ಭಾರತದ ಮುಕ್ತ ಮತ್ತು ದೂರಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಮೂಡಿರುವ ಬಿಕ್ಕಟ್ಟಿಗೆ ಕಾರಣವೇನು? 2009ರ ನಂತರ ದೂರಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯನ್ನು (ಭೌಗೋಳಿಕವಾಗಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ) ಸೀಮಿತಗೊಳಿಸಲು ಹೊಸ ನೀತಿಗಳು ರೂಪುಗೊಂಡಿವೆ. ಜೂನ್ 2013ರ ನಂತರ ಹೊಸ ನೀತಿಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯು.ಜಿ.ಸಿ.) ಹೊತ್ತುಕೊಂಡಿತು. ಹೀಗಾಗಿ ಈ ನೀತಿಗಳನ್ನು ಉಲ್ಲಂಘಿಸುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವೂ (ಕ.ರಾ.ಮು.ವಿ.) ಸೇರಿದಂತೆ ನೂರಾರು ಸಂಸ್ಥೆಗಳ ಶೈಕ್ಷಣಿಕ ಕಾರ್ಯಕ್ರಮಗಳಿಗೆ 2015–16ರ ಸಾಲಿಗೆ ಮಾನ್ಯತೆಯನ್ನು ನವೀಕರಿಸಿಲ್ಲ.

ದೂರಶಿಕ್ಷಣ ಸಂಸ್ಥೆಗಳು ಈ ಹೊಸನೀತಿಗಳನ್ನು ಏಕೆ ಉಲ್ಲಂಘಿಸುತ್ತಿವೆ? ದೂರಶಿಕ್ಷಣದ ಕಾರ್ಯಕ್ರಮಗಳನ್ನು ನಡೆಸುತ್ತಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳು, ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಯು.ಜಿ.ಸಿ.ಯ ನಿಯಮಗಳನ್ನು ಪಾಲಿಸಿದರೆ ಆದಾಯದ ಮೂಲಗಳು ಕಡಿಮೆಯಾಗುತ್ತವೆ. ಆದ್ದರಿಂದಲೇ ಈ ನೀತಿಗಳ ಅನುಷ್ಠಾನವನ್ನು ಮೊದಲು ಪ್ರಾರಂಭಿಸಿದ ದೂರಶಿಕ್ಷಣ ಮಂಡಳಿಯ (ಡಿ.ಇ.ಸಿ.) ವಿರುದ್ಧ ಕ.ರಾ.ಮು.ವಿ. ಮತ್ತು ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯಗಳು ಕಾನೂನಿನ ಹೋರಾಟವನ್ನು 2012ರಲ್ಲಿ ಪ್ರಾರಂಭಿಸಿದವು. ದೆಹಲಿಯ ಉಚ್ಚನ್ಯಾಯಾಲಯದಲ್ಲಿ ಕ.ರಾ.ಮು.ವಿ. ಹೂಡಿದ್ದ ಮೊಕದ್ದಮೆ ಕುಂಟುತ್ತಲೇ ನಡೆದಿದ್ದರೆ, ಸಿಕ್ಕಿಂ ಉಚ್ಚನ್ಯಾಯಾಲಯವು 2015ರ ಜೂನ್‌ನಲ್ಲಿ ತನ್ನ ತೀರ್ಪನ್ನು ನೀಡಿತು.

ಇದರಲ್ಲಿ ಯು.ಜಿ.ಸಿ.ಯ ನಿಯಂತ್ರಕ ಸ್ಥಾನಮಾನವನ್ನು ನ್ಯಾಯಾಲಯ ಎತ್ತಿಹಿಡಿಯಿತು. ಆದರೆ ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದಿಂದ ಇದುವರೆಗೆ ನೀಡಲಾಗಿರುವ ಪದವಿಗಳಿಗೆ ಮಾನ್ಯತೆಯನ್ನು ನೀಡುವಂತೆ ಯು.ಜಿ.ಸಿ.ಗೆ ಸೂಚನೆ ನೀಡಿ, ಇಲ್ಲಿಯವರೆಗೆ ಪದವಿ ಪಡೆದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನೂ ರಕ್ಷಿಸಿತು. ಈ ಎರಡನೆಯ ಅಂಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಯು.ಜಿ.ಸಿ. ಸಲ್ಲಿಸಿದ ಅರ್ಜಿಯೂ ವಜಾ ಆಗಿದೆ. ಅಂದರೆ ದೂರಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ಯು.ಜಿ.ಸಿ.ಗೆ ಅಧಿಕಾರವಿದೆ. ಆದರೆ ಇಲ್ಲಿಯವರೆಗಿನ ವ್ಯವಸ್ಥೆಯಲ್ಲಿ ಪಡೆದ ಪದವಿಗಳಿಗೆ ಮಾನ್ಯತೆಯೂ ಇದೆ ಎಂಬುದನ್ನು ನ್ಯಾಯಾಲಯಗಳೂ ಎತ್ತಿ ಹಿಡಿದಿವೆ.

ಯು.ಜಿ.ಸಿ.ಯ ಪರಮೋಚ್ಚ ಸ್ಥಾನಮಾನವನ್ನು ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯ ಮತ್ತು ಕ.ರಾ.ಮು.ವಿ.ಯೂ ಸೇರಿದಂತೆ ಎಲ್ಲ ಸಂಸ್ಥೆಗಳೂ ಒಪ್ಪುತ್ತಿವೆ. ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯವೂ ಸಿಕ್ಕಿಂನ ಹೊರಗಿರುವ ತನ್ನ ಅಧ್ಯಯನ ಕೇಂದ್ರಗಳನ್ನು ಮುಚ್ಚಿದೆ. ಇಷ್ಟಾದರೂ ಅದರ ದೂರಶಿಕ್ಷಣ ಕಾರ್ಯಕ್ರಮಗಳ ಭವಿಷ್ಯದ ಬಗ್ಗೆ ಯಾವ ನಿರ್ಧಾರವನ್ನೂ ಯು.ಜಿ.ಸಿ. ಇನ್ನೂ ಕೈಗೊಂಡಿಲ್ಲ. ಹೀಗೆ ಯು.ಜಿ.ಸಿ.ಯ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಹೀಗನ್ನಿಸುತ್ತಿದೆ: ಅದರ ನೀತಿಗಳು ದೂರಶಿಕ್ಷಣ ಕ್ಷೇತ್ರಕ್ಕೆ ಒಳಿತನ್ನು ಮಾಡುವ ಉದ್ದೇಶದಿಂದ ರೂಪುಗೊಂಡಿವೆ ಎಂಬುದು ನಿಜ. ಆದರೆ ಅದನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಶಕ್ತಿಯನ್ನು, ಅದರಲ್ಲೂ ಮಾನವ ಸಂಪನ್ಮೂಲಗಳನ್ನು, ಯು.ಜಿ.ಸಿ. ಬಹುಶಃ ಹೊಂದಿಲ್ಲ. ಇಲ್ಲದಿದ್ದರೆ ನಿತ್ಯಕ್ರಮದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟೆಲ್ಲ ಸಮಯ ಬೇಕಾಗಿರಲಿಲ್ಲ.

ಕ.ರಾ.ಮು.ವಿ. ವಿಚಾರದಲ್ಲಿಯೂ ಇದೇ ಆಗಿರುವುದು. 2009ರ ನಂತರದ ಹೊಸನೀತಿಗಳನ್ನು ಕ.ರಾ.ಮು.ವಿ. ಅನುಷ್ಠಾನ ಮಾಡಲಿಲ್ಲ. ಬದಲಿಗೆ ವಿರೋಧಿಸಿ ಕಾನೂನಿನ ಹೋರಾಟ ಪ್ರಾರಂಭಿಸಿತು. ಜೊತೆಗೆ ನೂರಾರು ಸಹಭಾಗಿತ್ವದ ಸಂಸ್ಥೆಗಳೊಡನೆ ಒಪ್ಪಂದ ಮಾಡಿಕೊಂಡು, ದೇಶದಾದ್ಯಂತ ತನ್ನ ಹೆಸರಿನಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಟ್ಟಿತು. ಇದರಿಂದ ಯು.ಜಿ.ಸಿ. ನಿಯಮಗಳ ಉಲ್ಲಂಘನೆಯಾಯಿತು ಎನ್ನುವುದಕ್ಕಿಂತ ಅಷ್ಟೇನೂ ಅಪೇಕ್ಷಣೀಯವಲ್ಲದ ಜವಾಬ್ದಾರಿರಹಿತ ವ್ಯವಸ್ಥೆಯೊಂದನ್ನು ಸೃಷ್ಟಿಸಿದಂತಾಯಿತು. ಆದರೆ ಜೂನ್ 2015ರ ನಂತರ ಯು.ಜಿ.ಸಿ.ಯ ಪರಮಾಧಿಕಾರವನ್ನು ಕ.ರಾ.ಮು.ವಿ. ಯಾವುದೇ ಷರತ್ತಿಲ್ಲದೆ ಒಪ್ಪಿದೆ. ಯು.ಜಿ.ಸಿ.ಯು ಕೇಳಿದ ನಾಲ್ಕು ಪ್ರಮಾಣ ಪತ್ರಗಳನ್ನೂ ಅದರ ಅಧಿಕಾರಿಗಳು ಕೇಳಿದ ರೀತಿಯಲ್ಲಿಯೇ ವಿಶ್ವವಿದ್ಯಾಲಯವು ನೀಡಿದೆ.

ಹೊಸ ಪ್ರಮಾಣ ಪತ್ರಗಳನ್ನು ಯು.ಜಿ.ಸಿ.ಯ ಅಧಿಕಾರಿಗಳು ಕೇಳುವಾಗ, ಅದರ ಸಾರ್ವಜನಿಕ ಸೂಚನೆಯಲ್ಲಿಲ್ಲದ ಇತರೆ ವಿಚಾರಗಳ ಬಗ್ಗೆ ಅವರು ಪ್ರಸ್ತಾಪ ಮಾಡಿದರು ಎಂಬುದು ಇಲ್ಲಿ ಗಮನಾರ್ಹ. ಉದಾಹರಣೆಗೆ ಕರ್ನಾಟಕದಾಚೆಗಿರುವ ಖಾಸಗಿ ಸಹಭಾಗಿತ್ವದ ಸಂಸ್ಥೆಗಳನ್ನು ಮುಚ್ಚುವ ಬಗ್ಗೆ ಮೊದಲು ಪ್ರಮಾಣಪತ್ರ ನೀಡುವಂತೆ ಕೇಳಿದರೆ, ಮುಂದೆ ಖಾಸಗಿ ಸಹಭಾಗಿತ್ವದ ವ್ಯವಸ್ಥೆಯನ್ನು ಕರ್ನಾಟಕದೊಳಗೂ ಅಂತ್ಯಗೊಳಿಸುವುದಾಗಿ ಬರೆದುಕೊಡುವಂತೆ ಸೂಚಿಸಿದರು. ಹಾಗೆಯೇ, ಕ.ರಾ.ಮು.ವಿ.ಯ ಸ್ಥಾಪನೆಗೆ ಕಾರಣವಾದ 1992ರ ಕಾಯಿದೆಗೆ ತಿದ್ದುಪಡಿ ತರುವ ವಿಚಾರವನ್ನೂ ನಂತರದಲ್ಲಿ ಎತ್ತಿದರು. ಈ ವಿಚಾರ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಗೆ ಹೊರತಾದುದು ಮತ್ತು ರಾಜ್ಯ ಸರ್ಕಾರದ ಹಾಗೂ ಶಾಸನಸಭೆಯ ವಿವೇಚನೆಗೆ ಬಿಟ್ಟಿದ್ದು ಎಂಬುದನ್ನು ಯು.ಜಿ.ಸಿ.ಯ ಅಧಿಕಾರಿಗಳು ಗಮನಿಸಲಿಲ್ಲ.

ಈ ವಿವರಗಳು ಓದುಗರಿಗೆ ಅನವಶ್ಯಕವೆನಿಸಬಹುದು. ಆದರೆ ನಾನಿಲ್ಲಿ ಗುರುತಿಸಬಯಸುವ ಅಂಶವಿದು. ದೂರಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಮಾನ್ಯ ತತ್ವ-ನೀತಿಗಳನ್ನು ಯು.ಜಿ.ಸಿ. ರೂಪಿಸಿಕೊಂಡಿದ್ದರೂ ಪ್ರತಿಯೊಂದು ಸಂಸ್ಥೆಗೂ ಇವುಗಳನ್ನು ಅನ್ವಯಿಸುವಾಗ ಹೊಸ ಮತ್ತು ನಿರ್ದಿಷ್ಟ ಸವಾಲುಗಳನ್ನು ಎದುರಿಸುತ್ತಿದೆ. ಆದ್ದರಿಂದಲೇ ಸಿಕ್ಕಿಂ ಮಣಿಪಾಲ್ ವಿಶ್ವವಿದ್ಯಾಲಯದ ಪರವಾಗಿ ವಾದಿಸಿದ ಪ್ರಖ್ಯಾತ ವಕೀಲ ಗೋಪಾಲ್ ಸುಬ್ರಮಣ್ಯಂ ಯು.ಜಿ.ಸಿ.ಯ ನಿರ್ದಿಷ್ಟ ನೀತಿಗಳು ಅಸ್ಪಷ್ಟತೆಯಿಂದ ಕೂಡಿವೆ ಮತ್ತು ಬದಲಾಗುತ್ತಲೇ ಇವೆ ಎಂದು ವಾದಿಸಿದರು. ಯು.ಜಿ.ಸಿ. ನಿರೀಕ್ಷಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಹಲವು ತಿಂಗಳುಗಳಿಂದ ಕ.ರಾ.ಮು.ವಿ.ಯಂತೆಯೇ ಮಾನ್ಯತೆಗಾಗಿ ಕಾಯುತ್ತಿರುವ ನೂರಾರು ಸಂಸ್ಥೆಗಳಿವೆ. ಯು.ಜಿ.ಸಿ. ಸಹ ಮಿತಿಗಳನ್ನು ಹೊಂದಿದೆ ಮತ್ತು ಅದರ ಕಾರ್ಯವೈಖರಿಯೂ ಕೆಲವೊಮ್ಮೆ ಪ್ರಶ್ನಾರ್ಹ ಎಂಬುದನ್ನು ನಾವಿಲ್ಲಿ ಮರೆಯಬಾರದು.

ಹೀಗೆ ಹೇಳಿದ ಮಾತ್ರಕ್ಕೆ ಕ.ರಾ.ಮು.ವಿ.ಯ ಆಡಳಿತವರ್ಗದ ಇಂದಿನ ಬಾಧ್ಯತೆಯನ್ನು ಮತ್ತು ಈ ಹಿಂದೆ ಮಾಡಿರುವ ನಿಯಮ ಉಲ್ಲಂಘನೆಗಳನ್ನು ನಾನು ನಿರ್ಲಕ್ಷಿಸುತ್ತಿಲ್ಲ. ಯು.ಜಿ.ಸಿ.ಯ ಪರಾಮಾಧಿಕಾರವನ್ನು, ಅದರ ಎಲ್ಲ ನೀತಿಗಳನ್ನು ಅನುಸರಿಸಲು ಈಗ ಕ.ರಾ.ಮು.ವಿ. ಒಪ್ಪಿದೆ. ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕರ್ನಾಟಕದೊಳಗೆ ಮಾತ್ರ ಯಾವುದೇ ಖಾಸಗಿ ಸಹಭಾಗಿತ್ವವಿಲ್ಲದೆ ತನ್ನ ಅಧ್ಯಯನ ಕೇಂದ್ರಗಳೊಡನೆ ನಡೆಸಲಿದೆ. ಕ.ರಾ.ಮು.ವಿ.ಯು ನೇರವಾಗಿ ಕರ್ನಾಟಕದೊಳಗೆ ನಡೆಸುತ್ತಿದ್ದ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಯಾವಾಗಲೂ ದೂರುಗಳಿರಲಿಲ್ಲ. ಈಗ ಮಾನ್ಯತೆ ನವೀಕರಣ ಆಗಿರಬೇಕಿರುವುದು ಈ ಕಾರ್ಯಕ್ರಮಗಳಿಗೆ ಮಾತ್ರ ಆಗಿರುವುದರಿಂದ, ಯು.ಜಿ.ಸಿ.ಯ ಮುಂದೆ ಯಾವ ಅಡಚಣೆಗಳೂ ಇಲ್ಲ.

ಇಷ್ಟಾದರೂ ತನ್ನ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯು.ಜಿ.ಸಿ. ಬಹುಶಃ ಪರಿಗಣಿಸುವ ಮೂರು ಪ್ರಶ್ನೆಗಳಿವು. ಮೊದಲಿಗೆ, ಇದುವರೆಗೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕ.ರಾ.ಮು.ವಿ.ಗೆ ಏನಾದರೂ ಶಿಕ್ಷೆ ನೀಡಬೇಕೆ? ಇದು ಯು.ಜಿ.ಸಿ.ಯ ವಿವೇಚನೆಗೆ ಬಿಟ್ಟ ವಿಷಯ. ಎರಡನೆಯದಾಗಿ, ಇದುವರೆಗೆ ಖಾಸಗಿ ಸಹಭಾಗಿತ್ವದ ಸಂಸ್ಥೆಗಳ ಮೂಲಕ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ರಮವನ್ನು ಪೂರ್ಣಗೊಳಿಸಿ, ಪದವಿ ಪಡೆಯಬಹುದೆ? ಯು.ಜಿ.ಸಿ. ಇದುವರೆಗೆ ಈ ವಿಚಾರವಾಗಿ ತಕರಾರು ಮಾಡಿಲ್ಲ. ಆದರೆ ಮುಂದೆ ಅಡ್ಡಿ ಮಾಡಿದರೆ ಆಶ್ಚರ್ಯವಿಲ್ಲ. ಆದರೆ ಇಂತಹ ವಿದ್ಯಾರ್ಥಿಗಳು ಪಡೆದ ಪದವಿಗಳ ಸ್ಥಾನಮಾನವೇನು ಎಂಬುದು ಅಸ್ಪಷ್ಟ. ಯಾಕೆಂದರೆ ಈ ಯಾವ ಕಾರ್ಯಕ್ರಮಗಳಿಗೂ ದೂರಶಿಕ್ಷಣ ಮಂಡಳಿಯ ಇಲ್ಲವೇ ಯು.ಜಿ.ಸಿ.ಯ ಮಾನ್ಯತೆ ಮೊದಲಿನಿಂದ ಇರಲಿಲ್ಲ.

ಮೂರನೆಯದಾಗಿ, ನೇರವಾಗಿ ಕ.ರಾ.ಮು.ವಿ.ಯ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪದವಿ ಪಡೆದ ಕರ್ನಾಟಕದ ವಿದ್ಯಾರ್ಥಿಗಳಿಗೆ, ಅದರಲ್ಲೂ 2013–14 ಮತ್ತು 2014–15ರಲ್ಲಿ ಪದವಿ ಪಡೆದವರಿಗೆ ಮಾನ್ಯತೆ ಲಭಿಸುವುದೆ? ಹಿಂದೆ ಈ ಕಾರ್ಯಕ್ರಮಗಳಿಗೆ ದೂರಶಿಕ್ಷಣ ಮಂಡಳಿಯ ಅನುಮತಿಯಿದ್ದ ಕಾರಣ ಕ.ರಾ.ಮು.ವಿ.ಯು ಘಟನೋತ್ತರ ಮಾನ್ಯತೆಗಾಗಿ ಬಲವಾದ ವಾದವನ್ನು ಮಂಡಿಸಬಹುದು. ಸಿಕ್ಕಿಮ್ ಉಚ್ಚ ನ್ಯಾಯಾಲಯದ ತೀರ್ಪು ಇಲ್ಲಿಯೂ ಅನ್ವಯವಾಗುತ್ತದೆ. ಹಾಗಾಗಿ ಕ.ರಾ.ಮು.ವಿ.ಯ ನೇರ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಕಿಲ್ಲ. ಕರ್ನಾಟಕ ರಾಜ್ಯಶಾಸನ ಸಭೆಯ ಕಾಯಿದೆಯಿಂದ ಅಸ್ತಿತ್ವ ಪಡೆದಿರುವ ಕ.ರಾ.ಮು.ವಿ. ತನ್ನ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಇಂದಲ್ಲ ನಾಳೆ ಮಾನ್ಯತೆಯನ್ನು ಪಡೆಯುತ್ತದೆ.

ನಿಜವಾಗಿಯೂ ಇಂದು ಚೆಂಡು ಯು.ಜಿ.ಸಿ.ಯ ಅಂಗಳದಲ್ಲಿದೆ. ನಿರ್ಧಾರ ತಡವಾಗುತ್ತಿದ್ದರೆ ಬಹುಶಃ ಅದಕ್ಕೊಂದು ಕಾರಣ ಕರ್ನಾಟಕದೊಳಗಿನಿಂದಲೇ ಹೊರಡುತ್ತಿರುವ ಅಪಸ್ವರಗಳು. ಕ.ರಾ.ಮು.ವಿ.ಯನ್ನು ಮುಚ್ಚುವಂತೆ ಮತ್ತು ಅದರ ಸಹಭಾಗಿತ್ವ ವ್ಯವಸ್ಥೆಯ ಬಗ್ಗೆ ಸಿ.ಬಿ.ಐ.ನಿಂದ ತನಿಖೆ ನಡೆಸುವಂತೆ ಬೇಡಿಕೆಗಳು ಬಂದಿವೆ. ವಿಶ್ವವಿದ್ಯಾಲಯದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ಯಾವುದೇ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಲು ಯಾರ ಅಭ್ಯಂತರವೂ ಇಲ್ಲ. ಆದರೆ ಇಂದು ಕ.ರಾ.ಮು.ವಿ.ಯನ್ನೇ ಮುಚ್ಚಬೇಕೆಂಬ ನಿಹಿಲಿಸ್ಟ್ ವಾದವನ್ನು ಒಪ್ಪುವುದು ಸ್ವಲ್ಪ ಕಷ್ಟ. ಇದಕ್ಕೆ ನಾನಲ್ಲಿ ಕೆಲಸ ಮಾಡುತ್ತೇನೆ ಎಂಬುದು ಕಾರಣವಲ್ಲ. ಕ.ರಾ.ಮು.ವಿ.ಯ ವೈಶಿಷ್ಟ್ಯದ ಬಗ್ಗೆ ಕಳೆದ ಮೂರು ವರ್ಷಗಳಲ್ಲಿ ನಾನು ಅರಿತಿರುವ ಸತ್ಯವಿದು.

ಕರ್ನಾಟಕ ಸಮಾಜದ ವೈವಿಧ್ಯತೆ (ಡೆಮೊಗ್ರಾಫಿಕ್ ಡೈವರ್ಸಿಟಿ)ಯನ್ನು ಪ್ರತಿನಿಧಿಸುವ ಏಕೈಕ ಶಿಕ್ಷಣ ಸಂಸ್ಥೆಯಿದು. ಶೇ 60ರಷ್ಟು ಮಹಿಳೆಯರು, ಶೇ 90ರಷ್ಟು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿರುವ ವಿಶ್ವವಿದ್ಯಾಲಯವಿದು. ನಗರಪ್ರದೇಶಗಳ ಉಳ್ಳವರಿಗಾಗಿ ಇರುವ ಸಂಸ್ಥೆಯಲ್ಲ. ಕ.ರಾ.ಮು.ವಿ. ಇರುವುದು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೊಳಗೆ ಅವಕಾಶ ಪಡೆಯಲು ಆಗದಿದ್ದವರಿಗೆ, ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ, ಮತ್ತು ತಮ್ಮ ವೃತ್ತಿಯಲ್ಲಿ ಮುಂದೆ ಬರಲು ಆಶಿಸುವ ಈಗಾಗಲೇ ಕೆಲಸದಲ್ಲಿರುವ ಶಿಕ್ಷಕರು ಮತ್ತು ಗುಮಾಸ್ತರಿಗೆ. ಅದಕ್ಕಾಗಿಯೇ ಕ.ರಾ.ಮು.ವಿ.ಯನ್ನು ಸ್ವಚ್ಛಗೊಳಿಸಲು, ಕರ್ನಾಟಕದೊಳಗೆ ಅದನ್ನು ಭದ್ರ ಅಡಿಪಾಯದ ಮೇಲೆ ಕಟ್ಟಲು ಹಾಗೂ ಅದನ್ನು ಮುಚ್ಚಲು ಉತ್ಸುಕರಾಗಿರುವವರ ವಿರುದ್ಧ ಸಾರ್ವಜನಿಕವಾಗಿ ದನಿಯೆತ್ತಲು ನಾವು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.