ವಿಶ್ವಸಂಸ್ಥೆ ಘೋಷಣೆ ಅನ್ವಯ 2019, ದೇಸಿ ನುಡಿಗಳ ಅಂತರರಾಷ್ಟ್ರೀಯ ವರ್ಷ. ಇದೇ ವರ್ಷ, ನಮ್ಮ ರಾಜ್ಯ ಸರ್ಕಾರವು ಸಾವಿರ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿದೆ. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರುವ ಕೇಂದ್ರ ಸರ್ಕಾರದ ಹುನ್ನಾರವು ಯಥಾರೀತಿ ಯಾವುದೋ ಒಂದು ಬಗೆಯಲ್ಲಿ ಮುಂದು ವರಿಯುತ್ತಲೇ ಇದೆ. ಭಾಷಾ ರಾಜಕಾರಣದ ಇಂತಹ ವೈಚಿತ್ರ್ಯಗಳನ್ನು ಈಗ ಬಿಡಿಸಿ ನೋಡುವ ಅವಶ್ಯಕತೆ ಇದೆ.

ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಕನ್ನಡಿಗರು ನೋಡುವ ಬಗೆಯೇ ಭಾಷಾ ರಾಜಕಾರಣದ ವೈಶಿಷ್ಟ್ಯವನ್ನು ಸೂಚಿಸುತ್ತದೆ. ಸಂಸ್ಕೃತದ ಜೊತೆಗೆ ಸೆಣಸಾಡಿ, ಕನ್ನಡ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿ ಕೊಂಡಿದೆ. ಇಂಗ್ಲಿಷ್ ಜೊತೆಗೆ ಕನ್ನಡಕ್ಕೆ ಒಂದು ರೀತಿಯಲ್ಲಿ ಪ್ರೀತಿ ಮತ್ತು ದ್ವೇಷದ ನಂಟಿದೆ. ಆದರೆ, ಹಿಂದಿ ಮತ್ತು ಕನ್ನಡ ನುಡಿಗಳ ನಡುವಣ ನೆಂಟಸ್ತಿಕೆ ಇಂದಿಗೂ ದೃಢವಾಗಿ ರೂಪುಗೊಂಡಿಲ್ಲ. ಇದಕ್ಕೆ ಕಾರಣ, ಹಿಂದಿಯನ್ನು ಒಂದು ಪರಮಾಧಿಕಾರದ ಭಾಷೆಯನ್ನಾಗಿಸುವ ಹುನ್ನಾರ ನಡೆದಿದೆಯೆಂಬ ಗುಮಾನಿ. ಭಾಷಾ ರಾಜಕಾರಣದ ಈ ನಿಲುವುಗಳು ಬರೀ ರಾಜಕೀಯ ಪ್ರೇರಿತ. ಭಾಷಿಕ ಪ್ರಶ್ನೆಗಳು ಮತ್ತು ಸಮೂಹಗಳ ಬದುಕಿನ ಆಶೋತ್ತರಗಳು ಇಲ್ಲಿ ಮುಖ್ಯ ವಾಗಿಲ್ಲ. ಪರಿಣಾಮವಾಗಿ, ಸಂವಿಧಾನದ ನಿಲುವುಗಳು ಕಡೆಗಣನೆಗೆ ಒಳಗಾಗಿ, ಸಾಂಸ್ಕೃತಿಕ- ಭಾಷಿಕ ರಾಜಕಾರಣದ ಇರಾದೆಗಳು ಮೇಲುಗೈ ಸಾಧಿಸಿವೆ.

ದೇಸಿ ನುಡಿಗಳ ಉಳಿವಿನ ಪ್ರಶ್ನೆಯು ವಿಶ್ವಸಂಸ್ಥೆಗೆ ಮುಖ್ಯವಾಗಿದೆ. ಆದರೆ, ನಮ್ಮನ್ನಾಳುವ ಪ್ರಜಾಸತ್ತಾತ್ಮಕ ಸರ್ಕಾರಗಳಿಗೆ ಮುಖ್ಯವಾಗಿಲ್ಲ. ಭಾಷೆ ಮತ್ತು ಸಂಸ್ಕೃತಿಯ ನಡುವಿನ ಸಂಬಂಧಗಳು ಹೇಗೆ ಏರ್ಪಡುತ್ತವೆ ಎನ್ನುವುದು ನಮ್ಮ ಪ್ರಭುತ್ವಗಳಿಗೆ ಕಿಂಚಿತ್ತೂ ಅರ್ಥವಾಗದೇ ಇರುವಾಗ, ಸಮೂಹಗಳ ಬೆಳವಣಿಗೆಗೆ ಪೂರಕವಾದ ಭಾಷಾ ನೀತಿ ಹಾಗೂ ಯೋಜನೆಗಳನ್ನು ರೂಪಿಸುವುದಾದರೂ ಹೇಗೆ? ಭಾಷಾ ಯೋಜನೆ ಎನ್ನುವುದು ಸಾಮಾಜಿಕ ಯೋಜನೆ ಎಂಬ ವಾಸ್ತವವು ಪ್ರಭುತ್ವಗಳಿಗೆ ಹೇಗೆ ಅರ್ಥವಾದೀತು! ಜನಸಮೂಹಗಳ ಏಳಿಗೆ ಬಗೆಗೆ ಕಾಳಜಿಯನ್ನು ಹೊಂದಿದ್ದರೆ ಮಾತ್ರ ಅವರ ನುಡಿಗಳ ಬಗೆಗೆ ಕಾಳಜಿ ಹೊಂದಲು ಸಾಧ್ಯ. ಇಂತಹ ಜನಪರ ನಿಲುವುಗಳಿಗೂ ಪ್ರಭುತ್ವಗಳಿಗೂ ಸಂಬಂಧವೇ ಇಲ್ಲ ಎನ್ನುವ ಸ್ಥಿತಿ ಇದೆ.

2019 ಅನ್ನು ದೇಸಿ ನುಡಿಗಳ ಅಂತರರಾಷ್ಟ್ರೀಯ ವರ್ಷ ಎಂದು ವಿಶ್ವಸಂಸ್ಥೆ ಏಕೆ ಘೋಷಿಸಿದೆ ಎನ್ನುವುದನ್ನು ಈ ಮುಂದಿನ ಚರ್ಚೆಗಳೇ ನಿರೂಪಿಸುತ್ತವೆ. ಭಾಷೆಯ ಮೂಲಕವೇ ನಮ್ಮ ಲೋಕವ್ಯವಹಾರಗಳು ನಿರಂತರವಾಗಿ ಮತ್ತು ಸಲೀಸಾಗಿ ನಡೆಯುತ್ತವೆ. ನಮ್ಮ ಅಸ್ಮಿತೆಯನ್ನು ವ್ಯಾಖ್ಯಾನ ಮಾಡುವುದು, ಚರಿತ್ರೆ ಮತ್ತು ಸಂಸ್ಕೃತಿ ಕುರಿತ ಅಭಿವ್ಯಕ್ತಿಗಳು ಮೈದಳೆಯುವುದು, ನಾವು ಹಕ್ಕು– ಬಾಧ್ಯತೆಗಳನ್ನು ಸಮರ್ಥಿಸಿಕೊಳ್ಳುವುದು... ಒಂದಲ್ಲ, ಎರಡಲ್ಲ, ಇಡೀ ಬದುಕಿನ ಸ್ಮೃತಿಗಳು ಮತ್ತು ಚಟುವಟಿಕೆಗಳು ನಮ್ಮ ಭಾಷೆಯ ಮೂಲಕವೇ ಅನಾವರಣಗೊಳ್ಳುತ್ತವೆ. ದಿಟ, ಭಾಷೆಯ ಮೂಲಕವೇ ಜನರು ತಮ್ಮ ಸಮುದಾಯದ ಚರಿತ್ರೆ, ಸಂಪ್ರದಾಯ, ರೂಢಿ, ಸಾಂಸ್ಕೃತಿಕ ನೆನಪು, ಅನನ್ಯ ಯೋಚನಾ ಕ್ರಮಗಳು, ಲೋಕದೃಷ್ಟಿ ಹಾಗೂ ತಮ್ಮದೇ ಅರ್ಥ ಮತ್ತು ಅಭಿವ್ಯಕ್ತಿಯ ಮಾದರಿಗಳನ್ನು ಕಾಪಾಡಿಕೊಳ್ಳುತ್ತಾರೆ. ಸಮುದಾಯಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲೂ ಭಾಷೆಯನ್ನೇ ಬಳಸಿಕೊಳ್ಳುತ್ತವೆ.

ಚಿಂತನಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯವನ್ನು ನೆಲೆಗೊಳಿಸುವುದು ಹಾಗೂ ಸಾಮಾಜಿಕವಾಗಿ ಒಳಗೊಳ್ಳುವ ನಿಲುವುಗಳನ್ನು ರೂಪಿಸಿಕೊಳ್ಳುವ ಬಗೆಗಳು ತಮ್ಮ ತಮ್ಮ ಭಾಷೆಯ ಆಯ್ಕೆ ಮೂಲಕವೇ ನಡೆಯುತ್ತವೆ. ಭಾಷೆ ಆಯ್ಕೆಯ ಪ್ರಶ್ನೆಗೂ ಮತ್ತು ಸ್ವಾತಂತ್ರ್ಯಕ್ಕೂ ನಂಟಿದೆ ಎಂಬುದನ್ನು ಇದು ಸೂಚಿಸುತ್ತದೆ. ಒಟ್ಟಾರೆ ಬದುಕಿನ ಮೌಲ್ಯಗಳನ್ನು ನೆಲೆಗೊಳಿಸುವುದಕ್ಕೆ ಇದು ಒತ್ತಾಸೆಯಾಗಿರುತ್ತದೆ. ವಿಶ್ವಸಂಸ್ಥೆ ಘೋಷಿಸಿರುವ ಮಾನವ ಹಕ್ಕು ಹಾಗೂ ಇತರ ಮೌಲ್ಯಗಳನ್ನು ಪ್ರತಿನಿಧಿಸುವುದಕ್ಕೂ ಇದು ಪೂರಕ.

ಜಗತ್ತಿನಾದ್ಯಂತ ಮಾತನಾಡುವ 6,700 ಭಾಷೆಗಳಲ್ಲಿ ಅಂದಾಜು 40 ಪ್ರತಿಶತ (2,680) ಭಾಷೆಗಳು ಅಪಾಯದ ಅಂಚಿನಲ್ಲಿವೆ ಎಂದು 2016ರಲ್ಲಿ ವಿಶ್ವಸಂಸ್ಥೆಯ ವರದಿ ತಿಳಿಸಿತ್ತು. ಈ ಎಲ್ಲ ಭಾಷೆಗಳು ಕೂಡ ದೇಸಿ ಭಾಷೆಗಳೇ ಆಗಿರುತ್ತವೆ. ಭಾಷೆಗಳ ವಿನಾಶದಿಂದ ನಮ್ಮ ಬದುಕಿನ ಕ್ರಮಗಳು ಪಲ್ಲಟಗೊಳ್ಳುತ್ತವೆ. ಜ್ಞಾನ ಮತ್ತು ಸಾಂಸ್ಕೃತಿಕ ವಿನ್ಯಾಸಗಳನ್ನೂ ಇದು ಬಾಧಿಸುತ್ತದೆ ಎಂಬ ಎಚ್ಚರಿಕೆಯನ್ನು ಈ ವರದಿ ಮನವರಿಕೆ ಮಾಡುತ್ತದೆ. ಭಾರತದ 196 ಭಾಷೆಗಳು ಅಪಾಯದ ಅಂಚಿನಲ್ಲಿವೆ ಎನ್ನುವ ಸಂಗತಿಯನ್ನೂ ಇದೇ ವರದಿಯಲ್ಲಿ ಪ್ರಕಟಿಸಲಾಗಿತ್ತು. ದೇಸಿ ನುಡಿಗಳ ವರ್ಷಾಚರಣೆಯ ಮುಖ್ಯ ಉದ್ದೇಶವೇ, ಜನರಲ್ಲಿ ಭಾಷೆಗಳನ್ನು ಪೋಷಿಸುವ ಬಗೆಗೆ ಅರಿವು ಮೂಡಿಸುವುದಾಗಿದೆ. ಆ ಮೂಲಕ ದೇಸಿ ನುಡಿಗಳ ಕುರಿತಾದ ತಿಳಿವಳಿಕೆಯನ್ನು ವಿಸ್ತರಿಸುವ ಇರಾದೆಯೂ ಇದೆ.

ಯಾವುದೇ ತೊಂದರೆ ಇಲ್ಲದೆ ನಮ್ಮ ನಮ್ಮ ಮನೆ ಭಾಷೆಗಳಲ್ಲಿ ನಮ್ಮ ಜೀವನವನ್ನು ನಡೆಸಬಹುದೆಂದು ಅನೇಕರು ಭಾವಿಸಿದ್ದಾರೆ. ಆದರೆ ಎಲ್ಲ ಸನ್ನಿವೇಶಗಳಲ್ಲಿಯೂ ಇದುವೇ ವಾಸ್ತವ ಅಲ್ಲ ಎನ್ನುವುದನ್ನು ನಾವು ಮನಗಾಣಬೇಕಿದೆ. ಈಗ ಅಸ್ತಿತ್ವದಲ್ಲಿರುವ ಭಾಷೆಗಳು ಬಹುತೇಕವಾಗಿ ಆಯಾ ಸಮೂಹಗಳಲ್ಲಿಯೇ ರೂಪುಗೊಂಡಿವೆ. ಅವುಗಳ ಮೂಲಕವೇ ಆಯಾ ಸಮೂಹಗಳು ತಮ್ಮ ಸಂವಹನವನ್ನು ಏರ್ಪಡಿಸಿಕೊಂಡಿವೆ. ಈ ಲೋಕದ ಸಾಂಸ್ಕೃತಿಕ ವೈವಿಧ್ಯವನ್ನು ಈ ನುಡಿಗಳೇ ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ. ಎಚ್ಚರಿಕೆ ಗಂಟೆಯು ಬಹುತೇಕ ಇಂದು ಈ ಭಾಷೆಗಳಿಗೇ ಅನ್ವಯ ಆಗುತ್ತದೆ. ಇವುಗಳನ್ನು ಮಾತನಾಡುವ ಸಮುದಾಯಗಳು ಶೈಕ್ಷಣಿಕ ಅನನುಕೂಲ, ಬಡತನ, ಅನಕ್ಷರತೆ, ವಲಸೆ ಹಾಗೂ ಇತರ ಕೆಲವು ತಾರತಮ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಪರಿಣಾಮಗಳನ್ನು ಎದುರಿಸುತ್ತಿವೆ.

ದೇಸಿ ನುಡಿಗಳಿಗೆ ಬಾಧಕ ಉಂಟಾದರೆ, ಅವುಗಳು ಸಾವಿರಾರು ವರ್ಷಗಳಿಂದ ಕ್ರೋಡೀಕರಿಸಿಕೊಂಡಿದ್ದ ಜ್ಞಾನ ಮತ್ತು ಸಾಂಸ್ಕೃತಿಕ ಸಂಪತ್ತು ಕಣ್ಮರೆಯಾಗುತ್ತದೆ. ಈ ಜಗತ್ತಿನ ನೈಸರ್ಗಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವೈವಿಧ್ಯದ ವ್ಯಾಪ್ತಿ ಕುಗ್ಗುತ್ತದೆ. ಭಾಷೆಯ ಅಳಿವಿನ ಪರಿಣಾಮಗಳು ಜನರ ಬದುಕನ್ನು ಬಾಧಿಸುವಷ್ಟೇ ಪ್ರಮಾಣದಲ್ಲಿ ಬೇರೊಂದು ಭಾಷೆಯ ಹೇರಿಕೆಯೂ ಬಾಧಿಸುತ್ತದೆ. ಜನರ ಭಾಷೆಗಳನ್ನು ಕಾಪಾಡುವುದೆಂದರೆ ಅವರ ಬದುಕಿನ ಅವಕಾಶಗಳು, ಸಂಪನ್ಮೂಲದಲ್ಲಿ ಪಾಲು ಪಡೆಯುವ ಹಕ್ಕುಗಳನ್ನು ಸಂರಕ್ಷಿಸುವುದೆಂದೇ ಅರ್ಥ. ಈ ಕಾಳಜಿಗಳನ್ನು ಕೈಬಿಟ್ಟು ಕೇವಲ ಭಾಷೆಗಳನ್ನು ಉಳಿಸುವುದರಲ್ಲಿ ಅರ್ಥವಿಲ್ಲ. ರಾಜಕೀಯ ಕಾರಣಕ್ಕಾಗಿ ಯಾವುದೇ ಭಾಷೆಯನ್ನು ಹೇರುವುದರಲ್ಲಿ ಅರ್ಥವಿಲ್ಲ.ಭಾಷೆಗಳನ್ನು ಹೇರುವುದು ಜನವಿರೋಧಿಯಷ್ಟೇ ಅಲ್ಲ, ಬದಲಾಗಿ ಪ್ರಜಾಸತ್ತಾತ್ಮಕವಲ್ಲದ ನಿಲುವು ಕೂಡ.

ದೇಸಿ ನುಡಿಗಳಿಗಾಗಿ ಸಮರ್ಪಿಸಲಾದ ವಿಶ್ವಸಂಸ್ಥೆಯ ಈ ಘೋಷಣೆಯು ಈ ತತ್ವಗಳನ್ನು ಒಳಗೊಂಡಿದೆ: ಅವುಗಳೆಂದರೆ, ಜಗತ್ತಿನಾದ್ಯಂತ ಸಾಮರಸ್ಯ, ಪರಸ್ಪರ ತಿಳಿವಳಿಕೆ ಹಾಗೂ ಸಹಕಾರವನ್ನು ಹೆಚ್ಚಿಸುವುದು, ದೇಸಿ ನುಡಿಗಳಲ್ಲಿ ಅಡಕವಾಗಿರುವ ಜ್ಞಾನದ ಪ್ರಸರಣಕ್ಕೆ ಪೂರಕ ಪರಿಸರವನ್ನು ರೂಪಿಸುವುದು, ದೇಸಿ ನುಡಿಗಳ ಏಕತೆಯನ್ನು ಕಾಪಾಡುವ ಅವಶ್ಯಕತೆ, ದೇಸಿ ಭಾಷೆಗಳ ಸಬಲೀಕರಣ ಹಾಗೂ ಸಾಮರ್ಥ್ಯವನ್ನು ಮನಗಾಣುವುದು, ಹೊಸ ಜ್ಞಾನದ ಮೂಲಕ ದೇಸಿ ನುಡಿಗಳ ಏಳಿಗೆಗೆ ಶ್ರಮಿಸುವುದು.

ಜನಸಮೂಹಗಳ ಬೆಳವಣಿಗೆಗೆ ಒತ್ತಾಸೆಯಾಗುವ ನಿಟ್ಟಿನಲ್ಲಿ ಅವರ ನುಡಿಗಳನ್ನು ಸಬಲೀಕರಿಸುವ ಬಗೆಗಳನ್ನು ಪ್ರಭುತ್ವಗಳು ಕಂಡುಕೊಳ್ಳಬೇಕು. ಜೊತೆಗೆ, ಅವರ ನುಡಿಗಳನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ತಮ್ಮ ಮೇಲಿದೆ ಎಂಬುದನ್ನೂ ಅರಿಯಬೇಕು.

ಲೇಖಕ: ಪ್ರಾಧ್ಯಾಪಕ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.