ಇಂದು ನಮ್ಮನ್ನು ಕಾಡುತ್ತಿರುವ ಅತ್ಯಂತ ಗಂಭೀರವಾದ ಸಮಸ್ಯೆಗಳಲ್ಲಿ ನಿರುದ್ಯೋಗ ಒಂದು. ಲಕ್ಷಾಂತರ ಜನ ಕೆಲಸ ಕಳೆದುಕೊಂಡಿರುವುದನ್ನು ಕೆಲವು ಸಮೀಕ್ಷೆಗಳು ದಾಖಲಿಸಿವೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಹಿಂದಿನ ಕೆಲವು ವರ್ಷಗಳಲ್ಲಿ ಎರಡು ಕೋಟಿಯಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದು ಸಾಲದು ಎಂಬಂತೆ ಕೆಲವು ವರ್ಗಗಳ ಜನರ ವರಮಾನ ಕಡಿಮೆಯಾಗುತ್ತಿದೆ. ನಿರುದ್ಯೋಗ, ಬಡತನ, ಹಸಿವು ಇವೆಲ್ಲಾ ತೀವ್ರವಾಗಿರುವ ಸಂದರ್ಭದಲ್ಲಿ ದೇಶದ ಆರ್ಥಿಕತೆ ಸುಸ್ಥಿತಿಯಲ್ಲಿರುವುದು ಕಷ್ಟ.

ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲು ನೆರವಾಗಿದೆ. ನಗರಗಳಲ್ಲಿರುವ ಕಾರ್ಮಿಕರು ಅತ್ಯಂತ ಅಭದ್ರತೆಯಲ್ಲಿ ಬದುಕುತ್ತಿದ್ದಾರೆ. ಉದ್ಯೋಗವನ್ನು ಒದಗಿಸುವ ಮೂಲಕ ಅವರಿಗೆ ರಕ್ಷಣೆಯನ್ನು ಕೊಡಬೇಕು. ನಗರ ಪ್ರದೇಶಗಳಲ್ಲೂ ಒಂದು ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರುವ ಕುರಿತು ಚಿಂತಿಸಬೇಕಾಗಿದೆ. ಆದರೆ ಅದು ಮನರೇಗಾಕ್ಕಿಂತ ಭಿನ್ನವಾಗಿರಬೇಕು.

ಕೃಷಿ ಕ್ಷೇತ್ರದಲ್ಲಿ ವರ್ಷವಿಡೀ ಉತ್ಪಾದನೆ ಇರುವುದಿಲ್ಲ. ಅದು ಕೆಲವು ಕಾಲದಲ್ಲಿ ಮಾತ್ರ ನಡೆಯುವ ಕ್ರಿಯೆ. ಹಾಗಾಗಿ ಮನರೇಗಾವು ತಾತ್ಕಾಲಿಕವಾಗಿ ಕೆಲಸ ಕಳೆದುಕೊಂಡವರಿಗೆ, ಕ್ಷಾಮದ ಸಮಯದಲ್ಲಿ ಅಥವಾ ಕೃಷಿ ಕ್ಷೇತ್ರದಲ್ಲಿ ಕೆಲಸದ ಕೊರತೆಯಿದ್ದಾಗ ವಿಮೆಯಂತೆ ಬಳಕೆಯಾಗುತ್ತಿದೆ. ಆದರೆ ನಗರದ ಉತ್ಪಾದನೆ ಅರೆಕಾಲಿಕವಲ್ಲ. ಹಾಗಾಗಿ ನಗರಗಳಲ್ಲಿ ಅದನ್ನು ಒಂದು ತಾತ್ಕಾಲಿಕ ಪರಿಹಾರವಾಗಿ ಯೋಚಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಒಂದು ಪರಿಹಾರವಾಗಿ ಯೋಚಿಸಬೇಕಾಗಿದೆ.

ಕೆಲವು ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದಿವೆ. ಕೇರಳದಲ್ಲಿ ಅಯ್ಯಂಕಾಳಿ ನಗರ ಉದ್ಯೋಗ ಖಾತರಿ ಯೋಜನೆ ರೂಪಿಸಲಾಗಿತ್ತು. ಹಿಮಾಚಲಪ್ರದೇಶ, ಜಾರ್ಖಂಡ್, ಒಡಿಶಾ ಸೇರಿದಂತೆ ಕೆಲವು ರಾಜ್ಯಗಳ ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ನೀಡುವ ಪ್ರಯತ್ನಗಳು ನಡೆದಿವೆ. ಆದರೆ ಅನುದಾನದ ಕೊರತೆಯಿಂದ ಇವು ಬಹುಮಟ್ಟಿಗೆ ಸಾಂಕೇತಿಕ ಯೋಜನೆಗಳಾಗಿವೆ. ಈ ದಿಸೆಯಲ್ಲಿ ಅರ್ಥಶಾಸ್ತ್ರಜ್ಞ ಜಾನ್ ಡ್ರೇಜ್ ಅವರು ಡ್ಯುಯೆಟ್, ಅಂದರೆ ಡೀಸೆಂಟ್ರಲೈಸ್ಡ್ ಅರ್ಬನ್ ಎಂಪ್ಲಾಯ್ಮೆಂಟ್ ಆ್ಯಂಡ್ ಟ್ರೈನಿಂಗ್ನ (ವಿಕೇಂದ್ರೀಕೃತ ನಗರ ಉದ್ಯೋಗ ಹಾಗೂ ತರಬೇತಿ ಯೋಜನೆ) ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಅದು ಪ್ರಯೋಗಿಸಿ ನೋಡಲು ತಕ್ಕುದಾದ ಯೋಜನೆ. ಅದರ ವಿನ್ಯಾಸ ಕೂಡ ಸರಳ. ಅದು ಸ್ಥೂಲವಾಗಿ ಹೀಗಿದೆ:

ಸರ್ಕಾರವು ಉದ್ಯೋಗದ ಸ್ಟ್ಯಾಂಪುಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳನ್ನು ಶಾಲೆಗಳು, ಕಾಲೇಜುಗಳು, ಹಾಸ್ಟೆಲ್ಗಳು, ವಸತಿಗೃಹಗಳು, ಬಂದೀಖಾನೆಗಳು, ಮ್ಯೂಸಿಯಂಗಳು, ಮುನಿಸಿಪಾಲಿಟಿ
ಗಳು, ಸರ್ಕಾರಿ ಇಲಾಖೆಗಳು, ಆರೋಗ್ಯ ಕೇಂದ್ರಗಳು, ಸಾರಿಗೆ ನಿಗಮಗಳು, ನಗರದ ಸ್ಥಳೀಯ ಸಂಸ್ಥೆಗಳಂತಹ ಕೆಲವು ಅನುಮೋದಿತ ಸರ್ಕಾರಿ ಸಂಸ್ಥೆಗಳಿಗೆ ವಿತರಿಸುತ್ತದೆ. ಒಂದು ಉದ್ಯೋಗ ಸ್ಟ್ಯಾಂಪು ಅಂದರೆ ಒಬ್ಬ ವ್ಯಕ್ತಿಯ ಒಂದು ದಿನದ ಕೆಲಸ. ಕೆಲಸ ಬಯಸುವ ಜನ ಅದಕ್ಕಾಗಿ ನಿಗದಿಯಾದ ಸ್ವತಂತ್ರ ನೇಮಕಾತಿ ಏಜೆನ್ಸಿಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಈ ನೋಂದಾಯಿತ ಪಟ್ಟಿಯಿಂದ ಅನುಮೋದಿತ ಸಂಸ್ಥೆಗಳಿಗೆ ಕೆಲಸಗಾರರನ್ನು ಅವರ ಅವಶ್ಯಕತೆಗೆ ತಕ್ಕಂತೆ ನೇಮಿಸಲಾಗುತ್ತದೆ. ಕೆಲಸದ ನಂತರ ಆ ಸಂಸ್ಥೆಗಳು ತಮ್ಮ ದೃಢೀಕರಣದೊಂದಿಗೆ ಸ್ಟ್ಯಾಂಪುಗಳನ್ನು ಕೆಲಸಗಾರರಿಗೆ ನೀಡುತ್ತವೆ. ಕೆಲಸಗಾರರು ಈ ದೃಢೀಕೃತ ದಾಖಲೆಗಳನ್ನು ಹಣದ ಪಾವತಿಗಾಗಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಸರ್ಕಾರ ಕೂಲಿಯನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

ಕೆಲವು ಉದ್ಯೋಗಗಳನ್ನು ಅರೆಕಾಲಿಕ ಉದ್ಯೋಗವನ್ನಾಗಿಯೂ ಯೋಚಿಸಬಹುದು. ಆಗ ಮಹಿಳೆಯರು ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಮಹಿಳೆಯರಿಗೆ ಆದ್ಯತೆ ಕೊಡುವ ದಿಸೆಯಲ್ಲೂ ಯೋಚಿಸಬಹುದು. ದೇಶದಲ್ಲಿ ಮಹಿಳೆಯರು ಆರ್ಥಿಕವಾಗಿ ಹೆಚ್ಚಾಗಿ ಪುರುಷರನ್ನು ಅವಲಂಬಿಸಿದ್ದಾರೆ. ಇಂತಲ್ಲಿ ಲಿಂಗ ಅಸಮಾನತೆ ಹಾಗೂ ಮಹಿಳೆಯರ ಶೋಷಣೆಯನ್ನು ಪರಿಹರಿಸಲು ಅನುಕೂಲವಾಗಬಹುದು.

ನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎರಡು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಡ್ಯುಯೆಟ್ ಪ್ರಯತ್ನಿಸುತ್ತಿದೆ. ನಿರುದ್ಯೋಗ ಸಮಸ್ಯೆ ಮತ್ತು ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಮೂಲ ಸೌಕರ್ಯಗಳು. ದೇಶದ ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳು (ಪಾರ್ಕುಗಳು, ಕೆರೆಗಳು, ಬಾವಿಗಳು, ಆಟದ ಮೈದಾನಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮುಂತಾದವು) ಸರಿಯಾದ ಉಸ್ತುವಾರಿ ಇಲ್ಲದೆ ತುಂಬಾ ದುಃಸ್ಥಿತಿಯಲ್ಲಿವೆ. ನಗರದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಇಲ್ಲಿಂದ ಪ್ರಾರಂಭಿಸಬಹುದು. ಸಾರ್ವಜನಿಕ ಸ್ಥಳಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಸಾರ್ವಜನಿಕ ಆರೋಗ್ಯ, ಪರಿಸರ ಸುಧಾರಣೆ, ಗೃಹಕೃತ್ಯದ ಕೆಲಸಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ಪಾದಕ ಕೆಲಸಗಳಿಗೆ ತುಂಬಾ ಅವಕಾಶಗಳಿವೆ. ಅನುಮೋದಿತ ಸಂಸ್ಥೆಗಳು ಸಕ್ರಿಯವಾದಷ್ಟೂ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೊತೆಗೆ ಅಂತಹ ಉದ್ಯೋಗಗಳು ಹೆಚ್ಚು ಉತ್ಪಾದಕವೂ ಆಗುತ್ತವೆ. ಜೊತೆಗೆ ಇದು ಸರ್ಕಾರದ ಯೋಜನೆಯಾಗುವುದರಿಂದ ಕಾರ್ಮಿಕರಿಗೆ ಕನಿಷ್ಠ ಕೂಲಿ ಹಾಗೂ ಇತರ ಸೌಲಭ್ಯಗಳು ಸಿಗುತ್ತವೆ.

ಈ ಯೋಜನೆಯ ಕುರಿತಂತೆ ಹಲವು ಆತಂಕಗಳು ವ್ಯಕ್ತವಾಗಿವೆ. ಉದಾಹರಣೆಗೆ, ಹಳ್ಳಿಗಳಿಂದ ನಗರದ ಕಡೆಗಿನ ವಲಸೆ ಹೆಚ್ಚುತ್ತದೆ. ನಗರದಲ್ಲಿನ ಬಡವರ ಬದುಕನ್ನು ಸುಧಾರಿಸುವ ದೃಷ್ಟಿಯಿಂದ ಏನೇ ಕ್ರಮ ತೆಗೆದುಕೊಂಡರೂ ಅದು ನಗರದ ಕಡೆಗೆ ವಲಸೆಯನ್ನು ಸ್ವಲ್ಪಮಟ್ಟಿಗೆ ಉತ್ತೇಜಿಸುತ್ತದೆ. ಆದರೆ ಆ ಕಾರಣಕ್ಕೆ ನಗರದ ಬಡವರಿಗೆ ಸೌಲಭ್ಯವನ್ನು ಒದಗಿಸುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ವಾದಿಸಲಾಗದು. ಒಬ್ಬ ವ್ಯಕ್ತಿಗೆ ವರ್ಷಕ್ಕೆ ನೂರೋ ನೂರೈವತ್ತೋ ದಿನಗಳ ಕೆಲಸವನ್ನು ನೀಡಲಾಗುತ್ತದೆ ಎಂದು ನಿರ್ಧರಿಸುವ ಮೂಲಕ ಯೋಜನೆಯ ಅಪಬಳಕೆಯನ್ನು ತಪ್ಪಿಸಬಹುದು.

ಮತ್ತೊಂದು ಆತಂಕವೆಂದರೆ, ಭ್ರಷ್ಟಾಚಾರದ ಸಾಧ್ಯತೆ. ಇಂತಹ ಸಾಧ್ಯತೆ ಎಲ್ಲ ಕಾರ್ಯಕ್ರಮಗಳಲ್ಲೂ ಇರುತ್ತದೆ. ಆದರೆ ಸ್ವತಂತ್ರ ನೇಮಕಾತಿ ಏಜೆನ್ಸಿಯು ಭ್ರಷ್ಟಾಚಾರಕ್ಕೆ ಒಂದು ತಡೆಯಾಗಿ ಕೆಲಸ ಮಾಡುತ್ತದೆ. ಅದು ಉದ್ಯೋಗದಾತ ಹಾಗೂ ಕೆಲಸಗಾರರು ಶಾಮೀಲಾಗುವುದನ್ನು ತಪ್ಪಿಸುವ ಸಾಧನವಾಗಬಹುದು. ಉದ್ಯಮಿ ತನಗೆ ಬೇಕಾದ ಕೆಲಸಗಾರರನ್ನು ನೇಮಕ ಮಾಡಿಕೊಳ್ಳ
ಬೇಕಾದರೆ, ಬರೀ ಕೆಲಸಗಾರರನ್ನು ಮಾತ್ರವಲ್ಲದೆ ನೇಮಕಾತಿ ಏಜೆನ್ಸಿಯನ್ನೂ ಬುಟ್ಟಿಗೆ ಹಾಕಿಕೊಳ್ಳಬೇಕಾಗುತ್ತದೆ. ಅದು ಕಷ್ಟಸಾಧ್ಯ. ಜೊತೆಗೆ ಸ್ವತಂತ್ರ ಪರಿಶೀಲನೆ, ಸಾಮಾಜಿಕ ಪರಿಶೋಧನೆಯಂತಹ ಕ್ರಮಗಳ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು.

ಐರೋಪ್ಯ ದೇಶಗಳಲ್ಲಿ ಸೇವಾ ವೋಚರುಗಳ ಪದ್ಧತಿ ಇದೆ. ಅದು ತುಂಬಾ ಜನಪ್ರಿಯವಾಗಿದೆ. ಆದರೆ ಅಲ್ಲಿ ಅದನ್ನು ಸಾರ್ವಜನಿಕ ಸಂಸ್ಥೆಗಳು ಬಳಸುವುದಿಲ್ಲ, ಕುಟುಂಬಗಳು ಬಳಸುತ್ತವೆ. ಅಡುಗೆ ಮಾಡುವುದು, ಶುಚಿಗೊಳಿಸುವಂತಹ ಗೃಹಕೃತ್ಯಗಳಿಗೆ ಅದನ್ನು ಬಳಸಲಾಗುತ್ತಿದೆ. ಸೇವಾ ವೋಚರುಗಳು ಪುಕ್ಕಟೆಯಲ್ಲ. ಆದರೆ ಅದಕ್ಕೆ ದೊಡ್ಡ ಪ್ರಮಾಣದ ರಿಯಾಯಿತಿ ನೀಡಲಾಗಿರುತ್ತದೆ. ಹಾಗಾಗಿ ಅವನ್ನು ಬಳಸಿಕೊಂಡು ಮನೆಕೆಲಸ ಮಾಡಿಸಿಕೊಳ್ಳುವುದು ತುಂಬಾ ಅಗ್ಗ.

ಆದರೆ ಡ್ಯುಯೆಟ್ ಯೋಜನೆಯಲ್ಲಿ ಈ ಸ್ಟ್ಯಾಂಪುಗಳನ್ನು ಬಳಸುವುದು ಬರೀ ಸರ್ಕಾರಿ ಸಂಸ್ಥೆಗಳು. ಇದರ ಯಶಸ್ಸು ಸರ್ಕಾರಿ ಸಂಸ್ಥೆಗಳ ಬದ್ಧತೆಯ ಮನೋಭಾವವನ್ನು ಆಧರಿಸಿರುತ್ತದೆ. ಅದನ್ನು ಕೆಲವು ಕಡೆಯಾದರೂ ಪ್ರಯತ್ನಿಸಿ ನೋಡಿದರೆ ಮಾತ್ರ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿ ಕಾರ್ಯಕ್ರಮ ಅನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯ. ಪ್ರಾರಂಭದಲ್ಲಿ ಇದನ್ನು ಸಣ್ಣ ನಗರಗಳ ಮಟ್ಟದಲ್ಲಿ ಪ್ರಯತ್ನಿಸಿ ನೋಡಬಹುದು. ನಿರ್ವಹಣೆ ಸುಲಭವಾಗುತ್ತದೆ. ಸಾಮಾಜಿಕ ಸುಭದ್ರತೆಗೆ ಉದ್ಯೋಗಾಧಾರಿತ ಕಾರ್ಯಕ್ರಮಗಳು ಅನಿವಾರ್ಯ.

ಡ್ಯುಯೆಟ್ ಒಂದು ಉದ್ಯೋಗ ಖಾತರಿ ಯೋಜನೆಯಲ್ಲ. ಆದರೆ ಉದ್ಯೋಗ ಖಾತರಿ ಯೋಜನೆಯನ್ನು ರೂಪಿಸುವ ದಿಸೆಯಲ್ಲಿ ಒಂದು ಉಪಯುಕ್ತ ಹೆಜ್ಜೆ ಆಗಬಹುದು. ಕರ್ನಾಟಕ ಸರ್ಕಾರದ ಯುವನಿಧಿಯಂತಹ ಕಾರ್ಯಕ್ರಮಗಳ ಜೊತೆಗೆ ಇಂತಹ ಉದ್ಯೋಗ ಆಧಾರಿತ ಕಾರ್ಯಕ್ರಮಗಳು ಹೆಚ್ಚಿನ ಸಾಮಾಜಿಕ ಸುಭದ್ರತೆಯನ್ನು ಒದಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.