ಯನ ಕಣ್ಣಿಗೆ ಅದ್ಭುತವಾದ ಬಾರ್ ಬಿತ್ತು. ಹೀಗೆ ಮನೆಯಲ್ಲಿ ವಿಧವಿಧವಾಗಿ ಕುಡಿಯಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಅಲ್ಲಿದ್ದ ಮದ್ಯಗಳ ಹೆಸರು ಗೊತ್ತಿಲ್ಲ. ಬಾಟಲಿಗಳನ್ನು ನೋಡುತ್ತಿದ್ದಂತೆ ಮತ್ತೇರುವಂತಿತ್ತು.
ಅಡುಗೆಮನೆ ಮುಟ್ಟಲು ನಾಲ್ಕೈದು ಕೋಣೆಗಳನ್ನು ದಾಟಿ ಹೋದಂತಿತ್ತು.

ಮಮತೆಯ ಕಣ್ಗಳಿಂದಲೇ ಬರಮಾಡಿಕೊಂಡಳು ಅಮ್ಮ.

‘ಏಕೋ ಇಷ್ಟು ಸಣ್ಣಗಾಗಿದ್ದೀಯಾ? ಸರಿಯಾಗಿ ಊಟ ಮಾಡಲ್ವಾ?’ ಅಂತ ಕೇಳುತ್ತಾಳೆ. ಬಹಳ ದಿನಗಳ ನಂತರ ಮುಖ ನೋಡುವ ಬಹಳ ತಾಯಂದಿರು ಕೇಳುವ ಪ್ರಶ್ನೆ ಇದು. ಅದಕ್ಕೆ ಉತ್ತರಿಸದೆ ‘ಸ್ವಲ್ಪ ದುಡ್ಡು ಬೇಕಾಗಿತ್ತು’ ಅಂದ. ‘ಎಷ್ಟು ಬೇಕಾಗಿತ್ತು’ ಅಂದಳು. ಬೇನ್ಯನಿಗೆ ಅಗತ್ಯವಿದ್ದದ್ದು ಎರಡು ಸಾವಿರ ಅಷ್ಟೇ. ಆದರೆ ಆ ಮನೆಯನ್ನು ನೋಡಿದ ಮೇಲೆ ಹತ್ತುಸಾವಿರ ಕೇಳೋಣ ಅನಿಸಿತು. ಆದರೆ ತಾಯಿ ಎದುರಿಗೆ ಬಾಯಿ ಹೊರಡದೇ ‘ಐದು ಸಾವಿರ’ ಅಂದ. ತಾಯಿ ನೇರವಾಗಿ ಯಜಮಾನನ ಹತ್ತಿರ ಹೋಗಿ ಸಂಬಳ ಅಡ್ವಾನ್ಸ್ ಕೇಳಿದ್ದಾಳೆ. ‘ಯಾಕಷ್ಟು ಹಣ?’ ಅಂತ ಕೇಳಿದ್ದಾನೆ ಯಜಮಾನ. ಅಮ್ಮ ಹೇಳಿದ್ದಕ್ಕೆ- ‘ಬೆಳೆದ ಮಗನಿಗೆ ಯಾಕಷ್ಟು ಹಣ ಕೊಡ್ತೀಯಾ’ ಅಂತ ಬೈದಿದ್ದಾರೆ. ಅಮ್ಮ ‘ಮಗ ಕಥೆ ಕಾದಂಬರಿ ಅಂತ ಬರೀತಾ ಇರ್ತಾನೆ. ಪ್ರತಿಭಾವಂತ. ದೊಡ್ಡ ಬರಹಗಾರ ಆಗ್ತಾನೆ’ ಅಂತ ಹೇಳಿದ್ದಾಳೆ. ‘ನಿನ್ನ ಮಗನಿಗೆ ನಾಳೆ ಆಫೀಸಿಗೆ ಬಂದು ಹಣ ತಗೊಂಡು ಹೋಗೋಕೆ ಹೇಳು. ನಾಲ್ಕು ಬುದ್ಧಿ ಮಾತು ಹೇಳಿ ಕಳಿಸ್ತೀನಿ’ ಅಂತ ಹೇಳಿದ್ದಾನೆ ಯಜಮಾನ.

ಮಾರನೇ ದಿನ ಗೆಳೆಯನ ಜೊತೆ ಆಫೀಸಿಗೆ ಹೋದ. ‘ಸಾಹೇಬರು ಅಪಾಯಿಂಟ್ಮೆಂಟ್ ಕೊಟ್ಟಿದ್ದಾರೆ’ ಅಂದಾಗ ಆಫೀಸಲ್ಲಿ ಯಾರೂ ನಂಬಲಿಲ್ಲ.

ಬೇನ್ಯ ಸ್ವಲ್ಪ ಇಂಗ್ಲಿಷ್ನಲ್ಲಿ ಮಾತನಾಡಿದ್ದರಿಂದ ನಂಬಿ ರಿಸಪ್ಷನ್ನಲ್ಲಿ ಕೂಡಿಸಿದರು. ಸ್ವಲ್ಪ ಹೊತ್ತಿನ ನಂತರ ಒಳಗೆ ಕರೆದರು. ಬೇನ್ಯನ ಕಣ್ಣಿಗೆ ಯಜಮಾನರು ಸ್ವಲ್ಪ ಕುಳ್ಳಗೆ ಕಂಡರು. ‘ನನ್ನ ಎತ್ತರ ಕೂಡ ಇಲ್ವಲ್ಲ’ ಅನಿಸಿತು. ‘ಹೇಗೆ ಇಷ್ಟೊಂದು ಹಣ ಸಂಪಾದಿಸಲು ಸಾಧ್ಯವಾಯಿತು?’ ಎಂದು ಐದು ಸಾವಿರ ಕೇಳಲು ಹೋದ ಬೇನ್ಯ ಯೋಚಿಸತೊಡಗಿದ.

‘ನೀನು ತಗೊಂಡು ಹೋಗುವ ಕಾಸು, ನಿನ್ನ ತಾಯಿಯ ತಿಂಗಳ ಸಂಬಳ ಅಂತ ಗೊತ್ತ ನಿನಗೆ’ ಅಂತ ಸಾಕಷ್ಟು ಬುದ್ಧಿವಾದ ಹೇಳಿ ಹಣ ಕೊಟ್ಟು ಕಳುಹಿಸಿದರು ಯಜಮಾನರು. ಯಜಮಾನರಿಂದ ಕೈ ತುಂಬ ಕಾಸನ್ನು ಪಡೆಯಲು, ತಲೆತುಂಬ ಮಾತನ್ನು ಕೇಳಬೇಕಾಯಿತು.

ಬೇನ್ಯನಿಗೆ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ಅಭ್ಯಾಸವಿಲ್ಲ. ಇತ್ತೀಚೆಗಷ್ಟೇ ತನ್ನ ಬರಹಕ್ಕೆ ಬಂದ ಬಳುವಳಿಯನ್ನು ಹೀಗೇ ಕಳೆದುಕೊಂಡಿದ್ದ.

ಹೀಗಾಗಿ ಹಣವನ್ನು ಜೋಪಾನವಾಗಿ ಇಟ್ಕೋ ಅಂತ ಗೆಳೆಯನಿಗೆ ಕೊಟ್ಟಿದ್ದ. ತನ್ನ ತಾಯಿ ಅನ್ನೋ ಹೆಣ್ಣು ಕೊಟ್ಟ ಹಣವನ್ನು ಗೆಳೆಯ ಇನ್ನೊಬ್ಬ ಹೆಣ್ಣಿನ ಮೋಹದಿಂದ ಕಳೆದುಕೊಂಡು ಬಂದಿದ್ದ. ಆ ಕ್ಷಣದಲ್ಲಿ– ಮರೆಯಲಾಗದ ಆ ಸಂದರ್ಭದಲ್ಲಿ ಅವನ ಕಣ್ಣ ಮುಂದೆ ಇಬ್ಬರು ಹೆಣ್ಣುಗಳು ನಿಂತಿದ್ದಾರೆ.

ಒಬ್ಬಳು ಮೋಸ ಹೋದ ಅಮ್ಮ, ಇನ್ನೊಬ್ಬಳು ಮೋಸ ಮಾಡಿದ ಆ ಹೆಣ್ಣು. ತನ್ನ ಗಂಡ ಎನ್ನುವ ಗಂಡಸು ಮೋಸ ಮಾಡಿದ್ದರಿಂದ ಮಗನನ್ನು ಬೆಳೆಸಲು ಅಮ್ಮ ಹಲವು ಮನೆಗಳಲ್ಲಿ ಕೆಲಸ ಮಾಡಿ ಬೇನ್ಯನನ್ನು ಬೆಳೆಸಿದಳು. ಅಪ್ಪನಂತೆ ಮಗನೂ ಬೆಳೆಯಬಾರದೆಂಬ ವೇದನೆಯನ್ನು ಹೇಳಿಕೊಳ್ಳದೆ ತನ್ನ ಕಷ್ಟದಲ್ಲೂ ಮಗನಿಗೆ ಹಣ ಕೊಟ್ಟಳು. ಅದನ್ನು ತನ್ನ ಗೆಳೆಯನಿಗೆ ಕೊಟ್ಟ. ‘ಒಂದೇ ದಿನದಲ್ಲಿ ಎಷ್ಟು ಜನರ ಜೊತೆ ಮಲಗಬೇಕೋ’ ಅಂತ ವೇದನೆಯನ್ನು ಬಾಯಿಬಿಟ್ಟು ಹೇಳಿದ ಮೇಲೂ, ‘ನೂರು ರೂಪಾಯಿ ಕೊಟ್ಟರೆ ಬರ್ತಾಳೆ’ ಅಂತ ಹೇಳಿದವನೂ ಒಬ್ಬ ಗಂಡಸು. ಅವಳ ವೇದನೆಗಿಂತ ಆಸೆಯೇ ಮುಖ್ಯ ಅಂತ ಹೋದ ಗೆಳೆಯನೂ ಗಂಡಸು.

ಕಳ್ಳತನ ಮಾಡಿದ ಆ ಸುಂದರ ಹೆಣ್ಣನ್ನು ಮಾತನಾಡಿಸುವ, ಪ್ರಶ್ನೆ ಕೇಳುವ ಸಂದರ್ಭ ಸಿಗಲಿಲ್ಲ ಬೇನ್ಯನಿಗೆ. ಸಿಕ್ಕಿದರೆ ‘ಎಲೇ ಹೆಣ್ಣೆ, ನೀನು ಈ ದೇಹವನ್ನು ಮಾರಿಯೂ ಸಾಕಾಗದೆ, ಕಳ್ಳಿಯಾಗಿದ್ದಕ್ಕೆ ಎಷ್ಟು ಜನ ಗಂಡಸರು ಕಾರಣವಾಗಿದ್ದಾರಮ್ಮಾ’ ಅಂತ ಕೇಳಬೇಕೆನಿಸಿತು.

ಅಪ್ಪ, ಅಣ್ಣ, ಗಂಡ, ಗೆಳೆಯ... ಹೀಗೆ ಅವಳ ಬಳಿಯೂ ಇಂಥ ಪಟ್ಟಿಯೇ ಇರಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.