1919 ಏಪ್ರಿಲ್ 13. ಪಂಜಾಬ್ನ ಜಲಿಯನ್ವಾಲಾಬಾಗ್ನಲ್ಲಿ ಸೇರಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಲು ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಆದೇಶಿಸುತ್ತಾನೆ. ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸಿಪಾಯಿಗಳು 10 ನಿಮಿಷಗಳ ಕಾಲ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಾರೆ. ಪರಿಣಾಮವಾಗಿ, ಮಹಿಳೆಯರು, ಮಕ್ಕಳು ಸೇರಿದಂತೆ 379 ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಆ ದಿನ ಬ್ರಿಟಿಷರ ತುಕಡಿಯಲ್ಲಿ ಜನರಲ್ ಡಯರ್ ಬಿಟ್ಟರೆ ಬಹುತೇಕ ಎಲ್ಲಾ ಸಿಪಾಯಿಗಳು ಭಾರತೀಯರೇ ಆಗಿದ್ದರು.

ಈ ಪ್ರಕರಣದಿಂದ ಗಾಂಧೀಜಿಗೆ, ಬ್ರಿಟಿಷರು ನಮ್ಮನ್ನು ಶೋಷಿಸುತ್ತಿರುವುದು ಅವರ ಶಕ್ತಿಯ ಕಾರಣದಿಂದಲ್ಲ, ಬದಲಾಗಿ ನಮ್ಮ ಸಹಕಾರದಿಂದ ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಆ ಕಾರಣಕ್ಕೆ ಜಲಿಯನ್ವಾಲಾಬಾಗ್
ಹತ್ಯಾಕಾಂಡ ವಿರೋಧಿಸಿ ಗಾಂಧಿ ‘ಅಹಿಂಸಾತ್ಮಕ ಅಸಹಕಾರ ಚಳವಳಿ’ಗೆ ಕರೆ ನೀಡುತ್ತಾರೆ. ಭಾರತೀಯರು ಎರಡು ವರ್ಷಗಳ ಕಾಲ ಬ್ರಿಟಿಷ್ ಪ್ರಭುತ್ವಕ್ಕೆ ಅಸಹಕಾರ ತೋರಿದರೆ ನಮ್ಮ ದೇಶ ಸ್ವತಂತ್ರಗೊಳ್ಳುತ್ತದೆ ಎಂದು ಘೋಷಿಸುತ್ತಾರೆ. ಆದರೆ ಈ ಚಳವಳಿ ಹಿಂಸಾತ್ಮಕ ಹಾದಿ ಹಿಡಿದಿದ್ದರಿಂದ ಮುಂದೆ ಅದನ್ನು ವಾಪಸ್ ಪಡೆಯುತ್ತಾರೆ.

ಹಾಗೆ ನೋಡುವುದಾದರೆ, ಮನುಷ್ಯ ಏಕೆ ಶೋಷಣೆ ಮಾಡುತ್ತಾನೆ ಎನ್ನುವ ಪ್ರಶ್ನೆಯನ್ನು ಆಧರಿಸಿ ಜಗತ್ತಿನ ಹಲವಾರು ತತ್ವಜ್ಞಾನಿಗಳು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಆದರೆ ಗಾಂಧಿ ಈ ಪ್ರಶ್ನೆಯನ್ನು ಮನುಷ್ಯ ಏಕೆ ಶೋಷಣೆಗೆ ಒಳಗಾಗುತ್ತಾನೆ ಎಂಬ ನೆಲೆಯಲ್ಲಿ ನಿರೂಪಿಸಿಕೊಳ್ಳುತ್ತಾರೆ. ಜಗತ್ತಿನ ಯಾವುದೇ ವ್ಯವಸ್ಥೆ ಅಂತರ್ಗತವಾಗಿ ಯಾವುದೇ ಅಧಿಕಾರ ಹೊಂದಿರುವುದಿಲ್ಲ, ಯಾವುದೇ ವ್ಯವಸ್ಥೆಯಿರಲಿ ಅದರ ಅಧಿಕಾರದ ಮೂಲವು ಅಲ್ಲಿ ಬದುಕುತ್ತಿರುವ ವ್ಯಕ್ತಿಗಳಲ್ಲಿಯೇ ಅಡಕವಾಗಿರುತ್ತದೆ. ವ್ಯಕ್ತಿ ತನ್ನಲ್ಲಿನ ಸಾಮರ್ಥ್ಯವನ್ನು ಮರೆತು ವ್ಯವಸ್ಥೆಗೆ ಶರಣಾಗುವುದರ ಮೂಲಕ ಶೋಷಣೆಗೆ ಒಳಗಾಗುತ್ತಾನೆ. ‘ಭಾರತೀಯರು ಬ್ರಿಟಿಷ್ ಆಳ್ವಿಕೆಗೆ ಒಳಗಾಗಿರುವುದು ಇದೇ ಕಾರಣಕ್ಕೆ. ಅವರು ನಮ್ಮನ್ನು ಆಳುತ್ತಿಲ್ಲ, ನಾವು ಆಳಿಸಿಕೊಳ್ಳಲ್ಪಡುತ್ತಿದ್ದೇವೆ’ ಎನ್ನುವುದು ಗಾಂಧಿಯವರ ಚಿಂತನೆಯಾಗಿತ್ತು.

ಜಗತ್ತಿನ ಬಹುತೇಕ ಚಿಂತಕರು ಗಾಂಧೀಜಿಯನ್ನು ಅಹಿಂಸೆಯ ಪ್ರತಿಪಾದಕ ಎಂದು ವಾದಿಸಿದ್ದಾರೆ. ಆದರೆ ಗಾಂಧೀಜಿಗೆ ಸತ್ಯವು ಅಹಿಂಸೆಗಿಂತ ಪ್ರಧಾನವಾದ ಸಂಗತಿಯಾಗಿತ್ತು. ಅವರ ಪಾಲಿಗೆ ಸತ್ಯವು ಗುರಿಯಾದರೆ, ಅಹಿಂಸೆ ಅದನ್ನು ತಲುಪುವ ಮಾರ್ಗವಾಗಿತ್ತು. ಆ ಮಾರ್ಗವನ್ನು ತಲುಪಲು ಸತ್ಯಾಗ್ರಹ ಬೇಕು ಎನ್ನುವ ಧೋರಣೆಯನ್ನು ಗಾಂಧಿ ಹೊಂದಿದ್ದರು. ತಮ್ಮ ಆಶ್ರಮದಲ್ಲಿದ್ದ, ಕ್ಯಾನ್ಸರ್ನ ಅಂತಿಮ ಹಂತದಲ್ಲಿ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ದಯಾಮರಣ ನೀಡಬೇಕೋ ಬೇಡವೋ ಎಂಬ ವಿಚಾರ ಚರ್ಚೆಗೆ ಬಂದಾಗ, ಈ ಕಾರಣಕ್ಕಾಗಿಯೇ ಗಾಂಧಿ ಅದನ್ನು ನೀಡುವುದು ಸೂಕ್ತ ಎನ್ನುವ ಮೂಲಕ ಅಹಿಂಸೆಗಿಂತ ಸತ್ಯವೇ ಮುಖ್ಯ ಎನ್ನುವ ತೀರ್ಮಾನ ಕೈಗೊಂಡಿದ್ದರು. ಹಾಗಾಗಿಯೇ ಮಾರ್ಟಿನ್ ಲೂಥರ್ ಅವರಿಗೆ ‘ಗಾಂಧಿಯ ಕುರಿತು ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದ್ದಕ್ಕೆ ‘ಜೀಸಸ್ ಮನುಷ್ಯನ ಬದುಕಿನ ಸಂದೇಶ ನೀಡಿದ್ದರೆ, ಗಾಂಧಿ ಅದನ್ನು ಆಚರಿಸುವ ವಿಧಾನ ತೋರಿಸಿದರು’ ಎಂಬ ಮಾತುಗಳನ್ನು ಆಡಿದ್ದರು.

ಗಾಂಧಿಯವರ ಅಂತಿಮ ಹುಡುಕಾಟ ಸತ್ಯವೇ ಆಗಿತ್ತು. ಧಾರ್ಮಿಕರಾಗಿದ್ದ ಅವರಿಗೆ ಧರ್ಮವೂ ಸತ್ಯವನ್ನು ಶೋಧಿಸುವ ಮಾರ್ಗವೇ ಆಗಿತ್ತು. ಆ ಕಾರಣಕ್ಕೆ, ಧರ್ಮಗಳ ಸಂಕುಚಿತ ನಿರೂಪಣೆಯನ್ನು ಮೀರಿ ‘ಯಾವ ಧರ್ಮವೂ ಪರಿಪೂರ್ಣವಲ್ಲ. ಹಾಗಾಗಿ, ಹಿಂದೂ, ಮುಸ್ಲಿಂ, ಕ್ರೈಸ್ತರಾಗಿ ಇದ್ದುಕೊಂಡೇ ತಮ್ಮ ಧರ್ಮ
ಗಳಲ್ಲಿನ ಮಿತಿಗಳನ್ನು ಮೀರಲು ಬೇರೆ ಧರ್ಮಗಳಲ್ಲಿನ ಒಳ್ಳೆಯತನವನ್ನು ಒಳಗೊಳ್ಳಬಹುದು. ಧರ್ಮಗಳು ಬೆಳೆಯುವುದು, ಹೆಚ್ಚು ವಿಸ್ತಾರಗೊಳ್ಳುವುದು ಈ ಮಾದರಿಯ ಪರಸ್ಪರ ಸಂವಾದದಿಂದ, ಕೊಡುಕೊಳ್ಳುವಿಕೆ
ಯಿಂದ ಮಾತ್ರ’ ಎಂಬ ನಿಲುವನ್ನು ಹೊಂದಿದ್ದರು.

ಆ ಕಾರಣಕ್ಕಾಗಿ, ಹಿಂದೂ ಧರ್ಮದಲ್ಲಿನ ಜಾತಿಯ ಸಮಸ್ಯೆ ಕುರಿತು 1921ರಲ್ಲಿ ಚರ್ಚೆ ನಡೆದಾಗ, ‘ಹಿಂದೂ ಧರ್ಮಶಾಸ್ತ್ರಗಳು ಅಸ್ಪೃಶ್ಯತೆಯ ವಿಚಾರದಲ್ಲಿ ಏನು ಹೇಳುತ್ತವೆ ಎಂಬ ವಿವಾದದಲ್ಲಿ ನಾನು ತಲೆಹಾಕಲಾರೆ’ ಎಂದಿದ್ದ ಗಾಂಧಿ, 1933ರ ಹೊತ್ತಿಗೆ ‘ಅಸ್ಪೃಶ್ಯತೆಯನ್ನು ಸಮರ್ಥಿಸುವ ಹಿಂದೂ ಶಾಸ್ತ್ರಗಳನ್ನು ಇಡಿಯಾಗಿ ತಿರಸ್ಕರಿಸಬೇಕು’ ಎಂದು ನಿರ್ಧರಿಸಿ ಅದನ್ನು ಸಾರ್ವಜನಿಕವಾಗಿ ಘೋಷಿಸಿದ್ದರು.

ಗಾಂಧಿಯವರಲ್ಲಿ ಆದ ಈ ಮನಃಪರಿವರ್ತನೆಗೆ ಕಾರಣ ಧರ್ಮದ ಕುರಿತ ಅವರ ಕ್ರಾಂತಿಕಾರಕ ನಿಲುವಿನ ಜೊತೆ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಭಾವವೂ ಇತ್ತು ಎಂಬ ಸಂಗತಿಯನ್ನು ಇತಿಹಾಸಕಾರ ಎಸ್.ಚಂದ್ರಶೇಖರ್ ಸ್ಪಷ್ಟವಾಗಿ ಗುರುತಿಸುತ್ತಾರೆ.

ಆರಂಭದಲ್ಲಿ ವರ್ಣಾಶ್ರಮ ಧರ್ಮ ಮತ್ತು ಜಾತಿಗಳನ್ನು ಆದರ್ಶೀಕರಿಸಿ ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ, ದುಂಡುಮೇಜಿನ ಸಮ್ಮೇಳನ ಸೇರಿದಂತೆ ಅಂಬೇಡ್ಕರ್ ಜೊತೆ ನಡೆಸಿದ ಸುದೀರ್ಘ ಸಂವಾದದ ಭಾಗವಾಗಿ ‘ನಿಜವಾದ ವರ್ಣ ಯಾವುದೂ ಇಲ್ಲ. ನನ್ನಲ್ಲಿ ಶಕ್ತಿ ಇದ್ದಿದ್ದರೆ ಹಿಂದೂಗಳೆಲ್ಲಾ ಒಂದೇ ವರ್ಣದವರು ಎಂದು ಘೋಷಿಸಿಬಿಡುತ್ತಿದ್ದೆ’ ಎನ್ನುವಲ್ಲಿಗೆ ಬಂದು ತಲುಪುತ್ತಾರೆ.

ಒಂದು ಅರ್ಥದಲ್ಲಿ ಗಾಂಧೀಜಿ ನಿಲುವುಗಳ ಕುರಿತು ಅಂಬೇಡ್ಕರ್ ಎತ್ತಿದ ಪ್ರಶ್ನೆಗಳು ಧರ್ಮದ ಕುರಿತ ಸ್ವತಃ ಗಾಂಧಿಯವರ ಧೋರಣೆಯನ್ನೇ ಬದಲಿಸಿದ್ದವು. ಪರಿಣಾಮವಾಗಿ, ಪೂನಾ ಒಪ್ಪಂದದ ನಂತರ ಅಸ್ಪೃಶ್ಯತೆ ನಿರ್ಮೂಲನೆಯ ಕುರಿತು ಗಾಂಧಿ ವ್ಯಾಪಕ ಜನಾಂದೋಲನವನ್ನು ಆರಂಭಿಸಿದ್ದರು. ‘ಹರಿಜನರಿಗೆ ಪ್ರವೇಶವಿಲ್ಲದ ದೇವಾಲಯದಲ್ಲಿ ನಾನೂ ಕಾಲಿಡಲಾರೆ’ ಎಂದು ಉಡುಪಿ ಮಠ ಪ್ರವೇಶಿಸಲು ನಿರಾಕರಿಸಿದ್ದು ಒಂದು ನಿದರ್ಶನ ಅಷ್ಟೆ. ಆದರೆ ದುರಂತವೆಂದರೆ, ಗಾಂಧಿಯವರ ಮೇಲೆ ಒಟ್ಟು ಏಳು ಹತ್ಯಾ ಪ್ರಯತ್ನಗಳು ನಡೆದಿವೆ. ಅವುಗಳ ಪೈಕಿ ಐದು ಪ್ರಯತ್ನಗಳು ಅವರು ಅಸ್ಪೃಶ್ಯತೆಯನ್ನು ವಿರೋಧಿಸಿ ಆರಂಭಿಸಿದ ಹೋರಾಟದ ಕಾರಣಕ್ಕಾಗಿಯೇ ಹಿಂದೂ ಮೂಲಭೂತವಾದಿಗಳು ನಡೆಸಿದ ಪ್ರಯತ್ನಗಳಾಗಿದ್ದವು.
ಅದೃಷ್ಟವಶಾತ್ ಗಾಂಧಿ ಆರರಲ್ಲಿ ಪಾರಾಗಿದ್ದರು. ಆದರೆ ಏಳನೆಯ ಪ್ರಯತ್ನದಲ್ಲಿ ಗೋಡ್ಸೆ ಎಂಬ ಮತಾಂಧ ಯಶಸ್ವಿಯಾಗಿದ್ದ ಎಂದು ಗಾಂಧಿಯವರ ಚಿಂತನೆಗಳ ಕುರಿತು ಮಹತ್ವದ ಸಂಶೋಧನೆ ನಡೆಸಿರುವ ಬೀಕು ಪಾರೇಖ್ ವಿಶ್ಲೇಷಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮೂವತ್ತು ಬಾರಿ ಜೈಲಿಗೆ ಹೋಗಿದ್ದ ಗಾಂಧಿ, ಸ್ವಾತಂತ್ರ್ಯ ಬಂದಾಗ ಆ ಸಂಭ್ರಮದಲ್ಲಿ ಭಾಗಿಯೇ ಆಗಿರಲಿಲ್ಲ! ರಾಷ್ಟ್ರಪತಿ ಆಗುವಂತೆ ಅವರನ್ನು ನೆಹರೂ ಕೇಳಿದಾಗ ‘ನಾನು ಆ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ’ ಎಂದು ಹೇಳಿದ್ದರು. ‘ಈ ದೇಶ ಇಬ್ಭಾಗವಾದರೆ ಅದು ನನ್ನ ಶವದ ಮೇಲೆ ಆಗಬೇಕು’ ಎಂದಿದ್ದ ಗಾಂಧಿ, ಬದುಕಿದ್ದಾಗಲೇ ದೇಶ ವಿಭಜನೆ, ಅದರ ಭಾಗವಾದ ಅಪಾರ ಹಿಂಸೆಯನ್ನು ನೋಡಬೇಕಾಯಿತು.

ಇಂದು ಭಾರತ ಎಂದಾಗ ಇಡೀ ವಿಶ್ವಕ್ಕೆ ನೆನಪಾಗುವುದು ಗಾಂಧಿ! ವಿದೇಶದಲ್ಲಿ ‘ನಾವು ಭಾರತೀಯರು’ ಅಂದರೆ ‘ಓಹ್, ಗಾಂಧಿ ನಾಡಿನವರು’ ಎಂದು ಗುರುತಿಸುವಷ್ಟು ಜಗತ್ತಿನ ಪ್ರಜ್ಞೆಯನ್ನು ಗಾಂಧಿ ಆವರಿಸಿದ್ದಾರೆ. ಆದರೆ ನಾವು ದೈಹಿಕವಾಗಿ ಮಾತ್ರವಲ್ಲ ರಾಜಕೀಯವಾಗಿ, ಮಾನಸಿಕವಾಗಿ ಅವರನ್ನು ದೂರ ಮಾಡಿಕೊಳ್ಳುತ್ತಿದ್ದೇವೆ.

ಕಾಲದ ವೈರುಧ್ಯ ನೋಡಿ. ಹಿಂಸಾಚಾರ, ಭ್ರಷ್ಟಾಚಾರ, ಕೋಮುವಾದ, ಶೋಷಣೆ ಮತ್ತು ನವ-ವಸಾಹತುಶಾಹಿವ್ಯವಸ್ಥೆಯಿಂದ ವೃತ್ತಿ ಬದುಕಿನ ಒತ್ತಡಗಳು ಹೆಚ್ಚಾಗಿ ಯುವಜನ ಅತೀವ ಸಂಕಷ್ಟದಲ್ಲಿ ಇರುವ ಹೊತ್ತಿನಲ್ಲಿಯೇ ಮತ್ತೊಂದು ‘ಗಾಂಧಿ ಜಯಂತಿ’ ಬಂದಿದೆ. ‘ಅಧಿಕಾರ ವ್ಯವಸ್ಥೆಯ ಅಂತರ್ಗತ ಸಾಮರ್ಥ್ಯವಲ್ಲ; ಬದಲಾಗಿ, ಅಲ್ಲಿರುವ ಜನ ತಮ್ಮ ಸಹಕಾರದ ಮೂಲಕ ವ್ಯವಸ್ಥೆಗೆ ಅಧಿಕಾರ ನೀಡಿ ಅದನ್ನು ಶೋಷಕನನ್ನಾಗಿ ಮಾಡುತ್ತಿರುತ್ತಾರೆ. ಹಾಗಾಗಿ, ಶೋಷಣೆಗೆ ವ್ಯಕ್ತಿ ಕಾರಣವೇ ವಿನಾ ವ್ಯವಸ್ಥೆಯಲ್ಲ’ ಎಂಬ ಗಾಂಧೀಜಿಯ ಮಾತು ಮತ್ತೆ ಮತ್ತೆ ನೆನಪಾಗುತ್ತಿದೆ!

ಲೇಖಕ: ಸಹಾಯಕ ಪ್ರಾಧ್ಯಾಪಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.