‘ಸ್ವಾತಂತ್ರ್ಯೋತ್ಸವದ ದಿನ ಸಾಮಾನ್ಯವಾಗಿ ಮಕ್ಕಳಿಗೆ ಏನು ಹೇಳುತ್ತೀರಿ?’ ಎಂದು ಪ್ರೈಮರಿ ಸ್ಕೂಲ್, ಹೈಸ್ಕೂಲ್ಗಳ ಮೇಡಂಗಳು, ಮೇಷ್ಟರುಗಳನ್ನು ಕೇಳಿದೆ. ಉತ್ತರ ಬಹುತೇಕ ಒಂದೇ: ‘ಭಾರತವನ್ನು ಆಕ್ರಮಿಸಿಕೊಂಡ ಡಚ್ಚರು, ಪೋರ್ಚುಗೀಸರು, ಬ್ರಿಟಿಷರಿಂದ ಹಿಡಿದು ಸಿಪಾಯಿ ದಂಗೆ, ಉಪ್ಪಿನ ಸತ್ಯಾಗ್ರಹ, ‘ಭಾರತ ಬಿಟ್ಟು ತೊಲಗಿ’ ಚಳವಳಿ, ನಂತರ ಸ್ವಾತಂತ್ರ್ಯ ಪಡೆದ ಕತೆ ಹೇಳುತ್ತೇವೆ’.

ಇದರಲ್ಲೇನೂ ತಪ್ಪಿಲ್ಲ. ಆದರೆ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹಲವು ಚಳವಳಿಗಳು, ಲಕ್ಷಾಂತರ ಬಲಿದಾನಗಳು ಸೇರಿವೆ ಎಂಬುದನ್ನು ಮಕ್ಕಳಿಗೂ ಹಿರಿಯರಿಗೂ ಸದಾ ನೆನಪಿಸಬೇಕಾದ ಅಗತ್ಯವಿದೆ. ಭಾರತದಂಥ ವೈವಿಧ್ಯಮಯ ಸ್ವಾತಂತ್ರ್ಯ ಚಳವಳಿ ಜಗತ್ತಿನ ಬೇರೆಲ್ಲೂ ನಡೆದಿಲ್ಲ. ಇದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಡೆದ ಚಳವಳಿ ಮಾತ್ರ ಅಲ್ಲ, ಭಾರತವನ್ನೇ ಬದಲಿಸಿದ ಚಳವಳಿಗಳ ತೊರೆಗಳು ಒಂದು ಮಹಾ ಚಳವಳಿಯ ಕಡಲಿಗೆ ಬಂದು ಸೇರಿಕೊಳ್ಳುತ್ತಿದ್ದವು, ಚಳವಳಿಯಿಂದ ಸ್ಫೂರ್ತಿ ಪಡೆಯುತ್ತಿದ್ದವು. ಜನರು ಜಾತಿ, ಧರ್ಮ, ವರ್ಗ ಮೀರಿ ಸಮಾಜಕ್ಕಾಗಿ ಸಂಘಟಿತರಾಗುವುದನ್ನು ಮೊದಲ ಬಾರಿಗೆ ಕಲಿಯುತ್ತಿದ್ದರು.

ಸ್ವಾತಂತ್ರ್ಯ ಚಳವಳಿಯನ್ನು ರೂಪಿಸುವ ಹಿನ್ನೆಲೆ ಯಲ್ಲಿದ್ದ ಹಲವು ಚಳವಳಿಗಳನ್ನು ಬಿಪಿನ್ ಚಂದ್ರ ಮತ್ತು ಸಹಲೇಖಕರ ‘ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್’ ಪುಸ್ತಕ ಚರ್ಚಿಸುತ್ತದೆ. ಸ್ವಾತಂತ್ರ್ಯ ಚಳವಳಿಗೆ ಸೇರಿಕೊಂಡ ಹಲವು ಧಾರೆಗಳ ವಿವರಗಳ ಸಂಗ್ರಹರೂಪ:

1857ರ ಸಿಪಾಯಿ ದಂಗೆಯ ನಂತರ, 1859–60ರ ನೀಲಿ ಬೆಳೆಗಾರರ ಬಂಡಾಯ ಹಾಗೂ ಚಳವಳಿ ಬ್ರಿಟಿಷರಿಗೆ ಸವಾಲೆಸೆಯಿತು. ಹತ್ತೊಂಬತ್ತನೇ ಶತಮಾನದ ಸಾಮಾಜಿಕ- ಧಾರ್ಮಿಕ ಚಳವಳಿಗಳಿಗೂ ರಾಜಕೀಯ ಮುಖಗಳಿದ್ದವು. ‘ದೇವರ ಬಗ್ಗೆ ಯೋಚಿಸಲು ನನಗೆ ಸಮಯವಿಲ್ಲ. ಈ ನೆಲದಲ್ಲೇ ಮಾಡಬೇಕಾದ ಕೆಲಸವಿದೆ’ ಎನ್ನುತ್ತಿದ್ದ ಈಶ್ವರಚಂದ್ರ ವಿದ್ಯಾಸಾಗರರೂ ಅದರಲ್ಲಿದ್ದರು.

ಹತ್ತೊಂಬತ್ತನೇ ಶತಮಾನದ ಎರಡನೆಯ ಭಾಗದಲ್ಲಿ ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಯ ಬಹುಮುಖ್ಯ ಪ್ರಚಾರಕ ಆಗಿದ್ದವು. 1876– 77ರ ಬರಗಾಲ ನಿರ್ವಹಣೆಯಲ್ಲಿ ಲಿಟ್ಟನ್ ಆಡಳಿತದ ವೈಫಲ್ಯವನ್ನು ಭಾರತದ ಪತ್ರಿಕೆಗಳು ತೀವ್ರ ಟೀಕೆ ಮಾಡಿದಾಗ ಸರ್ಕಾರವು ಪತ್ರಿಕೆಗಳಿಗೆ ನಿರ್ಬಂಧ ಹೇರತೊಡಗಿತು. ಪತ್ರಕರ್ತರಿಂದ ವ್ಯಾಪಕ ಖಂಡನೆ ಶುರುವಾಯಿತು. ನಿರ್ಬಂಧಗಳನ್ನು ಸರ್ಕಾರ ವಾಪಸು ಪಡೆಯಬೇಕಾಯಿತು. ತಿಲಕ್, ಗಾಂಧೀಜಿ ಸೇರಿದಂತೆ ಹಲವಾರು ಪತ್ರಕರ್ತರು ಪತ್ರಿಕಾ ಬರವಣಿಗೆ
ಗಳಿಗಾಗಿ ದೇಶದ್ರೋಹದ ಮೊಕದ್ದಮೆಗಳನ್ನು ಎದುರಿಸಿದರು. ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ನಡೆದ ಸ್ವದೇಶಿ ಚಳವಳಿಯು ಹೆಂಗಸರು, ವಿದ್ಯಾರ್ಥಿಗಳನ್ನು ದೊಡ್ಡ ಮಟ್ಟದಲ್ಲಿ ಚಳವಳಿಯತ್ತ ಸೆಳೆಯಿತು. ಶಸ್ತ್ರಾಸ್ತ್ರಗಳ ಮೂಲಕ ಹೋರಾಟ ಮಾಡುವ ಕ್ರಾಂತಿಕಾರಿ ತಂಡಗಳು ಹುಟ್ಟಿಕೊಂಡವು. ಸಾರ್ವಜನಿಕ ಮನವಿಗಳು, ದೂರುಗಳು, ಶಾಂತಿಯುತ ಪ್ರತಿಭಟನೆಗಳು ಚಳವಳಿಯ ರೂಪ ಪಡೆದವು. ಸರ್ಕಾರಿ ಸಾಧನಗಳನ್ನು ಜನ ಬಹಿಷ್ಕರಿಸಿದರು. ಕಮ್ಯುನಿಸ್ಟ್ ಚಳವಳಿ ಶುರುವಾಯಿತು.

1913ರಲ್ಲಿ ಹರದಯಾಳ್ ನೇತೃತ್ವದಲ್ಲಿ ಸ್ಫೋಟಗೊಂಡ ‘ಗದ್ದಾರ್’ (ಬಂಡಾಯಗಾರ) ಚಳವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಿಟಿಷರ ವಿರುದ್ಧ ಅಲೆಯೆಬ್ಬಿಸಿತು. ‘ಗದ್ದಾರ್’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕವಿತೆಗಳು ಬ್ರಿಟಿಷ್ ಸೇನೆಯಲ್ಲಿದ್ದ ಹಿಂದೂ, ಸಿಖ್, ಪಠಾಣ್, ಮುಸ್ಲಿಮರಿಗೆ ಬ್ರಿಟಿಷರ ವಿರುದ್ಧ ಬಂಡಾಯವೇಳಲು ಕರೆ ಕೊಡುತ್ತಿದ್ದವು. ಕಾರ್ಮಿಕ ಚಳವಳಿಯೂ ಹಬ್ಬತೊಡಗಿತು. ಹೋಂರೂಲ್ ಚಳವಳಿ ವಿಶಾಲ ರಾಜಕೀಯ ಆಯಾಮ ಸೃಷ್ಟಿಸಿತು. ಗಾಂಧೀಜಿ ಹಾಗೂ ಇತರ ನಾಯಕರ ಬೆಂಬಲದಿಂದ ಖಿಲಾಫತ್ ಚಳವಳಿಗೆ ಬಲ ಬಂತು. ಧರ್ಮಗಳ ಗಡಿ ಮೀರಿ ಎಲ್ಲ ಜನಸಮುದಾಯಗಳು ಬೀದಿಗಿಳಿದವು. ಬ್ರಿಟಿಷ್ ಸರ್ಕಾರಕ್ಕೆ ಚಳವಳಿಗಳನ್ನು ನಿಭಾಯಿಸುವುದು ಕಷ್ಟವಾಗತೊಡಗಿತು!

1915ರಲ್ಲಿ ಭಾರತಕ್ಕೆ ಮರಳಿ ಬಂದ ಗಾಂಧೀಜಿಗೆ ಚಂಪಾರಣ್ ನೀಲಿ ಬೆಳೆಗಾರರ ಚಳವಳಿ, ಖೇಡಾ ರೈತರ ಸತ್ಯಾಗ್ರಹ, ಅಹಮದಾಬಾದ್ ಗಿರಣಿ ಕಾರ್ಮಿಕರ ಚಳವಳಿಯು ನಾಯಕತ್ವದ ಹೊಸ ದಿಕ್ಕನ್ನು ರೂಪಿಸಿಕೊಟ್ಟವು. ಗಾಂಧೀಜಿಯು ಸಮಾಜ ಸುಧಾರಣೆ, ದಲಿತರ ದೇವಾಲಯ ಪ್ರವೇಶವನ್ನೂ ಚಳವಳಿಯೊಡನೆ ಬೆಸೆದರು.

ಅತ್ತ ಅಂಬೇಡ್ಕರ್ ದಲಿತ ವಿಮೋಚನೆಯ ಚಿಂತನೆ- ಚಳವಳಿಗಳನ್ನು ಶುರು ಮಾಡಿದಾಗ ದಲಿತ ಹಕ್ಕುಗಳ ಚಳವಳಿ ಬೆಳೆಯತೊಡಗಿತು. ಕಮ್ಯುನಿಸ್ಟರು, ಸೋಷಲಿಸ್ಟರು, ರೈತರನ್ನು ಒಂದು ವರ್ಗವನ್ನಾಗಿಸಿ, ರೈತ ಸಮುದಾಯದ ಬೇಡಿಕೆಗಳಿಗಾಗಿ ಹೋರಾಡಲು ತಯಾರು ಮಾಡತೊಡಗಿದರು. ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದರೆ ಬ್ರಿಟಿಷ್ ಪ್ರಭುತ್ವದ ಜೊತೆಗೆ ರಾಜಪ್ರಭುತ್ವವನ್ನೂ ಕೆಳಗಿಳಿಸಬೇಕಾಗಿತ್ತು. ಆದ್ದರಿಂದ, ದೇಶಿ ಸಂಸ್ಥಾನಗಳ ವಿರುದ್ಧದ ಚಳವಳಿಯೂ ನಡೆಯುತ್ತಿತ್ತು.

ಸ್ವಾತಂತ್ರ್ಯ ಚಳವಳಿ ಹಬ್ಬಿದಂತೆಲ್ಲ ‘ನಾಗರಿಕ ಅಸಹಕಾರ’, ‘ನಾಗರಿಕ ಅವಿಧೇಯತೆ’, ‘ಸತ್ಯಾಗ್ರಹ’ ಎಂಬ ಪದಗಳು ಜನಸಮುದಾಯದ ನುಡಿಗಟ್ಟುಗಳಾದವು. ‘ಸ್ವಾತಂತ್ರ್ಯ’ ಎಂಬ ಪದ ಹಲವು ವರ್ಗಗಳಲ್ಲಿ ಹಲವು ಅರ್ಥಗಳನ್ನು ಸೂಚಿಸತೊಡಗಿತು. ಅಹಿಂಸೆ, ಸತ್ಯಾಗ್ರಹದ ಪರಿಕಲ್ಪನೆಗಳ ಪ್ರಭಾವದಿಂದಾಗಿ ಮಹಿಳೆಯರು ಚಳವಳಿಯಲ್ಲಿ ಭಾಗಿಯಾಗುವುದು ಹೆಚ್ಚತೊಡಗಿತು: ‘ಲಾಠಿ ಏಟುಗಳನ್ನು ತಿನ್ನುವುದು; ಯಾತನೆ ಅನುಭವಿಸುವುದು, ಬಿಸಿಲಲ್ಲಿ ಗಂಟೆಗಟ್ಟಲೆ ಸರ್ಕಾರಿ ಕಚೇರಿಗಳ ಎದುರು ಪಿಕೆಟಿಂಗ್ ಮಾಡುವುದರಲ್ಲಿ ಹೆಂಗಸರು ಗಂಡಸರಿಗಿಂತ ಗಟ್ಟಿಯಾಗಿದ್ದರು’ ಎಂದು ಬಿಪಿನ್ ಚಂದ್ರ ಬರೆಯುತ್ತಾರೆ.

1942ರಲ್ಲಿ ಗಾಂಧೀಜಿ ‘ಮಾಡು ಇಲ್ಲವೆ ಮಡಿ’ ಕರೆ ಕೊಟ್ಟಾಗ ಚಳವಳಿಯ ಪ್ರಮುಖ ನಾಯಕರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು. 1942ರ ಆಗಸ್ಟ್ 9ರಂದು ಸ್ಫೋಟಗೊಂಡ ಜನತಾ ಬಂಡಾಯ ಅಥವಾ ‘ಆಗಸ್ಟ್ ಕ್ರಾಂತಿ’ ನಿಜವಾದ ಅರ್ಥದಲ್ಲಿ ಜನತಾ ಕ್ರಾಂತಿಯಾಗಿತ್ತು. ಇದನ್ನು ನೆನೆಯುತ್ತಾ ಆಗಸ್ಟ್ ಕ್ರಾಂತಿಯ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ರಾಮಮನೋಹರ ಲೋಹಿಯಾ ಬರೆದರು:

‘1942 ಆಗಸ್ಟ್ 9ರ ಕ್ರಾಂತಿ ಜನರ ಸಂಕಲ್ಪವನ್ನು ವ್ಯಕ್ತಪಡಿಸಿತು: ನಾವು ಸ್ವತಂತ್ರರಾಗಬಯಸುತ್ತೇವೆ ಮತ್ತು ಸ್ವತಂತ್ರರಾಗುತ್ತೇವೆ ಎಂಬ ಸಂಕಲ್ಪ ಅದು. ನಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಕೋಟಿಗಟ್ಟಲೆ ಜನರು ಸ್ವತಂತ್ರರಾಗುವ ಆಸೆಯನ್ನು ವ್ಯಕ್ತಪಡಿಸಿದರು. ಕೆಲವು ಸ್ಥಳಗಳಲ್ಲಿ ಇದನ್ನು ಬಹಳಷ್ಟು ಬಲಯುತವಾಗಿಯೇ ವ್ಯಕ್ತಪಡಿಸಲಾಯಿತು. ಬಲ್ಲಿಯಾ ಎಂಬ ಜಿಲ್ಲೆ ಕೆಲ ಕಾಲ ಸ್ವತಂತ್ರವಾಯಿತು… ನೂರಾರು ಪೊಲೀಸ್ ವಲಯಗಳು ಸ್ವತಂತ್ರವಾದವು’.

ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರು ಜೈಲಿನಲ್ಲಿದ್ದಾಗ ಸಾಮಾನ್ಯ ಜನರ ನಡುವಿನಿಂದಲೇ ನಾಯಕರು ಸೃಷ್ಟಿಯಾಗತೊಡಗಿದ ಕರ್ನಾಟಕದ ಅನುಭವವನ್ನು ಬಸವರಾಜ ಕಟ್ಟೀಮನಿ ಅವರ ‘ಮಾಡಿ ಮಾಡಿದವರು’ ಕಾದಂಬರಿ ಹೇಳುತ್ತದೆ. ಕ್ವಿಟ್ ಇಂಡಿಯಾ ಚಳವಳಿ ದೇಶದಾದ್ಯಂತ ಬರೆದಿದ್ದ ದಿಟ್ಟ ಗೋಡೆಬರಹ ನೇರವಾಗಿತ್ತು, ಸ್ಪಷ್ಟವಾಗಿತ್ತು: ಎಲ್ಲ ನಾಯಕರನ್ನು ಜೈಲಿಗೆ ಹಾಕಿದರೂ ಭಾರತದ ಜನ ಬಗ್ಗುವುದಿಲ್ಲ, ಬ್ರಿಟಿಷರು ಭಾರತ ಬಿಟ್ಟು ಹೋಗುವವರೆಗೂ ಜನ ಅವರನ್ನು ಬಿಡುವುದಿಲ್ಲ!

ಕ್ವಿಟ್ ಇಂಡಿಯಾ ಚಳವಳಿಯ ಕಾಲದಲ್ಲೇ 60,000 ಜನರ ಬಂಧನವಾಯಿತು, 18,000 ಜನರನ್ನು ಭಾರತೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿತ್ತು, 940 ಜನರು ಹತರಾದರು, 1,630 ಜನ ಗಾಯಗೊಂಡರು, 44 ಜನ ಗಲ್ಲಿಗೇರಿದರು. ಇಡೀ ಸ್ವಾತಂತ್ರ್ಯ ಚಳವಳಿಯಲ್ಲಿ ತೀರಿಕೊಂಡ, ಕಾಣೆಯಾದ ಜನರ ಖಚಿತ ಲೆಕ್ಕ ಇನ್ನೂ ಸಿಕ್ಕಿಲ್ಲ. ಶಶಿ ತರೂರ್ ಅವರ ಪ್ರಕಾರ, ‘ಬ್ರಿಟಿಷ್ ಆಡಳಿತವು ಮಿಲಿಯನ್ಗಟ್ಟಲೆ ಭಾರತೀಯರ ಸಾವಿಗೆ ಕಾರಣವಾಗಿದೆ’. ಬರಗಾಲ ನಿರ್ವಹಣೆಯಲ್ಲಿ ಬ್ರಿಟಿಷ್ ಸರ್ಕಾರದ ವೈಫಲ್ಯದಿಂದ ಆದ ಸಾವುಗಳೂ ಇದರಲ್ಲಿವೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗದ ಗುಂಪುಗಳ ವಾರಸುದಾರರು ಸ್ವಾತಂತ್ರ್ಯ ಚಳವಳಿಯ ಚರಿತ್ರೆಯನ್ನೇ ತಿರುಚುತ್ತಿರುವ ‘ಇತಿಹಾಸ ವಿರೂಪಕ’ರ ಕಾಲವಿದು. ಆದ್ದರಿಂದಲೇ, ಸ್ವಾತಂತ್ರ್ಯಕ್ಕಾಗಿ ಬಲಿದಾನವಾದ ಲಕ್ಷಾಂತರ ಅನಾಮಧೇಯರ ಕೊಡುಗೆಯನ್ನು ಅಪಾರ ಕೃತಜ್ಞತೆಯಿಂದ ನೆನೆಯುತ್ತಾ, ಸ್ವಾತಂತ್ರ್ಯ ಎಷ್ಟು ಅಮೂಲ್ಯ ಎಂಬುದನ್ನು ಅರಿಯಬೇಕು. ಸ್ವಾತಂತ್ರ್ಯ ಚಳವಳಿಯ ಲಕ್ಷಾಂತರ ಹುತಾತ್ಮರಲ್ಲಿ ಭಗತ್ ಸಿಂಗ್ ಅವರಂಥ ನಾಯಕರ ಜೊತೆಗೇ ಕಯ್ಯೂರಿನ ಅಪ್ಪು, ಚಿರಕುಂಡ, ಶಿವಮೊಗ್ಗ ಜಿಲ್ಲೆಯ ಈಸೂರಿನ ಹುಡುಗರೂ ಇದ್ದರೆಂಬುದನ್ನು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.