ಉತ್ತರದ ಹಿಮಾಲಯಶ್ರೇಣಿ ರಾಜ್ಯಗಳಲ್ಲಿ ಇತ್ತೀಚೆಗೆ ಕಾಳ್ಗಿಚ್ಚು ಉಂಟುಮಾಡಿದ ನಷ್ಟ ಅಪಾರ. ಉತ್ತರಾಖಂಡದಲ್ಲಂತೂ ಜೀವಹಾನಿಯೂ ಸಂಭವಿಸಿತು. ಇದರ ಉರಿ ಸುಪ್ರೀಂ ಕೋರ್ಟನ್ನೂ ತಲುಪಿ, ಬೆಂಕಿ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಗಳಿಗೆ ಆದೇಶ ನೀಡಿದ್ದೂ ಆಯಿತು! ದಕ್ಷಿಣ ಭಾರತದ ಪಶ್ಚಿಮಘಟ್ಟದ ಕಾಡಿನಬೆಂಕಿಗೂ ಸಂಪೂರ್ಣ ಅನ್ವಯವಾಗುವ ಎಚ್ಚರಿಕೆಯಿದು.

ಏಕೆಂದರೆ, ಈ ವರ್ಷವೂ ನಾಡಿನ ಸಹ್ಯಾದ್ರಿ ತಪ್ಪಲಿನ ಮಲೆನಾಡು ಹಾಗೂ ಕರಾವಳಿಯಲ್ಲಿ ಕಾಡಿನಬೆಂಕಿ ಪ್ರಕರಣಗಳು ವ್ಯಾಪಕವಾಗಿ ಕಂಡುಬಂದಿವೆ. ಬೇಸಿಗೆಯ ಉರಿ, ಬಿಸಿಗಾಳಿಯ ತಾಪ, ಕ್ಷಾಮಕ್ಕೆ ತುತ್ತಾದ ಬೆಳೆ, ಕುಡಿಯುವ ನೀರಿನ ಬರ, ಮೇವಿನ ಕೊರತೆ- ಈ ಒಂದೊಂದೂ ಜನಜೀವನವನ್ನು ನಲುಗಿಸಿರುವಾಗ, ಅರಣ್ಯಗಳ ಬೆಂಕಿ ಸಂದರ್ಭಗಳು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿವೆ. ನೈಸರ್ಗಿಕ ಪರಿಸರದ ಸಂರಚನೆ ಕುಸಿದು ಬದುಕು ಮೂರಾಬಟ್ಟೆಯಾಗುತ್ತಿರುವ ಪರಿಯಿದು. ಚುನಾವಣೆ ಮುಗಿದು ರಾಜಕೀಯ ಕಾವು ತಗ್ಗಿದ ಮೇಲಾದರೂ ಈ ಬವಣೆಯನ್ನು ತಣ್ಣಗಾಗಿಸುವ ಪ್ರಾಮಾಣಿಕ ಆಮೂಲಾಗ್ರ ಚಿಂತನೆ ಹಾಗೂ ಪ್ರಯತ್ನಗಳು ನಡೆಯಬೇಕಲ್ಲವೇ?

ಸೀಮಿತವಾಗಿ ಘಟಿಸುವ ಕಾಡಿನಬೆಂಕಿ ಸಹಜ ಎಂದೇ ಅರಣ್ಯಶಾಸ್ತ್ರ ಪ್ರತಿಪಾದಿಸುತ್ತದೆ. ಬೇಸಿಗೆಯಲ್ಲಿ ವಾತಾವರಣ ಹಾಗೂ ಮಣ್ಣಿನ ತೇವಾಂಶ ತೀರಾ ಕಡಿಮೆಯಾದಾಗ, ಅಲ್ಲಲ್ಲಿ ಬೆಂಕಿ ಬಿದ್ದು ಪಸರಿಸುವುದಿದೆ. ಅದು ಹೊಳೆ-ಕೆರೆಗಳ ಡೆತಡೆಯಿಂದಾಗಿಯೋ ಅಥವಾ ತಡೆಗೋಡೆಯಂತಹ ನಿತ್ಯಹರಿದ್ವರ್ಣ ಕಾಡಿನಪಟ್ಟಿಯಿಂದಾಗಿಯೋ ತಹಬಂದಿಗೆ ಬರುತ್ತದೆ. ಬೇಸಿಗೆಯಲ್ಲಿ ಸುರಿಯುವ ಹಠಾತ್ ಮಳೆಯಂತೂ ಕಾಳ್ಗಿಚ್ಚು ತಣಿಸುವ ಇಂದ್ರನ ವರವೆಂದೇ ಜನಸಾಮಾನ್ಯರ ನಂಬಿಕೆ. ಇತ್ತೀಚೆಗೆ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟದಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಆರಿಸಿದ್ದು ಮಳೆರಾಯನೇ ತಾನೆ? ಆ ಮಟ್ಟಿಗೆ ಕಾಡಿನಬೆಂಕಿಯನ್ನು ಪರಿಸರ ವ್ಯವಸ್ಥೆಯ ಭಾಗವೆಂದು ಒಪ್ಪಲು ಅಡ್ಡಿಯಿಲ್ಲ.

ಏಕೆಂದರೆ, ಬೆಂಕಿಯಿಂದಾಗಿಯೇ ವಿವಿಧ ಸಂಕೀರ್ಣ ಪಾರಿಸರಿಕ ಕ್ರಿಯೆಗಳು ಕಾಡಿನ ನೆಲದಲ್ಲಿ ಜರುಗುತ್ತವೆ. ಒಣಗಿದ ಮರಮಟ್ಟುಗಳು ಸುಟ್ಟು ಇದ್ದಿಲು ಹಾಗೂ ಬೂದಿಯಾಗುತ್ತವೆ. ಆ ಮೂಲಕ ಅಪಾರ ಪ್ರಮಾಣದ ಸಾವಯವ ಇಂಗಾಲ, ಕ್ಯಾಲ್ಸಿಯಂ, ಮೆಗ್ನೀಶಿಯಂ, ರಂಜಕ, ಗಂಧಕ, ಮ್ಯಾಂಗನೀಸ್ನಂತಹ ಲವಣಾಂಶಗಳು ಮೇಲ್ಮಣ್ಣನ್ನು ಸೇರಿ ಫಲವತ್ತಾಗಿಸುತ್ತವೆ. ನೈಸರ್ಗಿಕ ಸೂಕ್ಷ್ಮಾಣುಜೀವಿಗಳ ವೃದ್ಧಿ ಹಾಗೂ ನಿಯಂತ್ರಣವನ್ನೂ ಅದು ನಿರ್ವಹಿಸುತ್ತದೆ. ಗಾಳಿಯಲ್ಲಿರುವ ಸಾರಜನಕವು ನೀರಿನಲ್ಲಿ ಕರಗುವ ನೈಟ್ರೇಟ್ ಲವಣವಾಗಿ ಪರಿವರ್ತಿತವಾಗಿ, ಗಿಡಮರಗಳ ಬೇರು ಅದನ್ನು ಹೀರುವಲ್ಲೂ ಸುಟ್ಟ ಮೇಲ್ಮಣ್ಣು ಸಹಾಯ ಮಾಡಬಲ್ಲದು. ಬಿದಿರಿನಂಥ ಹುಲ್ಲಿನ ಬೇರು ಅಥವಾ ದಪ್ಪ ಹೊದಿಕೆಯ ಸಸ್ಯಪ್ರಭೇದಗಳ ಬೀಜಗಳು ಮೊಳಕೆಯೊಡೆದು ಸಸ್ಯಸಂಕುಲ ವೃದ್ಧಿಯಾಗಲೂ ಸೀಮಿತ ಪ್ರಮಾಣದ ಬೆಂಕಿಯಿಂದ ಅನುಕೂಲ ಆಗುತ್ತದೆ. ಇದರಿಂದಾಗಿಯೇ, ನಿಯಮಿತವಾದ ಅಗ್ನಿಯು ಅರಣ್ಯಸ್ನೇಹಿ ಎಂದು ವನವಾಸಿಗಳು ನಂಬಿರುವುದು, ಪರಿಸರವಿಜ್ಞಾನವೂ ಸಮರ್ಥಿಸಿರುವುದು.

ಆದರೆ, ಮಲೆನಾಡು ಹಾಗೂ ಕರಾವಳಿಯ ಇತ್ತೀಚಿನ ದಶಕಗಳ ಕಾಳ್ಗಿಚ್ಚು, ಯಾವ ಅರ್ಥದಲ್ಲೂ ಸಹಜ ಹಾಗೂ ಸೀಮಿತವಾಗಿ ಉಳಿದಿಲ್ಲ. ದುರುದ್ದೇಶಕ್ಕೆಂದೇ ಹಚ್ಚುವ ಬೆಂಕಿಯು ಪ್ರತಿವರ್ಷವೂ ಸಾವಿರಾರು ಎಕರೆ ಕಾಡನ್ನು ಭಸ್ಮ ಮಾಡುತ್ತಿದೆ. ಕಾಡಿನ ಮರ ಕದಿಯಲು, ಜಮೀನು ಅತಿಕ್ರಮಿಸಿ ಕಟ್ಟಡ ನಿರ್ಮಿಸಲು, ಶುಂಠಿ, ರಬ್ಬರ್, ಅಡಿಕೆಯಂಥ ವಾಣಿಜ್ಯಕೃಷಿ ವಿಸ್ತರಣೆ- ಅದೆಷ್ಟು ಕಾರಣಗಳು ಬೆಂಕಿ ಬೀಳಲು! ಇದರಿಂದಾಗಿಯೇ ಸಮೃದ್ಧ ಅರಣ್ಯ ಛಿದ್ರವಾಗುತ್ತಿದೆ, ವಿಸ್ತಾರ ಕಡಿಮೆಯಾಗುತ್ತಿದೆ. ಕೀಟ, ಪಕ್ಷಿ, ಸರೀಸೃಪ, ಸಸ್ತನಿ- ಇವೆಲ್ಲವುಗಳ ವಾಸಸ್ಥಾನ ಬೆಂಕಿಯಿಂದಾಗಿಯೇ ನಾಶವಾಗುತ್ತಿದೆ.

ಹೀಗೆ ನಿತ್ಯಹರಿದ್ವರ್ಣ ಕಾಡು ಕಣ್ಮರೆಯಾದಂತೆಲ್ಲ ಕುರುಚಲು ಕಾಡೇ ಅಲ್ಲಿ ಆಕ್ರಮಿಸುವುದು. ಮಲೆನಾಡಿನ ದಟ್ಟಡವಿಯಲ್ಲಿ ಮಾತ್ರ ಕಂಡುಬರುವ ನಾಗಕೇಸರ, ಮರದರಸಿನ, ಹೆಬ್ಬಲಸು, ಸೂರಂಟೆ, ರಾಮಪತ್ರೆ, ಜಾರಿಗೆಯಂಥ ಸಾವಿರಾರು ಪ್ರಭೇದಗಳು ವಿನಾಶದಂಚಿಗೆ ಸರಿಯುತ್ತಿರುವುದರ ಹಿಂದೆ ಈ ಕಾರಣವೂ ಇದೆ. ಅಲ್ಲೆಲ್ಲ ಬೆಂಕಿ ತಾಳಿಕೊಳ್ಳಬಲ್ಲ ಲಂಟಾನ, ಜಾಲಿ, ಪಾರ್ಥೇನಿಯಂ, ಯುಪಟೋರಿಯಂ ತರಹದ ಕಳೆ ವ್ಯಾಪಿಸುತ್ತಿದೆ. ಇನ್ನು, ಬೆಂಕಿಯಿಂದ ಅರ್ಧ ಸುಟ್ಟಮೇಲೂ ಚಿಗುರಬೇಕೆಂದರೆ, ಹೆಚ್ಚು ತೇವಾಂಶವಿರುವ ದಪ್ಪ ತೊಗಟೆಯ ಮತ್ತಿ, ಹೊನಗಲು, ಕವಲಿನಂಥ ಮರಗಳಿಗೆ ಮಾತ್ರ ಸಾಧ್ಯ! ಹಿಂದಿನ ಮೂರು ದಶಕಗಳಲ್ಲಿ ಜೀವವೈವಿಧ್ಯ
ಭರಿತ ಸಹ್ಯಾದ್ರಿಯ ಕಾಡು ವೇಗವಾಗಿ ಕರಗುತ್ತಿರಲು ಕಾಡಿನಬೆಂಕಿಯೂ ಕೊಡುಗೆ ನೀಡಿದ್ದು ಈ ತೆರನಲ್ಲಿ.

ವನವಾಸಿಗರು ಹಾಗೂ ಕೃಷಿಕರು ಇದರಿಂದಾಗಿ ಎದುರಿಸುವ ಸಂಕಷ್ಟ ಅಷ್ಟಿಷ್ಟಲ್ಲ. ಜಲಾನಯನ ಪ್ರದೇಶದ ಕಾಡು ಭಸ್ಮವಾಗಿ, ಮೇಲ್ಮಣ್ಣು ಕೊಚ್ಚಿಹೋಗಿ, ಮಳೆನೀರು ಇಂಗದೆ, ಹೊಳೆ-ಕೆರೆಗಳು ಬತ್ತುತ್ತಿವೆ. ಕಾಡುಪ್ರಾಣಿಗಳ ವಾಸಸ್ಥಾನ ನಾಶವಾಗಿ ಹೊಲ, ತೋಟಗಳಿಗೆ ಕಾಡೆಮ್ಮೆ, ಹಂದಿ, ಮುಳ್ಳುಹಂದಿ, ಮಂಗನ ದಾಳಿ ಮಿತಿಮೀರುತ್ತಿದೆ. ಹಳ್ಳಿಗರಿಗೆ ಕಾನನದ ಜೇನು, ಅಂಟುವಾಳ, ಶೀಗೆಕಾಯಿ, ಮಿಡಿಮಾವು, ಹಸಿಸೊಪ್ಪು, ಉರುವಲಿನಂತಹವು ಅಲಭ್ಯವಾಗುತ್ತಿವೆ. ಹಳ್ಳಿಯಲ್ಲಿದ್ದೂ ಕಾಡಿನಿಂದ ಬೇರ್ಪಟ್ಟ ಅನಾಥ ಸ್ಥಿತಿ ಗ್ರಾಮೀಣ ಜನರದು! ಹೀಗಾಗಿ, ಅರಣ್ಯಪ್ರದೇಶಗಳನ್ನು ಬೆಂಕಿಯಿಂದ ರಕ್ಷಿಸುವ ಸಮಗ್ರ ನೀತಿಯನ್ನು ರಾಜ್ಯ ಸರ್ಕಾರ ಈಗಲಾದರೂ ರೂಪಿಸಬೇಕಿದೆ. ಈ ದಿಸೆ
ಯಲ್ಲಿ ಶೀಘ್ರವಾಗಿ ಅನುಷ್ಠಾನಗೊಳಿಸಬೇಕಾದ ಮೂರು ಅಂಶಗಳನ್ನು ಇಲ್ಲಿ ಸ್ಥೂಲವಾಗಿ ಪ್ರಸ್ತಾಪಿಸಲಾಗಿದೆ.

ಒಂದು, ತಾಂತ್ರಿಕ ಮಾಹಿತಿ ಪೂರೈಕೆಯದು. ಅರಣ್ಯ ಇಲಾಖೆಗೆ ನಾಸಾ ಹಾಗೂ ಇಸ್ರೊ ಉಪಗ್ರಹಗಳ ಮಾಹಿತಿ ಈಗ ಲಭ್ಯವಾಗುತ್ತಿದ್ದರೂ, ಅವನ್ನು ತ್ವರಿತವಾಗಿ ವಿಶ್ಲೇಷಿಸಿ, ಅಗತ್ಯವಿದ್ದೆಡೆ ತಳಮಟ್ಟಕ್ಕೆ ಸಕಾಲದಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿ ಜಿಲ್ಲೆಯಲ್ಲೂ ಕಾಡಿನಬೆಂಕಿ ಕುರಿತು ಸಮಗ್ರ ಮತ್ತು ಖಚಿತ ಮಾಹಿತಿ ಒದಗಿಸುವ ಉತ್ಕೃಷ್ಟ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ನೈಸರ್ಗಿಕ ಸಂಪನ್ಮೂಲ ಮಾಹಿತಿ ನಿರ್ವಹಣಾ ಕೇಂದ್ರ’ಗಳನ್ನೇ (ಎನ್ಆರ್ಡಿಎಂಎಸ್) ಈ ದಿಸೆಯಲ್ಲಿ ಮೇಲ್ದರ್ಜೆಗೆ ಏರಿಸಬಹುದು. ಮುಂಜಾಗರೂಕ ‘ಬೆಂಕಿರೇಖೆ’ ನಿರ್ಮಿಸುವುದು, ಬೆಂಕಿಯ ಪ್ರಸರಣ ತಡೆಯಬಲ್ಲ ನಿತ್ಯಹರಿದ್ವರ್ಣ ಪ್ರಭೇದಗಳನ್ನು ಆಯಕಟ್ಟಿನ ಜಾಗದಲ್ಲಿ ಬೆಳೆಸುವಂತಹ ತಾಂತ್ರಿಕ ಸಂಗತಿಗಳ ಕುರಿತಂತೆಲ್ಲ ಅವು ಮಾರ್ಗದರ್ಶನ ನೀಡಬಲ್ಲವು.

ಎರಡು, ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದ ‘ವಿಪತ್ತು ನಿಯಂತ್ರಣ ಕಾರ್ಯಪಡೆ’ಗಳನ್ನು ಸಬಲೀಕರಿಸಿ, ಅವುಗಳ ವ್ಯಾಪ್ತಿಯಲ್ಲಿ ಕಾಳ್ಗಿಚ್ಚನ್ನೂ ಆದ್ಯತಾ ವಿಷಯವಾಗಿ ಸೇರಿಸುವುದು. ಆ ಮೂಲಕ ಅರಣ್ಯ ಇಲಾಖೆಯ ಕಾರ್ಯಕ್ಕೆ ಕಂದಾಯ, ಪೊಲೀಸ್ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಇತರ ಇಲಾಖೆಗಳೂ ಬೆಂಕಿ ನಂದಿಸುವ ತುರ್ತುಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕೈಜೋಡಿಸಲು ಸಾಧ್ಯ.

ಮೂರನೆಯದು ಹಾಗೂ ಪ್ರಮುಖವಾದದ್ದು, ಅರಣ್ಯ ರಕ್ಷಣೆಗೆ ತಳಮಟ್ಟದಲ್ಲಿ ಸ್ಥಳೀಯ ಜನರ ಸಹಭಾಗಿತ್ವ ಸಾಧಿಸುವುದು. ಈ ದಿಸೆಯಲ್ಲಿ ಅರಣ್ಯ ಇಲಾಖೆಯ ಈವರೆಗಿನ ಸಾಧನೆ ಕಡಿಮೆಯೇ. ವನವಾಸಿಗರು, ರೈತರು, ಕೂಲಿಕಾರರು, ಗ್ರಾಮ ಅರಣ್ಯ ಸಮಿತಿ, ಸ್ವಸಹಾಯ ಗುಂಪುಗಳು- ಹೀಗೆ ಎಲ್ಲರೂ ಜೊತೆಯಾದರೆ ಮಾತ್ರ ಕಾಡು ಉಳಿಯಬಹುದು. ವಸಾಹತುಶಾಹಿ ಕಾರ್ಯಶೈಲಿ ಕೈಬಿಟ್ಟು, ಸಮುದಾಯಪ್ರೇರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಅರಣ್ಯ ಇಲಾಖೆ ಮುಂದಾದರೆ ಇದು ಸಾಧ್ಯ. ಜನಸಹಭಾಗಿತ್ವ ತತ್ವವು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಂದ ತಳಮಟ್ಟದ ಸಿಬ್ಬಂದಿಯವರೆಗೆ ಮೈಗೂಡಬೇಕಾದ ಅಗತ್ಯವು ಯಾವುದೇ ಕಾಡಿನಲ್ಲಿ ಸಂಚರಿಸಿದರೂ ತೋರಬಲ್ಲದು!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲೋ ಅಥವಾ ನಮ್ಮದೇ ಹಿಮಾಲಯದ ದುರ್ಗಮ ಪ್ರದೇಶಗಳಲ್ಲೋ ಬೆಂಕಿ ಆರಿಸಲು ಹೆಲಿಕಾಪ್ಟರ್ ಸೇವೆಯಂಥ ವೆಚ್ಚದ ಸೌಕರ್ಯ ಬೇಕಾದೀತು. ಆದರೆ, ಸಹ್ಯಾದ್ರಿಯ ಅರಣ್ಯ ರಕ್ಷಣೆಗೆ ಈಗ ಅಗತ್ಯವಿರುವುದು ಸರ್ಕಾರಿ ಕಾರ್ಯ ಯೋಜನೆಗಳ ಪ್ರಾಮಾಣಿಕ ಅನುಷ್ಠಾನ ಮತ್ತು ಜನರ ನೈಜ ಪಾಲ್ಗೊಳ್ಳುವಿಕೆ ಮಾತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.