ನಂದಿಬೆಟ್ಟದ ಆಸುಪಾಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಹೇಗೆ ಆ ಬೆಟ್ಟಕ್ಕೆ ಅಪಾಯ ಒದಗಲಿದೆ ಎಂಬುದರ ಕುರಿತು ಸಮಾನಮನಸ್ಕರು ಮತ್ತು ಪರಿಸರದ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಗಳ ಸಭೆಯೊಂದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ನಂದಿಬೆಟ್ಟವೂ ಸೇರಿದಂತೆ ಪರಿಸರವನ್ನು ಉಳಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ದಿಸೆಯಲ್ಲಿ ನಾವೇನು ಮಾಡಬೇಕು, ಈಗ ಆಗುತ್ತಿರುವ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿರುವುದು ಎಷ್ಟು ಅನಿವಾರ್ಯ, ಅದಕ್ಕಿರುವ ಮಾರ್ಗೋಪಾಯಗಳೇನು ಎಂಬುದರ ಬಗ್ಗೆ ಈ ಸಂದರ್ಭದಲ್ಲಿ ವಿಸ್ತೃತ ಹಾಗೂ ಆರೋಗ್ಯಪೂರ್ಣ ಚರ್ಚೆ ನಡೆಯಿತು. ನಂದಿಬೆಟ್ಟವನ್ನು ಭೌಗೋಳಿಕ, ಜೈವಿಕ ಮತ್ತು ಜಲಸಂಪತ್ತಿನ ಮೂಲತಾಣವೆಂದು ಪರಿಗಣಿಸಿ, ಅಲ್ಲಿ ಯಾವುದೇ ಪರಿಸರ ವಿರೋಧಿ ಕೃತ್ಯಗಳಿಗೆ ಅವಕಾಶ ಕೊಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು.

ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಾದ ಮರಳು ಇಂದು ಎಲ್ಲೂ ಸಿಗುತ್ತಿಲ್ಲ. ಹೀಗಾಗಿ, ನಂದಿಬೆಟ್ಟದ ತಪ್ಪಲಿನಲ್ಲಿರುವ ಬಂಡೆಗಳನ್ನು ಪುಡಿಗಟ್ಟಿ, ಎಂ.ಸ್ಯಾಂಡ್ ತಯಾರಿಸಿ, ಅದನ್ನು ಬೆಂಗಳೂರಿಗೆ ಸಾಗಿಸಿ, ಅಲ್ಲಿನ ನಿರ್ಮಿತಿಗಳಿಗೆ ಬಳಸುವ ದೊಡ್ಡ ದಂಧೆ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಸ್ಥಾಪಿತ ಹಿತಾಸಕ್ತಿಗಳು, ಲಾಭಬಡುಕರು ಇದರ ಹಿಂದೆ ಇದ್ದಾರೆ. ಪಾರಂಪರಿಕ ಇತಿಹಾಸವುಳ್ಳ ಬೆಟ್ಟದ ಆಸುಪಾಸಿನಲ್ಲಿ ಈ ರೀತಿ ಡೈನಮೈಟ್ ಇಟ್ಟು ಧ್ವಂಸ ಮಾಡಿ, ಅಲ್ಲಿನ ಸಂಪನ್ಮೂಲವನ್ನು ಬಳಸಿಕೊಂಡು ಬೆಂಗಳೂರನ್ನು ‘ಬ್ರ್ಯಾಂಡ್ ಬೆಂಗಳೂರು’, ‘ಸ್ಮಾರ್ಟ್ ಸಿಟಿ’ ಮಾಡುವುದೆಂದರೆ ಅದು ಖಂಡಿತವಾಗಿ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಆಗ ಅದು ಬೆಂಗಳೂರಿಗರ ಪಾಲಿಗೆ ಶಾಪವಾಗುತ್ತದೆಯೇ ವಿನಾ ವರದಾನ ಆಗುವುದಿಲ್ಲ.

ನಂದಿಬೆಟ್ಟ ಒಂದು ಗಿರಿಧಾಮ. ಅಲ್ಲಿ ಅರ್ಕಾವತಿ, ಕುಮುದ್ವತಿ, ಪಾಪಾಗ್ನಿ, ಪಾಲಾರ್, ಪೆನ್ನಾರ್ ನದಿಗಳ ಉಗಮವಾಗಿ, ಒಂದು ಕಾಲದಲ್ಲಿ ಅವೆಲ್ಲವೂ ಸಮೃದ್ಧವಾಗಿ ಹರಿದು, ಹಲವು ಉಪನದಿಗಳನ್ನು ಕೂಡಿಕೊಂಡು ಬಂಗಾಳಕೊಲ್ಲಿಯನ್ನು ಸೇರುತ್ತಿದ್ದವು ಎಂದರೆ ಇಂದಿನ ಪೀಳಿಗೆಯವರು ನಂಬಲಾರರು. ನಂದಿಬೆಟ್ಟ ಸೇರಿದಂತೆ ಪರಿಸರದ ಸಮಸ್ತ ಪಳೆಯುಳಿಕೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಅವುಗಳನ್ನು ತುಂಡರಿಸುವ ಮೂಲಕ ನಾವೇ ವಿಪತ್ತನ್ನು ಆಹ್ವಾನಿಸುತ್ತಿದ್ದೇವೆ. ನಂದಿಬೆಟ್ಟದ ತಪ್ಪಲಿನಲ್ಲಿ ಅದೆಷ್ಟೋ ರೆಸಾರ್ಟುಗಳು, ಹೋಮ್ಸ್ಟೇಗಳು ನಿರ್ಮಾಣವಾಗಿವೆ, ರಸ್ತೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಭಂಜನೆ ದಿನನಿತ್ಯ ಆಗುತ್ತಲೇ ಇದೆ. ಇದು ಹೀಗೇ ಮುಂದುವರಿದಲ್ಲಿ, ವಯನಾಡಿನಲ್ಲಿ ಆದಂತಹ ದುರಂತ ಇಲ್ಲೂ ಸಂಭವಿಸಬಹುದು.

ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಅಭಿವೃದ್ಧಿ ಎಂಬ ವಿಷಯ ಬಂದಾಗಲೆಲ್ಲ ರಿಯಲ್ ಎಸ್ಟೇಟ್ ಉದ್ದಿಮೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಅಂದರೆ ರಸ್ತೆ, ಕಟ್ಟಡ, ಸೇತುವೆಯಂತಹ ಮೂಲ ಸೌಕರ್ಯಗಳ ನಿರ್ಮಾಣ. ಅದಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ನಂದಿಬೆಟ್ಟ, ರಾಮನಗರ ಬೆಟ್ಟ, ಕನಕಪುರ ಬೆಟ್ಟದ ಹೃದಯಭಾಗವನ್ನು ಛಿದ್ರ ಮಾಡಿ ತರಲಾಗುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳವರೂ ಪರಿಸರವನ್ನು ಹಾಳುಗೆಡಹುವ ಕಾರ್ಯದಲ್ಲಿ ಸಮಾನ ಮನಃಸ್ಥಿತಿಯಿಂದ ಕೈಜೋಡಿಸಿದ್ದಾರೆ. ಪರಿಸರದ ಬಗ್ಗೆ ಇನ್ನಿಲ್ಲದ ಅನಾದರ, ಉಪೇಕ್ಷೆ ಆಡಳಿತ ನಡೆಸುವವರಲ್ಲಿ ಇದೆ. ನಾನು ಕೂಡ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಕಾರಣ, ಇವೆಲ್ಲವೂ ನೇರಾನೇರ ನನ್ನ ಅನುಭವಕ್ಕೆ ಬಂದಿವೆ. ಪರಿಸರಸಂಬಂಧಿತ ಯಾವುದೇ ಯೋಜನೆ ಅನುಷ್ಠಾನಗೊಳಿಸುವಲ್ಲಿ ಸರ್ಕಾರಕ್ಕಿರುವ ಕಡು ನಿರ್ಲಕ್ಷ್ಯವನ್ನು ಕಂಡಿದ್ದೇನೆ, ನೊಂದಿದ್ದೇನೆ.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಕಾಮಗಾರಿಗಳಲ್ಲಿ ಸರ್ಕಾರದ ಪಟ್ಟಭದ್ರ ಹಿತಾಸಕ್ತಿಗಳು, ರಾಜಕಾರಣಿಗಳು, ಕಂಪನಿಗಳ ಪಾತ್ರ ಇರುತ್ತದೆ. ಉಸಿರಾಡಲು ಯೋಗ್ಯವಾದ ಪ್ರಾಣವಾಯು, ಕುಡಿಯಲು ಯೋಗ್ಯವಾದ ಶುದ್ಧ ನೀರು ಎಲ್ಲೂ ಇಲ್ಲವಾಗಿದೆ. ಎಲ್ಲವೂ ಮಲಿನ ಮತ್ತು ಕಲುಷಿತ. ಮಣ್ಣು ಕೂಡ ಇದರಿಂದ ಹೊರತಾಗಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಬರುವ ಕಳೆನಾಶಕಗಳಿಂದ ಮಣ್ಣು ಮತ್ತು ಸೂಕ್ಷ್ಮಜೀವಜಾಲ ನಶಿಸಿಹೋಗಿವೆ. ಪರಾಗಸ್ಪರ್ಶದ ಕೆಲಸ ಮಾಡುವ ಜೇನ್ನೊಣಗಳು ಕೂಡ ಅಳಿವಿನ ಅಂಚಿಗೆ ಬರುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಮಾರಾಟ ಮಾಡುವ ‘ರೌಂಡಪ್’ ಎಂಬ ಕಳೆನಾಶಕ ವಿಶ್ವದ ಹಲವೆಡೆ ನಿಷೇಧಕ್ಕೆ ಒಳಗಾಗಿದೆ. ಅದೊಂದು ಕಾರ್ಕೋಟಕ ವಿಷ. ಅದರಿಂದ ಆಗುವ ಹಾನಿ ಅಷ್ಟು ಘೋರವಾದದ್ದು. ಹೀಗಾಗಿ ರೋಗರುಜಿನಗಳು ಹೆಚ್ಚಿವೆ. ಬೆಂಗಳೂರಿನಲ್ಲಿ ನಾವು ಸೇವಿಸುತ್ತಿರುವ ಗಾಳಿಯಲ್ಲಿರುವ ವಿಷಕಾರಕಗಳ ಪ್ರಮಾಣವನ್ನು ಅಂದಾಜು ಮಾಡಲು ವಿಜ್ಞಾನಿಗಳ ವಿಶ್ಲೇಷಣೆ ಬೇಕಿಲ್ಲ. ಎಲ್ಲವೂ ನಮ್ಮ ಅನುಭವಕ್ಕೇ ಬರುತ್ತಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಮುಚ್ಚಿ ಕುಳಿತಿದೆ.

ಇದೀಗ ಬೆಂಗಳೂರಿನಲ್ಲಿ ಮೆಟ್ರೊ ಕಾಮಗಾರಿ ಭರದಿಂದ ಸಾಗಿದೆ. ನೂರಾರು ಕಿ.ಮೀ. ದೂರದ ಸುರಂಗ ಮಾರ್ಗಗಳನ್ನು ಕೊರೆಯಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಇವೆಲ್ಲವೂ ಮುಂದುವರಿದರೆ ಪ್ರಳಯಕಾಲ ಸನ್ನಿಹಿತವಾಗಲಿದೆ ಎಂಬುದನ್ನು ನಾವು ನೆನಪಿಡಬೇಕು. ಅಭಿವೃದ್ಧಿಯು ಪ್ರಕೃತಿಗೆ ಪೂರಕವಾಗಿದ್ದರೆ ಎಲ್ಲವೂ ಸರಿ, ತೀರಾ ಅತಿಯಾದರೆ ಅದರ ಪರಿಣಾಮ ವಿನಾಶವೇ ವಿನಾ ಬೇರೇನೂ ಅಲ್ಲ. ವಿಶೇಷತಃ ಬೆಂಗಳೂರು ನಗರದ ಅಭಿವೃದ್ಧಿಯ ಹೊಣೆ ಹೊತ್ತ ಅಧಿಕಾರಸ್ಥರು ಇದನ್ನು ತಕ್ಷಣ ಗಮನಿಸಿ, ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಹಿಮಾಲಯ, ಅರಾವಳಿ, ಸಹ್ಯಾದ್ರಿ, ನಂದಿಬೆಟ್ಟವೂ ಸೇರಿದಂತೆ ಪಶ್ಚಿಮ-ಪೂರ್ವಘಟ್ಟಗಳನ್ನು ಸುಸ್ಥಿತಿಯಲ್ಲಿ ಕಾಪಾಡುವ ಕೆಲಸವನ್ನು ಮಾಡದೇ ಇದ್ದರೆ ಮುಂಬರುವ ದಿನಗಳು ಕರಾಳವಾಗಲಿವೆ.

ದಶಕಗಳ ಹಿಂದೆ ಕೊಡಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಟಿಂಬರ್ ಮಾಫಿಯಾವನ್ನು ಹತ್ತಿಕ್ಕಲು ನನ್ನ ನೇತೃತ್ವದ ಆಯೋಗವೊಂದನ್ನು ಸರ್ಕಾರ ನೇಮಿಸಿತ್ತು. ನಾನು ನನ್ನ ಸಹೋದ್ಯೋಗಿಗಳ ಜೊತೆ ಅಲ್ಲೆಲ್ಲ ಓಡಾಡಿ, ಆಗುತ್ತಿರುವ ಅನಾಹುತ, ಸರ್ಕಾರಕ್ಕೆ ಆಗುತ್ತಿರುವ ಮೋಸ ಎಲ್ಲವನ್ನೂ ಪತ್ತೆ ಹಚ್ಚಿ ಸಲ್ಲಿಸಿದ ವರದಿ ವಿಧಾನಸೌಧದ ಕಡತಗಳಲ್ಲಿ ಕಳೆದುಹೋಯಿತು. ಟಿಂಬರ್ ಮಾಫಿಯಾದ ಸ್ಥಾಪಿತ ಹಿತಾಸಕ್ತಿಗಳು ವರದಿಯಲ್ಲಿನ ಶಿಫಾರಸುಗಳನ್ನು ಜಾರಿ ಮಾಡದಂತೆ ಸಂಬಂಧಪಟ್ಟವರಿಗೆ ₹ 50 ಕೋಟಿಯ ರುಷುವತ್ತು ಕೊಟ್ಟು, ₹ 5,000 ಕೋಟಿ ಮೌಲ್ಯದ ಅರಣ್ಯ ನಾಶವನ್ನು ಬರೀ 45 ದಿನಗಳಲ್ಲಿ ಮಾಡಿದವು ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ನಿವೃತ್ತ ಅರಣ್ಯಾಧಿಕಾರಿ ಬಿ.ಕೆ.ಸಿಂಗ್ ತಮ್ಮ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅಪಸವ್ಯಗಳು ಮೇರೆಮೀರಿವೆ. ಭೂಮಿಯ ಬೆಲೆ ಗಗನಕ್ಕೇರಿದೆ. ಸಣ್ಣ ದುಡಿಮೆಯ ಕುಟುಂಬ ಸ್ವಂತದ ಸೂರನ್ನು ಕಟ್ಟಿಕೊಳ್ಳಲಾಗದ ಪರಿಸ್ಥಿತಿ ಇದೆ. ನೂರಾರು ಸ್ಟಾರ್ ಹೋಟೆಲ್ಗಳು ಬೆಂಗಳೂರಿನ ಸರಹದ್ದುಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಅಲ್ಲಿನ ದರಗಳನ್ನು ಕಂಡು ಮಧ್ಯಮವರ್ಗದ ಮಂದಿ ಕೂಡ ಹುಬ್ಬೇರಿಸುವಂತಹ ಸ್ಥಿತಿ ಇದೆ. ಅಂದರೆ ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದೆಲ್ಲವೂ ಸಿರಿವಂತರಿಗೆ ಎಂಬುದು ಗಮನಿಸಬೇಕಾದ ಸಂಗತಿ.

ಕುದುರೆಮುಖ ಮತ್ತು ಗಂಗಡಿಕಲ್ಲು ಪರ್ವತಶ್ರೇಣಿಯು ವಿಶೇಷ ಭೂಪ್ರದೇಶ. ಇಲ್ಲಿ ಸಿಗುವಷ್ಟು ಉತ್ಕೃಷ್ಟ ಕಬ್ಬಿಣದ ಅದಿರು ವಿಶ್ವದಲ್ಲಿ ಬೇರೆಲ್ಲೂ ಸಿಗುವುದಿಲ್ಲ. ಇಂತಹ ಬೆಟ್ಟಸಾಲುಗಳನ್ನು ಕೆಐಒಸಿಎಲ್ ಕಂಪನಿಗೆ ದಶಕಗಳ ಅವಧಿಗೆ ಗುತ್ತಿಗೆಗೆ ಕೊಟ್ಟು, ಗಣಿಗಾರಿಕೆಯಿಂದ ಆಗಿರುವ ಅಪಾರ ಪರಿಸರ ನಾಶಕ್ಕೆ ಯಾರು ಹೊಣೆ? ಇದೀಗ ಅದರ ಬೆನ್ನಲ್ಲೇ ಅದೇ ಕಂಪನಿಗೆ ಬಳ್ಳಾರಿಯ ಗುಡ್ಡಗಳನ್ನೂ ಅದಿರು ಬಗೆಯುವುದಕ್ಕೆ ಗುತ್ತಿಗೆ ಮೇರೆಗೆ ವಹಿಸಿಕೊಡಲು ಮುಂದಾಗಿರುವುದರ ಕುರಿತು ಚರ್ಚೆ ನಡೆಯುತ್ತಿದೆ. ಇದು ಸಮೃದ್ಧ ಪ್ರದೇಶವನ್ನು ಮರುಭೂಮಿಯಾಗಿಸುವ ಸಂಗತಿ. ಕೆಐಒಸಿಎಲ್ಗೆ ತಿಂಗಳಿಗೆ ₹ 27 ಕೋಟಿ ನಷ್ಟವಾಗುತ್ತಿರುವ, ಅಲ್ಲಿನ 300 ಕಾರ್ಮಿಕರು ವಜಾಗೊಳ್ಳಲಿರುವ ಸುದ್ದಿ ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಎಲ್ಲರೂ ಕಂಪನಿಯ ಹಿತಾಸಕ್ತಿ ಮತ್ತು ನಷ್ಟದ ಬಗ್ಗೆಯೇ ಕಾಳಜಿ ವಹಿಸುವವರಾಗಿದ್ದಾರೆ ವಿನಾ ಆ ಕಂಪನಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಯಾರಿಗೂ ಕಳವಳವೇ ಇಲ್ಲವಾಗಿದೆ.

ಪರಿಸರ ನಾಶ ನರಹತ್ಯೆಗೆ ಸಮನಾದ ಅಪರಾಧ. ಪರಿಸರಸಂಬಂಧಿತ ಅನಾಹುತಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ, ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.