ಸಾಂಸ್ಥಿಕ ಸ್ವರೂಪ ಹೊಂದಿರುವ ಮಾಧ್ಯಮಗಳೂ ಅಸಾಂಸ್ಥಿಕವಾಗಿರುವ ಸಾಮಾಜಿಕ ಮಾಧ್ಯಮಗಳನ್ನೇ ಅನುಕರಿಸಬೇಕೇ? ಇಂಥದ್ದೊಂದು ಪ್ರಶ್ನೆ ಕರ್ನಾಟಕದ ಮಾಧ್ಯಮಗಳ ಸಂದರ್ಭದಲ್ಲಿಯೇ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾದದ್ದು ಕಾವೇರಿ ವಿವಾದದ ನೆಪದಲ್ಲಿ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಮತ್ತು ದೃಶ್ಯ ಮಾಧ್ಯಮಗಳ ವರ್ತನೆಯ ನಡುವಣ ಸಂಬಂಧ.

‘ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್ ಆಪ್, ಟೆಲಿಗ್ರಾಮ್‌ನಂಥ ನೂರೆಂಟು ಸಾಮಾಜಿಕ ಮಾಧ್ಯಮಗಳಿರುವ ಈ ಕಾಲಘಟ್ಟದಲ್ಲಿ ಗಲಭೆಯನ್ನು ಪ್ರಚೋದಿಸುವುದರ ಹಿಂದೆ ದೃಶ್ಯ ಮಾಧ್ಯಮವಿತ್ತು ಎಂದು ಹೇಳುವುದು ಸರಿಯಲ್ಲ’ ಎಂಬ ತರ್ಕದಲ್ಲಿ ಯಾವ ಲೋಪವೂ ಇಲ್ಲ. ವದಂತಿಗಳನ್ನು, ತಪ್ಪು ಕಲ್ಪನೆಗಳನ್ನು ಮತ್ತು ಪ್ರಚೋದನಾತ್ಮಕ ಸಾಹಿತ್ಯವನ್ನು ಹರಡುವುದರಲ್ಲಿ ಸಾಮಾಜಿಕ ಮಾಧ್ಯಮಗಳು ಬಹುದೊಡ್ಡ ಪಾತ್ರವಹಿಸುತ್ತಿರುವುದೂ ನಿಜವೇ. ದೃಶ್ಯ ಮಾಧ್ಯಮಗಳ ವರ್ತನೆಯ ವಿರುದ್ಧ ಬಂದ ಟೀಕೆಗಳು ಎತ್ತುತ್ತಿರುವ ಪ್ರಶ್ನೆ ಮತ್ತೊಂದು. ಅದು ಸಾಂಸ್ಥಿಕ ಸ್ವರೂಪದ ಮಾಧ್ಯಮದ ಜವಾಬ್ದಾರಿಯ ಪ್ರಶ್ನೆ.

ಸಾಮಾಜಿಕ ಮಾಧ್ಯಮಗಳನ್ನು ಬಳಸುವುದು ವ್ಯಕ್ತಿಗಳು. ಅವರು ತಮಗೆ ಬೇಕಿರುವುದನ್ನು ಅಥವಾ ತಮಗೆ ಅನ್ನಿಸಿದ್ದನ್ನು ಅಲ್ಲಿ ಅಭಿವ್ಯಕ್ತಿಸುತ್ತಾರೆ. ಈ ಅಭಿವ್ಯಕ್ತಿಗಳು ನಿಷ್ಪಕ್ಷಪಾತವಾಗಿರಬೇಕಾಗಿಲ್ಲ. ಗಂಭೀರ ಅಧ್ಯಯನವೋ ವಿಷಯದ ತಲಸ್ಪರ್ಶಿ ಅಧ್ಯಯನವೋ ಇರಬೇಕಾಗಿಲ್ಲ. ಇವೆಲ್ಲಾ ವೈಯಕ್ತಿಕ ಮಟ್ಟದ ಅನಿಸಿಕೆಗಳು. ಆದರೆ ಸಾಂಸ್ಥಿಕ ಸ್ವರೂಪದ ಜವಾಬ್ದಾರಿಯುತ ಮಾಧ್ಯಮಗಳೂ ಇದನ್ನೇ ಮಾಡಬಹುದೇ?

ಇದು ಕೇವಲ ಕಾವೇರಿ ವಿವಾದವನ್ನು ದೃಶ್ಯ ಮಾಧ್ಯಮಗಳು ನಿರ್ವಹಿಸಿದ ವಿಧಾನಕ್ಕೆ ಸೀಮಿತವಾದ ಪ್ರಶ್ನೆಯೇನೂ ಅಲ್ಲ. ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಮಾಡಿಕೊಂಡಾಗಲೂ ದೃಶ್ಯ ಮಾಧ್ಯಮಗಳ ವರದಿಗಾರಿಕೆ ಹೀಗೆಯೇ ಇತ್ತು. ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್ ಮತ್ತು ಗಣಪತಿ ಅವರ ಆತ್ಮಹತ್ಯೆಯ ಸುದ್ದಿಗಳ ನಿರ್ವಹಣೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈ ಎಲ್ಲಾ ಸಂದರ್ಭಗಳಲ್ಲಿಯೂ ಕನ್ನಡದ ದೃಶ್ಯ ಮಾಧ್ಯಮಗಳ ವರ್ತನೆಯಲ್ಲಿ ಮಾಧ್ಯಮ ಧರ್ಮಕ್ಕೆ ವಿರುದ್ಧವಾದ ನಾಲ್ಕು ಅಂಶಗಳಿದ್ದವು. ಮೊದಲನೆಯದ್ದು ಸುದ್ದಿಯನ್ನು ಅದು ಇರುವ ಸ್ವರೂಪದಲ್ಲಿ ಜನರೆದುರು ಇಡುವುದರ ಬದಲಿಗೆ ನಿರ್ದಿಷ್ಟ ಅಭಿಪ್ರಾಯವನ್ನು ಮುಂದಿಡುವುದು.

ಎರಡನೆಯದ್ದು ನಿರೂಪಕರು ತಮಗಿಲ್ಲದ ತಜ್ಞತೆಯನ್ನು ಆರೋಪಿಸಿಕೊಂಡು ತೀರ್ಮಾನಗಳನ್ನು ಹೇಳುವುದು ಮತ್ತು ಸರ್ಕಾರಕ್ಕೆ ಉಪದೇಶ ನೀಡುವುದು. ಮೂರನೆಯದ್ದು ನಿರ್ಲಿಪ್ತವಾಗಿ ಪ್ರಶ್ನೆಗಳನ್ನು ಎತ್ತುವ ಮೂಲಕ ವಾಸ್ತವವನ್ನು ಅನಾವರಣಗೊಳಿಸುವ ಬದಲಿಗೆ ಭಾವುಕರಾಗಿ ಕೋಪ ತಾಪಗಳನ್ನು ತೆರೆಯ ಮೇಲೆ ಪ್ರದರ್ಶಿಸುವುದು. ನಾಲ್ಕನೆಯದ್ದು ವಿಷಯದ ವಿಶ್ಲೇಷಣೆಗಾಗಿ ನಡೆಸುವ ಚರ್ಚೆಗಳಲ್ಲಿ ಅತಿಥಿಗಳಾಗಿರುವವರ ಮೇಲೆ ವಾಗ್ದಾಳಿ ನಡೆಸುವುದು.

ಈ ಬಗೆಯ ಸುದ್ದಿಯ ನಿರೂಪಣೆ ಜನರಿಗೆ ಮಾಹಿತಿಯನ್ನು ನೀಡುವುದಕ್ಕಿಂತ ಹೆಚ್ಚಾಗಿ ಅವರ ಭಾವನೆಗಳನ್ನು ಕೆರಳಿಸುತ್ತದೆ. ಕಾವೇರಿ ವಿವಾದದ ಸಂದರ್ಭದಲ್ಲಿ ಸಂಭವಿಸಿದ್ದು ಇದುವೇ. ಸುಮಾರು ಒಂದು ವಾರ ಕಾಲ ನಿರಂತರವಾಗಿ ಕಾವೇರಿ ಟಿ.ವಿ. ಸ್ಟುಡಿಯೋ ಚರ್ಚೆಗಳ ಮುಖ್ಯ ಭಾಗವಾಗಿತ್ತು.

ನಿರೂಪಕರೆಲ್ಲರೂ ಅಂತರರಾಜ್ಯ ಜಲವಿವಾದ ತಜ್ಞರಾಗಿ ಬದಲಾಗಿಬಿಟ್ಟಿದ್ದರಷ್ಟೇ ಅಲ್ಲದೆ ಕರ್ನಾಟಕಕ್ಕೆ ಆಗಿರುವ ತಥಾಕಥಿತ ಅನ್ಯಾಯದ ವಿರುದ್ಧದ ಹೋರಾಟಗಾರರೂ ಆಗಿದ್ದರು. 1991ರಲ್ಲಿ ಅಂದಿನ ಮುಖ್ಯಮಂತ್ರಿಯೊಬ್ಬರು ಕೈಗೊಂಡಿದ್ದ ತೀರ್ಮಾನವನ್ನು ‘ಧೀರೋದಾತ್ತ’ವೆಂದು ಬಣ್ಣಿಸಿದರು. ಆ ತೀರ್ಮಾನ ಏನಾಗಿತ್ತು? ಅದರ ಹಿನ್ನೆಲೆಯೇನು? ಅದರ ನಂತರ ನಡೆದ ಘಟನೆಗಳೇನು? ಅಂತಿಮವಾಗಿ ಆ ತೀರ್ಮಾನ ಏನಾಯಿತು ಎಂದು ಯಾರೂ ಹೇಳಲಿಲ್ಲ.

ಮೊದಲನೆಯದಾಗಿ ಅಂದಿನ ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನಿರ್ಣಯ ಕೈಗೊಂಡಿರಲಿಲ್ಲ. ಕಾವೇರಿ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಅವರು ಸುಗ್ರೀವಾಜ್ಞೆಯೊಂದರ ಮೂಲಕ ಉಲ್ಲಂಘಿಸಿದ್ದರು. ಮುಂದಿನ ನಾಲ್ಕೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಸುಗ್ರೀವಾಜ್ಞೆಯನ್ನು ಕಾನೂನು ಬಾಹಿರ ಎಂದು ಹೇಳಿತು. ಆಗ ಸರ್ಕಾರದ ಪರೋಕ್ಷ ಬೆಂಬಲದೊಂದಿಗೆ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದವು.

ಕರ್ನಾಟಕದಲ್ಲಿದ್ದ ತಮಿಳರ ಮೇಲೆ ಹಾಗೆಯೇ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಅಮಾನುಷ ದಾಳಿ ನಡೆದವು. ಪ್ರಾಣ ಹಾನಿಯಿಂದ ತೊಡಗಿ ಆಸ್ತಿಪಾಸ್ತಿ ಹಾನಿಯ ತನಕದ ಅನೇಕ ಘಟನೆಗಳು ಸಂಭವಿಸಿದವು. ಈ ವಾಸ್ತವವನ್ನು ಹೇಳದೆ ‘ಧೀರೋದಾತ್ತ’ ನಿರ್ಣಯವನ್ನು ಮಾಧ್ಯಮ ಕೊಂಡಾಡುತ್ತಿದ್ದರೆ ಅದು ನೀಡುವ ಸಂದೇಶವೇನು? ಇದಕ್ಕೆ ನೀಡಬಹುದಾದ ಸರಳ ಉತ್ತರ ಒಂದೇ. ಇತಿಹಾಸ ಮರುಕಳಿಸಿತು. ಅದೃಷ್ಟವಶಾತ್ ಇದು 1991ರ ಡಿಸೆಂಬರ್ 24ರಿಂದ 27ರ ತನಕ ನಡೆದ ಹಿಂಸಾಚಾರದಷ್ಟು ದೊಡ್ಡ ಪ್ರಮಾಣದ್ದಾಗಿರಲಿಲ್ಲ.

ಮಾಧ್ಯಮವೊಂದು ತನ್ನ ನಿಷ್ಪಕ್ಷಪಾತಿ ನಿಲುವಿನಿಂದ ದೂರವಿದ್ದರೆ ಯಾವ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಕಲ್ಲಪ್ಪ ಹಂಡಿಭಾಗ್ ಪ್ರಕರಣ ಮತ್ತೊಂದು ಸಾಕ್ಷಿ. ‘ಭ್ರಷ್ಟ ಅಧಿಕಾರಿ’ಯನ್ನು ‘ಗುರುತಿಸುವ’ ಮಾಧ್ಯಮದ ‘ಹೋರಾಟಗಾರ’ ಮನೋಭಾವ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಳ್ಳುವಂಥ ಕ್ರೂರ ನಿರ್ಧಾರಕ್ಕೆ ಬರಲು ಕಾರಣವಾಯಿತು. ಡಿ.ಕೆ.ರವಿ ಮತ್ತು ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿಯೂ ದೃಶ್ಯ ಮಾಧ್ಯಮಗಳೇ ಆತ್ಮಹತ್ಯೆಯ ‘ತನಿಖೆ’ಯನ್ನೂ ಮುಗಿಸಿ ‘ವಿಚಾರಣೆ’ ನಡೆಸುತ್ತಿದ್ದವು. ಈಗ ಮೂರೂ ಪ್ರಕರಣಗಳಿಗೆ ಸಂಬಂಧಿಸಿದ ಅಧಿಕೃತ ತನಿಖೆಗಳ ವರದಿಗಳು ಹೊರಬಂದಿವೆ. ಅವು ಬೇರೆಯೇ ಸತ್ಯಗಳನ್ನು ಹೇಳುತ್ತಿವೆ.

ಮೇಲಿನ ಎಲ್ಲಾ ತಪ್ಪುಗಳು ಸಂಭವಿಸಿದ್ದರೂ ಹಿಂಸಾಚಾರವನ್ನು ದೃಶ್ಯ ಮಾಧ್ಯಮಗಳು ಪ್ರಚೋದಿಸಲು ಎನ್ನಲು ಸಾಧ್ಯವಿಲ್ಲ. ಏಕೆಂದರೆ 1991ರ ಗಲಭೆಗಳ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳೇ ಇರಲಿಲ್ಲವಲ್ಲ ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಹೌದು ಆಗ ಇರಲಿಲ್ಲ. ಆಗ ಸಾಮಾಜಿಕ ಮಾಧ್ಯಮಗಳೂ ಇರಲಿಲ್ಲ ಎಂಬುದೇ ಇದಕ್ಕೆ ಉತ್ತರ. ಏಕೆಂದರೆ ಕ್ಷಣಾರ್ಧದಲ್ಲಿ ತಪ್ಪು ಮಾಹಿತಿಯೊಂದನ್ನು ಲಕ್ಷಾಂತರ ಮಂದಿಗೆ ತಲುಪಿಸಲು ಸಾಧ್ಯವಿರುವ ಸಾಮಾಜಿಕ ಮಾಧ್ಯಮವಿರುವ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳ ಜವಾಬ್ದಾರಿ ಇನ್ನೂ ಹೆಚ್ಚು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಅಂಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಸಮೂಹ ಸಂವಹನದ ಹೊಸ ಸಾಧ್ಯತೆಗಳು ಹುಟ್ಟಿಕೊಂಡಿರುವ ಈ ಕಾಲದಲ್ಲಿ ಸಾಂಸ್ಥಿಕ ಸ್ವರೂಪದಲ್ಲಿ ಮಾಧ್ಯಮಗಳ ಜವಾಬ್ದಾರಿ ಇನ್ನೂ ದೊಡ್ಡದು. ಇದು ಒಂದು ರೀತಿಯಲ್ಲಿ ರಾಜಪ್ರಭುತ್ವಗಳ ಕಾಲದಲ್ಲಿ ರಾಜ ಮತ್ತು ಪ್ರಜೆ ಇಬ್ಬರಿಗೂ ಲಭ್ಯರಿದ್ದ ಮತ್ತು ಇಬ್ಬರಿಂದಲೂ ಸಮಾನ ಅಂತರ ಕಾಯ್ದುಕೊಂಡು ಸತ್ಯವನ್ನು ಹೇಳುವ ಧೈರ್ಯ ಮಾಡುವ ಮುನಿಗಳು ನೆರವೇರಿಸುತ್ತಿದ್ದಂಥ ಜವಾಬ್ದಾರಿ.

‘ದುಃಖಗಳು ಎದುರಾದಾಗ ಮನಸ್ಸನ್ನು ಉದ್ವೇಗಕ್ಕೆ ತುತ್ತಾಗಿಸದೆ, ಆಸೆಗಳಲ್ಲಿ ಮನಸ್ಸನ್ನು ತೊಡಗಿಸದೆ, ಸ್ನೇಹ–ಭಯ–ಕೋಪಗಳ ಸಂದರ್ಭದಲ್ಲಿ ಬುದ್ಧಿಯ ಸಮತೋಲನವನ್ನು ಕಳೆದುಕೊಳ್ಳದವನನ್ನೇ ಮುನಿ ಎಂದು ಕರೆಯುತ್ತಾರೆ’ ಎಂಬ ಗೀತಾಚಾರ್ಯನ ವಿವರಣೆಯನ್ನು ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಮಾಧ್ಯಮಕ್ಕೆ ಅನ್ವಯಿಸಿಕೊಳ್ಳಬಹುದು.

ಸಾಮಾಜಿಕ ಮಾಧ್ಯಮಗಳು ಎಂದು ಕರೆಯುವ ಫೇಸ್‌ಬುಕ್ ಟ್ವಿಟ್ಟರಾದಿ ವೇದಿಕೆಗಳು ನಿಜ ಅರ್ಥದ ಮಾಧ್ಯಮಗಳಲ್ಲ. ಇವಕ್ಕೆ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿ ಕೆಲಸ ಮಾಡುವ ಶಕ್ತಿಯೂ ಇಲ್ಲ. ಹರಟೆಕಟ್ಟೆಯೊಂದರಲ್ಲಿ ಯಾರು ಏನು ಬೇಕಾದರೂ ಮಾತನಾಡಲು ಅವಕಾಶವಿರುವಂತೆ ಇಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಎತ್ತರದ ಧ್ವನಿ ಇರುವವನು ತನ್ನ ಮಾತುಗಳಷ್ಟೇ ಕೇಳುವಂತೆಯೇ ನೋಡಿಕೊಳ್ಳಬಹುದು.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮ ಹೀಗೆ ಕಾರ್ಯನಿರ್ವಹಿಸಬೇಕಾಗಿಲ್ಲ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವದಂತಿಗಳು ಹರಡುತ್ತಿರುವುದರಿಂದ ನಮಗೇನು ಮಾಡಲು ಸಾಧ್ಯ ಎಂದು ನಾಲ್ಕನೇ ಸ್ತಂಭವನ್ನು ಪ್ರತಿನಿಧಿಸುವವರು ಹೇಳಿದರೆ ಅವರು ತಮ್ಮ ಧರ್ಮವನ್ನು ಪರಿಪಾಲಿಸುವಲ್ಲಿ ಸೋತಿದ್ದಾರೆ ಎಂದೇ ಅರ್ಥೈಸಬೇಕಾಗುತ್ತದೆ.

ನವ ಮಾಧ್ಯಮ ಸೃಷ್ಟಿಸಿರುವ ಬಹುದೊಡ್ಡ ಸಮಸ್ಯೆಗಳಲ್ಲೊಂದು ಮಾಹಿತಿಯ ಅತಿಯಾದ ಪೂರೈಕೆ. ಈ ಅತಿ ಮಾಹಿತಿಯಿಂದ ಜನರನ್ನು ಕಾಪಾಡಬೇಕಾಗಿರುವ ಜವಾಬ್ದಾರಿ ಸಾಂಸ್ಥಿಕ ಸ್ವರೂಪದ ಮಾಧ್ಯಮಗಳಿಗಿವೆ. ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಂಡುಕೊಳ್ಳುವ ಅನಿವಾರ್ಯತೆ ಸಾಂಪ್ರದಾಯಿಕ ಸಾಂಸ್ಥಿಕ ಸ್ವರೂಪದ ಮಾಧ್ಯಮಗಳಿಗಿದೆ. ಇದು ಕೇವಲ ಸಾಮಾಜಿಕ ಜವಾಬ್ದಾರಿಯ ಪ್ರಶ್ನೆಯಷ್ಟೇ ಅಲ್ಲ.

ಇದು ಈ ಮಾಧ್ಯಮಗಳ ಉಳಿವಿಗೆ ಅಗತ್ಯವಾಗಿರುವ ತಂತ್ರವೂ ಆಗಿದೆ. ಕೊನೆಗೂ ಮಾಧ್ಯಮ ಪ್ರಜಾತಾಂತ್ರಿಕ ವ್ಯವಸ್ಥೆಯೊಂದರಲ್ಲಿ ಪ್ರಸ್ತುತವಾಗಿ ಉಳಿಯುವುದು ಸತ್ಯವನ್ನು ಪರಾಂಬರಿಸುವ ಶಕ್ತಿಯ ಮೂಲಕ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.