ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, 1950ರಿಂದಲೇ ಚಾಲ್ತಿಯಲ್ಲಿರುವ ‘ಅಭಿವೃದ್ಧಿ’ ಎಂಬ ಸವಕಲು ಘೋಷಣೆಯನ್ನೇ ಎತ್ತಿಕೊಂಡು, ಸ್ವಾತಂತ್ರ್ಯ ಬಂದು ನೂರು ವರ್ಷಗಳಾಗುವ ಹೊತ್ತಿಗೆ ದೇಶವು ‘ವಿಕಸಿತ ಭಾರತ’ವಾಗಬೇಕು ಎಂದರು. ಇದು ಈ ಒಬ್ಬ ಜನನಾಯಕನ ಬೌದ್ಧಿಕತೆಯ ಮಿತಿ ಮಾತ್ರವಲ್ಲ. ಎಲ್ಲ ಪಕ್ಷ, ಎಲ್ಲ ರಾಜಕೀಯ ಸಿದ್ಧಾಂತ ಮತ್ತು ಎಲ್ಲ ರಾಜಕೀಯ ನಾಯಕರಲ್ಲಿ ರಾಜಕೀಯ ಪ್ರಜ್ಞೆ, ಪರಿಕಲ್ಪನೆ ಮತ್ತು ದೂರಾಲೋಚನೆಗಳು ಸಂಕುಚಿತವಾಗುತ್ತಿರುವುದನ್ನು ಆ ಮಾತು ಪ್ರತಿಬಿಂಬಿಸುತ್ತಿತ್ತು.

ಶೆಲ್ಡಾನ್ ಪೊಲ್ಲಾಕ್ ಎಂಬ ಸಂಸ್ಕೃತ ವಿದ್ವಾಂಸ, 18ನೇ ಶತಮಾನದ ಭಾರತದಲ್ಲಿ ‘ಸಂಸ್ಕೃತದ ಸಾವು’ ಎಂಬ ಪ್ರಬಂಧವನ್ನು 20 ವರ್ಷಗಳ ಹಿಂದೆ ಬರೆದಿದ್ದ. ವಾಸ್ತವದಲ್ಲಿ ಸಂಸ್ಕೃತ ಮೃತಭಾಷೆ ಎಂದು ಹೇಳುವುದು ಅವನ ಉದ್ದೇಶವಾಗಿರಲಿಲ್ಲ ಮತ್ತು ಸಂಸ್ಕೃತ ಈಗಲೂ ಬಳಕೆಯಲ್ಲಿದೆ. ನಮ್ಮ ನಾಗರಿಕತೆಯ ಸಾಂಸ್ಕೃತಿಕ ಪರಿಕಲ್ಪನೆಗಳು ಮತ್ತು ಬೌದ್ಧಿಕತೆಯನ್ನು ವಸಾಹತುವಿನ ಕಾಲದಲ್ಲಿ ದಾಖಲಿಸುವ ಮತ್ತು ಮುಂದಿನ ಪೀಳಿಗೆಗೆ ದಾಟಿಸುವ ಮಾಧ್ಯಮವಾಗುವುದಕ್ಕಷ್ಟೇ ಸಂಸ್ಕೃತ ಸೀಮಿತ ಆಯಿತು ಎಂಬುದು ಆತನ ಪ್ರತಿಪಾದನೆಯಾಗಿತ್ತು. ನಂತರದ ದಿನಗಳಲ್ಲಿ ಸುದೀಪ್ತ ಕವಿರಾಜ್ ಇದನ್ನೇ ವಿಸ್ತರಿಸುತ್ತಾ, ‘ಸಂಸ್ಕೃತ ಜ್ಞಾನದ ಹಠಾತ್ ಸಾವು’ ಎಂದು ಮಾರ್ಪಡಿಸಿದರು.

20ನೇ ಶತಮಾನದಲ್ಲಿ ವಸಾಹತು ಭಾರತ ಮತ್ತು ವಸಾಹತೋತ್ತರ ಭಾರತದ ರಾಜಕಾರಣವನ್ನು ಪೋಷಿಸಿದ್ದ, ಆಧುನಿಕ ಭಾರತದ ರಾಜಕೀಯ ಚಿಂತನೆಯ ಮಹಾನ್ ಪರಂಪರೆಯೂ ಸಂಸ್ಕೃತದಂತೆಯೇ ಹಠಾತ್ ಸಾವಿಗೀಡಾಗಿದೆ. ಕುಸಿಯುತ್ತಿರುವ ರಾಜಕೀಯ ನೈತಿಕತೆಯತ್ತ ಮಾತ್ರ ಎಲ್ಲರೂ ಬೊಟ್ಟು ಮಾಡುತ್ತಿದ್ದಾರೆ. ಹಾಗೆ ಮಾಡುತ್ತಾ ರಾಜಕೀಯ ಪ್ರಜ್ಞೆಯ ಸವೆತ, ರಾಜಕೀಯ ಪರಿಭಾಷೆಗಳ ಕುಸಿತ, ರಾಜಕೀಯ ಟೀಕೆ–ಟಿಪ್ಪಣಿಗಳ ಬಗೆಗಿನ ಅಪಥ್ಯ, ರಾಜಕೀಯ ತೀರ್ಮಾನದಲ್ಲಿನ ಬೌದ್ಧಿಕ ಬಡತನ ಮತ್ತು ಕ್ಷೀಣಿಸುತ್ತಿರುವ ರಾಜಕೀಯ ಕಾರ್ಯಸೂಚಿಗಳಂತಹ ಗಂಭೀರ ಸಮಸ್ಯೆಗಳನ್ನು ಮರೆಯುತ್ತಿದ್ದೇವೆ. ಭಾರತದ ರಾಜಕಾರಣವನ್ನು ರೂಪಿಸಿದ್ದ ಚಿಂತನೆಗಳ ನದಿ ಹಠಾತ್ತಾಗಿ ಬತ್ತಿಹೋಗಿದೆ. ಇದನ್ನೇ ಚಂದ ಮಾಡಿ, ‘ಆಧುನಿಕ ಭಾರತೀಯ ರಾಜಕೀಯ ಚಿಂತನೆಗಳ ಹಠಾತ್ ನಿಧನ’ ಎನ್ನಬಹುದು.

ಜಗತ್ತಿನ ಎಲ್ಲ ಚಿಂತನಾ ಚಳವಳಿಗಳ ಸಾವಿಗೆ ಹೇಗೆ ದಿನಾಂಕವನ್ನು ನಿಗದಿ ಮಾಡಲಾಗದೋ ಹಾಗೆಯೇ ಭಾರತದ ರಾಜಕೀಯ ಚಿಂತನೆಗಳೂ ಇಂಥದ್ದೇ ದಿನ ಸತ್ತುಹೋದವು ಎಂದು ಹೇಳಲಾಗದು. ಆದರೆ, ವಸಾಹತೋತ್ತರ ಭಾರತದ ಮೊದಲ ಒಂದೆರಡು ದಶಕಗಳಲ್ಲೇ ಇದು ಸಂಭವಿಸಿತು ಎಂದು ಸ್ಥೂಲವಾಗಿ ಹೇಳಬಹುದು. 1947ರ ಹೊತ್ತಿಗೆ ಇದ್ದ ರಾಜಕೀಯ ಚಿಂತಕರನ್ನು ನೆನಪಿಸಿಕೊಳ್ಳಿ. ನಮಗೆ ನೆನಪಾಗುವುದು ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ಮಾತ್ರವಲ್ಲ. ಆಗ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿದ್ದರೂ ಬೌದ್ಧಿಕ ರಾಜಕಾರಣದ ಮೇರುಶಿಖರಗಳಂತಿದ್ದ ಎಂ.ಎನ್.ರಾಯ್, ಶ್ರೀ ಅರಬಿಂದೊ ಅಂತಹವರೂ ಇದ್ದರು. ಸಕ್ರಿಯವಾಗಿ ಇದ್ದವರಲ್ಲೇ ಕಾಂಗ್ರೆಸ್ನ ಮೌಲಾನಾ ಅಬುಲ್ ಕಲಾಂ ಆಜಾದ್, ಸಮಾಜವಾದದ ನೆಲಗಟ್ಟಿನ ಆಚಾರ್ಯ ನರೇಂದ್ರ ದೇವ, ಜಯಪ್ರಕಾಶ್ ನಾರಾಯಣ್ ಮತ್ತು ರಾಮಮನೋಹರ ಲೋಹಿಯಾ, ಕಮ್ಯುನಿಸ್ಟರ ಪೈಕಿ ಎಸ್.ಎ.ಡಾಂಗೆ ಮತ್ತು ಪಿ.ಸಿ.ಜೋಷಿ, ಸಾಮಾಜಿಕ ನ್ಯಾಯದ ಪ್ರತಿಪಾದಕ ರಾಮಸ್ವಾಮಿ ನಾಯ್ಕರ್ ಪೆರಿಯಾರ್, ಆರ್ಥಿಕ ತಜ್ಞ ಸಿ.ರಾಜಗೋಪಾಲಾ ಚಾರಿ, ಒಂದೆಡೆ ಹಿಂದುತ್ವದ ಪ್ರತಿಪಾದಕ ವಿ.ಡಿ.ಸಾವರ್ಕರ್, ಮತ್ತೊಂದೆಡೆ ಕಟ್ಟಾ ಇಸ್ಲಾಂವಾದದ ಮೌಲಾನಾ ಮೌದೂದಿ ಇದ್ದರು. ಹೀಗೆ ಎಲ್ಲ ರಾಜಕೀಯ ಸಿದ್ಧಾಂತಗಳಿಗೆ ಸಂಬಂಧಿಸಿದ ಚಿಂತಕರ ದಂಡೇ ಇತ್ತು.

ಅವರ ಚಿಂತನೆ, ಸಿದ್ಧಾಂತಗಳನ್ನು ನೀವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಆದರೆ ಅವರೆಲ್ಲರೂ ರಾಜಕೀಯ ಚಿಂತಕರಾಗಿದ್ದರು ಎಂಬುದನ್ನು ನಿರಾಕರಿಸಲಾಗದು. ಅವರ ರಾಜಕೀಯ ಕ್ರಿಯೆಗಳು ಮತ್ತು ರಾಜಕಾರಣವು ಭವಿಷ್ಯದ ಭಾರತವನ್ನು ಕಟ್ಟುವುದರಲ್ಲೇ ಕೇಂದ್ರಿತವಾಗಿದ್ದವು. ಪ್ರತಿದಿನದ ರಾಜಕಾರಣದ ಭಾಗವಾಗಿದ್ದರೂ ಇತರ ವಿಷಯಗಳ ಬಗ್ಗೆಯೂ ಅವರು ಯೋಚಿಸುತ್ತಿದ್ದರು, ಮಾತನಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರೆಲ್ಲರ ಚಿಂತನೆ ಮತ್ತು ಕ್ರಿಯೆಗಳು ಭಾರತಕ್ಕೇ ಕೇಂದ್ರಿತವಾಗಿದ್ದರೂ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಆಳವಾದ ಅರಿವು ಅವರಲ್ಲಿತ್ತು. ಓದು ಮತ್ತು ಬರಹ ಇಂಗ್ಲಿಷ್ನಲ್ಲೇ ಇದ್ದರೂ ಭಾರತೀಯ ಭಾಷೆಗಳ ಜತೆಗಿನ ಕೊಂಡಿಯನ್ನು ಅವರು ಕಳಚಿಕೊಂಡಿರಲಿಲ್ಲ. ಪರಂಪರೆ ಮತ್ತು ಆಧುನಿಕತೆ ಕುರಿತಾದ ಅವರ ನಿಲುವುಗಳು ಭಿನ್ನವಾಗಿದ್ದರೂ ಅಪ್ಪಟ ದೇಸೀಯವಾದ ಮತ್ತು ಭಾರತಕ್ಕೆ ಹೊಂದುವ ಆಧುನಿಕತೆಯನ್ನು ಸಾಮೂಹಿಕವಾಗಿ ರೂಪಿಸಿದರು. ಅವರೆಲ್ಲರ ರಾಜಕೀಯ ಪ್ರತಿಪಾದನೆಗಳ ಮಹಾಪೂರವು ನಮ್ಮ ಸಂವಿಧಾನ, ವೈವಿಧ್ಯಮಯ ರಾಜಕೀಯ ಸಿದ್ಧಾಂತಗಳು ಮತ್ತು ಸ್ಪರ್ಧಾತ್ಮಕ ರಾಜಕಾರಣವನ್ನು ರೂಪಿಸಿತು.

ಸ್ವಾತಂತ್ರ್ಯ ಬಂದ ನಂತರದ ಮೊದಲ 25 ವರ್ಷಗಳಲ್ಲೇ ಈ ಪರಂಪರೆ ಹಠಾತ್ ಕಣ್ಮರೆಯಾಯಿತು. 70ರ ದಶಕದ ಹೊತ್ತಿಗೆ ಮೇಲಿನ ರಾಜಕೀಯ ಚಿಂತಕರಲ್ಲಿ ಬಹುತೇಕರು ಇಹಲೋಕ ತ್ಯಜಿಸಿದರು. ಅವರ ಚಿಂತನೆಗಳು ಸಿದ್ಧಾಂತವಾಗಿಯಷ್ಟೇ ಉಳಿದವು. ಆ ಹೊತ್ತಿಗೂ ರಾಜಕೀಯ ಚಿಂತಕರಲ್ಲಿ ಹಲವರು ರಾಜಕಾರಣಿಗಳೇ ಆಗಿದ್ದರೂ ಅವರ ಚಿಂತನೆಯು 1947ರಲ್ಲಿ ಇದ್ದ ಮಟ್ಟದಲ್ಲಿ ಇರಲಿಲ್ಲ. ಜಯಪ್ರಕಾಶ್ ನಾರಾಯಣ್ ಅವರ ‘ಸಂಪೂರ್ಣ ಕ್ರಾಂತಿ’ ಸಮಾಜವಾದದ ಕೊನೆಯ ಸೊಡರಾಗಿ ಉಳಿದಿತ್ತು, ಚಾರು ಮಜುಂದಾರ್ ಅವರು ಮಾರ್ಕ್ಸ್ವಾದದ ಕಡೆಯ ಪ್ರವರ್ತಕರಲ್ಲಿ ಒಬ್ಬರಾಗಿದ್ದರು, ಏಕಮುಖಿಯಾಗಿದ್ದರೂ ವಿನೋಬಾ ಭಾವೆ ಅವರು ಗಾಂಧಿವಾದದ ವಾರಸುದಾರಿಕೆ ಹೊತ್ತಿದ್ದರು, ಹಿಂದುತ್ವದ ಅಳಿದುಳಿದಿದ್ದ ಚಿಂತನೆಗಳನ್ನು ಎಂ.ಎಸ್.ಗೋಲ್ವಾಲ್ಕರ್ ಒಗ್ಗೂಡಿಸಿದ್ದರು,ಗ್ರಾಮಕೇಂದ್ರಿತ ಭಾರತದ ಚಿಂತನೆಯನ್ನು ಚರಣ್ ಸಿಂಗ್ ಕಟ್ಟಿದ್ದರು... ಈ ಪಟ್ಟಿ ಅಪೂರ್ಣವೇ ಆಗಿದ್ದರೂ ಖಂಡಿತವಾಗಿಯೂ ಸರಿಯಾದದ್ದೇ ಆಗಿದೆ.

ಉಳಿದಿದ್ದ ರಾಜಕೀಯ ಚಿಂತಕರೂ ಕಾರ್ಯಕರ್ತರೂ 20ನೇ ಶತಮಾನದ ಅಂತ್ಯದ ಹೊತ್ತಿಗೆ ಮರೆಯಾದರು. ಕಿಶನ್ ಪಟ್ನಾಯಕ್, ಸಚ್ಚಿದಾನಂದ ಸಿನ್ಹಾ, ರಾಮದಯಾಳ್ ಮುಂಡಾ, ಧರಂ ಪಾಲ್ ಮತ್ತು ಬಿ.ಡಿ.ಶರ್ಮಾ ಅವರು ಮುಖ್ಯವಾಹಿನಿಯ ರಾಜಕಾರಣದಿಂದ ಹೊರಗೇ ಉಳಿದರು. ಅಲ್ಲಿಗೇ ಕೊನೆ. ರಾಜಕೀಯ ಮತ್ತು ರಾಜಕಾರಣವನ್ನು ಕಡೆದು ರೂಪಿಸುವ ಅರ್ಥಪೂರ್ಣವಾದ ರಾಜಕೀಯ ಚಿಂತನೆ ಇಲ್ಲದೇ ಹೋಯಿತು.

ಆಧುನಿಕ ಭಾರತೀಯ ರಾಜಕೀಯ ಚಿಂತನೆಯ ಸಾವು ಎಂದರೆ ನಮ್ಮಲ್ಲಿ ಪ್ರಖರ ಬುದ್ಧಿಯ ಚಿಂತಕರು ಮತ್ತು ಬರಹಗಾರರು ಇಲ್ಲ ಎಂದರ್ಥವಲ್ಲ. ಈ ಹಿಂದೆ ಇದ್ದುದಕ್ಕಿಂತಲೂ ಅಂತಹವರು ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ರಾಜಕಾರಣವು ಅವರ ಚಿಂತನಾ ಕ್ರಮದ ಕೇಂದ್ರಬಿಂದುವಲ್ಲ ಎಂಬುದನ್ನು ಹೇಳಬೇಕಾಗುತ್ತದೆ. ಈಗಿನ ವೈವಿಧ್ಯಮಯ ರಾಜಕೀಯ ಚಿಂತನಾ ಕ್ರಮಗಳು ಭಿನ್ನ ರಾಜಕಾರಣಗಳನ್ನು ಒಗ್ಗೂಡಿಸುವಂತಹ ತರ್ಕಬದ್ಧ ಸಂವಾದ, ವ್ಯಾಪಕ ಚರ್ಚೆ ಮತ್ತು ಅರ್ಥಪೂರ್ಣವಾದ ಮಾತುಕತೆಯನ್ನಂತೂ ರೂಪಿಸುತ್ತಿಲ್ಲ. ಇದಕ್ಕೆ ಅಪವಾದಗಳೂ ಇವೆ. ಅಭಿವೃದ್ಧಿಯ ಪ್ರಬಲ ಮಾದರಿಯ ಟೀಕಾಕಾರರು, ಪರ್ಯಾಯವಾಗಿ ಬಹುತ್ವದ ಶೋಧಕರು, ಸ್ತ್ರೀವಾದಿಗಳು, ಅಂಬೇಡ್ಕರ್ವಾದಿಗಳು ರಾಜಕೀಯ ಚಿಂತನೆಯ ಪರಂಪರೆಯನ್ನು ಇಂದಿಗೂ ಜೀವಂತವಾಗಿ ಇರಿಸಿದ್ದಾರೆ.

ಒಟ್ಟಾರೆಯಾಗಿ ನೋಡುವುದಾದರೆ, ರಾಜಕೀಯ ಚಿಂತನೆ ಎಂಬುದು ನಿಧಾನವಾಗಿ ವಿದ್ವಾಂಸ ಲೋಕದಲ್ಲೇ ಕೇಂದ್ರಿತವಾಗುತ್ತಿದೆ. ಈ ಪರಿವರ್ತನೆ ರಜನಿ ಕೊಠಾರಿ, ಡಿ.ಎಲ್.ಸೇತ್, ಆಶಿಶ್ ನಂದಿ, ಪಾರ್ಥ ಚಟರ್ಜಿ, ಸುದೀಪ್ತ ಕವಿರಾಜ್ ಮತ್ತು ರಾಜೀವ್ ಭಾರ್ಗವ ಅವರಂತಹ ಪ್ರಖರ ರಾಜಕೀಯ ಸಿದ್ಧಾಂತಿಗಳನ್ನು ರೂಪಿಸಿದೆ. ಆದರೆ ಅವರ ರಾಜಕೀಯ ಚಿಂತನೆಗಳು ಈಗಿನ ರಾಜಕಾರಣವನ್ನು ಆಳವಾಗಿ ಪ್ರಭಾವಿಸಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಈ ಒಂದಿಬ್ಬರ ಉದಾಹರಣೆಗಳನ್ನು ಹೊರತುಪಡಿಸಿ ರಾಜಕೀಯ ಚಿಂತನೆಯನ್ನು ರಾಜ್ಯಶಾಸ್ತ್ರ ಎಂಬ ಶೈಕ್ಷಣಿಕ ಶಿಸ್ತು ಆವರಿಸಿಕೊಂಡಿದ್ದು ರಾಜಕಾರಣಕ್ಕೂ ಬೌದ್ಧಿಕತೆಗೂ ವಿಧ್ವಂಸಕವಾಗಿಯೇ ಪರಿಣಮಿಸಿತು. ರಾಜಕಾರಣದೊಟ್ಟಿಗೆ ಬೆರೆಯದ, ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿರದ ರಾಜ್ಯಶಾಸ್ತ್ರವು ಶೈಕ್ಷಣಿಕ ಒಲವು ಮತ್ತು ಈರ್ಷ್ಯೆಗಳಿಗಷ್ಟೇ ಸೀಮಿತವಾಗುತ್ತಿದೆ. ಈಗಿನ ರಾಜಕೀಯಕ್ಕೂ ಅದಕ್ಕೂ ಸಂಬಂಧವೇ ಇಲ್ಲದಂತಿದೆ.

ನಮ್ಮ ರಾಜಕಾರಣದ ಇಂದಿನ ಹೀನಾಯ ಸ್ಥಿತಿಯು ಮೇಲಿನ ಇಂತಹ ಸೊರಗುವಿಕೆಯ ಪ್ರತಿಫಲ. ನಮ್ಮ ಗಣರಾಜ್ಯವನ್ನು ಮರುಗಳಿಸಿಕೊಳ್ಳಲು ಆಧುನಿಕ ಭಾರತೀಯ ರಾಜಕೀಯ ಚಿಂತನಾಕ್ರಮಗಳಿಗೆ ಪುನಶ್ಚೇತನ ನೀಡಲೇಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.