ಈ ಜಗತ್ತಿನಲ್ಲಿ ಸಾವು ಹಾಗೂ ತೆರಿಗೆ ಬಿಟ್ಟು ಯಾವುದೂ ಖಾತರಿ ಇಲ್ಲ ಎಂಬ ಮಾತಿದೆ. ಶತಕೋಟ್ಯಧಿಪತಿಗಳಾಗಿದ್ದರೂ ಸಾವಿನಿಂದ ತಪ್ಪಿಸಿಕೊಳ್ಳಲಾಗದು. ಆದರೆ ತೆರಿಗೆ ತಪ್ಪಿಸಿಕೊಳ್ಳುವಲ್ಲಿ ಬಹಳಷ್ಟು ಮಂದಿ ನಿಪುಣರಾಗಿದ್ದಾರೆ. ಜಾಗತೀಕರಣದ ನಂತರವಂತೂ ತೆರಿಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅಂತಹವರಿಗೆ ನೂರಾರು ಅವಕಾಶಗಳು ತೆರೆದುಕೊಂಡಿವೆ. ಕೆಲವೆಡೆ, ತೆರಿಗೆ ವಿಧಿಸಿದರೂ ಪ್ರಯೋಜನವಿಲ್ಲ, ತಪ್ಪಿಸಿಕೊಳ್ಳುತ್ತಾರೆ ಅನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರ ನಡುವೆಯೂ ವಾಸ್ತವ ಅಷ್ಟೊಂದು ನಿರಾಶಾದಾಯಕವಾಗಿಯೇನೂ ಇಲ್ಲ. ತೆರಿಗೆ ಕಳ್ಳತನವನ್ನು ನಿಗ್ರಹಿಸುವ ಪ್ರಯತ್ನಗಳು ನಡೆಯುತ್ತಿವೆ. ಅವು ಇನ್ನಷ್ಟು ಬಲ ಪಡೆದುಕೊಳ್ಳಬೇಕು. ಇಲ್ಲವಾದರೆ ಸರ್ಕಾರದ ಸಂಸ್ಥೆಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ.

ಈ ಬಗೆಯ ಆತಂಕವು ಜಗತ್ತಿನಾದ್ಯಂತ ಸಂಶೋಧಕರು ಈ ಕುರಿತು ಯೋಚಿಸುವಂತೆ ಒತ್ತಾಯಿಸುತ್ತಿದೆ. ಅದರ ಫಲವಾಗಿ 2024ರ ‘ಗ್ಲೋಬಲ್ ಟ್ಯಾಕ್ಸ್ ಇವೇಷನ್’ ವರದಿ ಪ್ರಕಟವಾಗಿದೆ. ನೂರಾರು ಸಂಶೋಧಕರು ಒಟ್ಟಿಗೆ ಸೇರಿ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ, ತೆರಿಗೆ ಕಳ್ಳತನದ ಎಲ್ಲಾ ಆಯಾಮಗಳ ಕುರಿತು ಬಹಳಷ್ಟು ನಿಖರವಾದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಶತಕೋಟ್ಯಧಿಪತಿಗಳ ವರಮಾನ ಹಾಗೂ ಸಂಪತ್ತು ತೀವ್ರಗತಿಯಲ್ಲಿ ಬೆಳೆಯುತ್ತಿರುವುದು ನಮಗೆ ಗೊತ್ತಿದೆ. ಅದಕ್ಕೆ ತಕ್ಕಂತೆ ತೆರಿಗೆ ಸಂದಾಯವಾಗುತ್ತಿಲ್ಲ ಎಂಬುದನ್ನು ಈ ವರದಿ ನಮ್ಮ ಗಮನಕ್ಕೆ ತರುತ್ತದೆ. ತೆರಿಗೆ ತಪ್ಪಿಸಿಕೊಳ್ಳಲು ಅವರು ಹಲವು ಮಾರ್ಗಗಳನ್ನು ಬಳಸುತ್ತಾರೆ. ಕಾನೂನಿನಲ್ಲಿ ಯಾವುದೋ ಉದ್ದೇಶಕ್ಕೆ ಕಲ್ಪಿಸಿರುವ ಅವಕಾಶವನ್ನು ಇವರು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ. ಕಾನೂನಿನ ಕಣ್ಣು ತಪ್ಪಿಸಿಯೂ ತೆರಿಗೆ ಕದಿಯುತ್ತಾರೆ. ವಿದೇಶಿ ಹಣಕಾಸು ಕೇಂದ್ರಗಳಿಗೆ ಹಣ, ಸಂಪತ್ತು ವರ್ಗಾಯಿಸುವುದು, ಕಡಿಮೆ ಪ್ರಮಾಣದಲ್ಲಿ ತೆರಿಗೆ ವಿಧಿಸುವ ದೇಶಗಳಿಗೆ ಲಾಭ ವರ್ಗಾಯಿಸುವುದು, ಶೆಲ್ ಕಂಪನಿಗಳ ಮೂಲಕ ವ್ಯವಹರಿಸುವುದು... ಹೀಗೆ ತೆರಿಗೆ ತಪ್ಪಿಸಲು ಹಲವು ದಾರಿಗಳಿವೆ.

ಈ ವರದಿಯು ತೆರಿಗೆ ಕಳ್ಳತನವನ್ನು ಕಾನೂನಿನ ದೃಷ್ಟಿಯಿಂದ ನೋಡುತ್ತಿಲ್ಲ, ಬದಲಿಗೆ ಆರ್ಥಿಕ ದೃಷ್ಟಿಯಿಂದ ನೋಡುತ್ತದೆ. ತೆರಿಗೆ ಕಳ್ಳತನದಿಂದ ಸರ್ಕಾರದ ವರಮಾನ, ಆರ್ಥಿಕತೆ ಮತ್ತು ಅಸಮಾನತೆಯ ಮೇಲೆ ಆಗುವ ಪರಿಣಾಮವನ್ನು ಗಮನಿಸುತ್ತದೆ. ತೆರಿಗೆ ಕಳ್ಳತನವನ್ನು ತಡೆಯುವುದರಲ್ಲಿ ಸರ್ಕಾರದ ನೀತಿಗಳು ಎಷ್ಟು ಸಫಲವಾಗಿವೆ ಮತ್ತು ಅವುಗಳನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು ಎಂಬ ವಿಷಯಗಳತ್ತ ಯೋಚಿಸುತ್ತದೆ.

ತೆರಿಗೆ ತಪ್ಪಿಸಿಕೊಳ್ಳುವುದಕ್ಕೆ ಶತಕೋಟ್ಯಧಿಪತಿಗಳು ಅನುಸರಿಸುವ ಒಂದು ಕ್ರಮವೆಂದರೆ, ಹಣಕಾಸು ಸ್ವತ್ತನ್ನು ವಿದೇಶಕ್ಕೆ ವರ್ಗಾಯಿಸುವುದು. ಹಣಕಾಸು ಸ್ವತ್ತು ಅಂದರೆ ಬ್ಯಾಂಕ್ ಠೇವಣಿ, ಷೇರುಗಳು, ಬಾಂಡ್ಗಳು, ಮ್ಯೂಚುಯಲ್ ಫಂಡ್ ಯೂನಿಟ್ನಂತಹವು. ಅಂತಹ ಹಣಕಾಸು ಸ್ವತ್ತುಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಭಾಗ ನಿರ್ದಿಷ್ಟವಾಗಿ ಇಂಥವರದ್ದೇ ಎಂದು ತೆರಿಗೆ ಅಧಿಕಾರಿಗಳಿಗೆ ಗೊತ್ತಾಗುತ್ತಿರಲಿಲ್ಲ. ಅವನ್ನು ಠೇವಣಿಯನ್ನಾಗಿ ಇಟ್ಟುಕೊಂಡ ವಿದೇಶಿ ಹಣಕಾಸು ಕೇಂದ್ರಗಳೂ ಸಂಬಂಧಪಟ್ಟ ಅಧಿಕಾರಿಗಳಿಗೆ ಆ ಬಗ್ಗೆ ಮಾಹಿತಿ ನೀಡುತ್ತಿರಲಿಲ್ಲ. ಹಾಗಾಗಿ, 2017ರವರೆಗೆ ಈ ಬಗ್ಗೆ ಮಾಹಿತಿ ಸಿಗುವುದು ತುಂಬಾ ಕಷ್ಟವಿತ್ತು. ಬಚ್ಚಿಟ್ಟ ಸಂಪತ್ತಿನ ವಿರಾಟ್ಸ್ವರೂಪ ಜಗತ್ತಿಗೆ ತಿಳಿದದ್ದು ಪನಾಮ ಪೇಪರ್ಸ್ನಂತಹ ಪ್ರಕರಣಗಳಿಂದ. ಆಗಲೂ ವಿದೇಶಿ ಹಣಕಾಸಿನ ಪ್ರಮಾಣದ ಬಗ್ಗೆಯಾಗಲಿ, ಯಾರೆಲ್ಲಾ ಇಟ್ಟಿದ್ದಾರೆ, ಯಾವ ಉದ್ದೇಶಕ್ಕೆ ಇಟ್ಟಿದ್ದಾರೆ ಅನ್ನುವಂತಹ ಮಾಹಿತಿಯಾಗಲಿ ಇರಲಿಲ್ಲ. ಕೆಲವು ಅತಿಶ್ರೀಮಂತರು ಈ ಕೆಲಸ ಮಾಡುತ್ತಿದ್ದಾರೆ ಅನ್ನುವುದಷ್ಟೇ ತಿಳಿದಿತ್ತು.

2017ರಿಂದ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗಿದೆ. ನೂರಕ್ಕೂ ಹೆಚ್ಚು ದೇಶಗಳು ತಮ್ಮ ಹಣಕಾಸು ಸಂಸ್ಥೆಗಳಲ್ಲಿರುವ ಖಾತೆಗಳ ಬಗೆಗಿನ ಮಾಹಿತಿಯನ್ನು ಸಂಬಂಧಪಟ್ಟ ದೇಶಗಳ ತೆರಿಗೆ ಅಧಿಕಾರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ. ಹಾಗಾಗಿಯೇ ವಿದೇಶಿ ಹಣಕಾಸು ಸಂಸ್ಥೆಗಳಲ್ಲಿ ಇರಿಸಿರುವ ಸಂಪತ್ತಿನ ಮಾಹಿತಿಯು 2022ರಲ್ಲಿ ಜಗತ್ತಿಗೆ ಗೊತ್ತಾಯಿತು.

ಮಾಹಿತಿ ವಿನಿಮಯ ವ್ಯವಸ್ಥೆಯಿಂದಾಗಿ ತೆರಿಗೆ ಕಳ್ಳತನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಪೂರ್ತಿ ನಿಂತಿಲ್ಲ. ಕೆಲವು ದೇಶಗಳು ಈ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿವೆ. ಮಾಹಿತಿ ನೀಡಿದರೆ ತಮ್ಮ ದೇಶದಿಂದ ಬಂಡವಾಳ ಹರಿದುಹೋಗಿಬಿಡುತ್ತದೆ ಅನ್ನುವ ಆತಂಕ ಅವುಗಳಿಗೆ. ಜೊತೆಗೆ ಈ ಒಪ್ಪಂದದಲ್ಲೇ ಕೆಲವು ಸಮಸ್ಯೆಗಳಿವೆ. ಆ ಒಪ್ಪಂದ ಚಿರಾಸ್ತಿಗೆ ಅನ್ವಯವಾಗುವುದಿಲ್ಲ. ಅದರ ಪ್ರಕಾರ, ಚಿರಾಸ್ತಿಯಂತಹ ಕೆಲವು ಸ್ವತ್ತುಗಳ ಬಗ್ಗೆ ಮಾಹಿತಿ ನೀಡಲೇಬೇಕಾದ ಅಗತ್ಯವಿಲ್ಲ. ಹಾಗಾಗಿ, ಶ್ರೀಮಂತರು ಬಹುತೇಕ ಠೇವಣಿಯನ್ನು ಚಿರಾಸ್ತಿಯಾಗಿ ಮಾರ್ಪಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

2020ರಲ್ಲಿ ವಿದೇಶಿಯರು ದುಬೈನಲ್ಲಿ ವಿಪರೀತ ಚಿರಾಸ್ತಿ ಖರೀದಿಸಿರುವುದಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ. ಹೀಗಾಗಿ ಶೇ 25ರಷ್ಟು ವಿದೇಶಿ ಸಂಪತ್ತು ಇನ್ನೂ ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಆದರೂ ಇಷ್ಟು ಸಾಧ್ಯವಾಗಿರುವುದು ದೊಡ್ಡ ವಿಷಯ. ರಾಜಕೀಯ ಇಚ್ಛಾಶಕ್ತಿ ಇದ್ದರೆ ತೆರಿಗೆ ಕಳ್ಳತನವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಅನ್ನುವುದಕ್ಕೆ ಇದೊಂದು ಉದಾಹರಣೆ. ಹಣಕಾಸಿನ ವಿಷಯದಲ್ಲಿ ಆದಂತೆ ಆಸ್ತಿಯ ವಿಷಯದಲ್ಲೂ ಮಾಹಿತಿಯನ್ನು ಹಂಚಿಕೊಂಡರೆ ತೆರಿಗೆ ಕಳ್ಳತನ ಇನ್ನಷ್ಟು ತಪ್ಪಬಹುದು.

ಇಂತಹ ವ್ಯವಹಾರಗಳಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಒಂದು ದೇಶದ ಬೃಹತ್ ಉದ್ಯಮಪತಿಗಳು ಇನ್ನೊಂದು ದೇಶದಲ್ಲಿರುವ ಶೆಲ್ ಕಂಪನಿಗಳು, ಟ್ರಸ್ಟುಗಳಂತಹವುಗಳ ಮೂಲಕ ಮೂರನೇ ದೇಶದಲ್ಲಿ ವ್ಯವಹಾರ ನಡೆಸುತ್ತಿರುತ್ತಾರೆ. ಹಾಗಾಗಿ, ಯಾವ ದೇಶದಿಂದ, ಯಾರ ಹಣ, ಎಲ್ಲಿಗೆ ವರ್ಗಾವಣೆ ಆಗುತ್ತಿದೆ ಅನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಈಗ ಹಲವು ರಾಷ್ಟ್ರಗಳಲ್ಲಿನ ವಿದೇಶಿ ಹಣಕಾಸು ಸಂಸ್ಥೆಗಳು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸಿದೆ. ಜೊತೆಗೆ ಈ ರೀತಿಯ ವ್ಯವಹಾರಗಳನ್ನು ಪತ್ತೆಹಚ್ಚುವುದಕ್ಕೆ ಸಂಶೋಧಕರು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಕೆಲವು ಬಹುರಾಷ್ಟ್ರೀಯ ಕಂಪನಿಗಳು ಸಹ ಗಳಿಸಿದ ಲಾಭಕ್ಕೆ ಸೂಕ್ತ ರೀತಿಯಲ್ಲಿ ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳುತ್ತವೆ. ತಮ್ಮ ಲಾಭದ ಬಹುಭಾಗವನ್ನು ‘ತೆರಿಗೆ ಸ್ವರ್ಗ’ಗಳಿಗೆ ಅಂದರೆ ತೆರಿಗೆಯೇ ಇಲ್ಲದ ಅಥವಾ ಅತಿ ಕಡಿಮೆ ತೆರಿಗೆ ವಿಧಿಸುವ ದೇಶಗಳಿಗೆ ವರ್ಗಾಯಿಸುತ್ತವೆ. 2022ರಲ್ಲಿ ಬಹುರಾಷ್ಟ್ರೀಯ ಕಂಪನಿಗಳು ತಾವು ಗಳಿಸಿದ ಲಾಭದಲ್ಲಿ ಶೇಕಡ 35ರಷ್ಟನ್ನು ‘ತೆರಿಗೆ ಸ್ವರ್ಗ’ಗಳಿಗೆ ವರ್ಗಾಯಿಸಿದ್ದವು. ಇದರಿಂದ ಜಾಗತಿಕವಾಗಿ ತೆರಿಗೆ ಸಂಗ್ರಹದ ಪ್ರಮಾಣ ಕಡಿಮೆಯಾಯಿತು.

ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಮಸ್ಯೆ ಪ್ರಾರಂಭವಾಗಿದೆ. ಹಲವು ದೇಶಗಳು ಆರ್ಥಿಕ ಅಭಿವೃದ್ಧಿಗೆ ವಿದೇಶಿ ಬಂಡವಾಳವನ್ನು ನೆಚ್ಚಿಕೊಂಡಿವೆ. ಹಾಗಾಗಿ, ಬಂಡವಾಳವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಅವು ಹೆಣಗುತ್ತಿವೆ. ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಇದರಿಂದ ಜಾಗತಿಕವಾಗಿ ತೆರಿಗೆ ಸಂಗ್ರಹದ ಪ್ರಮಾಣ ಕುಸಿಯುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಜಾಗತಿಕ ಮಟ್ಟದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಲಾಭದ ಮೇಲೆ ಶೇ 15ರಷ್ಟು ಕನಿಷ್ಠ ತೆರಿಗೆ ವಿಧಿಸುವುದಕ್ಕೆ 2021ರಲ್ಲಿ 140ಕ್ಕೂ ಹೆಚ್ಚು ದೇಶಗಳು ಒಪ್ಪಿಕೊಂಡವು. ಇದೊಂದು ಮಹತ್ವದ ತೀರ್ಮಾನ. ಆದರೆ ಹಲವು ದೇಶಗಳು ಕೆಲವು ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿದವು. ಅದರಿಂದ ನಿರೀಕ್ಷಿಸಿದಷ್ಟು ತೆರಿಗೆ ಸಂಗ್ರಹವಾಗಲಿಲ್ಲ. ಕೊನೆಗೆ ಲಾಭವಾಗಿದ್ದು ಶತಕೋಟ್ಯಧಿಪತಿಗಳಿಗೆ.

ಇಂದು ಶತಕೋಟ್ಯಧಿಪತಿಗಳ ಸಂಪತ್ತಿನ ಬಗ್ಗೆ ಮೊದಲಿಗಿಂತ ಹೆಚ್ಚು ನಿಖರವಾದ ಮಾಹಿತಿ ಲಭ್ಯವಿದೆ. ಅಂತಹವರ ಸಂಖ್ಯೆಯು ಹೆಚ್ಚೆಂದರೆ 3,000. ಹಾಗಾಗಿ, ಅವರಿಂದ ತೆರಿಗೆ ಸಂಗ್ರಹ ಕಷ್ಟವಾಗಬಾರದು. ಜೊತೆಗೆ ಅವರ ಸಂಪತ್ತು ಹಿಂದಿನ ದಶಕದಲ್ಲಿ ಶೇ 7ರಷ್ಟು ಏರಿರುವುದರಿಂದ ಅವರ ಸಂಪತ್ತಿನ ಮೇಲೆ ವಿಧಿಸುವ ಶೇ 2ರಷ್ಟು ತೆರಿಗೆ ದೊಡ್ಡ ಮೊತ್ತವಲ್ಲ. ಇದರಿಂದ 250 ಶತಕೋಟಿ ಡಾಲರುಗಳನ್ನು ಸಂಗ್ರಹಿಸಬಹುದು ಎಂದು ವರದಿ ತಿಳಿಸುತ್ತದೆ.

ಪರೋಕ್ಷ ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಮಾಡುವ ಬದಲು ನೇರ ತೆರಿಗೆಯ ಮೂಲಕ ಸಂಪನ್ಮೂಲ ಸಂಗ್ರಹಿಸಿ ಸಾಮಾನ್ಯರಿಗೆ ಮೂಲ ಸೌಕರ್ಯ ಒದಗಿಸುವ ದಿಸೆಯಲ್ಲಿ ಯೋಚಿಸಬೇಕಾಗಿದೆ. ತೆರಿಗೆಯನ್ನು ಅಸಮಾನತೆಯ ನಿಯಂತ್ರಣಕ್ಕೆ, ಹೆಚ್ಚು ಸಮಾನವಾದ ಸಮಾಜದ ಕಡೆ ಚಲಿಸುವುದಕ್ಕೆ ಅವಶ್ಯವಾದ ಸಾಧನವಾಗಿ ಬಳಸಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ. ಈ ದಿಸೆಯಲ್ಲಿ ಸಂಶೋಧಕರು ಪ್ರಕಟಿಸಿರುವ ಈ ವರದಿ ಅತ್ಯಂತ ಮಹತ್ವದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.