ಕಿಚನ್ ಟೆಂಡರ್ ಮನೋಹರನ ಪಾಲಿಗೆ ಬಂದದ್ದು ಅವನಿಗಿಂತ ಹಾಸ್ಟೆಲ್ಲಿನ ಹುಡುಗಿಯರಿಗೆ ಬಹಳ ಸಂತೋಷವಾಗಿತ್ತು. ಏಕೆಂದರೆ ಮೊದಲನೆಯದಾಗಿ, ದಿನಾ ಸೀಮೆ ಎಣ್ಣೆ ಸ್ಟೌವ್ ಬಳಸಿ ಎಲ್ಲರ ಎದೆಗಳು ಕಟ್ಟಿಕೊಂಡಂತಾಗಿದ್ದವು. ಸೀಮೆ ಎಣ್ಣೆ ಸುಲಭವಾಗಿ ಸಿಗುತ್ತಿರಲಿಲ್ಲ. ಸಾಮಾನ್ಯವಾಗಿ ಅದಕ್ಕೆಲ್ಲ ಮೋನ, ಇಲ್ಲಾ ಇನ್ನಿಬ್ಬರು ಅಟೆಂಡರುಗಳಾದ ಮರಿಯಮ್ಮ ಅಥವಾ ಚಂದ್ರಣ್ಣರನ್ನು ಅವಲಂಬಿಸಬೇಕಾಗಿತ್ತು. ಅವರ ಲಾಭದ ಡಿವಿಷನ್ ವಿಚಿತ್ರವಾಗಿತ್ತು. ಸೀಮೆ ಎಣ್ಣೆಯ ಬೆಲೆಯು ಬಹುಶಃ ಆಗ ಲೀಟರಿಗೆ ಹತ್ತು ರೂಪಾಯಿಯೂ ಇರಲಿಲ್ಲವೇನೋ. ಆದರೆ, ಒಂದು ಲೀಟರ್ ಸೀಮೆ ಎಣ್ಣೆ ತಂದು ಕೊಟ್ಟರೆ ಹದಿನೈದು ರೂಪಾಯಿ ಕೀಳುತ್ತಿದ್ದರು.

ಹುಡುಗಿಯರಿಗೂ ಹದಿನೈದು ರೂಪಾಯಿ ಕೊಡುವುದರಿಂದ ಅಂಥಾ ನಷ್ಟವೇನೂ ಆಗುತ್ತಿರಲಿಲ್ಲವಾದ್ದರಿಂದ ಅವರು ಕೇಳಿದಷ್ಟು ಕೊಟ್ಟು ಸುಮ್ಮನೆ ಸೀಮೆ ಎಣ್ಣೆ ತರಿಸಿಕೊಳ್ಳುತ್ತಿದ್ದರು. ಏಕೆಂದರೆ ಸೀಮೆ ಎಣ್ಣೆಗೆ ಪರ್ಯಾಯವಾಗಿ ಇನ್ಯಾವ ಉಪಾಯವೂ ಇರಲಿಲ್ಲ. ಹಾಸ್ಟೆಲಿನ ಕಿಚನ್ ಟೆಂಡರ್ ಆಗುವವರೆಗೂ ಮರಿಯಮ್ಮ, ಮೋನ, ಚಂದ್ರಣ್ಣ ಇವರುಗಳ ಕೃಪೆಯಿಂದ ಹುಡುಗಿಯರು ಅನ್ನವುಣ್ಣಬೇಕಿತ್ತು.

‘ಹಾಸ್ಟೆಲ್ ಒಳೀಕ್ ಸೀಮೆಣ್ಣೆ ತರಾದು ರಿಸ್ಕು ಅಲ್ವಾ? ಮಂತ ನಮ್ಗೂ ಏನಾನ ಬ್ಯಾಡ್ವಾ? ಅಲ್ಲಾ, ಅಲ್ಲಿ ನಾಯಿಬೆಲೆ (ನ್ಯಾಯಬೆಲೆ) ಅಂಗ್ಡಿ ವಳ್ಗ ಸುಮ್ಕ ಕ್ವಟ್ಟರಾ ನಮ್ಗ? ಅವ್ರಿಗೂ ಕ್ವಡ್ಬೇಕಲ್ವಾ ಕಾಸ? ಯೋಳಿ ಮಂತ?’ ದುಡ್ಡ್ಯಾಕೆ ಇಷ್ಟು ಜಾಸ್ತಿ ಅಂತ ಕೇಳಿದವರು ಪ್ರತಿವಾದ ಮಂಡಿಸಲು ಆಗದಂತೆ ಮರಿಯಮ್ಮ ಹೀಗೆ ಝಾಡಿಸುತ್ತಿದ್ದಳು.

ಇಬ್ಬರು ಮೂವರು ಹುಡುಗಿಯರು ಸೇರಿಅಡುಗೆ ಮಾಡಿಕೊಳ್ಳುತ್ತಿದ್ದರು. ಎಲ್ಲ ಖರ್ಚುಗಳನ್ನೂ, ಅಂದರೆ ಸೀಮೆಎಣ್ಣೆ, ಅಡುಗೆ ಎಣ್ಣೆ, ತರಕಾರಿ, ರೇಶನ್ ಎಲ್ಲವನ್ನೂ ಇಬ್ಬರು ಮೂವರು ಹಂಚಿಕೊಂಡರೆ ಖರ್ಚು ಹೆಚ್ಚೇನೂ ಆಗುತ್ತಿರಲಿಲ್ಲ. ಆದರೆ, ಸವಾಲಿನ ವಿಷಯ ಬೇರೆಯೇ ಇತ್ತು.

ಮೊದಲಿಗೆ ಗುಂಪು ಮಾಡಿಕೊಳ್ಳುವಾಗ ಮೂರು ಜನ ಇರುತ್ತಿದ್ದರು. ಆದರೆ, ಕ್ರಮೇಣ ಅಲ್ಲಿ ಸಂಬಂಧಗಳ ಸಂಕೀರ್ಣತೆಗಳು ಉದ್ಭವಿಸಿ ಇಬ್ಬರು ಒಂದು ಗುಂಪಾಗಿ ಇನ್ನೊಬ್ಬಳ ಮೇಲೆ ಸದಾ ಗುಮಾನಿಯ ದೃಷ್ಟಿಯಿಂದ ನೋಡುತ್ತಿದ್ದರು. ಇದಕ್ಕೆಲ್ಲ ಕೇರ್ ಮಾಡದೆ ಸುಮ್ಮನೆ ಹೊಟ್ಟೆಪಾಡು ಗಮನದಲ್ಲಿಟ್ಟುಕೊಂಡು, ಸಹಿಸಿಕೊಳ್ಳುತ್ತಾ ಅಥವಾ ಅಲಕ್ಷಿಸುತ್ತಾ ಇರುವವರೂ ಇದ್ದರು. ಆದರೆ, ಸಾಮಾನ್ಯವಾಗಿ ಮೂರು ಜನರ ಗುಂಪು ಒಟ್ಟಿಗೆ ಬಹಳ ದಿನ ಇರುತ್ತಿರಲಿಲ್ಲ.

ಇಬ್ಬರೊಳಗೆ ಮತ್ತೆ ಭಾಗ ಆಗುವುದು ಸಾಧ್ಯವಿಲ್ಲವೆನ್ನುವ ಕಾರಣಕ್ಕೋ ಅಥವಾ ಆರ್ಥಿಕ ಕಾರಣಗಳಿಗೋ, ಇಬ್ಬಿಬ್ಬರ ಗುಂಪುಗಳು ಸಾಮಾನ್ಯವಾಗಿ ಬದುಕುಳಿಯುತ್ತಿದ್ದವು. ಅಲ್ಲದೆ, ಕಿಚನ್ ಟೆಂಡರ್ ಆಗುವುದನ್ನೇ ಕಾಯುವುದಕ್ಕೆ ಇನ್ನೊಂದು ಕಾರಣ ಸೀಮೆ ಎಣ್ಣೆ ಸ್ಟೌವ್ನಿಂದ ಉದ್ಭವಿಸುತ್ತಿದ್ದ ಸಮಸ್ಯೆ. ಅದರ ಮುಖ್ಯಭಾಗ ಸ್ಟೌವನ್ನು ಹತ್ತಿಸುವುದಲ್ಲವೇ ಅಲ್ಲ. ಸವಾಲು ಇದ್ದದ್ದು ಅಡುಗೆ ಮುಗಿದ ನಂತರ ಅದನ್ನು ಆರಿಸುವುದರಲ್ಲಿ. ಹಾಸ್ಟೆಲ್ಲಿನಲ್ಲಿ ಪಂಪ್ ಸ್ಟೌವ್ಗಳ ಬಳಕೆ ಇರಲಿಲ್ಲ. ಎಲ್ಲರ ಹತ್ತಿರವೂ ಬತ್ತಿ ಸ್ಟೌವ್ಗಳು ಮಾತ್ರ ಇದ್ದವು. ಆ ಸ್ಟೌವ್ ಕೆಲಸ ಮುಗಿದ ನಂತರ ರೂಮಿನ ಒಳಗೆ ಅದನ್ನು ಆರಿಸುವಂತಿರಲಿಲ್ಲ. ಏಕೆಂದರೆ ಆರಿಸಲು ಕಬ್ಬಿಣದ ಲೂಪ್ ಥರದ ಪರಿಕರವೊಂದನ್ನು ಹಾಕಬೇಕಿತ್ತು. ಅದನ್ನು ಹಾಕಿದ ತಕ್ಷಣ ಅಸಾಧ್ಯ ಹೊಗೆ ಎದ್ದು ರೂಮು ಇಂದ್ರ ಲೋಕದ ಸೆಟ್ಟಿನ ಥರ ಕಂಡು ನೈಟಿ ತೊಟ್ಟ ಮೇನಕೆಯರು ಕೆಮ್ಮಿ-ಕ್ಯಾಕರಿಸಿ ಸುಸ್ತಾಗುತ್ತಿದ್ದರು. ಆಗ ಎದ್ದ ವಾಸನೆ ಗಂಟೆಗಳಾದರೂ ರೂಮು ಬಿಟ್ಟು ಹೋಗುತ್ತಿರಲಿಲ್ಲ.

ಹೀಗಾಗಿ ಎಲ್ಲರೂ ಕಂಡುಕೊಂಡಿದ್ದ ಏಕೈಕ ಮಾರ್ಗ ಸ್ಟೌವನ್ನು ರೂಮಿನ ಹೊರಗೆ ಇಟ್ಟು ಆರಿಸುವುದು. ಆಗ ಮಾತ್ರ ರೂಮಿನ ಒಳಗೆ ನೆಮ್ಮದಿಯಾಗಿ ನಿದ್ರೆ ಮಾಡಬಹುದಿತ್ತು. ಆದರೆ, ಆರಿದ ನಂತರ ಕಾರಿಡಾರಿನ ತುಂಬೆಲ್ಲ ಹೊಗೆ ತುಂಬಿಕೊಳ್ಳುತ್ತಿತ್ತು. ಹೀಗೆ ಮಾಡುವುದರ ಚಾಲೆಂಜು ಇನ್ನೊಂದು ರೀತಿಯದ್ದಾಗಿತ್ತು.

ರಾತ್ರಿಯೆಲ್ಲ ರೂಮಿನ ಹೊರಗೆ ಸ್ಟೌವ್ ಇದ್ದರೆ ಬೇರೆ ರೂಮಿನ ಹುಡುಗಿಯರು ಸೀಮೆ ಎಣ್ಣೆ ಕದಿಯುತ್ತಿದ್ದರು ಅಥವಾ ಸ್ಟೌವ್ ಓನರುಗಳ ನಿದ್ರಾ ಸಾಮರ್ಥ್ಯಕ್ಕನುಗುಣವಾಗಿ ಸ್ಟೌವನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ತಮ್ಮ ರೂಮಿನಲ್ಲಿ ಅಡುಗೆಯನ್ನೂ ಪೂರೈಸಿಕೊಂಡು ಬೆಳಗಾಗುವುದರಲ್ಲಿ ಸ್ಟೌವನ್ನು ತಿರುಗಿ ಯಥಾ ಜಾಗಕ್ಕೆ ತಂದು ಸ್ಥಾಪಿಸುತ್ತಿದ್ದರು. ಹೀಗಾಗಿ ಲೀಟರಿಗೆ ಇಷ್ಟು ದಿನ ಅಂತ ಬಳಕೆಗೆ ಬರುತ್ತಿದ್ದ ಸೀಮೆ ಎಣ್ಣೆ ಕಾಲಕ್ಕೆ ಮೊದಲೇ ಮುಗಿದು ಎಲ್ಲರ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಯಾರೂ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.

ರೂಮುಗಳಲ್ಲಿ ಮುಖ್ಯವಾಗಿ ಮ್ಯಾಗಿ, ನಂತರ ಕ್ರಮವಾಗಿ ಅನ್ನ-ಸಾರು, ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ಪುಳಿಯೋಗರೆ, ಕಾಳಿನ ಪಲ್ಯಗಳು ಬೇಯುತ್ತಿದ್ದವು. ಹಸೀ ಸೊಪ್ಪು, ಬೇಗ ಬಾಡುವ ತರಕಾರಿ, ತೆಂಗಿನಕಾಯಿ ಇವ್ಯಾವೂ ಬಳಕೆಯಾಗುತ್ತಲೇ ಇರಲಿಲ್ಲ. ಮಿಕ್ಸಿ ಮಾತಂತೂ ಇಲ್ಲವಾದ್ದರಿಂದ ಅಡುಗೆ ಬಹಳ ಪಥ್ಯವಾಗಿ, ಅಚ್ಚುಕಟ್ಟಾಗಿ ಇರುತ್ತಿತ್ತು. ಗುಂಪುಗಳು ಒಟ್ಟಾದ ಮೊದಲ ದಿನಗಳಲ್ಲಿ ಹುರುಪಿನಿಂದ ಚಪಾತಿ ಮಾಡಿದರೂ ಆಮೇಲೆ ಆ ಉತ್ಸಾಹ ಕರಗಿ ಹೋಗುತ್ತಿತ್ತು.

ಈ ಯಾವ ಸಹವಾಸವೂ ಬೇಡವೆನ್ನಿಸಿದವರು ಬ್ರೆಡ್ಡು ಮೊಟ್ಟೆ ತಿಂದು ಕಿಚನ್ ಟೆಂಡರ್ ಈವತ್ತು ಆಗುತ್ತೆ, ನಾಳೆ ಆಗುತ್ತೆ ಎಂದು ಕಾಲ ಹಾಕುತ್ತಿದ್ದರು. ಅಂಥಾ ದಾರುಣ ಪ್ರಸ್ತುತದಲ್ಲಿ ವಯಸ್ಸಿನ ಚಂದದ ಹುಡುಗಿಯರು ಬದುಕುತ್ತಿರುವಾಗ ಮನೋಹರನ ಪಾಲಿಗೆ ಹಾಸ್ಟೆಲಿನ ಕಿಚನ್ ಟೆಂಡರ್ ಪ್ರಾಪ್ತಿಯಾದ ಕಾರಣ ದಾವಣಗೆರೆಯಿಂದ ಮೈಸೂರಿಗೆ ಬಂದಿದ್ದ.

ಹಾಗೆ ನೋಡಿದರೆ ಮನೋಹರನ ಮೂಲ ಊರು ದಾವಣಗೆರೆಯೂ ಅಲ್ಲ. ಘಟ್ಟದ ಕೆಳಗಿನವರು ಸೌಟು ಹಿಡಿದು ವಿಶ್ವ ಪರ್ಯಟನೆಗೆ ಹೊರಟಾಗ ಅವನ ತಂದೆ, ಚಿಕ್ಕಪ್ಪ, ದೊಡ್ಡಪ್ಪ ಎಲ್ಲರೂ ಸೇರಿದ್ದರು. ದಾವಣಗೆರೆಯಲ್ಲಿ ಒಲೆ ಹಚ್ಚಿ ಒಂದು ಪುಟ್ಟ ಕಾಫಿ ಬಾರ್ ಶುರು ಮಾಡಿದ ಅವರ ಚಿಕ್ಕಪ್ಪ, ಕ್ರಮೇಣ ಹಾಸ್ಟೆಲುಗಳ ಉಸ್ತುವಾರಿ ತೆಗೆದುಕೊಂಡು, ಅಣ್ಣ ತಮ್ಮಂದಿರ ಮಕ್ಕಳನ್ನೂ ಸೇರಿಸಿಕೊಂಡು ವ್ಯಾಪಾರ ವಿಸ್ತರಿಸಿದ್ದರು. ಇದನ್ನೆಲ್ಲ ಚಿಕ್ಕಂದಿನಿಂದಲೂ ಕಂಡ ಮನೋಹರ ಮತ್ತು ಅವನ ಅಣ್ಣ ದಿಲೀಪ ಇಬ್ಬರೂ ಮೈಸೂರಿನ ಹಾಸ್ಟೆಲಿಗೆ ಕಿಚನ್ ಟೆಂಡರ್ ಕರೆದಾಗ ಅರ್ಜಿ ಹಾಕಿದ್ದರು. ಅದೃಷ್ಟವಶಾತ್ ತಮ್ಮ ಪಾಲಿಗೆ ಟೆಂಡರ್ ಬಂತೆಂದು ಮನೋಹರ ಸಂತೋಷಪಡುತ್ತಿದ್ದರೆ,ಹುಡುಗಿಯರು ಡೈನಿಂಗ್ ಹಾಲಿನಲ್ಲಿ ಯಾವತ್ತು ಅನ್ನ-ಸಾರು-ಮೊಸರಿನ ಬಕೇಟುಗಳನ್ನು ನೋಡುತ್ತೇವೋ ಎಂದು ತಳಮಳಿಸುತ್ತಿದ್ದರು.

ಮನೋಹರ ಹುಡುಗಿಯರ ಹಾಸ್ಟೆಲ್ಲು ಎಂದು ಅಡುಗೆ ಕೆಲಸದ ಬಗ್ಗೆ ಬಹಳ ಉಡಾಫೆಯಾಗಿ ತಿಳಿದುಕೊಂಡಿದ್ದ ಎಂದು ಮೇಲ್ನೋಟಕ್ಕೆ ತೋರುತ್ತಿತ್ತು. ಅಬ್ಬಬ್ಬಾ ಎಂದರೆ ಹುಡುಗಿಯರು ಎಷ್ಟು ಊಟ ಮಾಡಬಹುದು? ಎರಡು ಬಟ್ಟಲು ಅನ್ನ? ಅಥವಾ ಮೂರು ಬಟ್ಟಲು? ಮತ್ತೆ ತಲಾ ಒಂದೊಂದು ಬಟ್ಟಲು ತರಕಾರಿ ಸಾರು, ತಿಳಿ ಸಾರು ಮತ್ತು ಮೊಸರು ಎಂದು ಭಾವಿಸಿದ್ದ.

ಆದರೆ, ತಾವೇ ಅಡುಗೆ ಮಾಡಿಕೊಳ್ಳುವಾಗ ಸಪೂರವಾಗಿದ್ದ ನೈಟಿ ನೀಳವೇಣಿಯರು ಮನೋಹರ ಹಾಸ್ಟೆಲ್ಲಿನಲ್ಲಿ ಒಲೆ ಉರಿಯಲು ಶುರುವಾಗಿದ್ದೇ ತಡ ಸಿಟಿಗೆ ಹೋಗಿ ಶಾಪಿಂಗ್ ಮಾಡಿದರು. ಅವರು ಹಿಂತಿರುಗಿದಾಗ ಅವರ ಕೈಯಲ್ಲಿದ್ದುದು ಒಂದು ಪಾವು ಅಕ್ಕಿಯ ಅನ್ನ ಹಿಡಿಯುವಂತಿದ್ದ ಪ್ಲೇಟು ಮತ್ತು ಯುದ್ಧ ಶಸ್ತ್ರಗಳಂತಿದ್ದ ಮುಕ್ಕಾಲು ಲೀಟರು ದ್ರವ ಹಿಡಿಯುತ್ತಿದ್ದ ಲೋಟ. ಅವು ನೀರಿಗೆ ಎಂದುಕೊಂಡರೆ ನಿಮ್ಮಷ್ಟು ಮೂರ್ಖರಿಲ್ಲ. ಅವೆಲ್ಲ ಸಾರು, ತಿಳಿಸಾರು, ಮೊಸರನ್ನು ತುಂಬಿಸಿ ರೂಮಿಗೆ ಕೊಂಡೊಯ್ಯಲು ಬಳಕೆಯಾಗುತ್ತಿದ್ದವು. ಮನೋಹರ ಬಹಳ ಮುಗ್ಧನ ಥರಾ ಕಾಣಿಸುತ್ತಿದ್ದ. ಅವನ ಜೊತೆಗೆ ಒಂದಿಬ್ಬರು ಸಹಾಯಕರೂ ಇದ್ದರು. ಕಣ್ಣಿನ ಕಾಡಿಗೆ ಒಲೆಯ ಕಾವಿಗೆ ಕರಗಿ ಮುಖದ ಮೇಲೆಲ್ಲ ಇಳಿಸಿಕೊಂಡು ಯಕ್ಷಗಾನದ ಪಾತ್ರಗಳ ಥರಾ ಕಾಣುತ್ತಿದ್ದ ಮೈಸೂರಿನ ಮೇರಿಯಮ್ಮ ಒಬ್ಬಳು. ದೊಡ್ಡ ತಪ್ಪಲೆಗಳಿಂದ ಅನ್ನ ಬಸಿಯಲು ಇನ್ನೊಬ್ಬ, ಮನೋಹರನ ಸಂಬಂಧಿ- ಹದಿವಯಸ್ಸಿನ ಹುಡುಗ ರಾಜು.

ಮೂರೂ ಜನ ಮೊದಲ ವಾರದಲ್ಲಿ ಹುಡುಗಿಯರ ಇನ್ ಪುಟ್ ಕೆಪಾಸಿಟಿಗೆ ದಂಗಾಗಿ ಹೋದರು. ಎಲ್ಲರಿಗೂ ತಲಾ ಎರಡೆರಡು ಚಪಾತಿಯ ಜೊತೆ ಎರಡು ತಪ್ಪಲೆ ಅನ್ನ ಇಳಿಸಿದರೂ ಇನ್ನೂರು ಜನರ ಹಾಸ್ಟೆಲಿಗೆ ಸಾಕಾಗುತ್ತಿರಲಿಲ್ಲ. ಒಂದು ದಿನ ವಿಜಿ ಊಟಕ್ಕೆಂದು ಬಂದಾಗ ಮನೋಹರ ಅವಳನ್ನು ಕೇಳಿದ.

‘ಅಲ್ರೀ, ಅಷ್ಟು ಅನ್ನ ತುಂಬ್ಕೊಂಡ್ ಹೋಗ್ತಾರಲ್ಲ ಹುಡ್ಗೀರು, ಎಲ್ಲಾನೂ ಒಬ್ರೇ ತಿಂತಾರ?’

ಮೊದಲೇ ಸೀನಿಯರ್ಸು ಜೂನಿಯರ್ಸು ಅಂತೆಲ್ಲ ಗಲಾಟೆಗೆ ಸಿಕ್ಕಿಕೊಳ್ಳುವ ಆತಂಕದಲ್ಲಿದ್ದ ವಿಜಿ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಗೂಢಚರ್ಯೆಯ ಕೆಲಸಕ್ಕೆ ಕೈ ಹಾಕಿದಂತಾಗುತ್ತದೆಂದು ಎಣಿಸಿ ‘ನಂಗೇನೋ ಗೊತ್ತಿಲ್ಲಪ್ಪ. ಅದೇನ್ ಮಾಡ್ತರೋ’ ಎಂದು ನುಣುಚಿಕೊಂಡಳು.

ಆದರೆ, ಸಹಾಯಕಿ ಮೇರಿಯಮ್ಮ ಬಿಡಬೇಕಲ್ಲ. ‘ಅಲ್ಲಕ್ಕಾ, ನಿಮ್ ಫ್ರೆಂಡ್ಸೇ ಅಲ್ವಾ? ಒಂದ್ ಸಾರಿ ನೋಡ್ಕೊಂಡ್ ಬನ್ನೀಪಾ. ಇಲ್ಲಿ ಎಷ್ಟ್ ಅನ್ನ ಮಾಡಿದರೂ ಸಾಕಾಗ್ತಾ ಇಲ್ಲ’ಎಂದಳು. ವಿಜಿ ‘ಇಲ್ಲ ಮೇರಿಯಮ್ಮ. ನಮ್ಮುನ್ನ ಹತ್ರ ಕೂಡ ಸೇರಿಸಲ್ಲ ಆ ಹುಡ್ಗೀರು’ ಎಂದು ಸಹಾಯ ಯಾಚನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದಳು.

ಮರು ವಾರದಿಂದ ಎಲ್ಲರೂ ಹಾಸ್ಟೆಲಿನ ಡೈನಿಂಗ್ ಹಾಲಿನಲ್ಲೇ ಊಟ ಮಾಡಬೇಕೆಂದು ಸರ್ಕುಲರ್ ಬಂತು. ಇದಕ್ಕೆ ಕಾರಣ ತಿಳಿಯಲೇಬೇಕೆಂದು ವಿಜಿ ಮೇರಿಯಮ್ಮನನ್ನು ಒಂದು ದಿನ ಕಿಚನ್ನಿನ ಕೆಲಸ ಮುಗಿದ ಮೇಲೆ ಹೋಗಿ ಭೇಟಿಯಾದಳು. ಮೇರಿಯಮ್ಮ ಬಾಯ್ಬಿಡಲಿಲ್ಲ. ಮನೋಹರನೇ ಕಾರಣವನ್ನು ವಿವರಿಸಿದ.

ಹೊಸ ತಟ್ಟೆ-ಲೋಟಗಳಲ್ಲಿ ಪಾವಕ್ಕಿ ಅನ್ನ, ಲೀಟರು ಸಾರು, ರಸಂ, ಮೊಸರು ಎಲ್ಲ ಊಟಕ್ಕೆಂದು ರೂಮಿಗೆ ಹೋಗುತ್ತಿದ್ದುದು ನಿಜವೇ. ರಹಸ್ಯ ಕಾರ್ಯಾಚರಣೆಯಲ್ಲಿ ತಿಳಿದುಬಂದ ವಿಷಯವೇನೆಂದರೆ, ಇದು ಬೂತಯ್ಯನ ಮಗ ಅಯ್ಯು ಸಿನಿಮಾದ ಹೊಟ್ಟೆಬಾಕರ ಕತೆಯಾಗಿತ್ತು.

ಅಡುಗೆ ಮಾಡಿಕೊಳ್ಳುವಾಗ ಹೇಗೆ ಖರ್ಚನ್ನು ಹಂಚಿಕೊಳ್ಳುತ್ತಿದ್ದರೋ ಹಾಗೇ ಒಂದು ಊಟದ ಖರ್ಚನ್ನು ಇಬ್ಬರು ಮೂವರು ಹುಡುಗಿಯರು ಹಂಚಿಕೊಳ್ಳುತ್ತಿದ್ದರು. ಮೆಸ್ಸಿಗೆ ಯಾರ ಹೆಸರಲ್ಲಿ ದುಡ್ಡು ಕಟ್ಟಿರುತ್ತಾರೋ ಅವಳು ತಟ್ಟೆ ಲೋಟ ಎಲ್ಲವನ್ನೂ ತುಂಬಿಸಿಕೊಂಡು ಊಟ ತರುವುದು, ರೂಮಿನಲ್ಲಿ ಇಬ್ಬರು-ಮೂವರು ಹಂಚಿಕೊಂಡು ಊಟ ಮಾಡುವುದು ನಡೆದಿತ್ತು.

ಇದು ಗೊತ್ತಾದ ತಕ್ಷಣ ವಾರ್ಡನ್ ಮೇಡಂಗೆ ಹೇಳಿ ಹಾಸ್ಟೆಲಿನ ಕಾಯ್ದೆ ಕಾನೂನನ್ನು ಬಿಗಿಗೊಳಿಸಲಾಗಿತ್ತು. ಮನೋಹರನಿಗೆ ವಿಜಿಯ ಮೇಲೆ ಏನೋ ನಂಬಿಕೆ. ಈ ಹಾಸ್ಟೆಲ್ ಕಿಚನ್ ಟೆಂಡರ್ ಆಗಿರುವುದಕ್ಕೆ ಇವಳ ಕೊಡುಗೆಯೂ ಇದೆ ಅನ್ನುವ ಒಂದು ಋಣಭಾರದಲ್ಲಿ ವಿಜಿ ಮತ್ತು ಅವಳ ಸ್ನೇಹಿತೆಯರಿಗೆ ಸ್ವಲ್ಪ ಜಾಸ್ತಿ ಮಾರ್ಜಿನ್ ಕೊಡುತ್ತಿದ್ದ.

ಭಾನುವಾರ ಬಂದರೆ ಹಾಸ್ಟೆಲ್ಲಿನ ಅಡುಗೆ ಮನೆ ಮಧ್ಯಾಹ್ನ ಮುಚ್ಚಿಬಿಡುತ್ತಿತ್ತು. ಬೆಳಗಿನ ತಿಂಡಿಗೆ ಇಡ್ಲಿ, ದೋಸೆ ಅಥವಾ ಅಕ್ಕಿ ರೊಟ್ಟಿಯಂತಹ ಪರಮಾನ್ನಗಳು ಹೊಟ್ಟೆ ಸೇರಿದರೆ ಮತ್ತೆ ಊಟ ರಾತ್ರಿಯೇ ಸಿಗುತ್ತಿದ್ದುದು. ಬೆಳ್ ಬೆಳಿಗ್ಗೆ ಬಿಸಿ ಬಿಸಿ ತಿಂಡಿಗೆ ಹುಡುಗಿಯರು ತಟ್ಟೆ ಹಿಡಿದು ಕಾಂಪಿಟೇಷನ್ನಿಗೆ ನಿಂತರೆ ವಿಜಿ, ರಶ್ಮಿ ತಲೆ ಕೆಡಿಸಿಕೊಳ್ಳದೆ ನಿದ್ದೆ ಮಾಡಿರುತ್ತಿದ್ದರು.

ಅವರ ರೂಮು ಡೈನಿಂಗ್ ಹಾಲಿಗೆ ಹತ್ತಿರ ಇತ್ತು. ಅಲ್ಲೇ ಸ್ಟೋರ್ ರೂಮ್ ಕೂಡ ಇದ್ದು ಆಗಾಗ ಮನೋಹರ ತರಕಾರಿ ತೆಗೆದುಕೊಳ್ಳಲು ಆ ಬಾಗಿಲು ತೆರೆದರೆ ಇವರಿಬ್ಬರಿಗೂ ಕೇಳಿಸುತ್ತಿತ್ತು. ಮನೋಹರನೋ ಮೇರಿಯಮ್ಮನೋ ಆ ರೂಮಿನ ಬಾಗಿಲು ಮುಚ್ಚುವುದರೊಳಗೆ ವಿಜಿ ಟೊಮೆಟೊ, ಕ್ಯಾರೆಟ್, ಈರುಳ್ಳಿ ಇತ್ಯಾದಿಗಳನ್ನು ಹೊಂಚಲು ಪ್ರತ್ಯಕ್ಷವಾಗಿಬಿಡುತ್ತಿದ್ದರು. ತೀರಾ ಹಸಿವಾದರೆ ರೂಮಿನಲ್ಲಿ ತರಕಾರಿ ಸ್ಟಾಕ್ ಇರುತ್ತಿತ್ತು.

‘ನಿಮ್ದೇನ್ ನಾಯಿ ಮೂಗೇನ್ರೀ? ಬಾಗ್ಲು ತೆಗಿಯಕ್ ತಡ ಇಲ್ಲ ಆಗ್ಲೇ ಬಂದ್ ಬಿಡ್ತೀರಾ’ ಎಂದು ಮನೋಹರ ತಾಳ್ಮೆಮೀರಿದಾಗ ಹೇಳುತ್ತಿದ್ದನಾದರೂ, ವಿಜಿಯಂತೆ ಹೋರಾಟದ ಬದುಕನ್ನು ಅಪ್ಪಿಕೊಂಡವರಿಗೆ ಈ ಮಾತುಗಳೆಲ್ಲ ದೂಳಿಗೆ ಸಮವಾಗುತ್ತಿದ್ದವು.

‘ಮೊನ್ನೆ ಸಾರಿಗೆ ನೀರು ಹಾಕಿದ್ರಲ್ಲ ಮನೋಹರ್, ಆವತ್ಯಾಕೋ ವಾರ್ಡನ್ ಬರ್ಲಿಲ್ಲ ಕಣ್ರೀ. ಇಲ್ಲಾಂದ್ರೆ ಅವರ ಹತ್ರ ಸ್ವಲ್ಪ ಡಿಸ್ಕಸ್ ಮಾಡೋದಿತ್ತು. ಅಡುಗೆ ಸಾಲ್ತಾ ಇಲ್ಲ ಅಂತ’ ಎಂದು ವಿಜಿ ಬಾಣವೊಂದನ್ನು ರೆಡಿ ಇಟ್ಟಿರುತ್ತಿದ್ದಳು. ಮನೋಹರ ಬಾಯಿ ಮುಚ್ಚಿಕೊಂಡು ತಲಾ ಒಂದೆರಡು ಹಸೀ ತರಕಾರಿಯನ್ನು ಅವಳ ಉಡಿಗೆ ಹಾಕುತ್ತಿದ್ದ. ಇವಳೂ ಶೀಟಿ ಹೊಡೆಯುತ್ತಾ ವಿಜಯ ಪತಾಕೆ ಹಾರಿಸಿಕೊಂಡು ಹೋಗುತ್ತಿದ್ದಳು. ಒಂದು ಭಾನುವಾರ ರಶ್ಮಿ-ವಿಜಿ ಇಬ್ಬರೂ ಮಲಗಿಬಿಟ್ಟಿದ್ದರು. ರಾತ್ರಿಯೆಲ್ಲ ಧೋ ಎಂದು ಸುರಿದ ಮಳೆಗೆ ಜೀವ ತಂಪಾಗಿ ಚಪ್ಪರಿಸಿ ನಿದ್ದೆ ಮಾಡುತ್ತಿದ್ದಾಗ ರೂಮಿನ ಬಾಗಿಲು ಧಬ ಧಬ ಸದ್ದು ಮಾಡಿತು. ಅವಳು ತೆಗೆಯಲಿ ಅಂತ ಇವಳು, ಇವಳು ತೆಗೆಯಲಿ ಅಂತ ಅವಳು ತಿರು-ತಿರುಗಿ ನಿದ್ದೆ ಮಾಡಿದರೂ ಸದ್ದು ನಿಲ್ಲಲೇ ಇಲ್ಲ. ಕಡೆಗೆ ವಿಜಿಯೇ ಎದ್ದು ತೆಗೆದಳು. ಹೊರಗೆ ಮೇರಿಯಮ್ಮ ನಿಂತಿದ್ದಳು. ‘ಯಾಕ್ರೀ ಇನ್ನೂ ತಿಂಡಿಗೆ ಬಂದೇ ಇಲ್ಲ? ಮನು ಕೇಳ್ತಿದಾರೆ’ ಎಂದರು.

‘ಹೌದಾ? ತಿಂಡಿ ಮುಗೀತಾ?’

‘ಇಲ್ಲ ನಿಮಗೇಂತ ಎತ್ತಿಟ್ಟಿದಾರೆ. ಬನ್ನಿ ಬೇಗ’ ಎಂದು ಹೇಳಿ ಮೇರಿಯಮ್ಮ ಸರ-ಭರ ನಡೆದುಹೋದಳು. ಅಯ್ಯೋ ಯಾವ ಜನ್ಮದ ಅನ್ನದ ಋಣ ಮನೋಹರನ ಮೇಲಿದೆಯೋ ಎಂದುಕೊಂಡು ಇನ್ನು ಮುಂದೆ ಅವನನ್ನು ಹೆದರಿಸಬಾರದು, ದಾವಣಗೆರೆಯವನಾದ್ರೇನಂತೆ ಅಲ್ಲೂ ಒಳ್ಳೆಯವರಿಲ್ವಾ ಎಂದು ಆತ್ಮರತಿಯಲ್ಲಿ ಮುಳುಗೇಳುತ್ತಾ ವಿಜಿ ತಟ್ಟೆ ಹಿಡಿದು ಮೆಸ್ಸಿನ ಕಡೆ ಹೋದಳು. ಮನೋಹರ ಅಕ್ಕಿ ರೊಟ್ಟಿ ಹಿಡಿದು ನಿಂತಿದ್ದ. ಇವಳನ್ನು ನೋಡಿ ಮುಖ ಸಿಂಡರಿಸಿದ.

‘ಅಯ್ಯ!! ಇನ್ನೂ ಇದೀರಾ?’ ಎಂದು ಬೇಸರದಿಂದ ಕೇಳಿದ.

‘ನೀವ್ ಹಾಕೋ ಊಟ ತಿಂದ್ರೆ ಭಾಳ ದಿನ ಇರಲ್ಲ ಮನೋಹರ್. ಅಕ್ಕಿ ರೊಟ್ಟಿನಾ ಇದು? ಚಪ್ಲಿ ಹೊಲೀಬಹುದಲ್ರೀ ಇದ್ರಲ್ಲಿ?’ ಎಂದಳು ವಿಜಿ. ಲೋಟಕ್ಕೆ ಟೀ ಹಾಕಿ ತುಂಬಿಸಲು ಯಾವಾಗಲೂ ಹಿಂದೆ ಮುಂದೆ ನೋಡುತ್ತಿದ್ದ ಮನೋಹರ ಆವತ್ತು ಯಾಕೋ ಧಾರಾಳ ಮನಸ್ಸು ಮಾಡಿ ಇವಳ ಮಗ್ಗಿಗೆ ಪೂರ್ತಿ ತುಳುಕುವಂತೆ ಸುರಿದ. ‘ಪರವಾಗಿಲ್ವೇ? ಲೋಟ ತುಂಬುಸ್ ಬಿಟ್ರೀ’.

‘ಥೂ ಕುಡುದ್ ಸಾಯ್ರೀ ಅತ್ಲಾಗೆ. ನಿಮ್ ಕಾಟ ಸಾಕಾಯ್ತು ನಂಗೂ’

ಒಂದು ಆಪ್ತ ಭಾವನೆಗೆ, ಆತ್ಮೀಯತೆಗೆ

ಬಳಸುವ ಭಾಷೆ ಹೀಗೇ ಇರಬೇಕು ಎಂದುಕೊಳ್ಳುವವರು ಎಷ್ಟು ಬಡವರಾಗಿ ಉಳಿದಿದ್ದಾರಲ್ಲ ಎಂದುಕೊಳ್ಳುತ್ತಾ ರೊಟ್ಟಿ ಚಪ್ಲಿಯನ್ನು ತಿನ್ನತೊಡಗಿದಳು ವಿಜಿ. ಮುಂದಿನ ವಾರ ಹಾಸ್ಟೆಲ್ ಡೇ ಇದೆ, ಆಗ ಸ್ವಲ್ಪ ದೂಳೆಬ್ಬಿಸುವ ಕಾರ್ಯಕ್ರಮಹಾಕಿಕೊಳ್ಳಬೇಕು ಎಂದು ಲೆಕ್ಕ ಹಾಕತೊಡಗಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.