ಶಿವರಾಜನಿಗೆ ‘ದಿನಕ್ಕೊಂದು ಇಂಗ್ಲಿಶ್ ಪದ’ ಅಂತ ಪ್ರಾಮಿಸ್ ಮಾಡಿದ ರಶ್ಮಿ ಮತ್ತೆ ಮಾತಾಡಿಸುವ ಗೋಜಿಗೆ ಹೋಗಿರಲಿಲ್ಲ. ಅದ್ಯಾಕೋ ಏನೋ ಅವಳ ಮೌನ ಬಹಳ ಅಸಹನೀಯವಾಗಿತ್ತು. ಅವಳ ಮಾತು ಬರಬರುತ್ತಾ ಕಡಿಮೆಯಾಗಿ ಸಂಪೂರ್ಣವಾಗಿ ನಿಂತು ಹೋಗುವ ಹಂತಕ್ಕೆ ಬಂದಿತ್ತು.

ಅವಳ ಮನಸ್ಸಿನಲ್ಲಿ ಏನೋ ಕೊರೆಯುತ್ತಿರುವಂತಿತ್ತು. ಅದು ಏನೆಂದು ಯಾರಿಗೂ ಗೊತ್ತಾಗುವಂತಿರಲಿಲ್ಲ. ಅವಳ ಮೌನವನ್ನು ಗೆಳತಿಯರು ಗ್ರಹಿಸಿದರಾದರೂ ತುಂಬಾ ಒತ್ತಾಯ ಮಾಡಿ ಮಾತನಾಡು ಎಂದು ಹೇಳಲು ಹೋಗಿರಲಿಲ್ಲ. ಮೇಲ್ನೋಟಕ್ಕೆ ಏನೋ ಸ್ಫೋಟವಾಗಲು ಕಾದಿದೆ ಎನ್ನುವಂತಿತ್ತು ಪರಿಸ್ಥಿತಿ.

ಯಾರೂ ರೂಮಿನಲ್ಲಿ ಇಲ್ಲದಾಗ ರಶ್ಮಿ ಒಬ್ಬಳೇ ಕೂತು ಅಳುತ್ತಿದ್ದುದನ್ನು ಅಟೆಂಡರ್ ಮರಿಯಮ್ಮ ನೋಡಿದ್ದಳು. ವಿಜಿ ಕ್ಲಾಸು ಮುಗಿಸಿ ವಾಪಾಸು ಬರುತ್ತಲೇ ಮರಿಯಮ್ಮ ಈ ವಿಷಯವನ್ನು ಅವಳಿಗೆ ಅರುಹಿ ‘ವಸಿ ಮಾತಾಡ್ಸಿ. ಇಲ್ಲಾಂದ್ರ ಏನರ ಮಾಡ್ಕಬುಟ್ಟಾತು ವುಡ್ಗಿ’ ಎಂದು ಸಾಕಷ್ಟು ಆತಂಕವನ್ನೂ ಹುಟ್ಟು ಹಾಕಿದ್ದಳು. ವಿಜಿ ಎದ್ದೂ ಬಿದ್ದೂ ಇನ್ನಿಲ್ಲದಂತೆ ರೂಮಿಗೆ ಹೋಗಿ ನೋಡಿದರೆ ರಶ್ಮಿ ಆರಾಮಾಗಿ ಪುಸ್ತಕ ಓದುತ್ತಾ ಮಲಗಿದ್ದಳು.

ತಲೆ ಕೆಟ್ಟಂತಾಯಿತು. ಸ್ವಲ್ಪ ಹೊತ್ತಿನ ಹಿಂದೆ ಅಳ್ತಾ ಇದ್ದಳು ಅನ್ನೋದನ್ನ ನೋಡಿದೋರೇ ಹೇಳ್ತಿದಾರೆ; ಬಂದು ನೋಡಿದ್ರೆ ಇಲ್ಲಿ ಇವ್ಳು ಆರಾಮಾಗಿ ಪುಸ್ತಕ ಓದ್ತಾ ಬಿದ್ಕೊಂಡಿದಾಳೆ. ‘ಏಯ್! ಏನೇ ಕಷ್ಟ ನಿಂಗೆ? ಅದ್ಯಾಕ್ ಎಲ್ರಿಗೂ ಟೆನ್ಷನ್ ಕೊಡ್ತಿದೀಯಾ?’ ಎಂದು ಕೇಳಿದ್ದೇ ತಡ ರಶ್ಮಿ ರಪ್ಪಂತ ಪುಸ್ತಕ ಮುಚ್ಚಿ ಕೂತಳು.

‘ಏನ್ ಮಾತಾಡ್ಬೇಕು ನಿನ್ ಹತ್ರ? ಅದೇ ಯಾವನೋ ಯಾವಳ್ನೋ ಲವ್ ಮಾಡ್ದ. ಇನ್ಯಾವನೋ ಇನ್ಯಾವಳ್ಗೋ ಡೌ ಹೊಡ್ದ. ಇಷ್ಟೇ ತಾನೇ?’
‘ಅಯ್ಯ!ನಾನೆಲ್ಲಿ ಆ ವಿಷಯಗಳನ್ನೆಲ್ಲ ಹೇಳೋಕೆ ಬಂದೆ? ನೀನ್ ಅಳ್ತಿದ್ದೆ ಅಂತ ಯಾರೋ ಹೇಳಿದ್ರು ಅದಕ್ಕೆ ಗಾಬರಿಯಾಗಿ ಹಾಗೆ ಕೇಳಿದೆ. ನೀನ್ ಬೇರೆ ಮಾತಾಡೋದು ನಿಲ್ಸಿಬಿಟ್ಟಿದೀಯಾ?’
‘ಹೌದು. ಮಾತಾಡ್ಬೇಕು ಅನ್ಸಲ್ಲ. ಅದಕ್ಕೆ ಮಾತಾಡಲ್ಲ’
‘ರಶ್ಮಿ. ಕಡ್ಡಿ ತುಂಡು ಮಾಡಿದ ಹಾಗೆ ಮಾತಾಡಬೇಡ ಕಣೆ. ಏನಾಯ್ತು ಹೇಳೇ’
‘ಏನಾಗ್ಬೇಕಾಗಿತ್ತು ಈಗ?’
‘ಮಾತಾಡ್ತಾ ಇಲ್ಲವಲ್ಲ ನೀನು?’
‘ಹೌದು. ಬಿಸಿಲು ಬಹಳ ಇದೆ. ಅದಕ್ಕೆ ಮಾತಾಡೋಕೆ ಬೇಜಾರು’
ವಿಜಿಗೆ ಈ ಉತ್ತರವನ್ನು ಕೇಳಿ ಒಂದು ನಿಮಿಷ ತಲೆಯೆಲ್ಲಾ ಧಿಂ ಎಂದಿತು. ಬೇಸಿಗೆ ಅಂತ ಯಾರಾದ್ರೂ ಮಾತಾಡೋದು ನಿಲ್ಲಿಸ್ತಾರಾ? ಬಿಸಿಲು ಅಂತ ಮಾತಾಡೋದು ನಿಲ್ಲಿಸಿ ಎಲ್ಲಾ ಮಾತನ್ನೂ ಚಳಿಗಾಲದಲ್ಲಿ ಆಡೋಕೆ ಆಗುತ್ತಾ? ಮಳೆಗಾಲದಲ್ಲಿ ಏನು ಮಾಡ್ಬೇಕು ಹಾಗಾದ್ರೆ?
‘ಲೈ! ಬೇಕಾದ್ರೆ ಮಾತಾಡು. ಇಲ್ಲಾಂದ್ರೆ ಕತ್ತೆ ಬಾಲ. ಬೇಸ್ಗೆ ಅಂತ ಮಾತಾಡಲ್ವಂತೆ. ಯಾರಿಗ್ ಹೇಳ್ತಿದೀಯಾ ಈ ಕಥೆನೆಲ್ಲಾ? ತಮಾಷೆಗೆ ಕೇಳ್ತಾ ಇದ್ದೀನಾ?’ ವಿಜಿ ಗದರಿದಳು.

ಅವಳ ಮಾತು ಮುಗಿಯುವುದಕ್ಕೆ ಮುನ್ನವೇ ರಶ್ಮಿಯ ಕಣ್ಣಿಂದ ನೀರು ತೊಟ್ಟಿಕ್ಕಿತು. ಅದನ್ನ ನೋಡಿ ವಿಜಿಯೂ ಗಾಬರಿಯಾದಳು.
‘ಏನಾಯ್ತೇ ರಶ್ಮಿ? ಯಾಕೇ ಮಾತಾಡಲ್ಲ? ನಾವೇನಾದರೂ ತಪ್ಪು ಮಾಡಿದ್ವೇನೆ? ಯಾರಾದ್ರೂ ಏನಾದ್ರೂ ಅಂದ್ರೇನೆ? ಪ್ಲೀಸ್ ಮಾತಾಡೇ!’
ರಶ್ಮಿಯ ಅಳು ಉಮ್ಮಳಿಸಿ ಬಂತು. ತಡೆಯುವ ಯಾವ ಪ್ರಯತ್ನವೂ ಸಫಲವಾಗುವಂತಿರಲಿಲ್ಲ. ಭೋರ್ಗರೆವ ಜಲಪಾತಕ್ಕೆ ಬಿದಿರು ಚಾಪೆ ಅಡ್ಡ ಹಿಡಿದರೆ ಅದರ ಸೆಳಹು ಕಡಿಮೆಯಾದೀತೆ? ಆ ನೀರಿಗೆ, ಅದರ ರಭಸಕ್ಕೆ ಚೆಲ್ಲಾಪಿಲ್ಲಿಯಾದ ಚಾಪೆಯ ತುಂಡುಗಳೂ ಸಿಕ್ಕಲಿಕ್ಕಿಲ್ಲ. ಕಣ್ಣೀರೆಲ್ಲಾ ಖಾಲಿಯಾಗಿ ಬರೀ ದುಕ್ಕಳಿಕೆ ಮಾತ್ರ ಉಳಿದಾಗ ವಿಜಿ ಮತ್ತೆ ಕೇಳಿದಳು.

‘ಏನಾಯ್ತೇ? ಶಿವರಾಜ ಮತ್ತೆ ಏನಾದ್ರೂ ಅಂದನೇನೆ?’
‘ಇಲ್ಲ. ಪಾಪ ಅವ್ನು ಸುಮ್ಮನಾಗಿದ್ದಾನೆ. ಈಗ ನನ್ ತಂಟೆಗೇ ಬರಲ್ಲ’
‘ಮತ್ತೆ ಯಾಕೇ ಇಷ್ಟು ದುಃಖ ರಶ್ಮಿ?’
‘ಮನೇಲಿ ನಮ್ಮಪ್ಪ ಅಮ್ಮ ಬಹಳ ಜಗಳಾಡ್ತಾರೆ ಕಣೆ’
‘ಮನೇಲಿ ಜಗಳಾಡಿದ್ರೆ ನಿನಗೇನೆ ತೊಂದರೆ? ಎಲ್ಲರ ಅಪ್ಪ ಅಮ್ಮಾನೂ ಜಗಳಾಡ್ತಾರೆ ಕಣೆ’
‘ಅದು ಹಾಗಲ್ಲ. ವಿಷಯ ಸ್ವಲ್ಪ ಮಿತಿ ಮೀರಿದೆ’
‘ಏನಾಗಿದೆ ಅಂತ ಹೇಳು ಪ್ಲೀಸ್. ನಾವೆಲ್ಲಾ ಫ್ರೆಂಡ್ಸ್ ಅಲ್ವಾ?’
‘ನಮ್ಮಮ್ಮ ಫೋನ್ ಮಾಡಿದ್ರು. ಡೈವೋರ್ಸ್ ತಗೊಳಕ್ಕೆ ಲಾಯರ್ ಭೇಟಿ ಮಾಡ್ತಿದೀನಿ ಅಂತ’
‘ಸುಮ್ಮನೆ ಹೇಳ್ತಾರೇನೋ ಕಣೇ’
‘ಇಲ್ಲ, ಬಹಳ ವರ್ಷಗಳಿಂದ ಇದೇ ಗೋಳು. ಒಬ್ಬರನ್ನ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ. ಅಲ್ಲದೆ ನಮ್ಮಪ್ಪ ಅಮ್ಮನ್ನ ಬಹಳ ಕೀಳಾಗಿ ನಡೆಸಿಕೊಳ್ತಾರೆ. ನಿಂಗೆ ‘ಕ್ಲಾಸ್’ ಇಲ್ಲ. ಒಂಥರಾ ಲೋ ಕೆಟಗರಿ ನೀನು ಅಂತ’
‘ಅದ್ಯಾಕೆ ಹಂಗೆ?’
‘ನಮ್ಮಮ್ಮನೂ ಬಹಳ ಅರ್ಥಮಾಡ್ಕೊಳ್ಳಕ್ಕೆ ಪ್ರಯತ್ನ ಮಾಡಿದ್ರು.

ಆದರೆ ದಿನಾ ಇದೇ ಗೋಳು. ಇದು ವ್ಯಕ್ತಿತ್ವಗಳ ಪ್ರಾಬ್ಲಂ ಅಂತ ಯಾರೋ ಕೌನ್ಸಿಲರ್ ಹೇಳಿದ್ರಂತೆ. ಅಮ್ಮನೂ ಅಡ್ಜಸ್ಟ್ ಆಗಕ್ಕೆ ನೋಡಿದ್ರು. ಆದರೆ ಅಮ್ಮನಿಗೆ ತಮ್ಮ ವ್ಯಕ್ತಿತ್ವದ ಬಗ್ಗೆನೇ ಪ್ರಶ್ನೆಗಳು ಶುರುವಾಗಿ ಬಿಟ್ಟಿವೆ. ಇಲ್ಲೇ ಇದ್ರೆ ನಾನು ಹುಳ ಹಿಡಿದು ಸಾಯ್ತೀನಿ. ಅದಕ್ಕಿಂತ ನನ್ ದಾರಿ ನಾನ್ ನೋಡ್ಕೊಳೋದು ವಾಸಿ ಅಂದ್ರು’
‘ಯಾವಾಗ ಹಾಕ್ತಾರಂತೆ ಡೈವೋರ್ಸಿಗೆ?’
‘ಅದೇ ಈ ವಾರ ಲಾಯರ್ ಅನ್ನು ನೋಡ್ತೀನಿ ಅಂದ್ರು. ನಮ್ಮಪ್ಪ ಬಹಳ ಹೊಡೆದುಬಿಟ್ಟಿದಾರೆ ಅಮ್ಮನಿಗೆ’
‘ಮನೆಗೆ ಹೋಗ್ತೀಯೇನೆ?’
‘ಇಲ್ಲ. ಅಲ್ಲಿಗೆ ಹೋಗಕ್ಕೆ ಭಯ ಕಣೆ. ಅದನ್ನೆಲ್ಲಾ ನನ್ ಕೈಲಿ ನಿಭಾಯಿಸಕ್ಕೆ ಆಗಲ್ಲ. ರಾತ್ರಿ ಎಲ್ಲಾದ್ರೂ ನನ್ನ ಕುತ್ತಿಗೆ ಹಿಸುಕಿಬಿಟ್ರೆ ಅಂತ ಭಯ ಆಗುತ್ತೆ. ಇಲ್ಲೇ ಬೆಟರ್. ನಮ್ಮಮ್ಮ ಅಲ್ಲೇ ಫ್ರೆಂಡ್ ಮನೆಗೆ ಹೋಗಿ ಉಳ್ಕೊಂಡಿದಾರೆ, ಅಪ್ಪನ್ ಕೈಲಿ ಹೊಡ್ಸ್ಕೊಂಡ ಮೇಲೆ. ಹಣೆ ಮೇಲೆ ಮೂರು ಸ್ಟಿಚ್ ಹಾಕಿದಾರಂತೆ’
‘ಛೇ! ಪಾಪ ಕಣೇ’
‘ನಾನೂ ಅದಕ್ಕೆ ಲಾಯರನ್ನ ನೋಡಕ್ಕೆ ಡಿಲೇ ಮಾಡಬೇಡ ಅಂದಿದೀನಿ. ನಮ್ಮ ಸಲುವಾಗಿ ಅಮ್ಮ ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡು ಇದ್ದರು. ಆದರೆ, ಈಗ ನೋಡಿದರೆ ಎಲ್ಲಾ ಮಿತಿ ಮೀರುತ್ತಾ ಇದೆ.

ಅಮ್ಮ ದುಡೀತಾರೆ. ಅದಾದ ಮೇಲೂ ಅಪ್ಪ ಅವರನ್ನ ಸರಿಯಾಗಿ ನಡೆಸಿಕೊಳ್ಳಲ್ಲ. ಬೇಸಿಕಲಿ ಅವರಿಬ್ಬರ ನಡುವೆ ಪ್ರೀತಿ ಇಲ್ಲವೇ ಇಲ್ಲ. ಇರೋದೆಲ್ಲಾ ಬರೀ ಹೊಂದಾಣಿಕೆಗೆ ವಿರುದ್ಧವಾದ ಅಸಹನೆ, ನಾನು ನನ್ನ ತಮ್ಮ ಇದರಿಂದ ಬಹಳ ಕಷ್ಟಗಳನ್ನ ಅನುಭವಿಸಿದೀವಿ. ನಮಗೆ ಕಷ್ಟ ಆದಾಗ ಯಾರ ಹತ್ರನೂ ಹೇಳ್ಕೊಳೋಕಾಗದೆ ಒದ್ದಾಡಿದೀವಿ. ಅವಿಶ್ವಾಸ, ಬೇಜವಾಬ್ದಾರಿತನದಿಂದ ಹೀಗೆಲ್ಲಾ ಇರೋರು ಇಲ್ಲಾ ಮದುವೆ ಆಗಬಾರದು, ಅಥವಾ ಅಂಥವರಿಗೆ ಮಕ್ಕಳಿರಬಾರದು. ಸುಮ್ಮನೆ ಇವರಿಂದ ಎಲ್ಲರಿಗೂ ನೋವು.’ ಡೈವೋರ್ಸ್ ಎನ್ನುವುದು ವಿಜಿಗೆ ಸುಲಭದಲ್ಲಿ ಅರ್ಥವಾಗುವ ಪದವಾಗಿರಲಿಲ್ಲ.

ಏಕೆಂದರೆ ಬಹಳ ಹೊಂದಾಣಿಕೆ ಇರುವ ಗಂಡ ಹೆಂಡತಿಯರು ಸಿನಿಮಾದಲ್ಲಿ ಮಾತ್ರ ಇರುತ್ತಾರೆ ಎನ್ನುವುದು ಅವಳ ಬಲವಾದ ನಂಬಿಕೆಯಾಗಿತ್ತು. ಗಂಡ ಹೆಂಡತಿಯರು ಬೆಕ್ಕುಗಳು ಕಚ್ಚಾಡೋ ಹಾಗೆ ಇರುತ್ತಾರೆ ಅಂತ ಲಂಕೇಶರು ಎಲ್ಲೋ ಬರೆದದ್ದನ್ನೇ ಸತ್ಯವೆಂದು ಪ್ರತಿಪಾದಿಸುವ ಹಾಗೆ ಜೀವನ ನಡೆಸುತ್ತಿದ್ದ ನೂರಾರು ದಂಪತಿಗಳನ್ನು ತನ್ನ ಮನೆಯಲ್ಲಿ, ನೆರೆಹೊರೆಯಲ್ಲಿ ಕಂಡಿದ್ದಳು.

ಹೊಂದಾಣಿಕೆ ಇಲ್ಲ ಅಂತ ಡೈವೋರ್ಸ್ ಆಗುತ್ತಾ? ಅಂತ ಕೇಳುತ್ತಿದ್ದ ಕಾಲವದು. ರಶ್ಮಿಯೇ ಮದುವೆ ವಯಸ್ಸಿಗೆ ಬಂದಿದ್ದರೂ ಅವಳಪ್ಪ ಅಮ್ಮ ಇನ್ನೂ ಒಬ್ಬರನ್ನೊಬ್ಬರು ದ್ವೇಷಿಸುವಷ್ಟು ತ್ರಾಣ ಉಳಿಸಿಕೊಂಡಿದ್ದಾರಲ್ಲಾ ಎನ್ನುವುದು ಒಂದು ಸೋಜಿಗದ ವಿಷಯವಾಗಿತ್ತು. ಒಂದು ಬದಿಯಲ್ಲಿ ಡೈವೋರ್ಸಿನ ಚರ್ಚೆ ನಡೆಯುತ್ತಿದ್ದರೆ ಅದೇ ರೂಮಿನ ಇನ್ನೊಂದು ಬದಿಯಲ್ಲಿ ಯರ್ಲಗಡ್ಡ ಈಶ್ವರಿ ತನ್ನ ದೇಬಬ್ರತನ ಪ್ರೀತಿಯಲ್ಲಿ ಬೇಯುತ್ತಿದ್ದಳು. ಅವಳು ಅವನ ಮೇಲೆ ತನಗಿದ್ದ ಪ್ರೀತಿಯನ್ನು ಅವನಿಗೆ ಹೇಳಿ, ಅವನು ಸಿಕ್ಕಾಪಟ್ಟೆ ಥ್ರಿಲ್ಲಾಗಿ ಅವಳನ್ನು ಒಪ್ಪಿಕೊಂಡುಬಿಟ್ಟಿದ್ದ.

ಆದರೆ ಅವನ ಅಮ್ಮ ಒಪ್ಪುವವರೆಗೆ ತಾವಿಬ್ಬರೂ ಸ್ನೇಹಿತರು ಮಾತ್ರ ಎಂದೂ ಸ್ಪಷ್ಟವಾಗಿ ಹೇಳಿಬಿಟ್ಟಿದ್ದ. ಇವಳೂ ಆ ಮಾತಿಗೆ ಎದುರಾಡಿರಲಿಲ್ಲ. ರಶ್ಮಿ ವಿಜಿ ಮಾತುಗಳನ್ನು ಮುಗಿಸುವ ಹೊತ್ತಿಗೆ ಒಂಥರಾ ನಸುನಗುವನ್ನು ಹೊತ್ತು ಈಶ್ವರಿಯೂ ರೂಮಿನೊಳಕ್ಕೆ ಬಂದಳು.

ಇಷ್ಟೆಲ್ಲ ಜೀವನದಲ್ಲಿ ಘಟಿಸುವ ಹೊತ್ತಿಗೆ ಪಿಜಿ ಎರಡನೇ ವರ್ಷದ ಕ್ಲಾಸುಗಳು ನಡೆಯುತ್ತಿದ್ದವು. ಅದ್ಯಾರೋ ಪಿಎಚ್ಡಿ ಕ್ಯಾಂಡಿಡೇಟಿನ ಹತ್ತಿರ ಇಂದುಮತಿ ಗಾಢವಾದ ಸ್ನೇಹ ಬೆಳೆಸಿಕೊಂಡು ಆಗಾಗ ಮ್ಯಾಗಿ, ಉಪ್ಪಿಟ್ಟು, ಸಣ್ಣ ಪುಟ್ಟ ಪಲ್ಯಗಳು, ಸಾರುಗಳನ್ನು ಕುದುರಿಸಿಕೊಂಡು ರೂಮಿಗೆ ತರುತ್ತಿದ್ದಳು. ರೂಮಿನಲ್ಲಿ ಅಡುಗೆ ಮಾಡುವಂತಿಲ್ಲ ಎಂದು ಹಾಸ್ಟೆಲಿನಲ್ಲಿ ರೂಲು ಇದ್ದುದರಿಂದ ಇವನ್ನೆಲ್ಲ ಕದ್ದು ಮುಚ್ಚಿ ಸಾಗಿಸಬೇಕಿತ್ತು. ಪಿಜಿ ಗಳಿಗೆ ಇದ್ದ ರೂಲ್ಸು ಪಿಎಚ್ಡಿ ಸ್ಕಾಲರ್ರುಗಳಿಗೆ ಇಲ್ಲದಿದ್ದುದರಿಂದ ಅವರು ಅಡುಗೆ ಮಾಡಿಕೊಳ್ಳಬಹುದಿತ್ತು. ಅವರೊಂದಿಗೆ ಸ್ನೇಹ ಸಂಪಾದಿಸಿದವರು ಆಗಾಗ ಮನೆ ಊಟದಂಥಾ ಊಟ ಮಾಡಿ ಧನ್ಯರಾಗುತ್ತಿದ್ದರು.

ಎಲ್ಲರೂ ರೂಮಿನಲ್ಲಿದ್ದ ಸಮಯಕ್ಕೆ ಸರಿಯಾಗಿ ಇಂದುಮತಿ ಅಲ್ಲಾವುದ್ದೀನನ ದೀಪದ ಥರದ ಒಂದು ಗುಂಡು ಪಾತ್ರೆಯನ್ನು ರೂಮಿನೊಳಕ್ಕೆ ತಂದಳು. ಇಂದುಮತಿ ಗೌಡರ ಹುಡುಗಿಯಾದರೂ ನಿಜವಾದ ಅರ್ಥದಲ್ಲಿ ಶರಣೆಯಾಗಿದ್ದಳು. ಅವಳ ಜೀವನದಲ್ಲಿ ಅವಳಿಗೆ ಗೊತ್ತಿಲ್ಲದಂತೆಯೇ ಉನ್ನತ ಮಟ್ಟದ ವಚನಧರ್ಮಸಾರ ಮಿಳಿತವಾಗಿತ್ತು. ಯಾರ ಹತ್ತಿರ ತಿನ್ನಲು ಏನೇ ಸಿಗಲಿ, ರೂಮಿಗೆ ತಂದು ಎಲ್ಲರಿಗೂ ಹಂಚಿ ತಿನ್ನಲು ಹವಣಿಸುತ್ತಿದ್ದಳು. ಹಾಗಂತ ತಿನ್ನುವ ಯಾವ ಪದಾರ್ಥವನ್ನು ಇಟ್ಟು ಯಾರ ದಾರಿಯನ್ನೂ ಕಾಯುತ್ತಿರಲ್ಲ. ಸಮಯಕ್ಕೆ ಸರಿಯಾಗಿ ಸಿಕ್ಕವರಿಗೆ ಸೀರುಂಡೆ ಅಷ್ಟೆ.

‘ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವೆಲ್ಲವ’
ಎನ್ನುವ ಬಸವಣ್ಣನವರ ವಚನದ ಆಶಯಕ್ಕೆ ಸರಿಯಾಗಿ ಆ ಗುಂಡು ಪಾತ್ರೆಯಲ್ಲಿದ್ದ ಮಸಾಲೆ ಭರಿತ ದ್ರವವನ್ನು ಎಲ್ಲರೂ ಸವಿಯಲೆಂಬ ಆಶೆಯಿಂದ ಶಬಾನಾ ಎನ್ನುವ ಸ್ಕಾಲರ್ರು ಮಾಡಿದ ಈ ಮೇಲೋಗರವನ್ನು ಬಹು ತಂದಿದ್ದಳು.

ಮುಚ್ಚಳ ತೆಗೆದ ತಕ್ಷಣ ಎಲ್ಲರಿಗೂ ಜೀವನದ ಕಷ್ಟಗಳು ಮರೆತುಹೋಗುವ ಹಾಗೆ ರೂಮೆಲ್ಲಾ ಘಂ ಎಂಬ ಪರಿಮಳ ಆವರಿಸಿ ಹೊಟ್ಟೆ ತಮಗರಿವಿಲ್ಲದೆಯೇ ಹಸಿಯತೊಡಗಿತು.
‘ಏನೇ ಇದು ಇಂದೂ?’ ವಿಜಿ ವಾಸ್ತವಕ್ಕೆ ಎಲ್ಲರನ್ನೂ ಕರೆತಂದಳು.

‘ಕುದುರೆ ಸಾರು’
‘ಹಾಂ?’
‘ಹೌದು. ಹಾರ್ಸ್ ಕರಿ ಅಂತ ಶಬಾನಾನೇ ಹೇಳಿ ಕೊಟ್ಟಿದ್ದು. ಕುದುರೆ ಅವರ ಮನೇದೇ ಅಂತೆ. ಅವರ ಊರಲ್ಲೇ ಬ್ರೀಡ್ ಮಾಡ್ತಾರಂತೆ’
‘ಚಿಕನ್, ಮಟನ್, ಪೋರ್ಕ್ ಎಲ್ಲಾ ಕೇಳಿದ್ದೆ. ಆದರೆ ಕುದುರೆ ಸಾರು ಕೇಳಿರಲಿಲ್ಲ’
‘ನೀನ್ ವೆಜ್ಜಲ್ವಾ? ನಿಂಗೇನ್ ಗೊತ್ತು ನಾನ್ ವೆಜ್ಜಿನ ಮಜಾ?’
‘ಆಯ್ತಮ್ಮಾ. ಊಟದ ರುಚಿ ನಿಮಗೇ ಗೊತ್ತು. ಒಪ್ಪಿದೆ. ಈಗ ಇದನ್ನ ಯಾವುದಕ್ಕೆ ಹಾಕ್ಕೊಂಡು ತಿನ್ಬೇಕು?’
‘ಅನ್ನ ತಗೊಂಬಾ ಮೆಸ್ಸಿಂದ’
ವಿಜಿ ಅನ್ನ ತರಲು ಹೋದಾಗ ಒಂದು ವಿಲಕ್ಷಣ ಘಟನೆ ನಡೆಯಿತು. ಈಶ್ವರಿ ಸ್ವಲ್ಪ ಹೊತ್ತಿಗೆ ಮುಂಚೆ ತಾನು ಅಷ್ಟು ಪ್ರೀತಿಸುತ್ತಿದ್ದ ದೇಬಬ್ರತನ ಮುಖಕ್ಕೆ ಮಂಗಳಾರತಿ ಮಾಡಿಬಂದಿದ್ದನ್ನ ಎಲ್ಲರಿಗೂ ಹೇಳಿದಳು.

ಅವನು ಇವಳನ್ನ ತನ್ನ ಅಮ್ಮನ್ನ ಭೇಟಿಗೆ ಕರೆದೊಯ್ದಿದ್ದಾನೆ. ಇವಳು ಆಂಧ್ರದವಳು. ಸ್ವಲ್ಪ ಕಪ್ಪಗಿದ್ದಳು. ಅಲ್ಲದೆ ಸ್ವಲ್ಪ ದಪ್ಪಗೂ ಇದ್ದಳು. ಇವಳನ್ನು ನೋಡಿದ ದೇಬನ ಅಮ್ಮ ‘ಹುಡುಗಿ ಪರ್ವಾಗಿಲ್ಲ. ಅವರಪ್ಪನ ಹತ್ತಿರ ಡೌರಿ ಕೊಡ್ಬೇಕು ಅಂತ ತಿಳಿಸಕ್ಕೆ ಹೇಳು. ಆಮೇಲೆ ಅವಳಿಗೆ ಸ್ವಲ್ಪ ಸಣ್ಣ ಆಗಕ್ಕೆ ಹೇಳು’ ಅಂತ ಹೇಳಿದರಂತೆ. ಮನೆಯಿಂದ ಬಂದ ತಕ್ಷಣ ದೇಬ ಕಾಫೀ ಹೌಸಿನಲ್ಲಿ ಕೂತು ಇವಳ ಮುಂದೆ ತನ್ನ ತಾಯಿ ಹೇಳಿದ್ದನ್ನ ಹೇಳಿದ.

‘ನಾನು ಡೈವೋರ್ಸಿ ಅಂತ ಹೇಳಿದ್ದೆಯಾ?’
‘ಇಲ್ಲ. ಅದನ್ನ ಹೇಳಿದರೆ ನನ್ನ ಅಮ್ಮ ಒಪ್ಪೋದೇ ಇಲ್ಲ’
‘ದೇಬ, ನೀನು ನನಗೆ ಇಷ್ಟ. ಹಂಗಂತ ನಾನು ನಿನ್ ಅಳತೆಗೆ ಫಿಟ್ ಆಗೋ ಹಾಗೆ ಬರೋ ಬಟ್ಟೆಯ ಪೀಸಲ್ಲ. ಅಲ್ಲದೆ, ಸುಳ್ಳಿನ ಮೇಲೆ ಮದುವೆಗಳು ನಡೆಯೋದೂ ಇಲ್ಲ, ನಿಲ್ಲೋದೂ ಇಲ್ಲ. ನೀನು ನಿನ್ನ ಅಮ್ಮ ನೋಡಿದ ಹುಡುಗಿಯನ್ನೇ ಮದುವೆಯಾಗಿ ಸುಖವಾಗಿರು’ ಎಂದು ಹೇಳಿ ಎದ್ದು ಬಂದಿದ್ದಳು.

ಇದನ್ನು ಈಶ್ವರಿ ಹೇಳಿದ ಕೂಡಲೇ ರಶ್ಮಿಯ ಮುಖದಲ್ಲಿ ಮಂದಹಾಸ ಮೂಡಿತು. ಇಂದುಮತಿ ಜೋರಾಗಿ ನಗಲು ಶುರು ಮಾಡಿದಳು. ವಿಜಿ ಮಾತ್ರ ಅನ್ನ ತಂದು ಬಾಗಿಲಲ್ಲಿ ತಬ್ಬಿಬ್ಬಾಗಿ ನಿಂತಿದ್ದಳು.

‘ಏನಾಯ್ತ್ರೆ?’
‘ಏನಿಲ್ಲ. ಕುದುರೆ ಸಾರಿಗೆ ಹೊಟ್ಟೆ ಕಾಯ್ತಾ ಇದೆ. ಹೇಳ್ತೀವಿ ಬಾ’
‘ಅಲ್ಲಾ ಇದು ನಿಜವಾಗ್ಲೂ ಕುದುರೆ ಸಾರಾ?’ ಮುಖ ಕಿವಿಚಿಕೊಂಡು ವಿಜಿ ಕೇಳಿದಳು.

‘ಅಯ್ಯ ಕುದುರೆ ಅಲ್ಲದಿದ್ರೆ ಅದಕ್ಕೆ ಹಾಕೋ ಕಾಳಿನ ಸಾರು ಕಣೆ. ಹುರುಳೀ ಕಾಳು ಕೇಳಿದ್ದೀಯಾ? ಅದರದ್ದು ಸಾರು ನಿನ್ ಪಾಲಿನದ್ದೂ ನಾನೇ ಬಾರಿಸಿಬಿಡೋಣ ಅಂತ ಹಂಗೆ ಹೇಳಿದೆ’
‘ಥೂ ಬೋಸುಡಿ! ಹುರುಳಿಕಾಳಿನ ಸಾರು ನಂ ನ್ಯಾಷನಲ್ ಐಡೆಂಟಿಟಿ ಕಣೇ. ಮುಚ್ಕೊಂಡು ನನ್ ಪಾಲಿಂದ್ ನಂಗೆ ಕೊಡು’
‘ಚಿಯರ್ಸ್! ಲಾಂಗ್ ಲಿವ್ ಡೈವೋರ್ಸ್! ಲಾಂಗ್ ಲಿವ್ ಮೈ ಗರ್ಲ್ಸ್!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.