ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಇಂದಿಗೆ (ಜ. 24) ಐವತ್ತು ವರ್ಷ ತುಂಬಿದೆ. ಸಮಾಜವಾದಿಗಳು, ಸಮತಾವಾದಿಗಳು, ಗಾಂಧಿವಾದಿಗಳೊಳಗೆ ಹರಿದು ಹಂಚಿಹೋಗಿದ್ದ ದಮನಿತ ದಲಿತರಿಗೆ ಅಂಬೇಡ್ಕರ್ ತತ್ವ, ಸಿದ್ಧಾಂತದ ಅಡಿಯಲ್ಲಿ ಪ್ರತ್ಯೇಕ ವೇದಿಕೆ ಕಲ್ಪಿಸಿ ಸ್ವಂತಿಕೆ ತಂದುಕೊಟ್ಟದ್ದು ಪ್ರೊ. ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ಇದೇ ದಲಿತ ಸಂಘರ್ಷ ಸಮಿತಿ (ದಸಂಸ).

ದಸಂಸ ಕರಪತ್ರಗಳಲ್ಲಿ ಎದ್ದುಕಾಣುವ ಈ ಮೂಲ ಮಾತೃ ಸಮಿತಿ ನೋಂದಣಿ ಆಗಿರುವುದು 1974ರ ಜನವರಿ 24ರಂದು. ಹಲವು ಚಳವಳಿಗಳ ಉಗಮ ಸ್ಥಾನವಾದ ಶಿವಮೊಗ್ಗ ಜಿಲ್ಲೆಯೇ ದಲಿತ ಸಂಘರ್ಷ ಸಮಿತಿ ಎಂಬ ನೀಲಿ ಕಡಲಿಗೂ ಒಡಲು ನೀಡಿದೆ.

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಹಾಗೂ ಎಂಪಿಎಂ ಕಾಗದ ಕಾರ್ಖಾನೆಯ ಪರಿಶಿಷ್ಟ ಜಾತಿಯ ನೌಕರರು, ತಾವು ಅದಾಗಲೇ ಸಾಮಾಜಿಕ ಚಟುವಟಿಕೆಗಳ ಮೂಲಕ ಸಕ್ರಿಯ ವಾಗಿದ್ದ ಸಂಘವನ್ನು ಭದ್ರಾವತಿಯಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಳ್ಳುತ್ತಾರೆ. ಇದರ ಸಂಸ್ಥಾಪಕ ಅಧ್ಯಕ್ಷ ಎನ್.ಗಿರಿಯಪ್ಪ ಅವರಾದರೆ, ಪ್ರೊ. ಬಿ.ಕೃಷ್ಣಪ್ಪ ಕಾರ್ಯದರ್ಶಿಯಾಗುತ್ತಾರೆ. ಹನುಮಂತಪ್ಪ, ಸಿಂಗಾರಾಮ, ಎಸ್.ಜಿ.ರಾಜು, ಸಿ.ಚನ್ನಕೇಶವ, ಬೋರಯ್ಯ, ನಂಜಪ್ಪ, ಪುಟ್ಟಸ್ವಾಮಿ ಅವರನ್ನೊಳಗೊಂಡ ಏಳು ಜನರು ಆರಂಭಿಕ ಸದಸ್ಯರಾಗುತ್ತಾರೆ. ಅಧ್ಯಕ್ಷ, ಕಾರ್ಯದರ್ಶಿ ಎಂದಿದ್ದ ಸ್ಥಾನಗಳಿಗೆ 1992ರಲ್ಲಿ ಬೈಲಾಗೆ ತಿದ್ದುಪಡಿ ತಂದು, ಈಗಿರುವಂತೆ ಸಂಚಾಲಕ, ಸಂಘಟನಾ ಸಂಚಾಲಕ ಎಂದು ಮರುನಾಮಕರಣ ಮಾಡಲಾಗುತ್ತದೆ.

ಈ ನೋಂದಣಿಗೆ ಮುನ್ನವೇ, ಬೂಸಾ ಪ್ರಕರಣದಲ್ಲಿ ಬಸವಲಿಂಗಪ್ಪನವರ ಪರವಾಗಿ ಧ್ವನಿ ಎತ್ತಿದ್ದೂ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ದಲಿತರು ಪ್ರತ್ಯೇಕವಾದ ಗುಂಪುಗಳಲ್ಲಿ ಸಾಮಾಜಿಕ ದೌರ್ಜನ್ಯಗಳನ್ನು ಪ್ರಶ್ನಿಸುತ್ತಿ ದ್ದರು. ಇಂತಹ ವಿದ್ಯಮಾನಗಳಿಗೆ, ದಲಿತರೇ ಹೊರತರು ತ್ತಿದ್ದ ‘ಪಂಚಮ’ ಪತ್ರಿಕೆಯೂ ವೇದಿಕೆಯಾಗಿತ್ತು. ಆದರೆ, ಹೀಗೆ ಚೆಲ್ಲಾಪಿಲ್ಲಿಯಾಗಿದ್ದ ದಲಿತರ ಆಕ್ರೋಶ, ನೋವು, ದುಡುಕು, ದುಮ್ಮಾನವನ್ನು ಒಂದು ಸಾಂಸ್ಥಿಕ ವೇದಿಕೆಯಡಿಗೆ ತಂದದ್ದು ಮಾತ್ರ ಗಿರಿಯಪ್ಪ ಮತ್ತು ಪ್ರೊ. ಕೃಷ್ಣಪ್ಪ ಅವರ ಬಳಗ. ಇದಕ್ಕೆ ಸಾಹಿತಿಗಳು, ಕಲಾವಿದರ ಹೆಗಲು ಸಿಕ್ಕಿದ್ದು ದಸಂಸ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಅನುವಾಯಿತು. ಹೀಗೆ ಸ್ಥಾಪನೆಯಾದ ದಸಂಸ, ಶ್ರಮ ಮತ್ತು ಸ್ವಚ್ಛತೆಯ ಸಂಕೇತವಾಗಿ ಪಿಕಾಸಿ ಹಾಗೂ ಕಸಪೊರಕೆಯನ್ನು ಒಳಗೊಂಡ ಚಿತ್ರವನ್ನು ತನ್ನ ಚಿಹ್ನೆಯನ್ನಾಗಿಸಿಕೊಂಡು, ಅಂಬೇಡ್ಕರ್ ಹೇಳಿದ ಶಿಕ್ಷಣ, ಸಂಘಟನೆ, ಹೋರಾಟವನ್ನು ಮೂಲಮಂತ್ರವನ್ನಾಗಿಸಿಕೊಂಡಿತು. ರಾಜ್ಯದಾದ್ಯಂತ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪ್ರಶ್ನಿಸುತ್ತಲೇ ಸರಣಿ ಅಧ್ಯಯನ ಶಿಬಿರಗಳನ್ನು ಏರ್ಪಡಿಸಿ, ತನ್ನ ಕಾರ್ಯಕರ್ತರನ್ನು ಜಾಗೃತಗೊಳಿಸುವುದು ಅದರ ಮೂಲ ಉದ್ದೇಶವಾಗಿತ್ತು. ಆದ್ದರಿಂದಲೇ ಎಪ್ಪತ್ತರ ದಶಕದಲ್ಲಿ ರಾಜ್ಯದಾದ್ಯಂತ ಬಹಳಷ್ಟು ಅಧ್ಯಯನ ಶಿಬಿರಗಳು ನಡೆದಿರುವ ಉದಾಹರಣೆಗಳು ಸಿಗುತ್ತವೆ. ಭದ್ರಾವತಿಯಲ್ಲಿ 1976ರಲ್ಲಿ ನಡೆದ ‘ದಲಿತ ಲೇಖಕ, ಕಲಾವಿದರ ಒಕ್ಕೂಟ’ದ ರಾಜ್ಯ ಮಟ್ಟದ ಶಿಬಿರ ಈವರೆಗೆ ಒಂದು ಮೈಲಿಗಲ್ಲಾಗಿ ನಿಂತಿದೆ.

ದಲಿತರು ಎಂದರೆ ಬರೀ ಹೊಲೆ-ಮಾದಿಗರಲ್ಲ ಎಲ್ಲ ‘ದಮನಿತರು’ ಎಂಬ ವಿಶಾಲ ಅರ್ಥ ದಲಿತ ಸಂಘರ್ಷ ಸಮಿತಿಗೆ ಇತ್ತು. ಹೀಗಾಗಿ, ಅದು ತನ್ನ ಒಡಲೊಳಗೆ ಹಿಂದುಳಿದವರು, ರೈತರು, ಸ್ತ್ರೀಯರು ಎಲ್ಲರನ್ನೂ ಪೊರೆಯುವ ತಾಯಿಗುಣ ಹೊಂದಿತ್ತು. ಆದ್ದರಿಂದಲೇ ಮೇಲ್ವರ್ಗದ ಅನೇಕರು ‘ನಾನು ದಸಂಸ ಕಾರ್ಯಕರ್ತ’ ಎಂದು ಅಭಿಮಾನದಿಂದ ಇದರ ಕೊಡೆ ಅಡಿಯಲ್ಲಿ ಬರುವಂತಾಯಿತು. ಕೋಲಾರದ ‘ಅನಸೂಯಮ್ಮ ಅತ್ಯಾಚಾರ ಮತ್ತು ಶೇಷಗಿರಿಯಪ್ಪ ಕೊಲೆ ಪ್ರಕರಣ’ ದಸಂಸದ ಒಳಗೊಳ್ಳುವಿಕೆಗೆ ಉತ್ತಮ ನಿದರ್ಶನ.

ವೈಚಾರಿಕತೆಯ ತಳಹದಿಯ ಮೇಲೆ ಅಪರಿಮಿತ ವಿಶ್ವಾಸದಿಂದಲೇ ಕಾರ್ಯಾರಂಭ ಮಾಡಿದ ದಸಂಸ, ತಾನು ಎತ್ತುತ್ತಿದ್ದ ನೈತಿಕ ಪ್ರಶ್ನೆಗಳಿಂದ ಮತ್ತು ತೋರಿದ ಎದೆಗಾರಿಕೆಯಿಂದ ದೌರ್ಜನ್ಯ ಎಸಗುವವರ ಎದೆ ನಡುಗಿಸಿದ್ದು ಮಾತ್ರವಲ್ಲದೆ ಸರ್ಕಾರಗಳಿಗೂ ನಡೆಯಬೇಕಾದ ದಾರಿಯನ್ನು ತೋರಿಸಿಕೊಟ್ಟಿತು. ಇದರ ಫಲವಾಗಿ, ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ನಿರ್ಮೂಲನೆಗೆ ಕಾನೂನು ಅಸ್ತಿತ್ವಕ್ಕೆ ಬಂದಿತು. ಪರಿಶಿಷ್ಟ ಜಾತಿ, ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಪಿಟಿಸಿಎಲ್) ಕಾಯ್ದೆ ಜಾರಿಗೆ ಬಂದಿತು. ಭೂಸುಧಾರಣೆ ಕಾಯ್ದೆಯಾದ ‘ಉಳುವವನೇ ಭೂಮಿಯ ಒಡೆಯ’ ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯವಾಯಿತು.

ಕವಿಗಳು ಬರೆದ ಹಾಡುಗಳು ದಸಂಸ ಹೋರಾಟ ಗಾರರ ಕೊರಳ ದನಿಯಾದವು. ಕೆಲ ಸಾಹಿತಿ, ಕಲಾವಿದರಿಗೆ ‘ದಲಿತ’ ಕೋಟಾದಡಿ ಸರ್ಕಾರ ಬಾಗಿಲು ತೆರೆಯಿತು. ಅಂದು ದಸಂಸ ‘ಹೆಂಡ ಬೇಡ, ಹೋಬಳಿಗೊಂದು ವಸತಿಶಾಲೆ ಕೊಡಿ’ ಎಂದು ಹೋರಾಡಿದ್ದರ ಫಲವಾಗಿ ಇಂದು ಸಾವಿರಾರು ವಸತಿಶಾಲೆಗಳ ಮುಖಾಂತರ ಲಕ್ಷಾಂತರ ಬಡವರು, ಹಿಂದುಳಿದವರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಿದೆ.

ಹೀಗೆ ಅನೇಕ ಭರವಸೆಗಳನ್ನು ಮೂಡಿಸಿ ಆಶಾದಾಯಕವಾಗಿದ್ದ ದಸಂಸ ತಾನು ತೆಗೆದುಕೊಂಡ ರಾಜಕೀಯ ನಿಲುವಿನ ಕಾರಣದಿಂದಾಗಿಯೂ ಮೊದಲಿನಿಂದ ತನ್ನೊಳಗೆ ಗುಪ್ತಗಾಮಿನಿಯಾಗಿ ಹುದುಗಿಸಿಕೊಂಡಿದ್ದ ಒಳಜಾತಿ ಸಂಚಿನಿಂದಾಗಿಯೂ ಬರಬರುತ್ತ ವಿಘಟನೆಯ ದಾರಿ ಹಿಡಿಯಿತು. ಅದರಲ್ಲೂ ಗದಗದಲ್ಲಿ ನಡೆದ ಸಭೆಯೊಂದರಲ್ಲಿ ಭಾಷಣ ಮಾಡುತ್ತಿರು ವಾಗಲೇ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರೊ. ಬಿ.ಕೃಷ್ಣಪ್ಪ ಅವರ ನಂತರದಲ್ಲಿ ಚಳವಳಿಯನ್ನು ಮುನ್ನಡೆಸುವ ಅಂತಃಕರಣದ, ತಾಯಿ ಹೃದಯದ ಇನ್ನೊಬ್ಬ ನಾಯಕ ಸಿಗದ ಕಾರಣ ಚಳವಳಿ ದಿಕ್ಕುತಪ್ಪಿತು. ಒಂದೆರಡು ದಶಕ ಕಳೆದ ನಂತರವೂ ಯಾವುದೇ ಸಂಘಟನೆ ಮೊದಲಿನ ಸ್ವರೂಪದಲ್ಲೇ ಇದ್ದರೆ ಅದು ಚಲನೆಯನ್ನು ಕಳೆದುಕೊಂಡಂತೆ, ಒಡಕು, ಬಿರುಕು ಜೀವಂತಿಕೆಯ ಸಂಕೇತ ಎಂದು ಬಣ್ಣಿಸುವವರೂ ಇದ್ದಾರೆ.

ದಸಂಸ ಐವತ್ತು ವರ್ಷ ಪೂರೈಸುತ್ತಿರುವ ಸಂದರ್ಭ ದಲ್ಲೇ ದಲಿತ ಎಡಗೈ ಸಮುದಾಯದ ಬಹುಕಾಲದ ಬೇಡಿಕೆಯಾದ ಒಳಮೀಸಲಾತಿ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇತ್ತ ಕೇಂದ್ರದಿಂದಲೂ ಒಳಮೀಸಲು ಅಧ್ಯಯನಕ್ಕೆ ಸಂಬಂಧಿಸಿದಂತೆ ಉಪ ಸಮಿತಿ ರಚನೆಯಾಗಿರುವ ಬಗ್ಗೆ ವರದಿಗಳಿವೆ. ದಲಿತ ಉಪಜಾತಿಗಳ ನಡುವಿನ ಒಡಕಿಗೆ ಕಾರಣವಾಗಿದ್ದ ಮೀಸಲಿನ ಪಾಲು ಕೆಲವೇ ಜಾತಿಗಳ ಸ್ವತ್ತಾಗಿದೆ, ಜಾತಿ ಜನಸಂಖ್ಯಾವಾರು ಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂಬ ವಾದ, ಅನುಮಾನಗಳಿಗೆ ತೆರೆ ಬೀಳುವ ಕಾಲ ಸನ್ನಿಹಿತವಾದಂತಿದೆ. ಆಯಾ ಜಾತಿ ಜನಸಂಖ್ಯಾವಾರು ಮೀಸಲಾತಿ ಹಂಚಿಕೆಯಾಗುವುದರಿಂದ ಉಪಜಾತಿಗಳ ನಡುವಿನ ಬಿರುಕು ದೂರವಾಗಿ, ದಲಿತರೆಲ್ಲ ಒಂದೇ ಎಂಬ ಮನೋಭಾವದಿಂದ ಒಗ್ಗೂಡಲು ಅವಕಾಶವಿದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ದಸಂಸಕ್ಕೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿ ಕಾಣುತ್ತಿದೆ.

ಭಿನ್ನಾಭಿಪ್ರಾಯಗಳ ನಡುವೆಯೂ ಇಂದಿಗೂ ನಗರ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲೆಲ್ಲ ದಸಂಸ ತನ್ನ ಶಾಖೆಗಳನ್ನು ಹೊಂದಿದೆ. ಹಿಂದೆ ಒಂದೇ ಆಗಿದ್ದ ದಸಂಸದಲ್ಲಿ ಈಗ ನಾಲ್ಕಾರು ಬಣಗಳಿವೆ. ಆದರೆ ದಸಂಸ ತನ್ನ ಬುಡಕ್ಕೆ ಕೊಡಲಿಪೆಟ್ಟು ಬಿದ್ದಾಗಲೆಲ್ಲ ಮತ್ತೆ ಕೊಡವಿ ಒಂದೇ ಆಗಿ ಎದ್ದು ನಿಂತಿದೆ. ಸಂವಿಧಾನ ಬದಲಾಯಿಸುತ್ತೇವೆ ಎಂಬ ಮಾತು ಕೇಳಿಬಂದಾಗ, ದಲಿತ ಹೆಣ್ಣುಮಕ್ಕಳಿಗೆ ಅನ್ಯಾಯವಾದಾಗಲೆಲ್ಲ ಸಾಂಘಿಕವಾಗಿ ಹೋರಾಡಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರವನ್ನು ಕೊಟ್ಟೂ ನೋಡಿದೆ, ಕೆಡವಿಯೂ ನೋಡಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಕೋರ್ಟ್ ಮೆಟ್ಟಿಲು ಹತ್ತಬೇಕು, ಪೊಲೀಸರಲ್ಲಿ ದೂರು ದಾಖಲಾಗಬೇಕು ಎಂದರೆ ದಸಂಸ ಅಲ್ಲಿ ಇರಲೇಬೇಕು ಎನ್ನುವ ನಂಬಿಕೆಯನ್ನು ಇಂದಿಗೂ ಉಳಿಸಿಕೊಂಡಿದೆ. ದಸಂಸ ಇರದೇ ಹೋಗಿದ್ದರೆ ಇವೆಲ್ಲವೂ ‘ನ್ಯಾಯ ಪಂಚಾಯಿತಿ’ಯಲ್ಲೇ ಮುಗಿದು ಹೋಗುತ್ತಿದ್ದವು.

ದಲಿತ ಸಂಘರ್ಷ ಸಮಿತಿಯ ಸುವರ್ಣ ಮಹೋತ್ಸವ ವನ್ನು ಆಚರಿಸುವಂತೆ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಕರೆ ಕೊಟ್ಟಿದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ದಲಿತರಿಗೆ ಮಾತ್ರವಲ್ಲದೆ ಎಲ್ಲ ದುಡಿಯುವ ವರ್ಗಗಳಿಗೂ ಹಿಂದಿಗಿಂತಲೂ ಹೆಚ್ಚು ಸಂಕೀರ್ಣವಾದ ಸಮಸ್ಯೆಗಳನ್ನು ಪ್ರಭುತ್ವ ತಂದೊಡ್ಡಿದೆ. ಇಂತಹ ಎಲ್ಲಾ ಸಂಗತಿಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಂಡು ದಸಂಸ ಮುಂದಡಿ ಇಟ್ಟರೆ, ಸುವರ್ಣ ಸಂಭ್ರಮಕ್ಕೊಂದು ಸಾರ್ಥಕತೆ ಬರುತ್ತದೆ. ಕೃಷ್ಣಪ್ಪ ಅವರು ಹಚ್ಚಿದ ಹೋರಾಟದ ಹಣತೆ ಆರದಂತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.