ರೂಮಿನಲ್ಲಿ ಕೂತಿದ್ದ ವಿಜಿಯನ್ನು ಕರೆಯಲು ರಶ್ಮಿ ಧಡಭಡ ಓಡಿ ಬಂದಳು. ಮಧ್ಯಾಹ್ನ ಕ್ಲಾಸು ಮುಗಿಸಿ ಬಂದು, ಊಟ ಮಾಡಿ, ಬಟ್ಟೆ ತೊಳೆದು ಒಣಗಲು ಹಾಕಿ ಅಸಾಧ್ಯ ಶೆಖೆಯಲ್ಲೂ ಇಬ್ಬರೂ ಸುಖವಾಗಿ ಮಲಗಿದ್ದರು. ರಶ್ಮಿ ಟೀ ಕುಡಿಯಲಿಕ್ಕೆಂದು ಲೋಟ ಹಿಡಿದುಕೊಂಡು ಮೆಸ್ಸಿಗೆ ಹೋದವಳು ಹೊರಗೆ ಇಣುಕಿ ನೋಡಿದಳು. ಕಪ್ಪನೆ ಮೋಡ ತೂಗುತ್ತಿದೆ. ಯಾವ ಕ್ಷಣದಲ್ಲಾದರೂ ಕಪ್ಪನೆ ಮೋಡ ಸ್ಫಟಿಕ ಶುಭ್ರ ಹನಿಗಳನ್ನು ಭೂಮಿಗೆ ಕಳಿಸುವ ತಯಾರಿ ಮಾಡುತ್ತಿತ್ತು. ಬಟ್ಟೆ ಒಣಗಲು ಹಾಕಿದ್ದು ನೆನಪಾಗಿ ರೂಮಿಗೆ ಬಂದಳು.

‘ಬೇಗ ಬಾರೇ!’
‘ಯಾಕೆ?’
‘ಬಟ್ಟೆ ಡ್ರೈ ಮಾಡಕ್ಕೆ ಹಾಕಿದ್ವಲ್ಲ?’
‘ಹೌದು. ಅದಕ್ಕೇನಾಯ್ತು?’
‘ಗುಡುಗು ಗುಡುಸ್ಲು ಬರ್ತಾ ಇದೆ’
‘ಆಂ?’
‘ಹೂಂ! ಗುಡುಗು ಗುಡುಸ್ಲೂ ಬರ್ತಾ ಇದೆ. ಬೇಗ ಬಟ್ಟೆ ತೆಕ್ಕೊಂಬರಾಣ’
‘ಗುಡುಸ್ಲು ಎಲ್ಲಿಂದ ಬರ್ತಾ ಇದೆ?’
‘ಬ್ರೈನ್ಸ್ ಇಲ್ವಾ ನಿಂಗೆ? ಸ್ಕೈ ಇಂದ ಬರ್ತಿದೆ!’

ವಿಜಿ ಹೊರಗೆ ನೋಡಿದಳು. ಮೋಡ ದಟ್ಟವಾಗಿ ಬಿಗಿದುಕೊಂಡು ಎಲ್ಲೋ ತಂಪು ಗಾಳಿ ಎದ್ದಿತ್ತು. ಮಳೆ ಬರುವ ಸೂಚನೆ. ಮಿಂಚುತ್ತಿತ್ತು. ರಶ್ಮಿಯ ಕಡೆ ನೋಡಿದಳು. ಇವಳು ಹೇಳುತ್ತಿರುವುದು ಒಂದೂ ಅರ್ಥವಾಗಲಿಲ್ಲ. ನಿದ್ದೆ ತಿಳಿಯಾಗಿ ಹತ್ತು ಸೆಕೆಂಡು ಮೌನವಾಗಿ ಯೋಚಿಸಿದ ನಂತರ ಉತ್ತರ ಹೊಳೆಯಿತು.

ಇವಳ ಗುಡುಗು-ಗುಡುಸ್ಲುವಿನ ಅರ್ಥ ಗುಡುಗು-ಸಿಡಿಲು ಎಂಬ ಜ್ಞಾನದ ಬೆಳಕು ಅಂತರ್ಭವಿಸಿ ಕೋಣೆಯಲ್ಲೆಲ್ಲ ಹರಡಿಕೊಂಡಿತು. ಇಬ್ಬರೂ ಬಹುತೇಕ ಬೆಳಕಿನ ವೇಗದಲ್ಲೇ ಹೊರಗೆ ಓಡಿದರು. ಆಗಲೇ ಹಾಸ್ಟೆಲ್ಲಿನ ಬಹುತೇಕ ನಿವಾಸಿಗಳು ವಿವಿಧ ರಂಗಿನ ನೈಟಿಗಳಲ್ಲಿ ಪಟ ಪಟ ಎಂದು ಬೀಳುತ್ತಿದ್ದ ಮಳೆ ಹನಿಯಿಂದ ತಮ್ಮ ಗರಿ-ಗರಿಯಾಗಿ ಒಣಗಿದ್ದ ಬಟ್ಟೆಯನ್ನು ಕಾಪಾಡಿಕೊಂಡು ಹೋಗುತ್ತಾ ಕೊಯ್ಲಿಗೆ ಬಂದ ಬೆಳೆಯನ್ನು ಸರಿಯಾದ ಸಮಯಕ್ಕೆ ಒಕ್ಕಣೆ ಮಾಡಿ ಮುಂಬರುವ ಲಾಭದ ಎಣಿಕೆ ಹಾಕುವ ರೈತನಷ್ಟು ಪ್ರಸನ್ನರಾಗಿ, ತಮ್ಮ ನೆರೆ-ಹೊರೆಯವರಿಗೆ ಕೂಗುತ್ತಲೇ ಮಳೆಯ ವಾರ್ತೆ ನೀಡುತ್ತಿದ್ದರು.

ಅದ ಕೇಳಿದ ಇನ್ನಷ್ಟು ನೈಟಿಗಳು ತಂತಮ್ಮ ರೂಮಿನಿಂದ ಸಂಪಿಗೆ ಮರದಲ್ಲಿ ಗೂಡು ಕಟ್ಟುವ ಕೆಂಜಿಗದ ಇರುವೆಯ ರೀತಿಯಲ್ಲಿ ಬಳಬಳ ಹೊಮ್ಮಿ, ಬಿಟ್ಟ ಬಾಣದಂತೆ ನೇರವಾಗಿ ಬಟ್ಟೆ ಒಣಗಲು ಹಾಕಿದ್ದ ಜಾಗಕ್ಕೆ ಸುಯ್ಯೆಂದು ತೇಲಿ ಹೋಗುತ್ತಿದ್ದರು. ಬಟ್ಟೆ ಒದ್ದೆಯಾದರೆ ನಾಳೆ ಮತ್ತೆ ಒಣಗಲು ಹಾಕಬೇಕಲ್ಲ ಎನ್ನುವ ಚಿಂತೆ ಕಾಲುಗಳಿಗೆ ಎಲ್ಲಿಲ್ಲದ ಶಕ್ತಿ ಕೊಡುತ್ತಿತ್ತು.

ಐದು ನಿಮಿಷಗಳಲ್ಲಿ ಐವತ್ತು ತಂತಿಗಳ ಬಟ್ಟೆ ಒಣಗುವ ಜಾಗ, ಸಂಪೂರ್ಣ ಖಾಲಿಯಾಗಿ, ಮರುದಿನ ಮತ್ತೆ ರಿನ್ ಶಕ್ತಿಯಿಂದ ಹೊಳೆಯುತ್ತಾ ಕನಿಷ್ಠ ಒಂದು ಡಜನ್ ಜಂಗು ಹಿಡಿದ ಸೇಫ್ಟಿ ಪಿನ್ನು ಹೊತ್ತು ನೀರು ತೊಟ್ಟಿಕ್ಕುವ ನೈಟಿಗಳಿಗೆ, ಚೂಡಿದಾರಗಳಿಗೆ, ಲಾಡಿ ತೂಗುವ ಮಾಸಿದ ಪೆಟಿಕೋಟುಗಳಿಗೆ, ಜೂಲೆದ್ದ ದುಪ್ಪಟ್ಟಾಗಳಿಗೆ ತಯಾರಾಗಿ ನಿಂತಿತು. ಹೊಳೆವ ಚರ್ಮದ ಇಂಗ್ಲೀಷು ಮಾತನಾಡುವ ಕೊಡವರ ಹುಡುಗಿಯರು ಹೊರಗೆ ಬರಲಿಲ್ಲ. ಕೇಳಿದರೆ ‘ಆಆ...ಡೋಂ(ಟ್)ವರಿ. ನಾವ್ ಬಟ್ಟೆ ಹಾಕಿಲ್ಲ’ ಎಂದು ಹೇಳಿಬಿಡುತ್ತಿದ್ದರು. ಕನ್ನಡ ವಿಹಾರಿಗಳು ಅವರು. ಹುಟ್ಟಿದ್ದು ಬೆಳೆದದ್ದು ಎಲ್ಲಾ ಇಂಗ್ಲೀಷಲ್ಲೆ. ಆಗಾಗ ಕನ್ನಡಕ್ಕೆ ಪಿಕ್ನಿಕ್ ಬಂದವರ ಹಾಗೆ ಮಾತು.

ಅದ್ಯಾವ ಮಾಯೆಯಲ್ಲಿ ಬಟ್ಟೆ ಒಗೆದುಕೊಳ್ಳುತ್ತಿದ್ದರೋ, ಅದೆಲ್ಲಿ ಹರವಿಕೊಳ್ಳುತ್ತಿದ್ದರೋ ದೇವನೇ ಬಲ್ಲ. ಅವರ ಹುರಿಗಟ್ಟಿದ ಅಥ್ಲೆಟಿಕ್ ದೇಹಗಳ ಮೇಲೆ ಒಂದು ಸಾಧಾರಣ ಟೀ ಷರ್ಟು, ಪೈಜಾಮಾ ಮಾತ್ರವೇ ಹಾಕಿದ್ದರೂ ಅವರು ಅದ್ಭುತವಾಗಿ ಕಾಣುತ್ತಿದ್ದರು. ಅವೇ ಬಟ್ಟೆಗಳನ್ನು ನಾವು ಹಾಕಿಕೊಂಡರೆ ತಿಪ್ಪೆಯ ಥರ ಕಾಣುತ್ತೇವಲ್ಲ, ಎಂದು ತಂದ ಬಟ್ಟೆಗಳನ್ನು ಮಡಚುತ್ತಾ ವಿಜಿ ಯೋಚಿಸಿ ಅನಾವಶ್ಯಕವಾದ ಕೀಳರಿಮೆಯಿಂದ ನರಳತೊಡಗಿದಳು. ನಿದ್ದೆ ಮಾಡಿ ಎದ್ದ ತಕ್ಷಣ ಮತ್ತೆ ರಾತ್ರಿ ನಿದ್ದೆ ಬರುವುದಿಲ್ಲವಲ್ಲ ಎನ್ನುವ ಚಿಂತೆ ಬೇಸರವನ್ನು ಇನ್ನೂ ಹೆಚ್ಚು ಮಾಡುತ್ತಿತ್ತು. ಹಾಗಂತ ಮಧ್ಯಾಹ್ನ ಮಲಗದೆ ಇರಲು ಕಡಿದು ಕಟ್ಟೆ ಹಾಕುವಂಥದ್ದೇನೂ ಇರುತ್ತಿರಲಿಲ್ಲ.

ಕ್ಲಾಸಿಲ್ಲದಿದ್ದರೆ ಬೇಡ. ಗೋಲಿ ಮಾರೋ! ಅದಕ್ಕೆ ಅಲ್ಲವೇ ನಿದ್ದೆ ಬರುವುದು? ಕ್ಲಾಸ್ ಇದ್ದರೂ ಬಿಟ್ಟರೂ ಜೀವನವೇನೂ ಬದಲಾಗುವಂತಿರಲಿಲ್ಲ. ಆದರೆ ಕಾಸಿಲ್ಲದಿದ್ದರೆ? ಹಾಸ್ಟೆಲ್ಲಿನಲ್ಲಿ ಸಿಗುವ ಊಟವೇ ಗತಿ. ಟೀ ಕುಡಿಯಲೂ ಅವರಿವರ ಹತ್ತಿರ ಕಾಸಿಗೆ ಗೋಗರೆಯಬೇಕು. ಸುಮ್ಮನೆ ಊರಲ್ಲಿ ಇದ್ದಿದ್ದರೆ ಮಳೆ ಬರುವ ಸಮಯದಲ್ಲಿ ಮಂಡಕ್ಕಿ, ಬಿಸಿ ಬಿಸಿ ಮೆಣ್ಸಿನ್ಕಾಯಿ ಆಹಾ... ಎಂದುಕೊಂಡಳು.

ಇಲ್ಲಿ ಕನಿಷ್ಠ ಚಹಾ ಸಿಕ್ಕಿದ್ದರೆ ದೇವರು ನಿಜಕ್ಕೂ ಇದ್ದಾನೆ ಎಂದು ನಂಬಿಕೆ ಬರುತ್ತಿತ್ತಲ್ಲ ಎಂದು ಚಡಪಡಿಸಿದಳು. ಮಣ್ಣಿನ ಘಮ ತುಂಬಿಕೊಳ್ಳುತ್ತಿದ್ದ ರೂಮಿನಲ್ಲಿ ಕಮಟು-ಕಮಟಾದ ಅಷ್ಟೇನೂ ಗಾಢವಲ್ಲದ ನೀರು ಚಹಾದ ವಾಸನೆ ತೇಲಿ ಬಂತು. ಅಯ್ಯೋ! ಹಣೆಬರಹ ಕೈಕೊಟ್ಟಾಗ ಮನಸ್ಸೂ ಕೆಟ್ಟ ಆಟಗಳನ್ನು ಆಡುತ್ತದಲ್ಲಾ? ಇಲ್ಲದಿದ್ದರೆ ರೂಮಿನಲ್ಲಿ ಚಹಾದ ವಾಸನೆ ಹೇಗೆ ಸೃಷ್ಟಿಯಾದೀತು ಎಂದುಕೊಳ್ಳುತ್ತಾ ತನ್ನ ಪರಿಸ್ಥಿತಿಗೆ ತಾನೇ ಮಮ್ಮಲ ಮರುಗಿದಳು.

ಆದರೆ, ಚಹಾದ ವಾಸನೆ ಅವಳ ಮನಸ್ಸಿನ ಸೃಷ್ಟಿಯಾಗಿರಲಿಲ್ಲ. ಅದು ಸದೃಶವಾಗಿಯೇ ರೂಮಿನಲ್ಲಿತ್ತು. ಉದ್ದನೆಯ ಪಿಂಗಾಣಿ ಕಪ್ಪಿನಿಂದ ಚಹಾದ ಹೊಗೆ ಪವಾಡದಂತೆ ಹೊಮ್ಮಿ ಪುಟ್ಟ ಹೋಮ ಕುಂಡದ ಹಾಗೆ ಕಾಣುತ್ತಿತ್ತು. ಅಯ್ಯೋ! ದೇವರಿದ್ದಾನೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿಬಿಟ್ಟಿತಲ್ಲ? ಇನ್ನೇನು ಬೇಕು? ಜ್ಞಾನೋದಯವನ್ನು ಸ್ವಲ್ಪ ಸಮಯದ ನಂತರ ಶೆಡ್ಯೂಲ್ ಮಾಡಿಕೊಳ್ಳಬಹುದು. ಆದರೆ, ಅದಕ್ಕೆ ಮುಂಚೆ ಒಂದು ಮುಖ್ಯವಾದ ಪ್ರಶ್ನೆ.

ಈ ಚಹಾ ಇಲ್ಲಿಗೆ ಹೇಗೆ ಬಂತು? ರಶ್ಮಿ ರೂಮಿನಲ್ಲಿ ಇರಲಿಲ್ಲ. ಬಟ್ಟೆ ತಂದು ಒಳಗೆ ಹಾಕಿ ಯಾರ ಹತ್ತಿರವೋ ಭರ್ಜರಿ ಹರಟುತ್ತಿದ್ದಳು. ಕಾರಿಡಾರಿನಲ್ಲಿ ಅವಳ ದನಿ ಗದ್ಗಲಿಸುತ್ತಿತ್ತು. ಮತ್ತೆ ಚಹಾ ಇಲ್ಲಿ ಹೇಗೆ ಬಂತು?

ಕಾರಿಡಾರಿನ ತುತ್ತ ತುದಿಯಲ್ಲಿದ್ದು, ಮನುಷ್ಯ ಸಂಪರ್ಕದಿಂದ ದೂರವಿದ್ದ ರೂಮಿನಲ್ಲಿ, ತನ್ನ ಗಮನಕ್ಕೆ ಬಾರದೆ ಇದನ್ನು ತಂದಿಟ್ಟ ದೈವಾಂಶಸಂಭೂತರು ಯಾರು? ಅಥವಾ ತಾನೇ ನಡೆದುಹೋಗಿ ತಂದೆನೆ? ಇಲ್ಲವಲ್ಲ! ತಾನು ರಶ್ಮಿ ಬಂದು ಎಬ್ಬಿಸುವವರೆಗೆ ಮಲಗಿದ್ದೆ. ರಶ್ಮಿಯೂ ನನ್ನ ಜೊತೆಯೇ ಬಂದಿದ್ದಳು. ಈಗ ಅಲ್ಲೆಲ್ಲೋ ನಿಂತಿದ್ದಾಳೆ. ಮತ್ತ್ಯಾರು ತಂದಿಟ್ಟರು?

ಹೊರಗೆ ಮಳೆಯ ದೆಸೆಯಿಂದ ಈಗ ತಾನೆ ಹುಟ್ಟಿದ್ದ ಚಳಿಗೂ, ಅದೇ ಸಮಯಕ್ಕೆ ಅವಳಿಗಾದ ಅರಿವಿಗೂ ಒಟ್ಟಿಗೇ ಮೈ ಝುಂ ಎಂದಿತು. ಯಾಕೆಂದರೆ ವಿಜಿ ಇದ್ದ ರೂಮನ್ನು ಅವಳು ಆಯ್ದುಕೊಳ್ಳುವಾಗ ಹಾಸ್ಟೆಲ್ಲಿನ ಕ್ಲರ್ಕ್ ಹತ್ತು ಸಾರಿ ಹೇಳಿದ್ದ.

‘ಬ್ಯಾರೇ ರೂಂ ತಕ್ಕಳಿ. ಈ ರೂಂ ಬ್ಯಾಡ’
‘ಯಾಕೆ ಸರ್?’
‘ಅಯ್ಯೋ ಸುಮ್ಕೆ ಕಣ್ರೀ. ಸುಮ್ಕೆ ಬ್ಯಾರೇ ರೂಮಿಗೆ ವೋಗಿ. ಇಲ್ಲದ್ ತಲ ನೋವು ಯಾಕ ನಿಮ್ಗ?
‘ಅದೇನು ಅಂತ ಹೇಳಿ ಸರ್. ಅರ್ಥ ಆಗ್ತಾ ಇಲ್ಲ. ಈ ರೂಮಿಗೆ ದುಡ್ಡ್ ಜಾಸ್ತಿನಾ?’

ದುಡ್ ಜಾಸ್ತಿನಾ ಎಂದು ವಿಜಿ ಒತ್ತಿ ಕೇಳಲು ಕಾರಣವಿತ್ತು. ಅವಳಿದ್ದ ರೂಮು ಹಾಸ್ಟೆಲ್ಲಿನ ಹಳೆಯ ಕಟ್ಟಡದ ಭಾಗ. ಬೇರೆ ರೂಮುಗಳು ಕಾರಿಡಾರಿನಲ್ಲಿ ಸಹಪಂಕ್ತಿ ಭೋಜನಕ್ಕೆ ಕುಳಿತವರ ಮಾದರಿಯಲ್ಲಿ ಒಂದರ ಪಕ್ಕ ಇನ್ನೊಂದಿದ್ದರೆ, ಇವಳಿದ್ದ ರೂಮು ಮತ್ತು ಇಂಥದ್ದೇ ಇನ್ನೊಂದು ರೂಮು ಇದ್ದವು. ಇವನ್ನು ಹಾಸ್ಟೆಲಿನ ವಾರ್ಡನ್ ಇಳಿದುಕೊಳ್ಳಲು ಮತ್ತು ಇನ್ನೊಂದು ರೂಮನ್ನು ಕಚೇರಿ ಎಂದೂ ಕಟ್ಟಿಸಲಾಗಿತ್ತು.

ಬೇರೆ ರೂಮುಗಳಿಗಿಂತ ಇವು ವಿಶಾಲವಾಗಿದ್ದು, ತಾರಸಿಯಲ್ಲಿ ಫ್ಯಾನು, ಟ್ಯೂಬ್ ಲೈಟು ಹೊಂದಿದ್ದವು. ಅಲ್ಲದೆ, ಇನ್ನೊಂದು ಪ್ರಮುಖ ಅಂಶವೆಂದರೆ ಈ ಎರಡು ರೂಮುಗಳಿಗೆ ಮಾತ್ರ ಅಟ್ಯಾಚ್ ಆಗಿ ಪುಟ್ಟ ಟಾಯ್ಲೆಟ್ಟೂ, ಸಣ್ಣ ಕನ್ನಡಿಯುಳ್ಳ ಸಿಂಕೂ, ಸ್ನಾನಕ್ಕೆ ಜಾಗವೂ, ಸದಾ ನೀರು ತುಳುಕಿಸುತ್ತಿದ್ದ ನಲ್ಲಿಯೂ ಇತ್ತು! ಇಡೀ ಹಾಸ್ಟೆಲ್ಲಿಗೆ ನೀರು ಬರದಿದ್ದರೂ, ಇದು ಹಳೆಯ ಪೈಪ್ ಲೈನ್ ಆದ ಪ್ರಯುಕ್ತ ಇವರ ರೂಮಿಗೆ ಮಾತ್ರ ನೀರು ನಿಲ್ಲುತ್ತಿರಲಿಲ್ಲ.

‘ದುಡ್ಡೇನೂ ಜಾಸ್ತಿ ಇಲ್ಲ ಕನವಾ. ಆದರ,
ಆ ರೂಮಿನ ಕತ ಗೊತ್ತಾ ನಿಂಗ?’
ಏನೋ ನಿಗೂಢವಾದದ್ದನ್ನು ಹೇಳುವ ಹಾಗೆ ಕೇಳಿದ್ದರು ಕ್ಲರ್ಕು.
‘ಇಲ್ವಲ್ಲ?’
‘ಲೋ ಮೋನಾ... ಇವ್ರಿಗೆ ಆ ರೂಮಿನ್ ಕತೆ ಏಳಿಲ್ವಲಾ?’

ಇಬ್ಬರ ಮಾತುಗಳನ್ನು ಆಲಿಸುತ್ತಾ, ಸೊಂಟ ವಾರೆ ಮಾಡಿಕೊಂಡು ಎಡಗೈನ ತೋರು ಬೆರಳಿನಿಂದ ಮೂಗಿನಲ್ಲಿ ಬಂಗಾರದ ಗಣಿಯನ್ನೂ ಶೋಧಿಸುತ್ತಿದ್ದ ಮೋನ ಅಲಿಯಾಸ್ ಮೋಅನ ಅಲಿಯಾಸ್ ಮೋಹನ ಬಲಗೈಯನ್ನು ತಲೆಯ ಮೇಲೆ ಒರಗಿಸಿಕೊಂಡು ಇನ್ನೇನು ದರ್ಪಣ ಸುಂದರಿಯಂತೆ ಕಂಗೊಳಿಸುವುದರಲ್ಲಿದ್ದ.

ಅಷ್ಟರಲ್ಲಿ ಕ್ಲರ್ಕ್ ಕೂಗಿದ್ದು ಅವನ ಕಲಾಭಿವ್ಯಕ್ತಿಗೆ ಬಂದಂಥ ಬಹು ದೊಡ್ಡ ಆತಂಕವಾಗಿತ್ತು. ಹೆಸರಿಗೆ ತಕ್ಕ ಹಾಗೇ ಮೋಹನ ಗಟ್ಟಿ ಬಣ್ಣದವನು. ಯಾವಾಗಲೂ ಪೆದ್ದನ ಕಳೆ ಹೊತ್ತು ಕಾಲೆಳೆದುಕೊಂಡು ತಿರುಗಾಡುತ್ತಿದ್ದವ. ಎಂಜೀಆರ್ ತರಹದ ಹೇರ್ ಸ್ಟೈಲೂ, ತಮಿಳು ಕಮೀಡಿಯನ್ ಪಾಂಡಿಯನ್ ಥರದ ಮುಖವೂ ಮೇಳೈಸಿ ಮೋಅನನಾಗಿತ್ತು. ಹತ್ತಿರದ ನಂಜನಗೂಡಿನವ, ಹುಡುಗಿಯರ ಹಾಸ್ಟೆಲ್ಲಿನಲ್ಲಿ ಬಹಳ ವರ್ಷದಿಂದ ಪ್ಯೂನ್ ಆಗಿದ್ದ. ಅಲ್ಲಿನ ಬಹಳ ಕತೆಗಳು ಗೊತ್ತಿದ್ದರೂ ಅವನ್ನು ತಲೆಗೆ ಹಚ್ಚಿಕೊಳ್ಳದೆ ಶುಕ್ರವಾರದ ಪೂಜೆ, ಇತ್ಯಾದಿಗಳನ್ನು ಹಾಸ್ಟೆಲಿನಲ್ಲಿ ಸಾಂಗವಾಗಿ ಮಾಡಿಕೊಂಡಿರುತ್ತಿದ್ದ.

ಕ್ಲರ್ಕು ಕೇಳಿದ ತಕ್ಷಣ ಮೋಅನ ಎಚ್ಚೆತ್ತುಕೊಂಡ. ಹಾಗೇ ಬೆಚ್ಚಿಯೂ ಬಿದ್ದ. ‘ಇಲ್ಲ ಸಾ. ಅವ್ರು ಆ ರೂಮ್ ತಕತೀನಿ ಅಂತ ಏಳ್ನೇ ಇಲ್ಲ ನಂಗ’ ಅಂದ.

‘ಈಗ ಅದೇ ರೂಮೇ ಬೇಕು ಅಂತವ್ರ ಕನ. ನೀನೇ ವಸಿ ಬುಡ್ಸಿ ಯೋಳು. ನಂಗ ಕೆಲ್ಸ ಅದ’ ಅಂದ ಕ್ಲರ್ಕು ಫೈಲಿನೊಳಕ್ಕೆ ತೂರಿಕೊಂಡರು.

ಮೋಅನ ವಿಜಿಯನ್ನು ಸೈಡಿಗೆ ಕರೆದು ಹೇಳಿದ. ‘ಅಕ್ಕ,ಆ ರೂಮ್ ಬ್ಯಾಡಿ. ಸುಮ್ಕೆ ಬ್ಯಾರೆ ರೂಮ ತಕ್ಕಳಿ. ನಾವ್ಯಾರೂ ಆ ರೂಮ್ ತಾವ್ಕೂ ವೋಗದಿಲ್ಲ ಗ್ವತ್ತಾ?’

ವಿಜಿಗೆ ಕಾರಣ ಇನ್ನೂ ನಿಗೂಢವಾಯಿತು. ರೂಮಿನಲ್ಲಿ ಏನೋ ಕತೆ ಇದೆ ಎಂದು ತಿಳಿದ ತಕ್ಷಣ ರೂಮು ಇನ್ನೂ ಆಕರ್ಷಣೀಯವಾಗಿ ಕಾಣತೊಡಗಿತು. ಆ ವಯಸ್ಸೇ ಹಾಗಲ್ಲವೇ?

ಯಾರಾದರೂ ರೆಬೆಲ್ ಆಗಬೇಕು ಎಂದು ತುಡಿಯುವ ಹುಚ್ಚು ಕುದುರೆ ಮನಸ್ಸು.
‘ಯಾಕ್ ಮೋನ?’
‘ಅಯ್ಯೋ ಏನೇಳನ. ನಮ್ಮಲ್ಲಿ ಇನ್ನೊಬ್ಬ್ ಅಟೇಂಡ್ರು ಇದ್ದ. ಅವ್ನ್ ಎಂಡ್ರು ಯಾರುನ್ನೊ ಕಟ್ಕ ವೋಡೋದ್ಲು ಅಂತ ಸ್ಯಾನೆ ಬ್ಯಾಸ್ರ ಮಾಡ್ಕಂದು ಇಸ ತಕ್ಕಂಬುಟ್ಟ. ನೀವ್ ಬೇಕು ಅಂತಿರಾ ರೂಮ್ ತಾವೇ ರಕ್ತ ಕಾರ್ಕಂದಿ ಸತ್ತೋದ’ ಎಂದ.

ವಿಜಿಗೆ ಕಿವಿ ನೆಟ್ಟಗಾದವು.‘ಮತ್ತೆ ಅವ್ನೆಂಡ್ತಿ?’
‘ಥೂ ನೀವೇನಕ್ಕ? ಅವ್ನೇ ಸತ್ತೋದ್ ಮ್ಯಾಕ ಅವ್ನೆಂಡ್ರ ಕಟ್ಕಂದ್ ನಾವೇನ್ ಮಾಡದು? ಆ ಮುಂಡೆ ಏನಾದ್ಲೋ ಯಾರ್ ಕಂಡ್ರು? ಅವ್ನ್ ತಮ್ಮ ಬಂದು ಬಾಡಿ ತಕ್ಕವೋದ. ಈಗೂ ವುಣ್ಮೆ ಅಮಾಸೆ ಬಂದ್ರ ಅವ್ನು ಅಲ್ಲೇ ಓಡಾಡದು ಕಾಣ್ತದ,’ ಎಂದು ಹೇಳಿದ.

‘ಮತ್ತೆ ಆವಾಗಿಂದ್ಲೂ ಈ ರೂಮಿಗೆ ಯಾರೂ ಬಂದಿಲ್ವಾ?’
‘ಇಲ್ಲ. ನೀವೋಬ್ರೇ ಕೇಳ್ತಿರಾದು. ನೋಡಿ ಯೋಚ್ನ ಮಾಡಿ. ಸುಮ್ಕೆ ವುಚ್ಚಾಟ ಮಾಡ್ಕಬ್ಯಾಡಿ’
ವಿಜಿಗೆ ಈಗ ಆ ರೂಮು ಅಷ್ಟು ಕ್ಲೀನಾಗಿರುವುದರ ಹಾಗೂ ಅಷ್ಟೆಲ್ಲಾ ವ್ಯವಸ್ಥೆ ಇದ್ದರೂ ಯಾರಿಗೂ ಆಸಕ್ತಿ ಹುಟ್ಟದಿದ್ದುದರ ಹಿಂದಿನ ಮರ್ಮ ಹೊಳೆಯಿತು. ಆದರೆ, ಬೇರೆ ರೂಮಿಗೆ ಹೋಗಬೇಕೆಂದರೆ ಮತ್ತೆ ಕಾಮನ್ ಬಾತ್ರೂಮು, ಟಾಯ್ಲೆಟ್ಟು, ಬಕೇಟು, ಮಗ್ಗು...ಕ್ಯೂ, ಗಲೀಜು ಎಲ್ಲ ನೆನಪಾಯಿತು.

‘ದೆವ್ವ ಇದ್ರೆ ಇರ್ಲಿ ಬಿಡು ಮೋನ’ ಎಂದವಳೇ ಕ್ಲರ್ಕ್ ಹತ್ತಿರ ಹೋಗಿ ಹೇಳಿದಳು.
‘ಸರ್, ದೆವ್ವ ಭೂತ ಏನೇ ಇದ್ರೂ ಸರಿ. ನಂಗೆ
ಆ ರೂಮೇ ಬೇಕು. ಅಲಾಟ್ ಮಾಡಿ’.

ಕ್ಲರ್ಕು ಮರುಮಾತಾಡದೆ ರಸೀತಿ ಹರಿದುಕೊಟ್ಟ. ವಿಜಿ ರೂಮಿಗೆ ಬಂದಾಗ ರಶ್ಮಿ ಇನ್ನೂ ಬೇರೆ ರೂಮಿನಿಂದ ಇಲ್ಲಿಗೆ ಶಿಫ್ಟ್ ಆಗುವ ಯೋಚನೆಯಲ್ಲಿದ್ದಳು. ಬಂದವಳಿಗೆ ಮತ್ತೆ ತೊಂದರೆ ಆಗಬಾರದೆಂದು ತನ್ನ ಗಮನಕ್ಕೆ ಬಂದ ವಿಷಯವನ್ನು ವಿಜಿ ರಶ್ಮಿಗೆ ಹೇಳಿದಳು. ರಶ್ಮಿ ಮೊದಮೊದಲಿಗೆ ಅನುಮಾನಿಸಿದಳು. ಆದರೆ ದೆವ್ವದ ಮುಂದೆ ಬಾತ್ರೂಮು ಗೆದ್ದಿತ್ತು. ಆ ಏಕೈಕ ಕಾರಣಕ್ಕೆ ದೆವ್ವದ ರೂಮಲ್ಲೇ ಇರುವುದು ಎಂದು ಇಬ್ಬರೂ ನಿರ್ಧರಿಸಿದರು.

ಯಾರೂ ಬರದೇ ಚಹಾ ರೂಮಿನಲ್ಲಿ ಪ್ರತ್ಯಕ್ಷವಾದ ಹೊತ್ತಿನಲ್ಲಿ ಅದೆಲ್ಲ ವಿಜಿಗೆ ನೆನಪಾಗಿ ದೆವ್ವ ಇರುವುದು ನಿಜವೇನೋ ಎಂದೆನ್ನಿಸಿಬಿಟ್ಟಿತು. ಹಾಗೆ ಒಂದು ಪಕ್ಷ ಇದ್ದರೂ, ಚಹಾ ತಂದುಕೊಡುವ ದೆವ್ವ ಇದ್ದರೆ ಒಳ್ಳೆಯದೇ. ಅದರ ಹತ್ತಿರ ಮಾತು ಸಾಧ್ಯವಿದ್ದರೆ ಊಟವನ್ನೂ ತಂದಿಡಲು ಹೇಳಬಹುದಿತ್ತು ಎಂದುಕೊಂಡಳು.

ಇದನ್ನೆಲ್ಲ ರಶ್ಮಿಗೆ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ರಶ್ಮಿಯೇ ರೂಮಿಗೆ ಬಂದಳು. ‘ಟೀ ಇಟ್ಟಿದ್ದೆ. ಕುಡ್ದ್ಯಾ?’ ಎಂದು ಕೇಳಿದಳು. ಆ ಹೊತ್ತಿನಲ್ಲಿ ವಿಜಿಗೆ ಆದ ಭ್ರಮನಿರಸನವನ್ನಂತೂ ವಿವರಿಸಲು ಸಾಧ್ಯವಿಲ್ಲ. ದೇವರೂ ಇಲ್ಲ. ದೆವ್ವವೂ ಇಲ್ಲದ ಈ ಜಗತ್ತಿನಲ್ಲಿ ಚಮತ್ಕಾರಗಳಿಗೆ ಮನುಷ್ಯರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಬಹಳ ಸಂಕಟ ತಂದಿತು. ಹೊರಗೆ ನೋಡಿದರೆ ಮೋಅನ ಇನ್ಯಾರಿಗೋ ಇನ್ನೊಂದು ದೆವ್ವದ ಕತೆಯನ್ನು ಬಿಡಿಸಿಬಿಡಿಸಿ ಹೇಳುತ್ತಿದ್ದ.

ತಮಾಷೆಯೆಂದರೆ, ಆ ಹುಡುಗಿ ತೆಗೆದುಕೊಳ್ಳಬೇಕೆಂದಿದ್ದ ರೂಮನ್ನು ಮೋಅನ ತನ್ನ ಪರಿಚಯದವರಿಗೆ ಅಂತ ಗುಪ್ತವಾಗಿ ಬುಕ್ ಮಾಡಿಟ್ಟಿದ್ದ. ಇವನು ಬಿಡಿಸಿದ ಕತೆ ಕೇಳಿದ ಆ ಹುಡುಗಿ ಹೆದರಿ ಬೇರೆ ರೂಮು ಆಯ್ದುಕೊಂಡಳು. ಅಲ್ಲಿಗೆ ಎರಡು ದೆವ್ವಗಳ ಕತೆಯೂ ಪರಿಸಮಾಪ್ತಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.