ಶಿಕ್ಷಣ ಇರುವುದು ಏತಕ್ಕಾಗಿ? ಜೀವನ ನಿರ್ವಹಣೆಗೆ ಅಗತ್ಯವಾದ ಉದ್ಯೋಗ ಪಡೆಯಲು ಬೇಕಾದ ಪದವಿ ಪಡೆಯಲೆಂದೋ ಅಥವಾ ಪರಿಪೂರ್ಣ ಹಾಗೂ ಅರ್ಥಪೂರ್ಣವಾದ ಬದುಕು ಕಟ್ಟಿಕೊಡುವ ಮೆಟ್ಟಿಲಾಗಿಯೋ? ನಾವು ಶಿಕ್ಷಣವನ್ನು ಒಂದು ವ್ಯವಸ್ಥೆ ಎನ್ನುತ್ತೇವೆ. ಸಾಮಾನ್ಯವಾಗಿ, ಯಾವುದೇ ಒಂದು ವ್ಯವಸ್ಥೆ ತನ್ನದೇ ಆದ ವ್ಯಾಪ್ತಿಯನ್ನು ಗುರುತಿಸಿಕೊಂಡ ಹಾಗೆ, ಇತಿಮಿತಿಯನ್ನೂ ಹೊಂದಿರುತ್ತದೆ. ಆದರೆ, ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬಯಸುವವರು ಅದರ ಲೋಪದೋಷಗಳು ಜನರಿಗೆ ಕಾಣಿಸದಂತೆ ಅದಕ್ಕೊಂದು ಉನ್ನತ ಸ್ಥಾನಮಾನ ಕೊಟ್ಟು ಜೋಪಾನವಾಗಿ ಮುಂದುವರಿಸಿಕೊಂಡು ಹೋಗಬಯಸುತ್ತಾರೆ.

ಇದಕ್ಕಿರುವ ಸುಲಭ ಮಾರ್ಗವೆಂದರೆ, ವ್ಯವಸ್ಥೆಯನ್ನು ಯಾರೂ ಪ್ರಶ್ನಿಸದಂತೆ ನೋಡಿಕೊಳ್ಳುವುದು. ಆದ್ದರಿಂದಲೇ, ವ್ಯವಸ್ಥೆಯ ನಿರೂಪಕರು, ತಾವು ನಿರ್ಮಿಸಿರುವ ಎಲ್ಲಾ ಭದ್ರ ತಡೆಗೋಡೆಗಳನ್ನು ಮೀರಿಯೂ ಅದನ್ನು ಪ್ರಶ್ನಿಸಿದವರಿಗೆ ಸಮಾಜಘಾತುಕರು ಎನ್ನುವ ಹಣೆಪಟ್ಟಿ ಹಚ್ಚಿ, ಆಯಾಯ ಕಾಲದಲ್ಲಿ ಶಿಕ್ಷೆಗೆ ಗುರಿಪಡಿಸುವುದನ್ನು ನಾವು ನೋಡಬಹುದು.

ಬದಲಾವಣೆಗೆ ಪ್ರತಿರೋಧಗಳಿದ್ದರೂ ಸಮಾಜದಲ್ಲಿ ಬಹಳಷ್ಟು ಪಲ್ಲಟಗಳು ಆಗಾಗ ನಡೆದಿರುವುದನ್ನು ಗುರುತಿಸಬಹುದು ಮತ್ತು ಈ ಪಲ್ಲಟಗಳನ್ನು ಸಾಧ್ಯವಾಗಿಸಿದ ಶಕ್ತಿ ಯಾವುದೆನ್ನುವ ಕುತೂಹಲ ಮೂಡುತ್ತದೆ. ಅದ್ಯಾವುದೆಂದರೆ, ತಮ್ಮ ಜೀವಿತಾವಧಿಯಲ್ಲಿ ಎದುರಿಸುವ ಸಾಮಾಜಿಕ ವ್ಯವಸ್ಥೆಗಳ ಕಟ್ಟುಪಾಡುಗಳಿಗೆ ಸಡ್ಡು ಹೊಡೆದು ಪ್ರಶ್ನಿಸುವ ಎದೆಗಾರಿಕೆ ಹೊಂದಿದ ಅದಮ್ಯ ಚೇತನಗಳು. ಹಾಗಿದ್ದಲ್ಲಿ, ವ್ಯವಸ್ಥೆಯನ್ನು ಪ್ರಶ್ನಿಸುವವರ ವೈಶಿಷ್ಟ್ಯಗಳೇನು?

ವಿಸ್ಮಯವೆಂದರೆ, ಹುಟ್ಟಿದ ಮಗು ನಿರಂತರವಾಗಿ ಪ್ರಶ್ನಿಸುವುದರ ಮೂಲಕವೇ ತನ್ನ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಅವುಗಳೆಲ್ಲಾ ನಾವು ಬದುಕಿನುದ್ದಕ್ಕೂ ಸ್ವವಿಮರ್ಶೆ ಮಾಡಿಕೊಳ್ಳಲು ಅಗತ್ಯವಾದ ಪ್ರಶ್ನೆಗಳು. ಆದರೆ, ಮಕ್ಕಳ ಪ್ರಶ್ನೆಗಳನ್ನು ‘ಬಾಲಿಶ’ ಎಂದು ಹೆಸರಿಸಿ, ನಾವು ಮಹಾನ್ ಮೇಧಾವಿಗಳಂತೆ, ಸಿದ್ಧ ಮಾದರಿಯ ವ್ಯವಸ್ಥೆಯನ್ನು ಮುಂದುವರಿಸಲು ಅನುಕೂಲವಾಗುವಂತಹ ಉತ್ತರಗಳನ್ನು ಕೊಟ್ಟು, ಅವರನ್ನು ಮಾನಸಿಕವಾಗಿ ವ್ಯವಸ್ಥೆಗೆ ಹೊಂದಿಕೊಳ್ಳಲು ಸಿದ್ಧಪಡಿಸುತ್ತೇವೆ. ಸಾಮಾನ್ಯವಾಗಿ, ಮಕ್ಕಳಲ್ಲಿ ತಮ್ಮ ಮನಸ್ಸಿಗೆ ಬರುವುದನ್ನು ಫಿಲ್ಟರ್ ಮಾಡದೇ ಮುಗ್ಧವಾಗಿ ಪ್ರಶ್ನಿಸುವ ಪ್ರವೃತ್ತಿ ಅವರನ್ನು ಶಾಲೆಗೆ ಸೇರಿಸುವವರೆಗೆ ಕಾಣಿಸುತ್ತದೆ. ಆನಂತರ, ನಮ್ಮ ‘ವ್ಯವಸ್ಥೆಯ ಕಾರ್ಯಾಗಾರ’ವಾದ ಶಾಲೆಗಳಲ್ಲಿ ನಡೆಯುವುದು ಏನಿದ್ದರೂ, ಅವರನ್ನು ನಮ್ಮ ಶ್ರೇಷ್ಠ ಪರಂಪರೆಗೆ ಅನುಗುಣವಾಗಿ ಹದಗೊಳಿಸುವುದು. ಆರಂಭದಲ್ಲಿ ಮಕ್ಕಳು ಅದನ್ನು ಪ್ರತಿಭಟಿಸುವುದನ್ನು ನಾವು ಕಾಣಬಹುದು. ಕಾಲಕ್ರಮೇಣ, ಮಕ್ಕಳು ಬೆಳೆಯುತ್ತಾ ಈ ವ್ಯವಸ್ಥೆಯಲ್ಲಿ ಸಿಗುವ ಕೆಲವು ಉಪಯೋಗ ಮತ್ತು ಗೌರವಕ್ಕಾಗಿ, ಅಲ್ಲಿರುವ ಯಶಸ್ಸಿನ ಮಾನದಂಡಗಳನ್ನು ತಲುಪುವ ನಿರಂತರ ಪ್ರಯತ್ನಗಳನ್ನು ಮಾಡುತ್ತಾ, ಅತೃಪ್ತಿಯಿಂದಲೇ ಬಾಳುತ್ತಾ, ಜೀವನ ಪಯಣದ ಅಂತ್ಯಗಾಣುತ್ತಾರೆ.

ಈ ಮಾನವ ನಿರ್ಮಿತ ವ್ಯವಸ್ಥೆಯ ಪರಿಧಿಯೊಳಗೆ ನಮ್ಮ ಬದುಕನ್ನು ಸರಳೀಕರಿಸುವುದೊಂದೇ ಬದುಕುವ ಕ್ರಮವೇ ಎನ್ನುವುದು ಇಲ್ಲಿನ ಮೊದಲ ಪ್ರಶ್ನೆ. ಸುಮಾರು ಶೇ 99ರಷ್ಟು ಮಂದಿ ‘ಗುಂಪಿನೊಳಗೆ ಗೋವಿಂದ’ ಎನ್ನುವ ಮಾದರಿಯಲ್ಲಿ ಭಯದಲ್ಲಿಯೇ ಬದುಕಿದರೆ, ಉಳಿದ ಬೆರಳೆಣಿಕೆಯ ಮಂದಿಯಷ್ಟೇ ಧೈರ್ಯವಾಗಿ ವಿಭಿನ್ನವಾದ ಬದುಕನ್ನು ಕಟ್ಟಿಕೊಂಡು ತಮ್ಮದೇ ಆದ ವಿಶಿಷ್ಟ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗುತ್ತಾರೆ. ಈ ಅಲ್ಪಸಂಖ್ಯಾತರೇ, ಇತಿಹಾಸದ ಮೈಲಿಗಲ್ಲುಗಳ ಕಾರಣೀಭೂತರೆಂಬ ಸ್ಥಾನ ಗಿಟ್ಟಿಸಿ, ಕಾಲ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ಪ್ರಸ್ತುತವಾಗಿ ಉಳಿದು, ಅವರ ಜೀವನ ಮಾರ್ಗದ ಮರುಓದಿಗೆ ನಮ್ಮನ್ನು ನಿರಂತರವಾಗಿ ಪ್ರೆರೇಪಿಸುತ್ತಿರುತ್ತಾರೆ.

ಈ ಸಂದರ್ಭದಲ್ಲಿ ರಷ್ಯಾದ ಸಾಹಿತಿ ಲಿಯೊ ಟಾಲ್‍ಸ್ಟಾಯ್ ಅವರು ಬರೆದ ಪ್ರಸಿದ್ಧ ಕಥೆ ‘ಇವಾನ್ ಇಲಿಚ್‌ನ ಸಾವು’ ನೆನಪಾಗುತ್ತದೆ. ಇದರ ಪ್ರಧಾನ ಪಾತ್ರವಾದ ಇವಾನ್ ಇಲಿಚ್ ನಮ್ಮಲ್ಲಿ ಹೆಚ್ಚಿನವರು ನಡೆಸುವಂತಹ ಸಾಮಾನ್ಯ ಮತ್ತು ಏರಿಳಿತಗಳಿಲ್ಲದ ಸರಳ ಬದುಕನ್ನು ನಡೆಸುತ್ತಾನೆ. ಇದನ್ನು ಸರಳೀಕರಿಸಿ ಹೇಳುವುದಾದರೆ, ಸಾಮಾಜಿಕ ನಿರೀಕ್ಷೆಗಳಿಗೆ ಅನುಗುಣವಾಗಿ ಎಲ್ಲರಿಂದ ಮೆಚ್ಚುಗೆ ಗಳಿಸುವಂತಹ ಮತ್ತು ಕೆಲವರು ಅಸೂಯೆ ಪಡಬಹುದಾದಂತಹ ಜೀವನವನ್ನು ನಡೆಸುವುದರಲ್ಲಿಯೇ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುತ್ತಾನೆ.

ಈ ನಡುವೆ ಆಕಸ್ಮಿಕವಾಗಿ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದು ಬದುಕಿನ ಅಂತ್ಯವನ್ನು ಎದುರಿಸುವಾಗ, ಇಲ್ಲಿಯವರೆಗಿನ ಅವನ ಸರಳರೇಖೆಯ ಜೀವನಶೈಲಿಗೆ ಬ್ರೇಕ್ ಬಿದ್ದಂತಾಗಿ, ಮಲಗಿದ್ದಲ್ಲಿಯೇ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾನೆ. ಆಗ, ಅವನು ಮನಸ್ಸಿನೊಳಗೆ ತಾನು ಇಲ್ಲಿಯವರೆಗೆ ಸಾಗಿಬಂದ ಬದುಕಿನ ಮಾರ್ಗಕ್ಕೊಂದು ಸಿಂಹಾವಲೋಕನ ಮಾಡುತ್ತಾ ಬಹಳಷ್ಟು ಹತಾಶೆ, ಅಸಹನೆ, ಕೋಪ ಅನುಭವಿಸಿ, ಅವುಗಳಿಗೆ ಪ್ರತಿಕ್ರಿಯೆಯಾಗಿ ತನ್ನ ಸುತ್ತಲಿನ ಜನರ ಮೇಲೆ ಹರಿಹಾಯುತ್ತಾನೆ.

ಇಲ್ಲಿ, ಸಾಮಾಜಿಕ ವ್ಯವಸ್ಥೆಯ ನಿರೀಕ್ಷೆಗಳಿಗೆ ಅನುಗುಣವಾಗಿ ಶ್ರದ್ಧೆಯಿಂದ ಬದುಕುವ ಕಥಾ ನಾಯಕನ ಸಾವಿನ ನಂತರ, ಬಂಧುಮಿತ್ರರು ಅವನ ಸಾವಿನಿಂದ ತಮಗಾದ ಲಾಭ ಅಥವಾ ನಷ್ಟಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುವ ಬಗೆ ಮತ್ತು ಅವನ ಬದುಕಿನ ಕೊನೆಯ ಕ್ಷಣಗಳ ಮಾನಸಿಕ ತುಮುಲವನ್ನು ಟಾಲ್‍ಸ್ಟಾಯ್ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಇವಾನ್ ಇಲಿಚ್ ಬದುಕಿದ ಬಗೆಯನ್ನು ಟಾಲ್‍ಸ್ಟಾಯ್ ಒಂದೇ ಸಾಲಿನಲ್ಲಿ ಬಹಳ ನಿರ್ಲಿಪ್ತವಾಗಿ ಹೀಗೆ ಹೇಳುತ್ತಾನೆ- ‘ಇವಾನ್ ಇಲಿಚ್‌ನ ಬದುಕು ತೀರಾ ಸರಳವಾಗಿತ್ತು, ಸಾಮಾನ್ಯವಾಗಿತ್ತು, ಆದ್ದರಿಂದಲೇ ಭಯಂಕರವಾಗಿತ್ತು’.

ಈ ಒಂದು ವಾಕ್ಯದ ಒಳನೋಟ, ತೆರೆದ ಮನಸ್ಸಿನಿಂದ ಈ ಕಥೆಯನ್ನು ಓದುವ ಜನರಿಗೆ ತಮ್ಮ ವೈಯಕ್ತಿಕ ಬದುಕನ್ನು ಪುನರ್‌ವಿಮರ್ಶೆಗೆ ಒಡ್ಡಿಕೊಳ್ಳುವಂತೆ ಒತ್ತಾಯಿಸಿ ವಿಚಲಿತಗೊಳಿಸುತ್ತದೆ. ಬಹುಶಃ, ಟಾಲ್‍ಸ್ಟಾಯ್ ಇಲ್ಲಿ ಪ್ರಸ್ತಾಪಿಸಿರುವ ಭಯಂಕರವಾದ ಸರಳ ಮತ್ತು ಸಾಮಾನ್ಯ ಬದುಕು, ನಮ್ಮ ಬದುಕು ಹೇಗಿರಬಾರದು ಎನ್ನುವುದಕ್ಕೆ ಕೊಡುವ ಸೂಚ್ಯ ಸಂದೇಶ ಎನ್ನಬಹುದು. ವಿಷಾದವೆಂದರೆ, ಸಾಮಾನ್ಯವಾಗಿ ಈ ಸತ್ಯದರ್ಶನ ಆಗುವುದು ನಮ್ಮ ಜೀವನದ ಅಂತಿಮ ಕ್ಷಣಗಳಲ್ಲಿ. ಆಗ, ಬದಲಾಯಿಸಿಕೊಳ್ಳುವ ಇಚ್ಛೆ ಇದ್ದರೂ ದುರಸ್ತಿ ಮಾಡಿಕೊಳ್ಳಲು ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಉಳಿದಿರುವುದಿಲ್ಲ. ಹಾಗಾಗಿ, ಇವಾನ್ ಇಲಿಚ್‌ನ ಕೊನೆಯ ಮಾತು ‘ನನ್ನನ್ನು ಮರೆತುಬಿಡು’ ಎಂದು ಹೆಂಡತಿಗೆ ಹೇಳಿದಂತೆ, ಜಗ ಮರೆಯಬಹುದಾದ ಸಾಮಾನ್ಯ ಜೀವನವನ್ನು ನಾವು ನಡೆಸುತ್ತೇವೆ.

ಹಾಗಾದರೆ, ನಮ್ಮ ಜೀವನವನ್ನು ಅಸಾಮಾನ್ಯಗೊಳಿಸುವುದು ಹೇಗೆ? ಹೆತ್ತವರಾಗಲಿ, ಬಂಧುಗಳಾಗಲಿ ಅಥವಾ ಶಿಕ್ಷಕರಾಗಲಿ ಎಳೆಯ ಮನಸ್ಸುಗಳಿಗೆ ಹೇಳುವ ಕಿವಿಮಾತೆಂದರೆ- ಸಿದ್ಧ ಮಾದರಿಯ ವ್ಯವಸ್ಥೆಗಳನ್ನು ಹಾಗೆಯೇ ಸ್ವೀಕರಿಸಿ, ಅದರಲ್ಲಿ ಅಧಿಕೃತ ಎನಿಸಿಕೊಂಡಿರುವ ಮಾನದಂಡಗಳನ್ನು ಸಿದ್ಧಿಸಿಕೊಂಡು ಯಶಸ್ಸು, ಕೀರ್ತಿ, ಹಣ, ಸವಲತ್ತುಗಳನ್ನು ಪಡೆಯುವುದು ಮತ್ತು ವ್ಯವಸ್ಥೆಗಳ ಲೋಪದೋಷಗಳನ್ನು ಬಳಸಿಕೊಂಡು ಸ್ವಲಾಭ ಪಡೆಯುವುದು. ಇದನ್ನಷ್ಟೇ ನಮ್ಮ ಶಿಕ್ಷಣ ವ್ಯವಸ್ಥೆ ಮಾಡುವುದು. ಈ ವ್ಯವಸ್ಥೆಗಳಿಂದ ನಿಯಂತ್ರಿತವಾದ ಬದುಕಿನಲ್ಲಿ ಕೊನೆಗೆ ಉಳಿಯುವುದು ನಿಟ್ಟುಸಿರು, ಖಾಲಿತನ ಮತ್ತು ಅತೃಪ್ತಿ ಮಾತ್ರ. ಉದಾಹರಣೆಗೆ, ಹೆಣ್ಣುಮಗಳೊಬ್ಬಳು- ನಾನ್ಯಾಕೆ ಹೀಗೆ ನಡೆದುಕೊಳ್ಳಬೇಕು, ಇಂತಹ ವೇಷಭೂಷಣ ಧರಿಸಬೇಕು, ಹೀಗೆಯೇ ಬದುಕಬೇಕು, ಇದನ್ನೆಲ್ಲಾ ನಿರ್ಧರಿಸುವವರು ನೀವ್ಯಾರು ಎನ್ನುವ ಸರಳ ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸುವ ಎದೆಗಾರಿಕೆ ವ್ಯವಸ್ಥೆಯ ನಿರೂಪಕರಿಗೆ ಇದೆಯೇ? ಈ ಪ್ರಶ್ನೆಗಳು ಏಳಬಾರದೆಂದೇ ವ್ಯವಸ್ಥೆಗಳು ದೇವರು ಮತ್ತು ಧರ್ಮದ ಹೆಸರಿನಲ್ಲಿ ನಿಯಂತ್ರಣ ಸಾಧಿಸುತ್ತವೆ.
ಇದರಿಂದ ಬಿಡುಗಡೆಯಾಗುವ ಮಾರ್ಗವಿಲ್ಲವೇ?

ಎಲ್ಲಾ ಪ್ರತಿರೋಧಗಳ ನಡುವೆಯೂ ಪ್ರಶ್ನಿಸುವ ಗುಣವೊಂದೇ ನಮ್ಮ ಮುಂದೆ ಹಲವಾರು ಸಾಧ್ಯತೆಗಳನ್ನು ತೆರೆದಿಡುತ್ತದೆ. ಬುದ್ಧನಿಗೆ ತನ್ನ ಅರಮನೆಯ ವೈಭೋಗವನ್ನು ತ್ಯಜಿಸಿ ಹೊರನಡೆದು ಬದುಕಿನ ಅರ್ಥ ಸಂಶೋಧನೆ ಕೈಗೊಳ್ಳಲು ಪ್ರೇರೇಪಿಸಿದ್ದು, ಅವನನ್ನು ಕಾಡಿದ ಪ್ರಶ್ನೆಗಳೇ. ಅಂದರೆ, ನಾವು ಬಹುತೇಕ ಮಂದಿ ಗೌತಮನಂತೆ ವ್ಯವಸ್ಥೆಯೊಳಗೆ ಬದುಕುತ್ತೇವೆ. ಪ್ರಶ್ನಿಸುವವನು ಮಾತ್ರ ಹೊರಬಂದು ಬುದ್ಧನಾಗಿ ಬದಲಾಗುತ್ತಾನೆ.

ಸಾಮಾನ್ಯ ಬದುಕಿನ ಈ ವಿದ್ಯಮಾನವನ್ನು ಒಂದು ಜನಪ್ರಿಯ ಉದಾಹರಣೆಯೊಂದಿಗೆ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಆನೆಯನ್ನು ಅದರ ಬಾಲ್ಯಾವಸ್ಥೆಯಲ್ಲಿ ಸಣ್ಣ ಹಗ್ಗದ ತುಂಡಿನಿಂದ ಒಂದು ಕಂಬಕ್ಕೆ ಕಟ್ಟಿಹಾಕಿ ನಿಯಂತ್ರಿಸಲು ಆರಂಭಿಸಿದರೆ, ಮುಂದೆ ಅದು ದೈಹಿಕವಾಗಿ ಬೆಳೆದು ಕಂಬವನ್ನೇ ಎತ್ತಿ ಬಿಸಾಡುವ ಶಕ್ತಿ ಪಡೆದುಕೊಂಡರೂ, ಅದರ ಮನಸ್ಸಿಗೆ ತನ್ನ ಅಪರಿಮಿತ ಶಕ್ತಿಯು ಗೋಚರವಾಗದೆ, ಬಂಧಮುಕ್ತವಾಗುವುದರ ಬದಲಾಗಿ ಅದೇ ಸಣಕಲು ಹಗ್ಗ ಮತ್ತು ಗೂಟಕ್ಕೆ ಸುತ್ತು ಹಾಕಿಕೊಂಡು ಜೀವನದ ಅಂತ್ಯ ಕಾಣುತ್ತದೆ. ನಾವು ಕೂಡ ಜೀನು ಬಿಗಿದ ಕುದುರೆಯಂತೆ, ವ್ಯವಸ್ಥೆ ಸಿದ್ದಪಡಿಸಿದ ಮಾರ್ಗದಲ್ಲಷ್ಟೇ ಮುನ್ನಡೆಯುತ್ತೇವೆಯೇ ವಿನಾ, ಅನ್ಯ ವಿಭಿನ್ನ ಮಾರ್ಗಗಳ ಕುರಿತು ಯೋಚಿಸುವುದೂ ಇಲ್ಲ, ಅಪಾಯ ಮೈಮೇಲೆ ಎಳೆದುಕೊಳ್ಳುವುದೂ ಇಲ್ಲ.

ಈ ರೀತಿ ವ್ಯವಸ್ಥೆಯ ಮಾರ್ಗಸೂಚಿಯ ಭಾಗವಾದ, ಬಹುಜನರು ಪಾಲಿಸುವ ಜನಪ್ರಿಯ ಮತ್ತು ಒಪ್ಪಿತ ನಡವಳಿಕೆ, ಅಭಿಪ್ರಾಯ, ಸಂಸ್ಕೃತಿ, ಆಚರಣೆ, ಶೈಲಿಯಂತಹವನ್ನು ಕುರುಡಾಗಿ ಮತ್ತು ಕಿಂಚಿತ್ತೂ ಯೋಚಿಸದೆ ನಕಲು ಹೊಡೆದು ಅನುಸರಿಸುವ ಪ್ರಕ್ರಿಯೆಗೆ ಇಂಗ್ಲಿಷ್‌ನಲ್ಲಿ ‘ಬ್ಯಾಂಡ್ ವ್ಯಾಗನ್ ಇಫೆಕ್ಟ್’ ಎನ್ನುತ್ತಾರೆ. ಇದರಲ್ಲಿ ನಮ್ಮ ಸ್ವಂತಿಕೆ ಏನಿರುವುದಿಲ್ಲ. ಇದನ್ನು ಟಾಲ್‍ಸ್ಟಾಯ್ ಮಾತಿನಲ್ಲಿ ಹೇಳುವುದಾದರೆ ಸರಳ, ಸಾಮಾನ್ಯ ಮತ್ತು ಭಯಂಕರವಾದ ಬದುಕು. ಈ ರೀತಿ ಬದುಕುವುದು ತಪ್ಪೇನಲ್ಲ. ಆದರೆ, ಪೂರ್ವ ನಿಗದಿತ ವ್ಯವಸ್ಥೆಯಿಂದ ಮುಕ್ತರಾಗಿ ಹೃದಯದ ಪಿಸುಮಾತಿಗೆ ಸ್ಪಂದಿಸುತ್ತಾ ಮನಸಾರೆ ಬದುಕಬೇಕು ಎನ್ನುವವರು, ಎಲ್ಲಾ ಪ್ರತಿರೋಧಗಳ ನಡುವೆಯೂ ಈ ವ್ಯವಸ್ಥೆಯ ಲೋಪದೋಷಗಳನ್ನು ನಿರಂತರವಾಗಿ ಪ್ರಶ್ನಿಸಿ, ಅದಕ್ಕಾಗಿ ಬಹಳಷ್ಟು ಬೆಲೆ ತೆತ್ತರೂ ಲೆಕ್ಕಿಸದೆ ವಿಭಿನ್ನವಾಗಿ ಬದುಕುತ್ತಾರೆ. ಈ ರೀತಿ ಬದುಕಿದರೆ, ಅವರಿಗೆ ವ್ಯಾವಹಾರಿಕವಾಗಿ ಏನೂ ಪ್ರಯೋಜನವಾಗದಿದ್ದರೂ, ಅರ್ಥಪೂರ್ಣವಾಗಿ ಬದುಕಿದ ನೆಮ್ಮದಿಯೊಂದಿಗೆ, ಅವರ ಬದುಕಿನ ಹೆಜ್ಜೆ ಗುರುತುಗಳು ಮುಂದಿನ ಪೀಳಿಗೆಯವರಿಗೆ ವಿಭಿನ್ನವಾಗಿ ಬದುಕುವ ಮಾರ್ಗವಾಗಿ ಪ್ರೇರಣೆಯಾಗಿ ಉಳಿಯುತ್ತಾರೆ.

ಮನುಷ್ಯನ ಇತಿಹಾಸದಲ್ಲಿ ನಮಗೆ ಎದುರಾಗುವುದು ಇವರು ಮಾತ್ರ, ಸಾಮಾನ್ಯ ಜೀವನ ನಡೆಸಿದವರಲ್ಲ. ಹಾಗಾಗಿ, ನಮಗೆ ಬುದ್ಧ, ಬಸವಣ್ಣ, ಅಕ್ಕಮಹಾದೇವಿ, ಗಾಂಧಿ, ಅಂಬೇಡ್ಕರ್ ಅಂತಹವರು ಕಾಲಾತೀತವಾಗಿ ವರ್ತಮಾನ ಕಾಲದ ಪ್ರಶ್ನೆಗಳಿಗೆ ಉತ್ತರ ನೀಡಿ ವಿಸ್ಮಯ ಹುಟ್ಟಿಸುತ್ತಾರೆ. ಅವರೆಲ್ಲಾ ಸರಿಯಾದ ಪ್ರಶ್ನೆ ಕೇಳುವುದರ ಮೂಲಕ ಆಯಾಯ ಕಾಲದ ವ್ಯವಸ್ಥೆಗಳನ್ನು ಅಲುಗಾಡಿಸಲು ಪ್ರಯತ್ನಿಸಿ ತಮ್ಮದೇ ಛಾಪು ಮೂಡಿಸಿದವರು.

ನಾವು ಕೂಡ, ನಮ್ಮ ಕಾಲದ ವ್ಯವಸ್ಥೆಯ ಭಾಗವಾದ, ಜಾತಿ-ಧರ್ಮ-ಲಿಂಗ ಅಸಮಾನತೆ, ಪ್ರಕೃತಿ ನಾಶ, ಯಾಂತ್ರಿಕ ಜೀವನಶೈಲಿ, ಅಗತ್ಯ-ದುರಾಸೆ, ಮುಖ್ಯ-ಅಮುಖ್ಯ ಎಲ್ಲವುಗಳ ಕುರಿತು ಪ್ರಶ್ನಿಸಿ ಸ್ವವಿಮರ್ಶೆ ಮಾಡಿಕೊಂಡು, ನಾವು ಬದುಕುವ ಕ್ರಮವನ್ನು ಅಸಾಮಾನ್ಯಗೊಳಿಸುವ ಇಚ್ಛಾಶಕ್ತಿ ಅಂತರ್ಗತಗೊಳಿಸಬೇಕೇ ಅಥವಾ ಸಾಮಾನ್ಯರಾಗಿಯೇ ಉಳಿದು ದಿನಕಳೆಯಬೇಕೇ ಎಂದು ಯೋಚಿಸಬೇಕಲ್ಲವೇ?

ಪ್ರಶ್ನೆಗಳಿಗೆ ಉತ್ತರ ಸಿಗಲೇಬೇಕೆಂದೇನಿಲ್ಲ, ಅವು ನಮ್ಮನ್ನು ಸದಾ ಕಾಡುತ್ತಿದ್ದರೆ ಸಾಹಸಮಯವಾಗಿ ಬದುಕಲು ಸಾಧ್ಯ. ಉಳಿದವರು ಬದುಕಿದಂತೆ ನಾವೂ ಬದುಕಿದರೆ, ನಮ್ಮ ಜೀವಿತಾವಧಿಯ ಸಾಧನೆಯೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.