ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಗೆ (Regional Comprehensive Economic Partnership- RCEP) ಇಂದೇ ಅಲ್ಲದಿದ್ದರೂ ಮತ್ತೊಂದು ದಿನ ಭಾರತ ಸಹಿ ಹಾಕಲೂಬಹುದು. 1995ರಲ್ಲಿ ಗ್ಯಾಟ್‌ಗೆ ಸಹಿ ಹಾಕಿ ಡಬ್ಲ್ಯುಟಿಒಗೆ ತೆರೆದ ಬಾಗಿಲನ್ನು ಈಗ ಆರ್‌ಸಿಇಪಿಗೆ ಇನ್ನಷ್ಟು ದೊಡ್ಡದಾಗಿ ತೆರೆಯಲು ನಾವು ಹೊಸ್ತಿಲಲ್ಲಿ ನಿಂತಿದ್ದೇವೆ. ಸಮಾಜವಾದಿ ಬಂಡವಾಳಶಾಹಿ ಮಿಶ್ರ ಅರ್ಥ ವ್ಯವಸ್ಥೆಯಿಂದ ಪೂರ್ಣ ಬಂಡವಾಳಶಾಹಿ ಆರ್ಥಿಕತೆಗೆ ಹೊರಳುವ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಅಂದು ನಮ್ಮ ದೇಶದ ಎದುರಿಗಿತ್ತು. ಇಂದು ಆರ್‌ಸಿಇಪಿಗೆ ಸಹಿ ಹಾಕುವ ಮುಂಚೆ ಅದಕ್ಕಿಂತ ಸಂಕೀರ್ಣ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭ ನಮ್ಮೆದುರಿಗಿದೆ.

ಈ ಕಾಲು ಶತಮಾನದ ಅವಧಿಯ ಜಾಗತಿಕ ಬಂಡವಾಳಶಾಹಿ ಆರ್ಥಿಕತೆಯಲ್ಲಿ ದೇಶ ಕಂಡ ಪ್ರಗತಿಯನ್ನು ಪೂರ್ಣತ್ವದೆಡೆಗೆ ಮುನ್ನಡೆಸುವ ಸಲುವಾಗಿ ನಾವು ಆರ್‌ಸಿಇಪಿಗೆ ಸಹಿ ಹಾಕಬೇಕು ಎನ್ನುವ ಒಂದು ವಾದವಿದೆ. ಈ ಅರೆಬರೆ ಮತ್ತು ಮಿಶ್ರ ಪ್ರಗತಿಯಿಂದ ನಾವು ಕಂಡ ಏಳುಗಳೇನು, ಬೀಳುಗಳೇನು ಎನ್ನುವುದನ್ನು ನೋಡಿದರೆ, ನಾವು ನಿಜಕ್ಕೂ ತೆರೆದ ಬಾಗಿಲನ್ನು ಇನ್ನಷ್ಟು ತೆರೆಯಬೇಕೇ ಎನ್ನುವುದು ಮತ್ತೊಂದು ವಾದ. ಹಾಗಾದರೆ ಆರ್ಥಿಕ ಜಾಗತೀಕರಣದಿಂದ ನಾವು ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಅವಲೋಕಿಸಬೇಕಾದ ಸಮಯ ಇದು.

ಅಂತರರಾಷ್ಟ್ರೀಯ ಬಂಡವಾಳ ಹೂಡುವಿಕೆ ಮತ್ತು ವ್ಯಾಪಾರ ಸಂಬಂಧಿ ಒಪ್ಪಂದಗಳು, ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದ ಒಪ್ಪಂದಗಳು, ಸೇವೆಗಳ ಕುರಿತಂತೆ ಅಂತರರಾಷ್ಟ್ರೀಯ ಒಪ್ಪಂದಗಳು ಗ್ಯಾಟ್ ಪ್ರಸ್ತಾವದ ಮೂರು ಮುಖ್ಯ ಅಂಶಗಳು.

ಸೇವೆಗಳ ಕುರಿತಂತೆ ನಾವು ಸಹಿ ಹಾಕಿದ ಅಂತರರಾಷ್ಟ್ರೀಯ ಒಪ್ಪಂದಗಳು ನಮ್ಮಲ್ಲಿ ವಿದ್ಯುನ್ಮಾನ, ಐ.ಟಿ, ಆಡಳಿತ, ವಿಮೆ, ಆರೋಗ್ಯ, ಸಂಪರ್ಕ, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳು ಬೆಳೆಯಲು ಅವಕಾಶ ಮಾಡಿಕೊಟ್ಟು ಒಂದಷ್ಟು ಪ್ರಗತಿಯನ್ನು ತಂದವು. ವಿದೇಶಿ ಬಂಡವಾಳ ಹೂಡುವಿಕೆ ಮತ್ತು ವ್ಯಾಪಾರ ಸಂಬಂಧಿ ಒಪ್ಪಂದಗಳು ನವಉದಾರೀಕರಣ ಮತ್ತು ಖಾಸಗೀಕರಣಕ್ಕೆ ಉತ್ತೇಜನ ನೀಡಿದವು. ನಗರ ಕೇಂದ್ರಿತ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ವಿದ್ಯಾವಂತ ಯುವಪೀಳಿಗೆಗಳಿಗೆ ಹಿಂದೆಂದೂ ಇರದಂತಹ ಉದ್ಯೋಗಾವಕಾಶಗಳು ತೆರೆದುಕೊಂಡವು. ಈ ವರ್ಗದ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಕೊಳ್ಳುಬಾಕ ಸಂಸ್ಕೃತಿಯನ್ನೂ ಉದ್ದೀಪಿಸಿ, ದೇಶವು ತನ್ನ ಆರ್ಥಿಕತೆಯನ್ನು ಸದೃಢವಾಗಿಸಿಕೊಳ್ಳುತ್ತಾ ಹೋದದ್ದನ್ನೂ ನಾವು ಕಂಡೆವು.

ಈ ಮುನ್ನಡೆ, ಗ್ರಾಮೀಣ ಭಾಗ ಮತ್ತು ದೇಶದ ಅಸಂಖ್ಯ ಅಸಂಘಟಿತ ಕ್ಷೇತ್ರಗಳೂ ಸೇರಿದಂತೆ ಎಲ್ಲ ವಲಯಗಳಿಗೆ ಹಂಚಿಕೆಯಾಗಬೇಕೆಂಬ ಆಶಯ ಮಾತ್ರ ಈಡೇರಲಿಲ್ಲ. ಆದರೆ, ಆಧುನಿಕತೆ ಮತ್ತು ನವಆರ್ಥಿಕತೆಯ ಫಲ ಉಣ್ಣುವ ಕನಸುಗಳನ್ನು ಈ ಎಲ್ಲ ವಲಯದ ಜನರೂ ಸಹಜವಾಗಿ ಕಾಣತೊಡಗಿದ್ದು ಅವರ ತಪ್ಪಲ್ಲ. ಇದು ಮತ್ತೊಂದು ತೆರನಾದ ಸಂಘರ್ಷಕ್ಕೆ ಎಡೆಮಾಡಿಕೊಡಹತ್ತಿತು. ಜಾಗತಿಕ ಮತ್ತು ದೇಶೀಯ, ನಗರ ಮತ್ತು ಗ್ರಾಮೀಣ, ಯಂತ್ರಕುಶಲ ಮತ್ತು ಕರಕುಶಲ, ಉಳ್ಳವ ಮತ್ತು ಇಲ್ಲದವ, ಪುರುಷ ಮತ್ತು ಸ್ತ್ರೀ, ಹೀಗೆ ಶ್ರಮ ವಿಭಜನೆಗಳು ಅಸಮಾನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವೀಕೃತಗೊಂಡವು. ಇವು ನಮ್ಮನ್ನು ಪಾರಂಪರಿಕವಾಗಿ ನೊಣೆಯುತ್ತಿರುವ ವರ್ಗ, ವರ್ಣ, ಧರ್ಮ, ಲಿಂಗ ಇತ್ಯಾದಿ ವಿಭಜನೆಗಳನ್ನು ಇನ್ನಷ್ಟು ಗಟ್ಟಿಗೊಳಿಸಹತ್ತಿದವು.

ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದ ಒಪ್ಪಂದಗಳಂತೂ ಸಂಶೋಧನೆ, ಔಷಧಿ, ಕೃಷಿ ಮುಂತಾದ ಕ್ಷೇತ್ರಗಳನ್ನು ಸಂಪೂರ್ಣ ನಲುಗಿಸಿಬಿಟ್ಟಿವೆ. ಸಾಮಾಜಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳಲ್ಲಿ ನಾವು ಇಂದು ಸಾಕಷ್ಟು ಹಿಂದುಳಿದಿರುವುದಕ್ಕೆ ಬೌದ್ಧಿಕ ಆಸ್ತಿ ಹಕ್ಕುಗಳ ಸ್ವಾಮ್ಯ ಹೊರಗಿನವರ ಪಾಲಾದದ್ದು ಬಹುಪಾಲು ಕಾರಣವಾಗಿದೆ. ಜೀವರಕ್ಷಕ ಔಷಧಿಗಳಿಂದ ಹಿಡಿದು ಅನೇಕ ಬಗೆಯ ಆರೋಗ್ಯ ಸೇವೆಗಳು ಬಹುರಾಷ್ಟ್ರೀಯ ಕಂಪನಿಗಳ ಬೌದ್ಧಿಕ ಹಕ್ಕುಸ್ವಾಮ್ಯದಲ್ಲಿವೆ. ಅವನ್ನು ಕೊಳ್ಳಲು ಶಕ್ತಿಯಿದ್ದವನು ಮಾತ್ರ ಆರೋಗ್ಯಕರವಾಗಿ ಜೀವಿಸಿರಲು ಅರ್ಹ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಸಲಕರಣೆ, ಗೊಬ್ಬರ, ಕೀಟನಾಶಕವಲ್ಲದೆ ಬೀಜಕ್ಕೂ ರೈತ, ಬಹುರಾಷ್ಟ್ರೀಯ ಕಂಪನಿಗಳನ್ನೇ ಅವಲಂಬಿಸಬೇಕಿದೆ. ಒಟ್ಟಾರೆ ಈ ಜಾಗತೀಕರಣ ಮತ್ತು ಹಕ್ಕುಸ್ವಾಮ್ಯದ ಪ್ರಕ್ರಿಯೆಗಳು ಎಲ್ಲ ಅಸಂಘಟಿತ ವಲಯಗಳ ಸಮುದಾಯ ಜ್ಞಾನ, ಕೌಶಲ ಮತ್ತು ಆರ್ಥಿಕತೆಯನ್ನೂ, ಈ ನೆಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾರ್ವಭೌಮತ್ವವನ್ನೂ ಹೊಸಕಿಹಾಕತೊಡಗಿವೆ.

ಈ ಪ್ರಕ್ರಿಯೆಗಳು ಪರಿಸರ ಮತ್ತು ಸಂಪನ್ಮೂಲಗಳ ಮೇಲೆ ಹೇರಿದ ಒತ್ತಡವೂ ಸಾಮಾನ್ಯವಾದುದಲ್ಲ. ನಾವು ಸನ್ನದ್ಧರಾಗಿದ್ದೇವೋ ಇಲ್ಲವೋ, ಜಾಗತಿಕ ಬಂಡವಾಳಶಾಹಿ ಆರ್ಥಿಕತೆಯು ನಮ್ಮನ್ನು ಸಹನೆ ಮೀರಿದ ಸ್ಪರ್ಧೆಗೆ ನೂಕಿದೆ. ನಮ್ಮ ಉತ್ಪನ್ನಗಳು, ಆಮದಾದ ಉತ್ಪನ್ನಗಳೊಂದಿಗೆ ಆಂತರಿಕ ಬೇಡಿಕೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲೇ ಸ್ಪರ್ಧಿಸಬೇಕಿದೆ. ಅದನ್ನೂ ಮೀರಿ ಉತ್ಪಾದಿಸಿ, ರಫ್ತು ಮಾಡಿ ವಿದೇಶಿ ವಿನಿಮಯ ಗಳಿಸಿದಾಗಲೇ ಈ ಜಾಗತಿಕತೆಯಲ್ಲಿ ಗೆಲುವು. ಈ ಹುಚ್ಚು ಓಟವು ಇಂದಿನ ಮಾದರಿಯ ಅಭಿವೃದ್ಧಿಯನ್ನು ಪ್ರಶ್ನಿಸುವ, ವಿರೋಧಿಸುವ ಸುಸ್ಥಿರ ಅಭಿವೃದ್ಧಿಯ ಚರ್ಚೆಯನ್ನು ಹಿನ್ನೆಲೆಗೆ ತಳ್ಳುತ್ತದೆ. ಜೊತೆಗೆ, ಎಲ್ಲ ಬಗೆಯ ಸಾಮಾಜಿಕ, ಆರ್ಥಿಕ ಅಸಮತೋಲನಗಳನ್ನು ಪ್ರಶ್ನಿಸುವ, ವಿರೋಧಿಸುವ ಚರ್ಚೆಯನ್ನೂ ಹಿನ್ನೆಲೆಗೆ ತಳ್ಳುತ್ತದೆ.

ಈ ಪೈಪೋಟಿಯಲ್ಲಿ ಜಾಗತಿಕವಾಗಿ ಗೆಲ್ಲುವ ಕ್ರಿಯಾಶೀಲತೆಗೆ ಇಂಬು ಕೊಡಲು ನಮ್ಮ ಸರ್ಕಾರಗಳು ಒಂದು ದಶಕದಿಂದ ಈಚೆಗೆ ಅರಣ್ಯ, ಪರಿಸರ, ಕಾರ್ಮಿಕ ಮತ್ತು ಕೈಗಾರಿಕಾ ನೀತಿಗಳಲ್ಲಿ ಹಲವಾರು ಮಾರ್ಪಾಡುಗಳನ್ನು ತಂದಿವೆ. ಕೆಲವು ಮಾರ್ಪಾಡುಗಳು ಆಗಿಲ್ಲ ಮತ್ತು ಕೆಲವು ಮಾರ್ಪಾಡುಗಳು ಅನುಷ್ಠಾನದಲ್ಲಿ ಸಡಿಲವಾಗಿವೆ. ಕಾಡು, ಜಲಮೂಲಗಳ ನಾಶ, ಗಣಿಗಾರಿಕೆ, ನಗರೀಕರಣ, ನದಿ ಜೋಡಣೆ, ನದಿ ತಿರುವು ಮುಂತಾದ ಪರಿಸರ ಅಸಮತೋಲನ ಮತ್ತು ತಾಪಮಾನ ಹೆಚ್ಚಳಕ್ಕೆ ದಾರಿಮಾಡಿಕೊಡುವ ಯೋಜನೆಗಳು ತೀವ್ರಗೊಂಡಿವೆ. ಇದರಿಂದ ಶ್ರಮದ ಮೌಲ್ಯದ ನಾಶ ಮತ್ತು ಅಸಮಾನ ಸಂಪನ್ಮೂಲ ಹಂಚಿಕೆಗೂ ದಾರಿ ಮಾಡಿಕೊಟ್ಟಿವೆ. ಇವೆಲ್ಲದರಿಂದ ನೇರ ತೊಂದರೆಗೊಳಗಾಗುವ ಜನರಿಂದ ಪ್ರತಿರೋಧವೇ ಇಲ್ಲ. ಅನೇಕ ಬಾರಿ ಅವರೇ ಇಂತಹ ಯೋಜನೆಗಳನ್ನು ಸ್ವಾಗತಿಸುತ್ತಿರುವುದು ಇನ್ನೂ ಆತಂಕ ಮೂಡಿಸುತ್ತಿದೆ. ಅವರ ಇಂಥ ಮನಃಸ್ಥಿತಿಗೆ ಬಂಡವಾಳಶಾಹಿ ವ್ಯವಸ್ಥೆ ಕಟ್ಟಿಕೊಟ್ಟಿರುವ ಕೃತಕ ಹಾಗೂ ಸುಂದರ ಕೊಳ್ಳುಬಾಕ ಜಗತ್ತಿನ ಕನಸುಗಳೇ ಕಾರಣ ಎನ್ನುವುದು ಹೌದು. ಗ್ಯಾಟ್‌ಗೆ ಬಾಗಿಲು ತೆರೆದು ಇಷ್ಟೆಲ್ಲ ಕಳೆದುಕೊಂಡ ನಾವು, ಗಳಿಸಿದ್ದು ಮಾತ್ರ ಹೆಚ್ಚಿದ ಅಸಮಾನತೆ, ಅಸ್ಥಿರತೆ ಮತ್ತು ಇಂದಿನ ಆರ್ಥಿಕ ಹಿಂಜರಿತ.

ಈಗ, ಆರ್‌ಸಿಇಪಿ ವ್ಯಾಪ್ತಿಯ ಏಷ್ಯಾದ ಹದಿನೈದು ದೇಶಗಳ ಜೊತೆಗಿನ ನಮ್ಮ ವ್ಯವಹಾರ ಬಹುತೇಕ ಆಮದಿಗೆ ಸೀಮಿತವಾಗಿದೆ. ರಫ್ತಿನಲ್ಲಿ ನಾವು ಸಾಕಷ್ಟು ಹಿಂದಿದ್ದೇವೆ. ಉತ್ಪನ್ನಗಳು ಮತ್ತು ಕೌಶಲದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವನ್ನು ಸಾಧಿಸಲು ಈವರೆಗೂ ನಮಗೆ ಆಗಿಲ್ಲ. ನಾಳೆ ಅದನ್ನು ಸಾಧಿಸುತ್ತೇವೆ ಎಂದರೂ ಸಾಧಿಸುವುದರೊಳಗೆ ಎರಡೆರಡು ಜಾಗತಿಕ ಪೈಪೋಟಿ ನಮ್ಮನ್ನು ಹಿಂದಕ್ಕೆ ಹಾಕಿರುತ್ತದೆ. ಅಲ್ಲದೆ, ಇಡೀ ಆರ್‌ಸಿಇಪಿ ಮಾತುಕತೆಗಳು ಅತ್ಯಂತ ಗೋಪ್ಯವಾಗಿ ನಡೆಯುತ್ತಿದ್ದು, ದೇಶದ ಜನರಿಗಾಗಲೀ ಸಂಸತ್ತಿಗಾಗಲೀ ಈ ಬಗ್ಗೆ ಚರ್ಚಿಸುವ ಅವಕಾಶವೇ ಇಲ್ಲ. ಈ ಒಪ್ಪಂದಗಳನ್ನು ಅನುಮೋದಿಸುವ ಹಕ್ಕು ಕೂಡಾ ನಮ್ಮ ಸಂಸತ್ತಿಗೆ ಇಲ್ಲ ಎನ್ನುತ್ತದೆ ಆರ್‌ಸಿಇಪಿಯ ಪ್ರಣಾಳಿಕೆ. ಇಂತಹ ಏಕಪಕ್ಷೀಯ ಒಡಂಬಡಿಕೆಯ ಅಗತ್ಯವಾದರೂ ನಮಗಿದೆಯೇ? ನಮ್ಮಲ್ಲೇ ಅತಿದೊಡ್ಡ ಮಾರುಕಟ್ಟೆ ಇದೆ. ನಮ್ಮ ಕೌಶಲವನ್ನು ಹೆಚ್ಚಿಸಿಕೊಂಡು, ನಮ್ಮ ಉತ್ಪನ್ನಗಳನ್ನು ಶ್ರೇಷ್ಠವಾಗಿಸಿ ನಮ್ಮ ಗ್ರಾಹಕರಿಗೇ ತಲುಪಿಸುವ ಮೂಲಕ ನಮ್ಮ ಆರ್ಥಿಕತೆಯನ್ನು ಕಾಪಾಡಿಕೊಳ್ಳುವುದು, ಆ ಮೂಲಕ ಸುಸ್ಥಿರತೆಯನ್ನು ಸಾಧಿಸುವುದು ಪ್ರಗತಿಪರ ಸಮಾಜವೊಂದರ ಜಾಣ್ಮೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.