ಈ ಸಲದ ಲೋಕಸಭಾ ಚುನಾವಣೆಯ ಅಚ್ಚರಿಯ ಅಲೆಗಳು, ಅಚ್ಚರಿಯ ಫಲಿತಾಂಶಗಳ ನಡುವೆ ಉತ್ತರಪ್ರದೇಶವು ಎದ್ದು ಕಾಣುವ ಹೊಸ ಹಾದಿಯೊಂದನ್ನು ತೆರೆದಿದೆ: 50 ವರ್ಷದ ಅಖಿಲೇಶ್ ಯಾದವ್ ತೂಕದ ನಡೆನುಡಿಗಳಿಂದ ರೂಪಿಸಿಕೊಂಡ ನಾಯಕತ್ವದ ಯಶಸ್ಸು, 37 ವರ್ಷದ ಚಂದ್ರಶೇಖರ್ ಆಜಾದ್ ರಾವಣ್ ಗೆಲುವು ಸೂಚಿಸುತ್ತಿರುವ ದಲಿತ ರಾಜಕಾರಣದ ಹೊಸ ಘಟ್ಟ- ಇವೆರಡೂ ದೇಶದ ರಾಜಕಾರಣದ ಮುಂದಿನ ದಿಕ್ಕುಗಳನ್ನು ಸೂಚಿಸುವಂತಿವೆ.

ರಾವಣ್ ಭಾಷೆ ಹಾಗೂ ನೀಲಿ ಶಾಲು ಬಹುಜನ ಸಮಾಜ ಪಕ್ಷದ ರಾಜಕಾರಣದ ಮುಂದುವರಿದ ಭಾಗದಂತಿವೆ. ರಾಮಮನೋಹರ ಲೋಹಿಯಾ ಅವರ ಪಕ್ಷದ ಹೆಸರನ್ನು, ಕೆಂಪು ಟೋಪಿಯನ್ನು ಸಮಾಜವಾದಿ ಪಕ್ಷ ಹಾಗೇ ಉಳಿಸಿಕೊಂಡಿದೆ. 60 ವರ್ಷಗಳ ಕೆಳಗೆ ಲೋಹಿಯಾ ಪ್ರಯತ್ನಿಸಿದ ಜಾತಿ ಸಮೀಕರಣವನ್ನು ಸೀಮಿತವಾಗಿಯಾದರೂ ಮತ್ತೆ ಮಾಡಿದೆ. ಕರ್ನಾಟಕದ ‘ಅಹಿಂದ’ದಂತೆ ಉತ್ತರಪ್ರದೇಶದಲ್ಲೂ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ (ಪಿಡಿಎ) ಸಮೀಕರಣ ಮಾಡಿದ ಅಖಿಲೇಶ್, ‘ಇಂಡಿಯಾ’ ಮೈತ್ರಿಕೂಟವು ಉತ್ತರಪ್ರದೇಶದಲ್ಲಿ 43 ಸ್ಥಾನಗಳನ್ನು ಪಡೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.

ಆದರೆ ಬಿಎಸ್‌ಪಿಯ ಹಿನ್ನಡೆ ಕಳವಳಕಾರಿಯಾಗಿದೆ. ಹತ್ತು ವರ್ಷದ ಕೆಳಗೆ ಭೀಮ್ ಆರ್ಮಿ ಕಟ್ಟಿ ಹೊಸ ತಲೆಮಾರಿನ ದಲಿತ ನಾಯಕರಾಗಿ ಉದಯಿಸಿದ ರಾವಣ್ ಅವರನ್ನು ಬಿಎಸ್‌ಪಿ ಹತ್ತಿರಕ್ಕೇ ಸೇರಿಸಲಿಲ್ಲ. ರಾವಣ್ ಈ ಬಾರಿ ತಮ್ಮ ಆಜಾದ್ ಸಮಾಜ್ ಪಕ್ಷದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರು. ನಗೀನಾ ಮೀಸಲು ಕ್ಷೇತ್ರದಿಂದ ಶೇಕಡ 51.2ರಷ್ಟು ಮತಗಳನ್ನು ಪಡೆದು ಗೆದ್ದರು. ಪ್ರಿಯಾಂಕಾ ಗಾಂಧಿ ಕೂಡ ದಿನಕ್ಕೆ ಇಪ್ಪತ್ತು ಬೀದಿ ಸಭೆಗಳನ್ನು ನಡೆಸಿದ್ದು ಫಲ ಕೊಟ್ಟಿತು.

ಮಾತೆತ್ತಿದರೆ ಬುಲ್ಡೋಜರ್ ಎನ್ನುತ್ತಿದ್ದ ಯೋಗಿ ಆದಿತ್ಯನಾಥ ಅವರ ಅಹಂಕಾರ ಮತ್ತು ಆದಿತ್ಯನಾಥ ಅವರ ಮಹತ್ವಾಕಾಂಕ್ಷೆಗೆ ಅಡ್ಡಗಾಲು ಹಾಕುವ ದಿಲ್ಲಿ ನಾಯಕರ ಯೋಜನೆ ಎರಡೂ ಸೇರಿಕೊಂಡು ಉತ್ತರಪ್ರದೇಶದಲ್ಲಿ ಬಿಜೆಪಿಗೆ ತಿರುಗುಬಾಣವಾದಂತಿದೆ! ಫೈಜಾಬಾದ್ ಜಿಲ್ಲೆಯ ಜನರ ಯೋಗಕ್ಷೇಮವನ್ನೇ ವಿಚಾರಿಸದೆ, ರಾಮಮಂದಿರವನ್ನೇ ಅತಿ ಮಾಡಿದ ಬಿಜೆಪಿಯು ಅಯೋಧ್ಯೆಯಿರುವ ಕ್ಷೇತ್ರದಲ್ಲೇ ಸೋತಿದೆ. ಇನ್ನಾದರೂ ಬಿಜೆಪಿಯು ಕೋಮು ವಿಭಜನೆ, ಮುಸ್ಲಿಂ ದ್ವೇಷದ ಸಂಕುಚಿತ ರಾಜಕಾರಣಕ್ಕೆ ಕೊನೆ ಹೇಳಬೇಕಾಗಿದೆ. ಬಿಹಾರದಲ್ಲಿ ತರುಣ ಚಿರಾಗ್ ಪಾಸ್ವಾನ್, ಬಿಜೆಪಿಯೇ ತಮ್ಮ ಪಕ್ಷವನ್ನು ಒಡೆದಿದ್ದರೂ ಮತ್ತೆ ಎನ್‌ಡಿಎ ಸೇರಿ 5 ಸೀಟು ಗೆದ್ದು ಮೇಲೆದ್ದಿದ್ದಾರೆ. ಡಾಕ್ಟರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದರೂ ಒಬ್ಬರೇ ಬಿಹಾರ ಸುತ್ತಿದ ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಡೆದಿದ್ದು ನಾಲ್ಕು ಸೀಟುಗಳಾದರೂ, ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚು (ಶೇ 22.24) ಮತ ಪಡೆದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈಗ ಬಿಹಾರದಲ್ಲಿ ‘ಇಂಡಿಯಾ’ 9 ಸ್ಥಾನಗಳನ್ನು ಗೆದ್ದಿದೆ. ಬರಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಅಖಿಲೇಶ್ ಉತ್ತರಪ್ರದೇಶದಲ್ಲಿ, ತೇಜಸ್ವಿ ಬಿಹಾರದಲ್ಲಿ ಮುಂಚೂಣಿ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಚಿರಾಗ್ ಪಾಸ್ವಾನ್ ಬಿಜೆಪಿಯ ಬೊಂಬೆಯಂತೆ ಆಡದೆ ಗಟ್ಟಿಯಾಗಿದ್ದರೆ ಹೊಸ ನಾಯಕನಾಗಿ ಬೆಳೆಯಬಲ್ಲರು.

ದೆಹಲಿಯಲ್ಲಿ ಕನ್ಹಯ್ಯ ಕುಮಾರ್ ಸೋತಿದ್ದರೂ ಕಾಂಗ್ರೆಸ್ಸಿನ ಭವಿಷ್ಯದ ಯುವನಾಯಕರಾಗಿ ಮೂಡಿದ್ದಾರೆ. ಕನ್ಹಯ್ಯ ತಮ್ಮ ತವರುನಾಡಾದ ಬಿಹಾರದಲ್ಲಿ ಸ್ಪರ್ಧಿಸಲು ತೇಜಸ್ವಿ ಯಾದವ್ ಅಡ್ಡಿಯಾಗದಿದ್ದರೆ, ಆರ್‌ಜೆಡಿಗೂ ಮೈತ್ರಿಕೂಟಕ್ಕೂ ಅನುಕೂಲವಾಗುತ್ತಿತ್ತು. ತೇಜಸ್ವಿ ಈ ಬಗ್ಗೆ ಮುಂದಿನ ಚುನಾವಣೆಗಳಲ್ಲಾದರೂ ಸರಿಯಾಗಿ ಯೋಚಿಸಬೇಕಾಗುತ್ತದೆ. ಕನ್ಹಯ್ಯ ಅವರ ಪ್ರಗತಿಪರ, ಆಕರ್ಷಕ ಮಾತುಗಳು ಹೊಸ ತಲೆಮಾರನ್ನು ಹಿಡಿದಿಡತೊಡಗಿವೆ. ಒಗ್ಗೂಡಿಸುವ ಹಾಗೂ ತಿದ್ದುವ ಭಾಷೆಯನ್ನು ಹೊಸ ತಲೆಮಾರಿನ ಒಂದು ವರ್ಗ ದೊಡ್ಡ ಮಟ್ಟದಲ್ಲೇ ಸ್ವೀಕರಿಸತೊಡಗಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಕ್ಷಿಪ್ರ ರಾಜಕೀಯ ತಿರುವುಗಳಿಂದಲೇ ಸೃಷ್ಟಿಯಾದ ದೃಢ ನಾಯಕನಾಗಿ ಬೆಳೆದಿದ್ದಾರೆ. ಹಳೆಯ ಶಿವಸೇನಾದ ಮತೀಯ ಜಿಗುಟಿನಿಂದ ಹೊರಬಂದ ಉದ್ಧವ್- ಸಂಜಯ್ ರಾವತ್ ಜೋಡಿ ಶಿವಸೇನಾವನ್ನು ಒಡೆದವರ ಎದುರು ಗಟ್ಟಿಯಾಗಿ ನಿಂತಿತು. ಪ್ರಕಾಶ್ ಅಂಬೇಡ್ಕರ್ ಜೊತೆಯಾಗಿದ್ದರೆ ಉದ್ಧವ್‌ಗೆ ಇನ್ನಷ್ಟು ಬಲ ಬರುತ್ತಿತ್ತು. ತಮಿಳುನಾಡಿನಲ್ಲಿ ಸ್ಟಾಲಿನ್ ಗೊಂದಲವಿಲ್ಲದೆ ಮೈತ್ರಿ ರಾಜಕಾರಣವನ್ನು ಮುನ್ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಎಲ್ಲ 39 ಸೀಟುಗಳೂ ದಕ್ಕಿವೆ!

ಹೊಸ ತಲೆಮಾರಿನ ಡಿಜಿಟಲ್ ಇಂಡಿಯಾದ ಒಂದು ವರ್ಗ ಸರ್ವಾಧಿಕಾರಿ ಪ್ರವೃತ್ತಿಗಳಿಗೆ ತೋರಿದ ಪ್ರತಿರೋಧ ಕೂಡ ಈ ಚುನಾವಣೆಯಲ್ಲಿ ಮುಖ್ಯವಾಗಿತ್ತು. ಉದ್ಯಮಪತಿಗಳ ಹಿಡಿತದಲ್ಲಿ ಉಸಿರುಗಟ್ಟಿದ್ದ ಪ್ರಗತಿಪರ ಪತ್ರಕರ್ತರು ಅಂಥ ಸಂಸ್ಥೆಗಳಿಂದ ಹೊರಬಂದು ತಂತಮ್ಮ ಯೂಟ್ಯೂಬ್ ಚಾನೆಲ್‌ಗಳ ಮೂಲಕ ಮಾಡಿದ ಕೆಲಸವೂ ಮಹತ್ವದ್ದು. ‘ಗೋದಿ ಮೀಡಿಯಾ’ ಪದವನ್ನು ಹುಟ್ಟುಹಾಕಿದ ರವೀಶ್ ಕುಮಾರ್ ಅವರ ಚಾನೆಲ್‌ನ ಚಂದಾದಾರರು ಕೋಟಿ ದಾಟಿದ್ದಾರೆ! ಜೊತೆಗೆ, ದಲಿತ ಸಂಘಟನೆಗಳು, ಸ್ವತಂತ್ರ ವ್ಯಕ್ತಿಗಳು, ವೇದಿಕೆಗಳು ವಾಕ್ ಸ್ವಾತಂತ್ರ್ಯಕ್ಕೆ ಕುತ್ತು ಬಂದಿರುವ ಈ ಕಾಲದಲ್ಲಿ ಸಂವಿಧಾನ ರಕ್ಷಣೆಯ ಹೋರಾಟಗಳನ್ನು ಸದಾ ಮುಂದುವರಿಸಿವೆ.

ಹೇಳಿದ ಸುಳ್ಳನ್ನೇ ಹೇಳಿ ಹೇಳಿ ಸತ್ಯ ಮಾಡುವ ಹಿಟ್ಲರನ ಪ್ರಚಾರ ಮಂತ್ರಿ ಗೋಬೆಲ್ಸ್ ತಂತ್ರ ಎಲ್ಲ ಕಾಲದಲ್ಲೂ ನಡೆಯುವುದಿಲ್ಲ ಎಂಬುದನ್ನೂ ಈ ಚುನಾವಣೆ ತೋರಿಸಿಕೊಟ್ಟಿದೆ. ವಿಶ್ಲೇಷಕರೊಬ್ಬರು
ಹೇಳಿದಂತೆ, ಪ್ರಧಾನಿಯ ಪರವಾಗಿ ‘ರಾಷ್ಟ್ರೀಯ’ ಎನ್ನಲಾದ ನ್ಯೂಸ್ ಚಾನೆಲ್‌ಗಳು ಪದೇ ಪದೇ ಹೇಳಿದ ಉತ್ಪ್ರೇಕ್ಷೆಯ ಮಾತುಗಳ ಬಗ್ಗೆ ಜನ ತಲೆ ಕೆಡಿಸಿಕೊಳ್ಳಲೇ ಇಲ್ಲ! ಅಯೋಧ್ಯೆಯಂಥ ಧಾರ್ಮಿಕ ಸಂಕೇತದ ದುರ್ಬಳಕೆಯನ್ನು ಹಿಮ್ಮೆಟ್ಟಿಸಿದ ಚುನಾವಣೆಯಲ್ಲಿ ಹಠಾತ್ತನೆ ಅಂಬೇಡ್ಕರ್ ಪ್ರತ್ಯಕ್ಷವಾದ ರೀತಿ ರೋಮಾಂಚಕವಾಗಿದೆ. ಸಂವಿಧಾನವನ್ನು ಬದಲಿಸುವ ಮಾತಿನ ಟ್ರೈಲರನ್ನು ಬಿಜೆಪಿಯ ಕೆಲವರು ಬಿಟ್ಟರು. ತಕ್ಷಣ ವಿರೋಧ ಪಕ್ಷವು ಸಂವಿಧಾನವನ್ನೇ ಪಟ್ಟಾಗಿ ಹಿಡಿದುಕೊಂಡಿತು! ಬಿಜೆಪಿ ಪ್ರತಿಸಲ ಹುಸಿಕಥನ ಸೃಷ್ಟಿಸಿ ಅದಕ್ಕೆ ಪ್ರತಿಪಕ್ಷಗಳು ಉತ್ತರ ಕೊಡುವಂತೆ ಮಾಡುತ್ತಿತ್ತು. ಈ ಸಲ ಪ್ರತಿಪಕ್ಷಗಳು ಸಂವಿಧಾನದ ಪ್ರಬಲ ಕಥನವನ್ನೇ ಸೃಷ್ಟಿ ಮಾಡಿಬಿಟ್ಟವು.

ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿ ಹಿಡಿದು ದೇಶ ಸುತ್ತಿ, ಸಂವಿಧಾನದ ಜನಪ್ರಿಯ ಬಿಂಬವೊಂದನ್ನು ಸೃಷ್ಟಿಸಿದರು. ಸಂವಿಧಾನದ ಭಾಷೆಯನ್ನು ರಾಹುಲ್ ಆಳವಾಗಿ, ಪ್ರಾಮಾಣಿಕವಾಗಿ ತಮ್ಮ ರಾಜಕೀಯ ಪಯಣದ ಭಾಗವಾಗಿ ಮಾಡಿಕೊಂಡರೆ ಕಾಂಗ್ರೆಸ್ಸಿಗೂ ಭಾರತದ ರಾಜಕಾರಣಕ್ಕೂ ಒಳ್ಳೆಯದಾಗುತ್ತದೆ. ಆಗ ಚಿಲ್ಲರೆ ರಾಜಕೀಯ ಚರ್ಚೆಗಳ ಬದಲಿಗೆ ಸಂವಿಧಾನದ ಸಂದೇಶಗಳು ಜನಮನದ ಭಾಗವಾಗಬಲ್ಲವು. ಸಂವಿಧಾನವನ್ನು ಚುನಾವಣಾ ಪ್ರಚಾರಕ್ಕಷ್ಟೇ ಸೀಮಿತಗೊಳಿಸದೆ, ಸಂವಿಧಾನದ ಸ್ಪಿರಿಟ್ ದೊಡ್ಡ ಮಟ್ಟದಲ್ಲಿ ಎಲ್ಲ ದಿಕ್ಕುಗಳಿಂದಲೂ ಸಂಸತ್ತನ್ನು ಪ್ರವೇಶಿಸುವಂತೆ ಆಗಬೇಕು. ಆಗ ಸಂಸತ್ತಿನ ಚರ್ಚೆಗಳಿಗೆ ನೆಹರೂ, ಭೂಪೇಶ್ ಗುಪ್ತಾ, ಲೋಹಿಯಾ ಅವರ ಕಾಲದ ಘನತೆ ಬರಬಲ್ಲದು. ಆಗಲಾದರೂ ಜೊಳ್ಳು ಭಾಷಣ ಹಾಗೂ ಗಟ್ಟಿ ರಾಜಕೀಯ ಚರ್ಚೆಗಳ ನಡುವಿನ ವ್ಯತ್ಯಾಸ ಎಲ್ಲರಿಗೂ ಅರ್ಥವಾಗಬಲ್ಲದು. ಏನೇನೋ ಕುತಂತ್ರ ಮಾಡಿ ಓಡಿಸಿದರೂ ಪುಟಿದೆದ್ದು ಪಾರ್ಲಿಮೆಂಟಿಗೆ ಬಂದಿರುವ ಮಹುವಾ ಮೊಯಿತ್ರಾ ಇಂಥ ಗಂಭೀರ ಚರ್ಚೆಗಳನ್ನು ಹಿಂದಿನ ಪಾರ್ಲಿಮೆಂಟಿನಲ್ಲೇ ಆರಂಭಿಸಿದ್ದರು.

ಈ ಸಲ ಯಾವ್ಯಾವ ಥರದ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ, ನೋಡಿ: ಸೇಡಿನ ರಾಜಕಾರಣಕ್ಕಾಗಿ ಇ.ಡಿ., ಸಿಬಿಐ ಸಂಸ್ಥೆಗಳ ಬಳಕೆಯನ್ನು, ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ದ್ರೋಹದ ರಾಜಕಾರಣವನ್ನು ಮಹಾರಾಷ್ಟ್ರ ತಿರಸ್ಕರಿಸಿದೆ. ಶಿವಸೇನಾ, ಎನ್‌ಸಿಪಿಯನ್ನು ಒಡೆದು ಅಧಿಕಾರ ಕಬಳಿಸಿದವರಿಗೆ ಜನ ಬಲವಾದ ಹೊಡೆತವನ್ನೇ ಕೊಟ್ಟಿದ್ದಾರೆ. ಸಮುದಾಯಗಳನ್ನು ಒಡೆಯುವ, ಅಲ್ಪಸಂಖ್ಯಾತ ವಿರೋಧಿ ಭಾಷೆಯನ್ನು ಜನ ತಿರಸ್ಕರಿಸಿದ್ದಾರೆ. ದಕ್ಷಿಣದ ರಾಜ್ಯಗಳು ತೆರಿಗೆಯಲ್ಲಿ ತಮಗೆ ಬರಬೇಕಾದ ನ್ಯಾಯಯುತ ಪಾಲನ್ನು ಕೇಳಿದ ತಕ್ಷಣ ಹುಟ್ಟಿದ ಉತ್ತರ- ದಕ್ಷಿಣದ ವಿಭಜನೆಯ ಹುನ್ನಾರವನ್ನೂ ತಿರಸ್ಕರಿಸಿದ್ದಾರೆ. ಯಾವುದೇ ಪಕ್ಷಕ್ಕೆ ಸತತ, ಅತಿ ಬೆಂಬಲ ಕೊಡುವುದು ಸರ್ವಾಧಿಕಾರವನ್ನು ಸೃಷ್ಟಿಸುತ್ತದೆ ಎಂಬುದನ್ನೂ ಜನ ಅರಿತಿದ್ದಾರೆ. ವಿವಿಧ ಸಿದ್ಧಾಂತಗಳ ಪಕ್ಷಗಳ ಮೈತ್ರಿ ರಾಜಕಾರಣ ಮಾತ್ರ ಸರ್ಕಾರಗಳನ್ನು ಹದ್ದುಬಸ್ತಿನಲ್ಲಿ ಇಡಬಲ್ಲದು ಎಂದು ಕೂಡ ಜನ ಈ ಸಲ ತೀರ್ಮಾನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.