ಮಲೆನಾಡಿನ ತಪ್ಪಲಿನ ನಮ್ಮೂರಲ್ಲಿ ಒಮ್ಮೆ ಸುತ್ತಾಡಿದರೆ, ಆರೋಗ್ಯ ಕಾಪಾಡಿಕೊಳ್ಳಲಿಕ್ಕಾಗಿ ಜನ ಹೇಗೆಲ್ಲ ಶ್ರಮಿಸುತ್ತಿರುತ್ತಾರೆಂದು ಅರಿವಾಗುವುದು. ಜ್ವರ-ಕೆಮ್ಮಿಗೆ ಮನೆಯಲ್ಲೇ ಕಷಾಯ-ಲೇಹ್ಯ ಸೇವಿಸುವವರು, ಪಕ್ಕದೂರಿನ ನಾಟಿವೈದ್ಯರ ಮದ್ದಿಗೆ ಮೈಯೊಡ್ಡಿದ ಮೈಕೈ ನೋವಿನವರು, ಉಬ್ಬಸವೋ ಅಥವಾ ಸಂಧಿವಾತ ವೆಂದೋ ಪಟ್ಟಣದ ಆಯುರ್ವೇದ ವೈದ್ಯರಿಗೆ ಮೊರೆ ಹೋದವರು ಹಾಗೂ ನಗರದ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಪೂರೈಸಿ ಬಂದ ಹೃದ್ರೋಗದಂಥ ಕಾಯಿಲೆಯವರು!

ಮೂರು ಸಾವಿರ ವರ್ಷಕ್ಕೂ ಮಿಕ್ಕಿ ಇತಿಹಾಸವಿರುವ ಆರೋಗ್ಯಶಾಸ್ತ್ರಗಳ ವಿಕಾಸದ ಘಟ್ಟಗಳೆಲ್ಲ ಒಮ್ಮೆಲೇ ಪ್ರತ್ಯಕ್ಷವಾದಂತೆ. ಬಹುಶಃ, ನಾಡಿನ ಬೇರೆಡೆಯೂ ದೊರಕಬಲ್ಲ ಸಾಮಾನ್ಯ ಚಿತ್ರಣವಿದು. ಸ್ವಾಸ್ಥ್ಯ ಕಾಯುವ ಚಿಕಿತ್ಸೆ ಯಾವ ಪದ್ಧತಿಗೆ ಸೇರಿದರೇನು ಎಂಬ ಬಹುಜನರ ಉದಾರಭಾವದ ಪ್ರತೀಕವದು. ಹೀಗೆಂದೇ, ವಿವಿಧ ಪದ್ಧತಿಗಳ ಪರಿಣಾಮಕಾರಿ ಅಂಶಗಳನ್ನೆಲ್ಲ ಬೆಸೆದು ‘ಸಂಯೋಜಿತ ಚಿಕಿತ್ಸಾ ವಿಧಾನ’ ರೂಪಿಸಬೇಕೆನ್ನುವ ವಾದವೂ ವೈದ್ಯಕೀಯ ಸಂಶೋಧನಾ ರಂಗದಲ್ಲಿ ಕೇಳಿಬರುತ್ತಿದೆ. ಒಂದು ಹಂತ ದವರೆಗೆ ಇದು ಸ್ವಾಗತಾರ್ಹವೇ. ಆದರೆ, ವೈದ್ಯರೆಂದು ಗುರುತಿಸಿಕೊಂಡವರು ತಮ್ಮ ಪದ್ಧತಿಯ ಕ್ಷಮತೆಗೆ ಮೀರಿದ ಚಿಕಿತ್ಸೆಗೆ ಮುಂದಾದಾಗ ಸಮಸ್ಯೆಗಳು ಉದ್ಭವಿಸ ತೊಡಗುತ್ತವೆ.

ಪಾರಂಪರಿಕ ಹಿನ್ನೆಲೆ- ತರಬೇತಿಯೇ ಇಲ್ಲದೆ ರಾತ್ರೋರಾತ್ರಿ ಹುಟ್ಟಿಕೊಳ್ಳುವ ಖೊಟ್ಟಿ ‘ನವ-ನಾಟಿ ವೈದ್ಯರು’, ಕದ್ದು ಮದ್ದು ಮಾರುವ ನಕಲಿ ವೈದ್ಯರು, ಸ್ಟೆರಾಯ್ಡ್, ಆ್ಯಂಟಿಬಯೊಟಿಕ್ ತರಹದ ನಿಯಂತ್ರಿತ ಕೃತಕ ರಾಸಾಯನಿಕ ಔಷಧಗಳನ್ನೂ ಮನಬಂದಂತೆ ನೀಡುವ ಆಯುಷ್ ವೈದ್ಯರು, ಗಂಭೀರ ಪ್ರಮಾದವೆಸ ಗುವ ಅಲೋಪಥಿ ಚಿಕಿತ್ಸಕರು- ಇವರೆಲ್ಲರ ಸಂಖ್ಯೆ ಏರು ತ್ತಲೇ ಇದೆಯಷ್ಟೇ? ಸಮಾಜವನ್ನೆಲ್ಲ ಆವರಿಸಿಕೊಂಡಿ ರುವ ಲಾಭಕೋರತನವು ಆರೋಗ್ಯಕ್ಷೇತ್ರವನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಸಾರ್ವಜನಿಕ ಆರೋಗ್ಯವು ಮತ್ತಷ್ಟು ಪಾತಾಳಕ್ಕೆ ಕುಸಿಯಬಾರದೆಂದರೆ, ಸರ್ಕಾರದ ಆರೋಗ್ಯ ಹಾಗೂ ಆಯುಷ್ ಇಲಾಖೆಗಳು ಜಂಟಿಯಾಗಿ ಇವೆಲ್ಲವನ್ನೂ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಷ್ಟೆ.

ನಿಯಂತ್ರಣವೇನೋ ಸರ್ಕಾರದ ಜವಾಬ್ದಾರಿಯಾಯಿತು. ಆದರೆ, ಈ ಸಂಕೀರ್ಣ ಸಂಗತಿಯ ಕುರಿತು ಆರೋಗ್ಯಶಾಸ್ತ್ರ ಪರಿಣತರು, ಆರೋಗ್ಯ ಜ್ಞಾನಶಿಸ್ತುಗಳು ಹಾಗೂ ಅವುಗಳ ಸಂಘಟನೆಗಳ ನಿಲುವೇನು? ಆ ನೈತಿಕ ಜವಾಬ್ದಾರಿಗಳ ಚಿಂತನೆಗಳು ಈಗ ಮುನ್ನೆಲೆಗೆ ಬರುತ್ತಿವೆ. ಗ್ರಾಮೀಣ ಬದುಕಿನೊಂದಿಗೆ ಹೆಣೆದುಕೊಂಡಿರುವ ಜನಪದ ವೈದ್ಯಕ್ಷೇತ್ರದ ನೈಜ ಪ್ರತಿನಿಧಿಗಳನ್ನು ಗುರುತಿಸು ವುದೇನೋ ಕಷ್ಟ. ಆದರೆ, ಪಾರಂಪರಿಕ ಪದ್ಧತಿಗಳ ಶ್ರುತಿಯಾದ ಆಯುರ್ವೇದ ಹಾಗೂ ಆಧುನಿಕ ಅಲೋಪಥಿ- ಈ ಜ್ಞಾನಶಿಸ್ತುಗಳಾದರೂ ತಮ್ಮ ಮಿತಿ ಯನ್ನು ಗುರುತಿಸಿಕೊಳ್ಳುತ್ತ, ವಿಧಿ- ನಿಷೇಧಗಳನ್ನು ಅಳವಡಿಸಿಕೊಳ್ಳುವ ಹೊಣೆಗಾರಿಕೆ ತೋರಬೇಕಲ್ಲವೇ? ಅಂಥ ಮಂಥನಕ್ಕೆ ಪೂರಕವಾಗಿ, ಆಯುರ್ವೇದ ಸಮುದಾಯ ಮಾಡಿಕೊಳ್ಳಬೇಕಿರುವ ಆತ್ಮಶೋಧನೆಯ ನೆಲೆಗಳನ್ನು ಗುರುತಿಸುವ ಪ್ರಯತ್ನವಿಲ್ಲಿದೆ.

ತೊಂಬತ್ತರ ದಶಕದ ಆರಂಭದಲ್ಲಿ, ಔಷಧಸಸ್ಯಶಾಸ್ತ್ರದ ಸಂಶೋಧನೆ ಹಾಗೂ ಅಧ್ಯಾಪನದ ಮೂಲಕವೇ ಆಯುರ್ವೇದವನ್ನು ಅರ್ಥೈಸಿಕೊಳ್ಳತೊಡಗಿದ್ದ ನನ್ನಂಥ ಅನೇಕರಿಗೆ, ಆರೋಗ್ಯ ಸುರಕ್ಷತೆಯ ಹೊಸ ಸಾಧ್ಯತೆಗಳ ಅದ್ಭುತ ಕ್ಷೇತ್ರವಾಗಿ ಅದು ತೋರತೊಡಗಿತ್ತು. ಮುಂದಿನ ಎರಡು ದಶಕಗಳಲ್ಲಿ ಹಲವು ಆಯಾಮಗಳಲ್ಲಿ ಕ್ರಾಂತಿಯೇ ಎನ್ನಬಹುದಾದ ಬೆಳವಣಿಗೆಗಳೂ ಜರುಗಿದವು. ವಸಾಹತುಶಾಹಿ ನಿಲುವುಗಳ ಪೊರೆ ಕಳಚಿಕೊಂಡ ಹೊಸ ತಲೆಮಾರು ಹಾಗೂ ಆರ್ಥಿಕ ಉದಾರೀಕರಣದ ಫಲವಾಗಿ ಆಯುರ್ವೇದ ವೇಗವಾಗಿ ಬೆಳೆಯತೊಡಗಿತು. ಚರಕ, ಸುಶ್ರುತ, ವಾಗ್ಭಟರನ್ನೆಲ್ಲ ಆಳವಾಗಿ ಅಭ್ಯಸಿಸಿದ ಎಂ.ಎಸ್.ವಲಿಯಾಥನ್ ತರಹದ ಆಧುನಿಕ ವೈದ್ಯಕೀಯ ಶಾಸ್ತ್ರಜ್ಞರು, ಆಯುರ್ವೇದಕ್ಕೆ ಸ್ವತಂತ್ರ ಜೀವವಿಜ್ಞಾನವಾಗುವ ಸಾಮರ್ಥ್ಯವಿರುವುದನ್ನು ಜಗದ ಮುಂದಿರಿಸಿ ದರು. ಭೂಷಣ ಪಟವರ್ಧನ ಅವರಂಥ ವಿಜ್ಞಾನಿಗಳು ಆಯುರ್ವೇದ ಮೂಲಿಕೆಗಳ ಚಿಕಿತ್ಸಾಗುಣಗಳನ್ನು ಆಧುನಿಕ ವಿಜ್ಞಾನದ ಪರಿಭಾಷೆಯಲ್ಲೇ ಮುಂಡಿಸ ತೊಡಗಿದರು. ಆಯುರ್ವೇದ ಕಾಲೇಜುಗಳು ಹಾಗೂ ಮೂಲಿಕಾಧಾರಿತ ಉದ್ಯಮಗಳು ಬೆಳೆದವು. ಆಯುಷ್ ಇಲಾಖೆ ಪ್ರಕಟಿಸುವ ‘ಆಯುರ್ವೇದಿಕ್ ಫಾರ್ಮಾಕೋಪಿಯ’ದಲ್ಲಿಂದು (API) ಸಾವಿರಕ್ಕೂ ಮಿಕ್ಕಿ ಸಸ್ಯಪ್ರಭೇದಗಳಿವೆ. ಔಷಧಿಮೂಲಿಕೆ ಉದ್ದಿಮೆಗಳ ವಾರ್ಷಿಕ ವಹಿವಾಟು ₹ 2,500 ಕೋಟಿಗೂ ಮಿಕ್ಕಿ ಬೆಳೆದಿದೆ.

ಆಯುರ್ವೇದವು ವೈದ್ಯಕೀಯವಾಗಿ ಹಾಗೂ ಉದ್ದಿಮೆಯಾಗಿ ಬೆಳೆದುನಿಂತ ಈ ಪರಿಯೇ ಅನನ್ಯವಾದದ್ದು. ಆದರೆ, ಜೊತೆಯಲ್ಲಿಯೇ ಹೊಮ್ಮುವ ನೈತಿಕ ಜವಾಬ್ದಾರಿಗಳನ್ನೂ ಆಯುರ್ವೇದಶಿಸ್ತು ನಿರ್ವಹಿಸಬೇಕಲ್ಲವೇ? ಈ ದಿಸೆಯಲ್ಲಿ ಗುರುತಿಸಲೇಬೇಕಾದ ಮೂರು ಪ್ರಮುಖ ಅಂಶಗಳು ಇಲ್ಲಿವೆ.

ಮೊದಲಿನದು, ಕಾನೂನು ಹಾಗೂ ಜ್ಞಾನಶಿಸ್ತಿನ ಚೌಕಟ್ಟುಗಳ ಹಂಗಿಲ್ಲದೆ ವ್ಯಾಪಿಸುತ್ತಿರುವ ‘ನವ ಜನಪದ ವೈದ್ಯಕೀಯ’ದ ಕುರಿತು. ನೈಜ ನಾಟಿ ವೈದ್ಯಕೀಯದ ಸಾಮರ್ಥ್ಯದ ಜೊತೆಗೆ ಅದರ ಮಿತಿಗಳನ್ನೂ ಗುರುತಿಸಿ, ಅದರ ಚಿಕಿತ್ಸಕರು ಮತ್ತು ಸಂಘಟನೆಗಳಿಗೆ ಲಕ್ಷ್ಮಣರೇಖೆ ದಾಟದಂತೆ ಅಧಿಕೃತವಾಗಿ ಹೇಳುವ ಕೆಲಸವಾಗಬೇಕಿದೆ. ಪಾರಂಪರಿಕ ಜ್ಞಾನವನ್ನೇ ಹೀರಿ ಬೆಳೆದಿರುವ ಆಯುರ್ವೇದ ಸಮುದಾಯವು ತನ್ನ ಹಿತ್ತಲಿನ ಬೆಳೆ ಗಳನ್ನು ಪೋಷಿಸುತ್ತಲೇ ವಿಷಕಳೆ ನಿಯಂತ್ರಿಸಬೇಕಲ್ಲವೇ?

ಎರಡನೆಯದು, ಆಯುರ್ವೇದ ಮದ್ದುಗಳ ಗುಣ ಮಟ್ಟದ ಕುರಿತು. ಮಾರುಕಟ್ಟೆಯಲ್ಲಿಂದು ಎರಡು ಬಗೆಯ ಆಯುರ್ವೇದ ಔಷಧಗಳಿವೆ. ಪ್ರಾಚೀನ ಗ್ರಂಥಗಳ ಉಲ್ಲೇಖಾನುಸಾರ ತಯಾರಿಸುವ ಆಸವ, ಅರಿಷ್ಟಗಳಂಥ ‘ಶಾಸ್ತ್ರೀಯ ಔಷಧಿ’ಗಳು ಮೊದಲ ಬಗೆಯವು. ಅವುಗಳ ಕ್ಷಮತೆಯನ್ನು ಪುನಃ ಸಿದ್ಧಪಡಿಸುವ ಅಗತ್ಯವಿಲ್ಲ ಎನ್ನು ವುದು ಸರಿ. ಎರಡನೆಯ ಬಗೆಯವು ‘ಬೌದ್ಧಿಕ ಸ್ವಾಮ್ಯತ್ವ ಇರುವ ಔಷಧಿಗಳು’ (Proprietary Ayurvedic Medicines). ಗುಪ್ತ ಸೂತ್ರದಡಿ ತಯಾರಿಸುವ ಈ ಮದ್ದುಗಳನ್ನು ಮಾರುಕಟ್ಟೆಗೆ ತರುವ ಮೊದಲು, ರೋಗಿಗಳ ಮೇಲೆ ಪ್ರಯೋಗಿಸಿ ಕ್ಷಮತೆ ಸಿದ್ಧಪಡಿಸುವ ಹೊಣೆ ಉದ್ದಿಮೆಗಳದ್ದು. ಆದರೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2018ರಲ್ಲಿ ‘ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾನೂನಿನ (1940)’ ನಿಯಮಾವಳಿಗೆ ತಿದ್ದುಪಡಿ ಮಾಡಿ, ಈ ಕ್ಲಿನಿಕಲ್ ಪುರಾವೆ ಒದಗಿಸುವ ಅಗತ್ಯವನ್ನೇ ಕೈಬಿಟ್ಟಿದೆ! ಇದರಿಂದಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಹೊಸಬಗೆಯ ಆಯುರ್ವೇದ ಮದ್ದುಗಳ ಫಲಪ್ರದತೆಯನ್ನು ನಂಬುವುದು ಹೇಗೆ? ಅಲೋಪಥಿಯಷ್ಟೇ ತಾನೂ ವೈಜ್ಞಾನಿಕ ಎಂದು ನಿರೂಪಿಸಿಕೊಳ್ಳಲು ಸದಾ ಶ್ರಮಿಸುವ ಆಯುರ್ವೇದ ಜ್ಞಾನಶಿಸ್ತಿನ ಸಮುದಾಯವು ಈ ಕುರಿತು ಮೌನ ತಾಳಿರುವುದು ಸರಿಯೇ?

ಅಂತಿಮವಾಗಿ, ಆಯುರ್ವೇದ ಔಷಧಿಗಳ ಜಾಹೀ ರಾತು ಸವಾರಿ ಕುರಿತು. ಔಷಧವೊಂದು ಮಾರುಕಟ್ಟೆಗೆ ಬರುವ ಪೂರ್ವದಲ್ಲಿ, ಅದರ ಗುಣಮಟ್ಟವು ಪ್ರಯೋಗಸಿದ್ಧವಾಗಿ, ವೈದ್ಯರು ಅದನ್ನು ಪ್ರಾಯೋಗಿಕವಾಗಿ ಬಳಸಿ, ಅಂತಿಮ ಅಭಿಪ್ರಾಯ ರೂಪಿತವಾಗಬೇಕು. ಆದರೆ, ಈ ರಾಜಮಾರ್ಗವನ್ನು ತೊರೆದು, ಕೇವಲ ಜಾಹೀರಾತುಗಳ ಮೋಡಿಯ ಮೂಲಕವೇ ರೋಗಿಗಳ ಉದರ ಸೇರುತ್ತಿರುವ ಆಯುರ್ವೇದದ ‘ಬ್ರ್ಯಾಂಡ್’ ಔಷಧಿಗಳು ಹೆಚ್ಚುತ್ತಿವೆ. ರಫ್ತು ಮಾಡುವ ಬೃಹತ್ ಉದ್ದಿಮೆಗಳು ಹಾಗೂ ದೇಶೀಯ ಮಾರುಕಟ್ಟೆಯ ಕಿರು ಉದ್ದಿಮೆಗಳು ಇವೆರಡೂ ಈ ಬೆಳವಣಿಗೆಯಲ್ಲಿವೆ. ಪಂಚಾಯಿತಿ ಅಥವಾ ನಗರಸಭೆಯಿಂದ ಪಡೆದ ಕಟ್ಟಡದ ಪರವಾನಗಿಯನ್ನೇ ಆಯುರ್ವೇದ ಔಷಧಿ ಮಾರಾಟಕ್ಕೆ ಅನುಮತಿ ಪತ್ರ ಎಂದು ಬಿಂಬಿಸುತ್ತಿರುವ ಅಸಂಖ್ಯ ಸಣ್ಣ ಉದ್ದಿಮೆ ಗಳೂ ಸೇರಿವೆ! ಅಲ್ಲಿ ಬಳಸುವ ಮೂಲಿಕೆಗಳ ಅಸಲಿತನ ಹಾಗೂ ಔಷಧಿಗಳ ಕನಿಷ್ಠ ವಿಶ್ವಾಸಾರ್ಹತೆಯ ಖಾತರಿಯೇ ಇಲ್ಲದಿರುವಾಗ, ಜನಾರೋಗ್ಯ ಏನಾದೀತು? ಉದ್ಯಮದ ಮದ್ದಾನೆ ಮನೆಯೊಳಗೆ ನುಗ್ಗುತ್ತಿರುವ ಪರಿಣಾಮವನ್ನು ಆಯುರ್ವೇದ ಜ್ಞಾನಶಿಸ್ತು ಗ್ರಹಿಸುತ್ತಿದೆಯೇ?

ದೇಹ ಮತ್ತು ಮನಸ್ಸಿನ ಯೋಗಕ್ಷೇಮ ಸಾಧಿಸುವ ಅಗಾಧ ಸಾಮರ್ಥ್ಯ ಆಯುರ್ವೇದದ್ದು. ಆದರೆ, ಇದರ ನೇತೃತ್ವವು ಆಯುರ್ವೇದ ಜ್ಞಾನಶಿಸ್ತಿನ ತಜ್ಞರ ವಲಯದ ಕೈತಪ್ಪುತ್ತಿರುವುದು ವಿಷಾದನೀಯ. ಚಿಕಿತ್ಸೆಗಳ ಸ್ವರೂಪ ಹಾಗೂ ನೀತಿ- ನಿಯಮಗಳೆಲ್ಲವನ್ನೂ ಲಾಭ ಗಳಿಕೆ ಉದ್ದೇಶದ ಉದ್ಯಮಗಳೇ ನಿರ್ಧರಿಸತೊಡಗಿದರೆ, ಕ್ಷೀಣಿಸುವುದು ಆಯುರ್ವೇದದ ಭವಿಷ್ಯ ಮಾತ್ರವಲ್ಲ ಜನ ಸಾಮಾನ್ಯರ ಅರೋಗ್ಯಭದ್ರತೆ ಕೂಡ!

ಹಿತ್ತಲಿನ ಕಳೆ ಹಾಗೂ ಜಗುಲಿಯ ಆನೆಯನ್ನು ಆಯುರ್ವೇದ ನಿಭಾಯಿಸೀತೇ?

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.