ಟೆಲಿವಿಷನ್ ನೋಡುಗರಿಗಾಗಿಯೇ ತಯಾರಿಸುವ ಡಬ್ಲ್ಯೂಡಬ್ಲ್ಯೂಎಫ್ ಮ್ಯಾಚ್‌ಗಳನ್ನು ನೀವು ಗಮನಿಸಿರಬಹುದು: ರಿಂಗ್‌ನ ಒಳಗೆ ಇಬ್ಬರು ದಡಿಯರು ಕೃತಕ ಹುಮ್ಮಸ್ಸು ಹಾಗೂ ಹುಸಿ ಕೋಪದಿಂದ ಕಿರುಚುತ್ತಾರೆ, ಗುದ್ದುತ್ತಾರೆ. ಕೆಟ್ಟ ಕೆಟ್ಟ ಬೈಗುಳಗಳೂ ಅವರ ಬಾಯಿಂದ ಬರುತ್ತವೆ. ರೆಫರಿ ಅವರನ್ನು ಬಿಡಿಸಲು ಹೆಣಗಾಡುವಂತೆ ಆಡುತ್ತಾನೆ. ಕೆಲವು ಸಲ ಕಟ್ಟುಮಸ್ತಾದ ತರುಣಿಯರೂ ಎರಡು ಪಾರ್ಟಿಗಳಾಗಿ ಅವರನ್ನು ಹುರಿದುಂಬಿಸುತ್ತಾ ಅತ್ತಿಂದಿತ್ತ ಇತ್ತಿಂದಿತ್ತ ಹಾರಾಡುತ್ತಿರುತ್ತಾರೆ. ಇದು ಕಳ್ಳಾಟ ಎಂಬುದು ನೋಡುವವರಿಗೆಲ್ಲ ಗೊತ್ತಿರುತ್ತದೆ. ಆದರೂ ಹಿಂಸೆ ಕೊಡುವ ಆನಂದಕ್ಕಾಗಿ ಜನ ಅವನ್ನು ನೋಡುತ್ತಲೇ ಇರುತ್ತಾರೆ. ಈಚಿನ ದಿನಗಳಲ್ಲಿ ನಮ್ಮ ರಾಜಕಾರಣಿಗಳ ಬೈಗುಳಗಳ ಚೀರಾಟ ನೋಡುವವರಿಗೆ ಇದು ಡಬ್ಲ್ಯೂಡಬ್ಲ್ಯೂಎಫ್ ಮ್ಯಾಚ್‌ಗಿಂತ ಭಿನ್ನವಲ್ಲ ಎಂಬುದು ಗೊತ್ತಿರುತ್ತದೆ. ಆದರೆ ಮೋದಿ, ಲಾಲು, ಉದ್ಧವ್ ಠಾಕ್ರೆ, ಶೋಭಾ ಕರಂದ್ಲಾಜೆ, ಈಶ್ವರಪ್ಪ, ವಿ.ಕೆ.ಸಿಂಗ್, ಸಾಕ್ಷಿ ಮಹಾರಾಜ್ ಥರದವರು ಆಡುತ್ತಿರುವ ಈ ಅಗ್ಗದ ಬೈಗುಳದ ಡೇ ಅಂಡ್ ನೈಟ್ ಮ್ಯಾಚಿನಿಂದಾಗಿ ಇಂಡಿಯಾದ ಸಾರ್ವಜನಿಕ ಜೀವನದ ಘನತೆ ರಿಪೇರಿಯಾಗದಷ್ಟು ನಾಶವಾಗುತ್ತಿದೆಯೆಂಬುದು ಇವನ್ನೆಲ್ಲ ನೋಡಿ ಆನಂದಿಸುತ್ತಿರುವವರಿಗೆ ಗೊತ್ತಿದ್ದಂತಿಲ್ಲ. ಇವುಗಳ ಮಿನಿ ರೂಪಗಳು ಇಂಡಿಯಾದ ಬೀದಿ ಬೀದಿಗಳಲ್ಲೂ ಕಾಣತೊಡಗಿರುವುದರಿಂದ ಮುಂದೆ ಆಗಲಿರುವ ದುಷ್ಪರಿಣಾಮವನ್ನೂ ಜನ ಊಹಿಸಿರಲಿಕ್ಕಿಲ್ಲ.

2008ರಲ್ಲಿ ‘ಈಟೀವಿ’ಯಲ್ಲಿ ನಡೆಯುತ್ತಿದ್ದ ‘ಕಟಕಟೆ’ ಎಂಬ ರಾಜಕೀಯ ಕಾರ್ಯಕ್ರಮಕ್ಕೆ ಅದೇ ಆಗ ರಾಜಕೀಯ ಪ್ರವೇಶಿಸಿದ್ದ ಶೋಭಾ ಕರಂದ್ಲಾಜೆ ಬಂದಿದ್ದರು. ಅವರು ಏನು ಹೇಳಿದರೂ ಮಧ್ಯೆ ಬಾಯಿ ಹಾಕುತ್ತಿದ್ದ ಡಿ.ಕೆ. ಶಿವಕುಮಾರ್ ಒರಟಾಗಿ ಮಾತಾಡಿ ಅವರ ಬಾಯಿ ಮುಚ್ಚಿಸಲು ಕೂಗಾಡುತ್ತಿದ್ದರು. ‘ನಾಳೆ ಅವರು ಮಂತ್ರಿಯಾಗುತ್ತಾರೆ; ನಿಮ್ಮ ಮಾತನ್ನು ನೀವೇ ನುಂಗಿಕೊಳ್ಳಬೇಕಾಗುತ್ತೆ; ಕೆಟ್ಟ ಗಂಡು ಭಾಷೆಯನ್ನು ಶೋಭಾ ಅವರ ವಿರುದ್ಧ ಬಳಸಬೇಡಿ’ ಎಂದು ನಾನು ಶಿವಕುಮಾರ್ ಅವರಿಗೆ ಹೇಳಿದಾಗ ಶೋಭಾ ಕೃತಜ್ಞರಾಗಿದ್ದರು; ಇದೀಗ ಅವರು ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಮೋದಿಯವರ ಕೂದಲಿನ ಉಪಮೆ ಬಳಸಿ ಅದೇ ಗಂಡು ಭಾಷೆಯ ಜಾಲಕ್ಕೆ ಸಿಕ್ಕಿ ತಮ್ಮನ್ನು ತಾವೇ ಕುಗ್ಗಿಸಿಕೊಂಡಿದ್ದಾರೆ. ತಾವು ಆಡಿದ ಮಾತು ಕನ್ನಡ ಭಾಷೆಯಲ್ಲಿ ಯಾವ ಅರ್ಥ ಕೊಡುತ್ತದೆ ಎಂಬುದು ಅವರಿಗೆ ಗೊತ್ತಿರಲಿಕ್ಕಿಲ್ಲ! ತಿಳಿದ ಮೇಲಾದರೂ ಆ ಮಾತನ್ನು ಬಳಸಿದ್ದಕ್ಕೆ ಕ್ಷಮೆ ಕೋರಿ ಅವರು ತಮ್ಮ ಘನತೆಯನ್ನು ಮರಳಿ ಪಡೆಯಲು ಪ್ರಯತ್ನಿಸಿದಂತಿಲ್ಲ.

ಈಚೆಗೆ ನಮ್ಮ ರಾಜಕಾರಣಿಗಳು, ಅದರಲ್ಲೂ ಬಿಜೆಪಿಯ ರಾಜಕಾರಣಿಗಳು ಯಾಕೆ ಬೈಗುಳದ ಭಾಷೆಯನ್ನು ಹೆಚ್ಚು ಬಳಸುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ; ಜನರಿಗೆ ಬದುಕು ಅಸಹನೀಯವಾಗುತ್ತಿರುವಾಗ ಈ ಬಗೆಯ ಮಾತುಗಳನ್ನು ಬಳಸಿ ಮನರಂಜನೆ ಕೊಡುವುದು ಹಾಗೂ ಜನರು ನಿಜವಾದ ಸಮಸ್ಯೆಗಳ ಬಗ್ಗೆ ಯೋಚಿಸದಂತೆಮಾಡುವುದು ಈ ಅಗ್ಗದ ರಾಜಕಾರಣದ ಒಂದು ಯೋಜಿತ ಭಾಗ. ಶೋಭಾ ಅವರು ಈ ಭಾಷೆಯನ್ನು ಬಳಸುತ್ತಿರುವ ಕಾಲದಲ್ಲೇ ಅವರ ನಾಯಕ ಮೋದಿಯವರು ಲಾಲು ಪ್ರಸಾದರನ್ನು ಕುರಿತು ಶೈತಾನ್ ಎಂದರು; ಒಬ್ಬ ಪ್ರಧಾನಿ ಈ ಮಟ್ಟದ ಚೀರುಭಾಷೆಯನ್ನು ಬಳಸಿದ್ದನ್ನು ಈಚಿನ ದಶಕಗಳಲ್ಲಿ ನಾನಂತೂ ಕೇಳಿರಲಿಲ್ಲ. ಲಾಲು ಪ್ರಸಾದ್ ತಿರುಗಿಸಿ ‘ನಾನು ಶೈತಾನ್ ಆದರೆ, ಮೋದಿ ಶೈತಾನ್‌ಗಿಂತ ದೊಡ್ಡ ಬ್ರಹ್ಮರಾಕ್ಷಸ’ ಅಂದರು. ಇತ್ತ ಕರ್ನಾಟಕದ ಗೃಹಮಂತ್ರಿ ಜಾರ್ಜ್ ‘ಇಬ್ಬರು ಅತ್ಯಾಚಾರ ಮಾಡಿದರೆ ಸಾಮೂಹಿಕ ಅತ್ಯಾಚಾರ ಹೇಗಾಗುತ್ತೆ?’ ಎಂದು ತಮ್ಮ ಅತಿಜ್ಞಾನ ಪ್ರದರ್ಶಿಸಿದರು. ನಂತರ ‘ನಾನು ಆ ಅರ್ಥದಲ್ಲಿ ಹೇಳಲಿಲ್ಲ’ ಅಂದರು. ವರದಿಗಾರ್ತಿಯೊಬ್ಬರು ಮಹಿಳೆಯರ ಮೇಲಿನ ಅತ್ಯಾಚಾರದ ಬಗ್ಗೆ ಪ್ರಶ್ನಿಸಿದರೆ, ಈಶ್ವರಪ್ಪ ತೀರ ಹಗುರಾಗಿ ‘ಅದಕ್ಕೆ ವಿರೋಧ ಪಕ್ಷ ಏನು ಮಾಡೋಕಾಗುತ್ತಮ್ಮ?’ ಎಂದರು; ಮಾರನೆಯ ದಿನ ಕ್ಷಮೆ ಕೇಳಿಕೊಂಡರು. ಇದಾದ ಮೂರೇ ದಿನಕ್ಕೆ ದಲಿತರ ಹತ್ಯೆ ಕುರಿತಂತೆ ಕೇಂದ್ರ ಸರ್ಕಾರದ ಜವಾಬ್ದಾರಿ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರಮಂತ್ರಿ ವಿ.ಕೆ. ಸಿಂಗ್, ‘ಒಂದು ನಾಯಿಗೆ ಕಲ್ಲೆಸೆದು ಸಾಯಿಸಿದರೆ ಸರ್ಕಾರ ಏನು ಮಾಡೋಕಾಗುತ್ತೆ?’ ಎಂದು ದುರಹಂಕಾರದ ಉತ್ತರ ಕೊಟ್ಟರು.

ಜಾರ್ಜ್ ಅಥವಾ ಈಶ್ವರಪ್ಪನವರಂತೆ ಮಹಿಳೆಯರ ಬಗ್ಗೆ ಮಾತಾಡುವುದು ಹಾಗೂ ಸಿಂಗ್ ರೀತಿಯಲ್ಲಿ ದಲಿತರ ಬಗ್ಗೆ ಕೀಳಾಗಿ ಮಾತಾಡುವುದು, ನಡೆದುಕೊಳ್ಳುವುದು– ಈ ಎರಡೂ ಇಂಡಿಯಾದ ಒಂದೇ ಬಗೆಯ ಕಂದಾಚಾರಿ ಮನಸ್ಥಿತಿಯಿಂದಲೇ ಹುಟ್ಟಿವೆ. ಜಾತಿಗಳ ಹೆಸರುಗಳನ್ನೇ ಬೈಗುಳಗಳನ್ನಾಗಿ ಬಳಸುವ ಹಿಂದೂ ವ್ಯವಸ್ಥೆಯಲ್ಲಿ ಜಾತಿ ದುರಹಂಕಾರ ನಿತ್ಯದ ಮಾತುಕತೆಯಲ್ಲೇ ಎದ್ದು ಕಾಣುತ್ತದೆ. ಕೆಳ ಜಾತಿಯವರು ಹಾಗೂ ಮುಸ್ಲಿಮರು ಭ್ರಷ್ಟರಾದರೆ ಅವರ ಜಾತಿಗಳನ್ನ ಹಿಡಿದು ಬಯ್ಯಲು ನಾಲಗೆಗಳು ಸಲೀಸಾಗಿ ತಿರುಗುತ್ತವೆ; ಆದರೆ ಮೇಲು ಜಾತಿಯವರು ಭ್ರಷ್ಟರಾದರೆ ನಾಲಗೆಗಳು ಹಾಗೆ ತಿರುಗುವುದಿಲ್ಲ! ದಲಿತ ಕವಿಯೊಬ್ಬರು ಅಂಬೇಡ್ಕರ್ ಚಿಂತನೆಯಿಂದ ಪ್ರಭಾವಿತರಾಗಿ, ಹಿಂದೂ ಧರ್ಮದ ಅಮಾನವೀಯ ಗುಣಗಳನ್ನು ಟೀಕಿಸಿದ್ದಕ್ಕೆ, ‘ನೀನು ಹಿಂದಿನ ಜನ್ಮದ ಪಾಪದ ಫಲವಾಗಿ ಅಸ್ಪೃಶ್ಯನಾಗಿ ಹುಟ್ಟಿರುವೆ’ ಎಂದು ಚೀರುವ ಜನರಿದ್ದರೆ ಅವರ ದುರಹಂಕಾರ ಇವತ್ತಿನದಲ್ಲ; ಅದು ಮನುಧರ್ಮ ಶಾಸ್ತ್ರವೆಂಬ ಕ್ರೂರ ಕಗ್ಗದಿಂದ ಬಂದದ್ದು. ಈ ಮನುಧರ್ಮಶಾಸ್ತ್ರವನ್ನು ಈಗಲೂ ಮಹಿಳೆಯರು, ದಲಿತರು ಹಾಗೂ ಶೂದ್ರರ ವಿರುದ್ಧ ಬಳಸುವ ಬರ್ಬರರು ನಮ್ಮ ಸುತ್ತ ಇದ್ದಾರೆ. ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಸುಟ್ಟಿದ್ದೇಕೆ ಹಾಗೂ ಆ ಕಾಲದ ದೊಡ್ಡ ಬ್ರಾಹ್ಮಣ ವಿದ್ವಾಂಸ ಸಹಸ್ರಬುದ್ಧೆಯವರು ಅಂಬೇಡ್ಕರ್‌ರನ್ನು ಬೆಂಬಲಿಸಿದ್ದೇಕೆ ಎಂಬುದು ಮನುಧರ್ಮಶಾಸ್ತ್ರದಿಂದಾಗಿ ನಿರಂತರವಾಗಿ ನರಳಿರುವ ಜಾತಿಗಳಿಗೆ ಅರ್ಥವಾಗಿರುವಂತಿಲ್ಲ. ಬಸವಣ್ಣನವರು ‘ಆಗಮದ ಮೂಗು ಕೊಯ್ವೆ…’ ಎಂದು ಮನುಧರ್ಮದ ವ್ಯವಸ್ಥೆಯನ್ನೇ ಒದ್ದು ಹೊರಬಂದದ್ದು ಯಾಕೆ ಎಂಬುದನ್ನು ಬಸವಣ್ಣನವರನ್ನು ಪೂಜಿಸುವವರು ಕೂಡ ತಿಳಿದಂತಿಲ್ಲ. ಬಸವಣ್ಣನವರ ವಚನಗಳನ್ನು ಬಲ್ಲ ವೀರಶೈವ ಸ್ವಾಮಿಗಳನೇಕರು ಬಸವಣ್ಣನವರ ಸಿಟ್ಟಿನ ಮಹತ್ವವನ್ನು ತಮ್ಮ ಅನುಯಾಯಿಗಳಿಗೆ ತಿಳಿಸಿ ಕೊನೆಯ ಪಕ್ಷ ಬಸವ ಧರ್ಮವನ್ನಾದರೂ ಉಳಿಸಿಕೊಳ್ಳುವ ಬದ್ಧತೆ ತೋರುತ್ತಿಲ್ಲ.

ಈ ಬಗೆಯ ವಿಮರ್ಶಾ ಪರಂಪರೆಗಳು ಇಂಡಿಯಾದ ಬಹುಜನರ ವಿಮೋಚನೆಗೆ ಕಾರಣವಾಗಿರುವುರಿಂದಲೇ ಅದನ್ನು ಸಹಿಸದೆ ಧರ್ಮದ ಹೆಸರಿನಲ್ಲಿ ಬಾಯಿಗೆ ಬಂದದ್ದು ಚೀರುವವರ ಸಂಖ್ಯೆ ಹೆಚ್ಚತೊಡಗಿದೆ. ಅದಕ್ಕೆ ಕುಮ್ಮಕ್ಕು ಕೊಡುವ ರಾಜಕಾರಣಿಗಳ ನಾಲಗೆಗಳು ಎತ್ತೆಂದರತ್ತ ತಿರುಗುತ್ತಿವೆ. ಇದನ್ನು ತಡೆಗಟ್ಟಲು ಒಂದು ಸರಳ ಮಾರ್ಗವಿದೆ. ರಾಜಕಾರಣಿಗಳು ಸಾರ್ವಜನಿಕ ಸೇವಕರಾದ್ದರಿಂದ ಹಾಗೂ ಸಾರ್ವಜನಿಕರ ತೆರಿಗೆಯಿಂದ ಸಂಬಳ, ಭತ್ಯೆ ಪಡೆಯುವುದರಿಂದ, ಸರ್ಕಾರಿ ನೌಕರರು ಈ ಭಾಷೆಯನ್ನು ಬಳಸಿದರೆ ಯಾವ ಶಿಕ್ಷೆಯಾಗುತ್ತದೋ ಅದೇ ಶಿಕ್ಷೆ ಅವರಿಗೂ ಆಗತೊಡಗಿದರೆ ಮಾತ್ರ ಇದು ಕಡಿಮೆಯಾಗಬಲ್ಲದು. ಕೆಲವೊಮ್ಮೆ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಳ್ಳುವ ಕೋರ್ಟುಗಳು ಇಂಥ ಪ್ರಕರಣಗಳ ಬಗ್ಗೆ ತಾವೇ ಕೇಸು ದಾಖಲು ಮಾಡಿಕೊಳ್ಳಲು ಶುರು ಮಾಡಿದರೆ ಈ ನಾಲಿಗೆಗಳು ಕೊಂಚ ರಿಪೇರಿಯಾಗಬಲ್ಲವು. ಇಂಥವರನ್ನು ‘ಕರೆದು ಬುದ್ಧಿವಾದ ಹೇಳಿದ್ದೇವೆ’ ಎಂದು ರಾಜಕೀಯ ಪಕ್ಷಗಳ ಹೈಕಮ್ಯಾಂಡುಗಳು ಕೊಡುವ ‘ಬ್ರೇಕಿಂಗ್ ನ್ಯೂಸ್’ಗಳು ಜನರನ್ನು ದಿಕ್ಕು ತಪ್ಪಿಸುವ ತಂತ್ರಗಳ ಭಾಗವೆಂಬುದು ಎಲ್ಲರಿಗೂ ಗೊತ್ತಿದೆ. ತಮ್ಮ ಪಕ್ಷವನ್ನು, ಪಕ್ಷದ ನಾಯಕರನ್ನು ಟೀಕಿಸುವವರನ್ನು ಪಕ್ಷದಿಂದ ಹೊರಹಾಕುವ ಹೈಕಮ್ಯಾಂಡುಗಳು ದಲಿತರನ್ನು, ಅಲ್ಪಸಂಖ್ಯಾತರನ್ನು ಬೈಯುವ ರಾಜಕಾರಣಿಗಳಿಗೆ ‘ಬುದ್ಧಿವಾದ’ ಹೇಳುವುದನ್ನು ಗಮನಿಸಿದರೆ, ಈ ಕಪಟ ನಾಟಕದ ಸೂತ್ರಧಾರಿಗಳು ಯಾರು ಎಂಬುದು ಎಲ್ಲರಿಗೂ ಹೊಳೆಯುತ್ತದೆ.

ಈ ಬಗ್ಗೆ ಯೋಚಿಸುತ್ತಾ, ಈಚೆಗೆ ಅಮೆರಿಕದ ಚುನಾವಣಾ ಪ್ರಚಾರ ತಂತ್ರಗಳಿಂದ ಪ್ರಭಾವಿತರಾಗಿರುವ ಇಂಡಿಯಾದ ರಾಜಕಾರಣಿಗಳು ಈ ಹೊಸ ಬೈಗುಳ ಭಾಷೆಯನ್ನು ಅಲ್ಲಿಂದಲೇನಾದರೂ ಕಲಿತಿರಬಹುದೇ ಎಂಬ ಕುತೂಹಲದಿಂದ ಮಾಹಿತಿಗಳಿಗಾಗಿ ಹುಡುಕಿದೆ. ಇವರ ಅಮೆರಿಕನ್ ಗುರುಗಳು ಇನ್ನೂ ‘ಅಪ್ಪಟ’ ಬೈಗುಳಗಳನ್ನು ಬಳಸಿದ್ದರು! ಅಲ್ಲಿನ ಅಧ್ಯಕ್ಷರುಗಳು ಇಂಗ್ಲಿಷಿನ ನಾಲ್ಕಕ್ಷರದ ‘ಎಫ್’ ಹಾಗೂ ‘ಎ’ ಶಬ್ದಗಳನ್ನು ದಂಡಿಯಾಗಿ ಬಳಸಿದ್ದರು. ಬಿಲ್ ಕ್ಲಿಂಟನ್ ಹಾಗೂ ಹಿಲರಿ ಇಂಥ ಶಬ್ದಗಳನ್ನು ಸಾರ್ವಜನಿಕವಾಗಿ ಬಳಸಿಲ್ಲವೆಂಬ ಸುದ್ದಿಯ ಜೊತೆಗೇ ಈ ಇಬ್ಬರೂ ವೈಟ್ ಹೌಸ್‌ನ ಒಳಹೊರಗೆ ‘ಆಫ್ ದಿ ರೆಕಾರ್ಡ್’ ಮಾತುಗಳಲ್ಲಿ ‘ನಾಲ್ಕಕ್ಷರ’ದ ಇಂಗ್ಲಿಷ್ ಶಬ್ದಗಳನ್ನು ದಂಡಿಯಾಗಿ ಬಳಸುತ್ತಿದ್ದರೆಂಬ ಸುದ್ದಿಯಿತ್ತು! ಆದರೆ ಕರಿಯರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ವಿರುದ್ಧ ಬಳಸುವ ಬೈಗುಳದ ಪದಗಳಿಗೆ ಇರುವ ಕಾನೂನಿನ ಕಡಿವಾಣ ಅಮೆರಿಕನ್ ರಾಜಕಾರಣಿಗಳನ್ನು ಹದ್ದುಬಸ್ತಿನಲ್ಲಿಟ್ಟಂತಿದೆ. ಮುಂದಿನ ಸಲ ನಮ್ಮ ಪ್ರಧಾನಮಂತ್ರಿಗಳು ಅಮೆರಿಕಕ್ಕೆ ಹೋದಾಗ ಈ ಕುರಿತು ಹೆಚ್ಚಿನ ತಿಳಿವಳಿಕೆ ಪಡೆದು ಬರುವರೆಂದು ನಿರೀಕ್ಷಿಸಬಹುದು. ಈ ನಡುವೆ, ಇಂಡಿಯಾದ ರಾಜಕಾರಣಿಗಳು ಖಾಸಗಿಯಾಗಿ ಬಳಸುವ ಬೈಗುಳಗಳ ಬಗ್ಗೆ ರಾಜಕಾರಣಿ ಮಿತ್ರರೊಬ್ಬರನ್ನು ಕೇಳಿದರೆ, ‘ಅಯ್ಯೋ! ಅಮೆರಿಕನ್ ಪ್ರೆಸಿಡೆಂಟುಗಳು ನಮ್ಮವರ ಮುಂದೆ ಏನೇನೂ ಅಲ್ಲ! ನಮ್ಮಲ್ಲಿ ಮಾತೃದೇವತೆ, ಪಿತೃದೇವತೆ, ಸೋದರಿದೇವತೆಗಳ ಆವಾಹನೆಯಿಲ್ಲದೆ ಮಾತೇ ಶುರುವಾಗುವುದಿಲ್ಲ’ ಎಂದು ನಕ್ಕರು.

ಇಷ್ಟೆಲ್ಲದರ ನಡುವೆಯೂ, ನಾಲಗೆಯನ್ನು ಸಡಿಲಾಗಿ ಬಳಸದೆ ನಯವಾಗಿ ಮಾತಾಡುವವರು ಇನ್ನೂ ದುಷ್ಟರಾಗಿರಬಹುದು ಎನ್ನಿಸಿದ್ದು ಧರ್ಮದ ಲೇಪ ಬಳಸಿದ ವಂಚನೆಯ ಭಾಷೆಯನ್ನು ಕಂಡಾಗ. ಸ್ವಾಮಿಯೊಬ್ಬರು ತಾನು ಮಾಡಿದ್ದನ್ನೆಲ್ಲ ಬಯಲಿಗೆಳೆದರೆ ‘ಶಾಪ ಕೊಡುತ್ತೇವೆ’ ಎಂದು ಮಹಿಳೆಯೊಬ್ಬರನ್ನು ಹೆದರಿಸಿದ್ದು ಈಚೆಗೆ ಸಿ.ಐ.ಡಿ. ರಿಪೋರ್ಟಿನಲ್ಲಿ ವರದಿಯಾಗಿದೆ. ಹಳೆಯ ಕತೆಗಳಲ್ಲಿ ‘ಹಸಿದು ಬಂದಿರುವ ನನಗೆ ತಕ್ಷಣ ಆಹಾರ ಕೊಡಲಿಲ್ಲ’ ಎಂದು ಶಾಪ ಕೊಡುತ್ತಿದ್ದ ಋಷಿಗಳ ‘ಹಸಿವು’ ಯಾವ ಥರದ್ದಿರಬಹುದು ಎಂಬುದು ಈಗ ಹೊಳೆಯುತ್ತಿದೆ! ಇಂಡಿಯಾದ ಭಕ್ತಸಮೂಹ ಇನ್ನಾದರೂ ದಂ ಕಟ್ಟಿ ಬಾಯಿಬಿಟ್ಟರೆ, ಸಾಧುಸಂತರ ಧಾರ್ಮಿಕ ಭಾಷೆಯ ದುರ್ಬಳಕೆಗಳನ್ನು ಕುರಿತ ಮಹಾಗ್ರಂಥಗಳೇ ಹೊರಬರಬಹುದು. ಇವರಿಗೆ ಹೋಲಿಸಿದರೆ, ಈಶ್ವರಪ್ಪನವರ ದುಡುಕಿನ ಮಾತೇ ಹೆಚ್ಚು ಪ್ರಾಮಾಣಿಕವಿರಬಹುದು. ಅದೇನೇ ಇರಲಿ, ಯಾವ ಸಾಮಾಜಿಕ, ರಾಜಕೀಯ ಜ್ಞಾನವೂ ಇಲ್ಲದ ಹುಸಿ ಸಾಧ್ವಿಗಳು, ಸಾಧುಗಳು ರಾಜಕಾರಣಕ್ಕೂ ಬಂದು, ಬಳಸುತ್ತಿರುವ ಅತ್ಯಂತ ಬೇಜವಾಬ್ದಾರಿ ಭಾಷೆಯನ್ನು ಬೆಂಬಲಿಸುವವರು ಹಾಗೂ ತಾವು ನಂಬಿದ ಸ್ವಾಮಿಯೊಬ್ಬ ಪರಮನೀಚ ಎಂದು ಗೊತ್ತಾದಾಗಲೂ ಅವನ ಬೆಂಬಲಕ್ಕಿಳಿಯುವವರು ಅವನ ಎಲ್ಲ ಪಾಪ ಫಲಗಳ ಪಾಲುದಾರರಲ್ಲದೆ ಬೇರೇನೂ ಆಗಿರಲಾರರು.

ಈ ಘಟ್ಟದಲ್ಲಿ, ಒಂದು ದೇಶದ ರಾಜಕೀಯ ಸಂಸ್ಕೃತಿ ಹಾಗೂ ಧಾರ್ಮಿಕ ಸಂಸ್ಕೃತಿಯ ಭಾಷೆ ಇಷ್ಟು ಅಧೋಗತಿಗಿಳಿದಾಗ ಸಾಹಿತ್ಯಕ ಸಂಸ್ಕೃತಿ ಅದೇ ಥರದ ಭಾಷೆಯಲ್ಲಿ ಉತ್ತರ ಕೊಡಲೆತ್ನಿಸುವುದು ಆತ್ಮಹತ್ಯಾತ್ಮಕವಾಗಿರಬಲ್ಲದು. ಸಾರ್ವಜನಿಕ ಭಾಷೆ ಇಷ್ಟು ಕೆಟ್ಟಾಗ ಆ ಭಾಷೆಗೆ ಮತ್ತೆ ಘನತೆ ತರುವ ಶ್ರಮದಾಯಕ ಕೆಲಸ ಸಾಹಿತ್ಯಕ ಸಂಸ್ಕೃತಿಯಿಂದಲೇ ಶುರುವಾಗಬೇಕಾಗುತ್ತದೆ. ಬೇಜವಾಬ್ದಾರಿಯ ಅಸಹ್ಯಕರ ಭಾಷೆಯೆದುರು ತೂಕದ, ಗಂಭೀರ ಭಾಷೆಗೆ ಇರುವ ಸತ್ವ, ಪರಿಣಾಮ ಹಾಗೂ ಮಹತ್ವವನ್ನು ಬಹುಸಂಖ್ಯೆಯಲ್ಲಿರುವ ಒಳ್ಳೆಯ ಜನಕ್ಕೆ ಮತ್ತೆ ಮನವರಿಕೆ ಮಾಡಿಕೊಡುವುದೇ ಇದರಿಂದ ಪಾರಾಗುವ ಮಾರ್ಗ ಎನ್ನಿಸುತ್ತದೆ.

ಕೊನೆ ಟಿಪ್ಪಣಿ: ‘ಬೈದವರೆನ್ನ ಬಂಧುಗಳೆಂಬೆನು’
ಕಳೆದ ದೆಹಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಬೈದವರು ನಿಜಕ್ಕೂ ಅವರ ಬಂಧುಗಳಾದರು! ‘ಮಂಕಿ’, ‘ಉಪದ್ರವಿ ಗೋತ್ರದವನು’, ‘ಥೀಫ್’… ಹೀಗೆ ಅನೇಕ ಥರದ ಬೈಗುಳಗಳನ್ನು ಬಳಸಿ ಕೇಜ್ರಿವಾಲರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಲಾಯಿತು. ಆದರೆ ಅದೇ ಆಗ ಚಳವಳಿಯ ಹಿನ್ನೆಲೆಯಿಂದ ಬಂದಿದ್ದ ಕೇಜ್ರಿವಾಲ್ ಆ ಬೈಗುಳಗಳನ್ನು ಬಳಸುತ್ತಿರುವವರೇ ಕೋಡಂಗಿಗಳು ಎಂದು ಮತದಾರರಿಗೆ ಅನ್ನಿಸುವಂತೆ ಘನತೆಯಿಂದ, ಥಣ್ಣನೆಯ ಸಿಟ್ಟಿನಿಂದ ಉತ್ತರಿಸಿ ಜನರ ಒಳಗೆ ಹುದುಗಿರುವ ಒಳ್ಳೆಯತನಕ್ಕೆ ಅಪೀಲು ಮಾಡಿಕೊಂಡರು. ದೆಹಲಿ ಜನಕ್ಕೆ ಅವರ ಘನತೆ ಹಿಡಿಸಿತು. ಮೊದಲು ಕೊಂಚ ಸಡಿಲ ನಾಲಗೆಯವರಾಗಿದ್ದ ಕೇಜ್ರಿವಾಲ್ ರಾಜಕಾರಣದಲ್ಲಿ ಗಂಭೀರ ಭಾಷೆಯೂ ಜನರಿಗೆ ಒಪ್ಪಿತವಾಗಬಲ್ಲದೆಂದು ತೋರಿಸಿದರು. ಈ ಘನತೆ ಕಾಪಾಡಿಕೊಂಡರೆ ಅದು ಅವರನ್ನು ಮುಂದೊಮ್ಮೆ ಪ್ರಧಾನಿ ಪಟ್ಟದವರೆಗೂ ಒಯ್ಯಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.