ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿರುವ ಬಾಹ್ಯಾಕಾಶ ನಿಲ್ದಾಣದೊಳಗೆ ಜೀವನ ಹೇಗೆ?

Published 20 ಆಗಸ್ಟ್ 2024, 10:57 IST
Last Updated 20 ಆಗಸ್ಟ್ 2024, 10:57 IST
ಅಕ್ಷರ ಗಾತ್ರ

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರು ಆರಂಭದಲ್ಲಿ ಕೇವಲ 8 ದಿನಗಳ ಅವಧಿಗೆ ಬಾಹ್ಯಾಕಾಶ ಯಾತ್ರೆ ಕೈಗೊಂಡು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಎಂಟು ದಿನಗಳಲ್ಲಿ ಮರಳಿ ಭೂಮಿಗೆ ಬರಲು ಸಾಧ್ಯವಾಗದೆ, ಅವರು 2025ರ ತನಕವೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾದ ಸಾಧ್ಯತೆಗಳಿವೆ. ಇದರಿಂದಾಗಿ ಅವರ ಬಾಹ್ಯಾಕಾಶ ವಾಸ ಬಹಳ ದೀರ್ಘವಾಗಲಿದೆ. ಇವರಿಬ್ಬರು ಗಗನಯಾತ್ರಿಗಳು ಬೋಯಿಂಗ್ ಸಂಸ್ಥೆಯ ನೂತನ ಬಾಹ್ಯಾಕಾಶ ವಾಹನವಾದ ಸ್ಟಾರ್‌ಲೈನರ್ ಮೂಲಕ ಜೂನ್ ತಿಂಗಳಲ್ಲಿ ಐಎಸ್ಎಸ್‌ಗೆ ತೆರಳಿದ್ದರು. ಆದರೆ, ಸ್ಟಾರ್‌ಲೈನರ್‌ನಲ್ಲಿ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳಂತಹ ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ಭೂಮಿಗೆ ಅವರ ಮರು ಪ್ರಯಾಣ ಕನಿಷ್ಠ 2025ರ ಫೆಬ್ರುವರಿ ತನಕ ವಿಳಂಬಗೊಳ್ಳುವ ಲಕ್ಷಣಗಳು ತೋರುತ್ತಿವೆ.

ಗಗನಯಾತ್ರಿಗಳು ಸುರಕ್ಷಿತವಾಗಿದ್ದು, ಅವರು ಬಾಹ್ಯಾಕಾಶದಲ್ಲಿ ಬಾಕಿಯಾಗಿಲ್ಲ ಎಂದು ಬೋಯಿಂಗ್ ಹೇಳಿಕೆ ನೀಡಿದೆ. ಅವರು ಬಾಹ್ಯಾಕಾಶಕ್ಕೆ ತೆರಳಿರುವ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕವೇ ಮರಳಿ ಭೂಮಿಗೆ ಕರೆತರುವ ಭರವಸೆಯನ್ನು ಬೋಯಿಂಗ್ ವ್ಯಕ್ತಪಡಿಸಿದೆ. ಆದರೆ, ನಾಸಾ ಸಂಸ್ಥೆ ಗಗನಯಾತ್ರಿಗಳನ್ನು ದೋಷಪೂರಿತವಾದ ಸ್ಟಾರ್‌ಲೈನರ್ ಬದಲಿಗೆ ಸ್ಪೇಸ್ಎಕ್ಸ್ ಸಂಸ್ಥೆಯ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಿ ತರಬಹುದೇ ಎಂದು ಪರಿಶೀಲಿಸುತ್ತಿದೆ. ಕೆಲವು ದಿನಗಳ ಮಟ್ಟಿಗೆಂದು ಆರಂಭಗೊಂಡ ಸ್ಟಾರ್‌ಲೈನರ್ ಗಗನಯಾತ್ರಿಗಳ ಯೋಜನೆ ಈಗಾಗಲೇ ಹಲವು ತಿಂಗಳುಗಳಿಗೆ ವಿಸ್ತರಿಸಿದೆ. ಆದರೆ, ಐಎಸ್ಎಸ್‌ನಲ್ಲಿ ಅವರ ವಾಸ್ತವ್ಯ ಸುದೀರ್ಘವಾದರೂ, ಅಷ್ಟೂ ಅವಧಿಗೆ ಅಲ್ಲಿ ಅವರಿಗೆ ಅವಶ್ಯಕ ವಸ್ತುಗಳು, ಆಹಾರ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ವ್ಯವಸ್ಥೆಗಳು

ಐಎಸ್ಎಸ್ ಎಷ್ಟು ಸ್ಥಳಾವಕಾಶ ಹೊಂದಿದೆ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ತುದಿಯಿಂದ ತುದಿಗೆ 356 ಅಡಿಗಳಷ್ಟು (109 ಮೀಟರ್) ಉದ್ದವಿದೆ. ಐಎಸ್ಎಸ್‌ನಲ್ಲಿ ಯಾವುದೇ ಬಾಹ್ಯಾಕಾಶ ನೌಕೆ ಡಾಕಿಂಗ್ ನಡೆಸದಿದ್ದಾಗ, ಖಾಲಿ ಐಎಸ್ಎಸ್ 9,25,335 ಪೌಂಡ್ (419,725 ಕೆಜಿ) ತೂಕ ಹೊಂದಿದೆ.

ಐಎಸ್ಎಸ್‌ನಲ್ಲಿ ಅಳವಡಿಸಲಾಗಿರುವ ಸೌರ ಫಲಕಗಳೇ (ಸೋಲಾರ್ ಪ್ಯಾನೆಲ್) ಒಂದು ಎಕರೆ ಪ್ರದೇಶದಲ್ಲಿ ವ್ಯಾಪಿಸಿವೆ. ಆಗಮಿಸುವ ಗಗನನೌಕೆಗಳನ್ನು ಹೊರತುಪಡಿಸಿದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ಜೀವಿಸಲು ಮತ್ತು ಕಾರ್ಯಾಚರಿಸಲು 13,696 ಘನ ಅಡಿಗಳಯ ಅಥವಾ 388 ಘನ ಮೀಟರ್‌ಗಳಷ್ಟು ಸ್ಥಳಾವಕಾಶವಿದೆ.

ಭೂಮಿಯಲ್ಲಿನ ಸ್ಥಳಾವಕಾಶಕ್ಕೆ ಹೋಲಿಸಿ ನೋಡುವುದಾದರೆ, ಬಾಹ್ಯಾಕಾಶ ನಿಲ್ದಾಣದ ವಾಸಿಸುವ ಮತ್ತು ಕೆಲಸ ನಡೆಸುವ ಸ್ಥಳ ಆರು ಕೋಣೆಗಳ ಮನೆಗಿಂತಲೂ ಹೆಚ್ಚು ಜಾಗ ಹೊಂದಿದೆ. ಇದರಲ್ಲಿ ಆರು ಮಲಗುವ ಜಾಗಗಳು, ಎರಡು ಸ್ನಾನಗೃಹಗಳು, ಒಂದು ವ್ಯಾಯಾಮ ಕೇಂದ್ರ ಮತ್ತು 360 ಡಿಗ್ರಿಗಳ ನೋಟ ಒದಗಿಸುವ ಕಿಟಕಿಗಳು ಸೇರಿವೆ.

ಭೂಮಿಯಿಂದ ಉಡಾವಣೆಗೊಂಡ ಒಂದು ಬಾಹ್ಯಾಕಾಶ ನೌಕೆ ಕೇವಲ ನಾಲ್ಕು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಬಲ್ಲದು. ಏಕಕಾಲದಲ್ಲಿ ಐಎಸ್ಎಸ್ ಎಂಟು ಬಾಹ್ಯಾಕಾಶ ನೌಕೆಗಳ ನಿಲುಗಡೆಗೆ ಅವಕಾಶ ನೀಡಬಲ್ಲದು.

ಐಎಸ್ಎಸ್ ವಾತಾವರಣ -ತಾಪಮಾನ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ನಿರಂತರವಾಗಿ ಗಮನಿಸುತ್ತಾ, ಅಲ್ಲಿನ ವಾಯು ಒತ್ತಡವನ್ನು ಭೂಮಿಯ ಒತ್ತಡವಾದ 14.7 ಪೌಂಡ್ ಪರ್ ಸ್ಕ್ವೇರ್ ಇಂಚ್ (ಪಿಎಸ್ಐ) ಅಥವಾ 1 ಅಟ್ಮಾಸ್ಫಿಯರ್ ಮಟ್ಟದಲ್ಲಿ ಇಡಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ತಾಪಮಾನವನ್ನು ಸಾಮಾನ್ಯವಾಗಿ 18.3 ಡಿಗ್ರಿ ಸೆಲ್ಸಿಯಸ್ ನಿಂದ 26.7 ಡಿಗ್ರಿ ಸೆಲ್ಸಿಯಸ್ ನಡುವೆ ಇಡಲಾಗುತ್ತದೆ. ಐಎಸ್ಎಸ್ ಇರುವ ಸ್ಥಳಕ್ಕೆ ಅನುಗುಣವಾಗಿ ಈ ತಾಪಮಾನ ಬದಲಾಗುತ್ತಿರುತ್ತದೆ.

ಇನ್ನು ಬಾಹ್ಯಾಕಾಶ ನಿಲ್ದಾಣದ ಹೊರಭಾಗದಲ್ಲಿ, ಸೂರ್ಯನಿಗೆ ಎದುರಾಗಿರುವ ಬದಿ ಅಂದಾಜು 121 ಡಿಗ್ರಿ ಸೆಲ್ಸಿಯಸ್‌ನಷ್ಟು ಅಪಾರ ತಾಪ ಹೊಂದಿದ್ದರೆ, ನೆರಳಿಗೆ ಎದುರಾಗಿರುವ ಬದಿ ಅಂದಾಜು -157 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಹೊಂದಿರುತ್ತದೆ. ಬಾಹ್ಯಾಕಾಶ ನಿಲ್ದಾಣದ ಸುತ್ತಲೂ ಅದನ್ನು ಸೂರ್ಯನ ತಾಪಮಾನದಿಂದ ರಕ್ಷಿಸಲು ಅಥವಾ ಅದು ಪಡೆದುಕೊಂಡ ತಾಪಮಾನವನ್ನು ಹಿಡಿದಿಟ್ಟುಕೊಳ್ಳಲು ವಾತಾವರಣವೇ ಇಲ್ಲದಿರುವುದರಿಂದ, ಅದರ ಎರಡು ಬದಿಗಳಲ್ಲಿ ಇಷ್ಟೊಂದು ಭಾರೀ ಪ್ರಮಾಣದ ತಾಪಮಾನ ವ್ಯತ್ಯಾಸ ಕಂಡುಬರುತ್ತದೆ.

ಐಎಸ್ಎಸ್ ಮತ್ತು 16 ಸೂರ್ಯೋದಯ - ಸೂರ್ಯಾಸ್ತಗಳು

ಭೂಮಿಯಲ್ಲಿ ನಮಗೆ ದಿನವೊಂದಕ್ಕೆ ಒಂದೇ ಸೂರ್ಯೋದಯ ಸೂರ್ಯಾಸ್ತ ಕಾಣುತ್ತವೆ. ಆದರೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಪ್ರತಿ 90 ನಿಮಿಷಗಳಿಗೆ ಒಂದು ಬಾರಿ ಭೂಮಿಗೆ ಪರಿಭ್ರಮಣೆ ನಡೆಸುತ್ತಾ, ಪ್ರತಿದಿನವೂ 16 ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಗೆ ಸಾಕ್ಷಿಯಾಗುತ್ತಾರೆ. ಇಷ್ಟೊಂದು ಕ್ಷಿಪ್ರಗತಿಯ ಪರಿಭ್ರಮಣೆಯ ಕಾರಣದಿಂದಾಗಿ ಅವರ ಹಗಲು ರಾತ್ರಿಗಳು ಬಹಳಷ್ಟು ವಿಶಿಷ್ಟವಾಗಿರುತ್ತವೆ. ಅವರು ದಿನದ ಅರ್ಧಕ್ಕೂ ಹೆಚ್ಚು ಸಮಯವನ್ನೂ ಸೂರ್ಯನ ಬೆಳಕಿನಲ್ಲಿ ಕಳೆದರೆ, ಇನ್ನುಳಿದ ಸಮಯವನ್ನು ಭೂಮಿಯ ನೆರಳಿನಲ್ಲಿ ಕಳೆಯುತ್ತಾರೆ. ದೈನಂದಿನ ಕಾರ್ಯಾಚರಣೆಗಳನ್ನು ಎಂದಿನಂತೆ ನಡೆಸುವ ಉದ್ದೇಶದಿಂದ, ಬಾಹ್ಯಾಕಾಶದಲ್ಲೂ ಗಗನಯಾತ್ರಿಗಳು ಭೂಮಿಯಂತೆ 24 ದಿನಗಳ ಕಾಲಾವಧಿಯನ್ನು ಅನುಸರಿಸುತ್ತಾರೆ. ಮಲಗುವ ಸಮಯವಾದಾಗ ಗಗನಯಾತ್ರಿಗಳು ಮಲಗುವ ಚೀಲಗಳನ್ನು ಬಳಸಿಕೊಂಡು, ಸಣ್ಣದಾದ ಮಲಗುವ ವಿಭಾಗಗಳಲ್ಲಿ ನಿದ್ರಿಸುತ್ತಾರೆ. ಅವರು ತಮ್ಮ ದೇಹವನ್ನು ಮಲಗುವ ವಿಭಾಗಕ್ಕೆ ಹಗುರವಾಗಿ ಕಟ್ಟಿಕೊಳ್ಳುತ್ತಾರೆ. ಇದರಿಂದಾಗಿ ಅವರು ಅತ್ತಿತ್ತ ತೇಲುವ ಸಮಸ್ಯೆ ಉಂಟಾಗುವುದಿಲ್ಲ. ಗುರುತ್ವಾಕರ್ಷಣೆಯೇ ಇಲ್ಲದ ಸ್ಥಳದಲ್ಲಿ ಮೇಲೆ - ಕೆಳಗೆ ಎಂಬ ವ್ಯತ್ಯಾಸವೇ ಬರುವುದಿಲ್ಲ. ಆದ್ದರಿಂದ ಗಗನಯಾತ್ರಿಗಳು ಎಲ್ಲಿ ಬೇಕಾದರೂ, ಯಾವ ದಿಕ್ಕಿನಲ್ಲಿ ಬೇಕಾದರೂ ಮಲಗಬಹುದು.

ಗಗನಯಾತ್ರಿಗಳಿಗೆ ಅವಶ್ಯಕ ನೀರಿನ ವ್ಯವಸ್ಥೆ ಹೇಗೆ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರತಿಯೊಬ್ಬ ಗಗನಯಾತ್ರಿಗೂ ದಿನವೊಂದಕ್ಕೆ ಅಂದಾಜು 3.79 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ಈ ನೀರನ್ನು ಅವರು ಕುಡಿಯಲು, ಅಡುಗೆ ಮಾಡಲು, ಹಲ್ಲುಜ್ಜುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಬಳಸುತ್ತಾರೆ. ಒಂದು ವೇಳೆ ಗಗನಯಾತ್ರಿಗಳು ತಿಂಗಳಾನುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯುತ್ತಾರಾದರೆ, ಅಷ್ಟೊಂದು ಪ್ರಮಾಣದ ನೀರನ್ನು ಭೂಮಿಯಿಂದ ತರುವುದೆಂದರೆ ಅಪಾರ ಪ್ರಮಾಣದ ತೂಕದ ಹೆಚ್ಚಳವಾಗುತ್ತದೆ.

ಗಗನಯಾತ್ರಿಗಳು ತಮ್ಮೊಡನೆ ತಂದ 98% ನೀರನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಾರೆ. ಇದರಲ್ಲಿ ಗಗನಯಾತ್ರಿಗಳ ಮೂತ್ರ ಮತ್ತು ಬೆವರೂ ಸೇರಿದ್ದು, ಅದನ್ನು ಮರಳಿ ಶುದ್ಧ ನೀರನ್ನಾಗಿ ಪರಿವರ್ತಿಸಲಾಗುತ್ತದೆ. ಎನ್ವಿರಾನ್ಮೆಂಟಲ್ ಕಂಟ್ರೋಲ್ ಆ್ಯಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ಇಸಿಎಲ್ಎಸ್ಎಸ್) ಎಂಬ ವ್ಯವಸ್ಥೆಯನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ನೀರಿನ‌ ಮರುಬಳಕೆ ನಡೆಸಲೆಂದೇ ಅಳವಡಿಸಲಾಗಿದೆ. ಇದು ವಿವಿಧ ಬಿಡಿಭಾಗಗಳನ್ನು ಒಳಗೊಂಡಿದ್ದು, ಸ್ವಚ್ಛ ನೀರು ಒದಗಿಸಲು ಅವೆಲ್ಲವೂ ಅವಶ್ಯಕವಾಗಿವೆ. ಈ ನವೀನ ಯಂತ್ರ ಕೇವಲ ಗಗನಯಾತ್ರಿಗಳ ಮೂತ್ರವನ್ನು ಮಾತ್ರವೇ ಶುದ್ಧ ನೀರನ್ನಾಗಿ ಪರಿವರ್ತಿಸುವುದಲ್ಲ. ಅದರೊಡನೆ, ಗಗನಯಾತ್ರಿಗಳ ಉಸಿರಿನ ತೇವಾಂಶ, ಬೆವರಿನ ತೇವಾಂಶವನ್ನೂ ಸಂಗ್ರಹಿಸಿ, ಮರುಬಳಕೆಗೆ ಶುದ್ಧ ನೀರನ್ನಾಗಿ ಪರಿವರ್ತಿಸುತ್ತದೆ.

ಗಗನಯಾತ್ರಿಗಳ ಆಹಾರ ಹೇಗಿರುತ್ತದೆ?

ಈಗ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಬಹುತೇಕ ನಾವು ಭೂಮಿಯಲ್ಲಿ ಸೇವಿಸುವಂತಹ ಆಹಾರವನ್ನೇ ಸೇವಿಸುತ್ತಾರೆ. ಅವರ ಆಹಾರ ಆಯ್ಕೆಯಲ್ಲಿ ನೂರಕ್ಕೂ ಹೆಚ್ಚು ಖಾದ್ಯ ವೈವಿಧ್ಯಗಳಿದ್ದು, ಹಣ್ಣುಗಳು, ತರಕಾರಿಗಳು, ಮೊದಲೇ ಸಿದ್ಧಪಡಿಸಿರುವ ಆಹಾರ ಪದಾರ್ಥಗಳು, ಸಿಹಿ ತಿನಿಸುಗಳು, ಕೆಚಪ್ ಮತ್ತು ಸಾಸಿವೆಯಂತಹ ವಸ್ತುಗಳೂ ಸೇರಿವೆ. ಅವರು ಪ್ರತಿದಿನವೂ ಮೂರು ಬಾರಿ ಆಹಾರ ಸೇವಿಸುತ್ತಾರೆ. ಅದರೊಡನೆ ಹೆಚ್ಚುವರಿ ಕ್ಯಾಲರಿಗಾಗಿ ಇತರ ತಿನಿಸುಗಳನ್ನೂ ತಿನ್ನುತ್ತಾರೆ. ಅವರ ಆಹಾರ ಆಯ್ಕೆಗಳನ್ನು ಖುದ್ದಾಗಿ ಯೋಜನಾ ತಂಡ ಮತ್ತು ಗಗನಯಾತ್ರಿಗಳೇ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡು ರೂಪಿಸುತ್ತಾರೆ. ಸುದೀರ್ಘ ಅವಧಿಯ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳು ಉಳಿಯುವ ಸಲುವಾಗಿ ವಿಜ್ಞಾನಿಗಳು ಆಹಾರ ತಯಾರಿ ಮತ್ತು ಪ್ಯಾಕೇಜಿಂಗ್ ಕ್ರಮವನ್ನು ವಿಶಿಷ್ಟವಾಗಿಸಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸುವ ಆಹಾರ ವಸ್ತುಗಳನ್ನು ಆರಿಸುವಾಗ, ಕಡಿಮೆ ತೂಕ, ಹೆಚ್ಚು ಪೋಷಕಾಂಶ ಹೊಂದಿರುವ, ತಿನ್ನಲು ಸುಲಭ ಮತ್ತು ರುಚಿಕರವಾದ ವಸ್ತುಗಳನ್ನು ಆರಿಸಲಾಗುತ್ತದೆ.

ಸುದೀರ್ಘ ಅವಧಿಗೆ ಅವಶ್ಯಕ ವಸ್ತುಗಳ ಪೂರೈಕೆ ಹೇಗೆ?

ಕೇವಲ ವಾರವೊಂದರ ಅವಧಿಗೆ ಬಾಹ್ಯಾಕಾಶಕ್ಕೆ ತೆರಳಿದ ಗಗನಯಾತ್ರಿಗಳು ಈಗ ಹಲವು ತಿಂಗಳುಗಳ ಕಾಲ ಅಲ್ಲೇ ಇರಲಿದ್ದಾರೆ. ಇಂತಹ ಸುದೀರ್ಘ ಅವಧಿಗೆ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಭೂಮಿಯಿಂದ ಅವಶ್ಯಕ ವಸ್ತುಗಳನ್ನು ಪೂರೈಸಲು ಶಟಲ್ ಅಥವಾ ಸಾಗಾಣಿಕಾ ಉದ್ದೇಶಕ್ಕೆ ಇರುವ ಬಾಹ್ಯಾಕಾಶ ನೌಕೆಗಳನ್ನು ಬಳಸಲಾಗುತ್ತದೆ. ಈ ಬಾಹ್ಯಾಕಾಶ ನೌಕೆಗಳು ಅಂದಾಜು 400 ಗ್ಯಾಲನ್ (1,514 ಲೀಟರ್) ನೀರು, ಉಸಿರಾಡಲು ಅವಶ್ಯಕವಾದ ಆಮ್ಲಜನಕದ ಟ್ಯಾಂಕ್, ಆಹಾರ ಮತ್ತು ಅವರಿಗೆ ಬೇಕಾದ ವಸ್ತುಗಳನ್ನು ಒಯ್ದು ಕೊಡುತ್ತವೆ.

ಐಎಸ್ಎಸ್‌ನಲ್ಲಿ ಉಸಿರಾಟಕ್ಕೆ ಬೇಕಾದ ಆಮ್ಲಜನಕ ಹೇಗೆ ಲಭಿಸುತ್ತದೆ?

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 500 ಗ್ಯಾಲನ್‌ಗಳ (1,893 ಲೀಟರ್) ಒಂದು ನೀರಿನ ಟ್ಯಾಂಕ್ ಇರುತ್ತದೆ. ಇದರಿಂದ 6-8 ಜನರಿಗೆ ಅಂದಾಜು 80 ದಿನಗಳಿಗೆ ಬೇಕಾದ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ, ಇನ್ನೊಂದು ಹೆಚ್ಚುವರಿ ಆಮ್ಲಜನಕದ ಟ್ಯಾಂಕ್ ವ್ಯವಸ್ಥೆಯೂ ಇದೆ. ಅದರಲ್ಲೂ ಏನಾದರೂ ಸಮಸ್ಯೆ ಎದುರಾದರೆ, ರಾಸಾಯನಿಕವಾಗಿ ಆಮ್ಲಜನಕ ಉತ್ಪಾದಿಸುವ ಇನ್ನೊಂದು ಘಟಕವೂ ಐಎಸ್ಎಸ್‌ನಲ್ಲಿದೆ.

ಲೇಖಕ: ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT