ಪ್ರವಾದಿ ಮೊಹಮ್ಮದ್ ಒಬ್ಬರೇ ಇಸ್ಲಾಂ ಧರ್ಮದ ಸ್ಥಾಪಕರಾಗಿದ್ದರೂ ಅವರ ಮರಣಾನಂತರ ಈ ಧರ್ಮದ ಅನುಯಾಯಿಗಳು ಹಲವಾರು ವಿಭಾಗಗಳಾಗಿ ವಿಭಜನೆಗೊಂಡಿದ್ದಾರೆ. ಪ್ರವಾದಿಗಳ ಪ್ರಧಾನ ಅನುಯಾಯಿಗಳ ಭಿನ್ನಾಭಿಪ್ರಾಯಗಳಿಂದಾಗಿ ಪ್ರಾರಂಭದಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಪಂಗಡಗಳಾದವು.

ಸುನ್ನಿಗಳು ಪ್ರವಾದಿಗಳ ಪ್ರಥಮ ಅನುಯಾಯಿ ಅಬೂಬಕ್ಕರ್ ಸಿದ್ಧಿಖ್ ಅವರ ಬೆಂಬಲಿಗರಾಗಿದ್ದರೆ, ಶಿಯಾ ಪಂಗಡವು ಪ್ರವಾದಿಗಳ ನಾಲ್ಕನೇ ಅನುಯಾಯಿಯೂ, ಅವರ ಅಳಿಯನೂ, ದಾಯಾದಿಯೂ ಆಗಿದ್ದ ಹಲಿ ಅವರ ಬೆಂಬಲಿಗರಾಗಿದ್ದಾರೆ.

ಈ ಎರಡು ಪಂಗಡಗಳಲ್ಲಿ ಪರಸ್ಪರ ಎಷ್ಟೊಂದು ದ್ವೇಷವಿದೆಯೆಂದರೆ ಸುನ್ನಿಗಳು, ಶಿಯಾ ಪಂಗಡದವರನ್ನು ಮುಸ್ಲಿಮರೇ ಅಲ್ಲವೆನ್ನುತ್ತಾ ಪಾಕಿಸ್ತಾನದಲ್ಲಿ ಅವರ ಮಸೀದಿಗಳಿಗೆ ಬೆಂಕಿ ಹಚ್ಚುವುದು, ಮಸೀದಿಯಲ್ಲಿ ಪ್ರಾರ್ಥನೆ ಮಾಡುವವರನ್ನು ಹತ್ಯೆ ಮಾಡುವ ಮಟ್ಟಕ್ಕೆ ದ್ವೇಷ ಬೆಳೆದಿದೆ. ಈಗ ಈ ಎರಡೂ ಪಂಗಡಗಳು ಒಡೆದು ಹಲವಾರು ಹೋಳುಗಳಾಗಿವೆ.

ಇಡೀ ಮುಸ್ಲಿಂ ಸಮಾಜದಲ್ಲಿ ಇಷ್ಟೊಂದು ಭಿನ್ನಾಭಿಪ್ರಾಯಗಳು, ವಿವಿಧ ಗುಂಪುಗಳು ಇದ್ದರೂ ಮಹಿಳೆಯರ ಒಳಿತಿಗಾಗಿ ಸರ್ಕಾರವು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಕೆಲವು ಬದಲಾವಣೆಗಳು ಆಗಬೇಕೆಂದು ಪ್ರಯತ್ನಿಸಿದರೆ, ಆಗ ಈ ಎಲ್ಲ ಪಂಗಡಗಳ ಪುರುಷರೂ ಒಂದಾಗಿ, ಒಕ್ಕೊರಲಿನಿಂದ ಸರ್ಕಾರದ ಪ್ರಯತ್ನವನ್ನು ವಿರೋಧಿಸಿ, ಅದಾಗದಂತೆ ತಡೆಯುತ್ತಾರೆ. ಅಂತಹ ತಡೆಯೊಡ್ಡಲು ಅವರು ಕುರ್ಆನ್ ವಾಕ್ಯಗಳನ್ನೂ ದೂರ ತಳ್ಳುತ್ತಾರೆ.

ಉದಾಹರಣೆಗೆ, ತಲಾಖ್ ನೀಡಿದ ಮಹಿಳೆಗೆ ಜೀವನಾಂಶ ನೀಡಿ ಮುಂದಿನ ಬದುಕಿಗೆ ತೊಂದರೆಯಾಗದಂತೆ ಆಕೆಗೆ ‘ಮತಾಃ’ (ಜೀವನಾಂಶ) ನೀಡಬೇಕೆಂದು ಕುರ್ಆನ್ ಸ್ಪಷ್ಟವಾಗಿ ಬೋಧಿಸಿದ್ದರೂ ‘ವಿಚ್ಛೇದಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮದಲ್ಲಿ ಈ ವಾಕ್ಯ ಸೇರ್ಪಡೆಯಾಗಲೇ ಇಲ್ಲ!

ಕೆಲವು ವರ್ಷಗಳ ಹಿಂದೆ (2008ರ ಅಕ್ಟೋಬರ್ 28) ಕೇರಳ ಹೈಕೋರ್ಟ್ ಒಂದು ತೀರ್ಪು ನೀಡಿದ್ದು, ವಿವಾದವೇ ಸೃಷ್ಟಿಯಾಯಿತು. ತ್ರಿಶ್ಶೂರಿನ ಸೈದಾಲಿ ಎಂಬಾತ ಎರಡನೇ ಮದುವೆಯಾದಾಗ, ಆತನ ಮೊದಲ ಪತ್ನಿ ಸೆಲೀನಾ ತನಗೆ ವಿಚ್ಛೇದನ ಬೇಕೆಂದು ನ್ಯಾಯಾಲಯಕ್ಕೆ ಹೋದರು. ಆಗ ಕೆಳ ನ್ಯಾಯಾಲಯ ವಿಚ್ಛೇದನಕ್ಕೆ ಆಕೆಗೆ ಅನುಮತಿ ನೀಡಿತು. ಆಕೆಯ ಗಂಡ ಈ ತೀರ್ಪಿನ ವಿರುದ್ಧ ಹೈಕೋರ್ಟ್ಗೆ ಹೋದಾಗ, ಅದು ಈ ತೀರ್ಪನ್ನು ರದ್ದುಪಡಿಸಿತು.

ಗಂಡ ಎರಡನೇ ವಿವಾಹ ಆದನೆಂಬ ಒಂದೇ ಕಾರಣಕ್ಕೆ ಮುಸ್ಲಿಂ ಪತ್ನಿಗೆ ವಿಚ್ಛೇದನ ನೀಡಲು ಇಂದು ಭಾರತದಲ್ಲಿ ಜಾರಿಯಲ್ಲಿರುವ ‘ಮುಸ್ಲಿಂ ವೈಯಕ್ತಿಕ ಕಾನೂನು’ ಅನುಮತಿ ನೀಡುವುದಿಲ್ಲ ಎಂಬುದು ಈ ರದ್ದತಿಗೆ ಕಾರಣವಾಗಿತ್ತು. ಧಾರ್ಮಿಕ ನಿಯಮಗಳು ಮತ್ತು ಸಾಮಾಜಿಕ ನಿಯಮಗಳಿಗೆ ಒಪ್ಪಿಗೆಯಾಗದ ಬಹುಪತ್ನಿತ್ವ ಹಾಗೂ ಏಕಪಕ್ಷೀಯವಾದ ತಲಾಖ್ ಪದ್ಧತಿ ಮುಸ್ಲಿಮರಲ್ಲಿದೆ ಎಂಬುದನ್ನು ತಿಳಿದ ನ್ಯಾಯಾಲಯ, ಇದನ್ನು ನಿಯಂತ್ರಿಸಲು ಪ್ರಾದೇಶಿಕವಾಗಿಯೂ, ದೇಶೀಯವಾಗಿಯೂ ಸಮಿತಿಗಳನ್ನು ರಚಿಸಿ, ಇದಕ್ಕಾಗಿ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆಯೆಂದು ಹೇಳಿತು.

ಹೀಗೊಂದು ಸಮಿತಿ ರಚನೆ ಆಗಬೇಕೆಂದದ್ದಕ್ಕೇ ಮತ್ತೊಂದು ವಿವಾದ ಆರಂಭವಾಯಿತು. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಹಸ್ತಕ್ಷೇಪ ಎಂದು ಹೇಳಿದ ಸುನ್ನಿ ವಿಭಾಗ, ಅದನ್ನು ವಿರೋಧಿಸಬೇಕೆಂದಿತು. ಮುಜಾಹಿದ್ ವಿಭಾಗ ಮೌನವಾಯಿತು. ಜಮಾಅತೇ ಇಸ್ಲಾಮಿ ಈ ನಿರ್ದೇಶನವನ್ನು ಸ್ವಾಗತಿಸಿತು. ‘ವಿರೋಧಿಸುವವರೂ, ಮೌನವಾಗಿ ಕುಳಿತವರೂ, ಸ್ವಾಗತಿಸುವವರೂ ಒಟ್ಟು ಸೇರಿ ಇನ್ನು ಯಾವಾಗ ಯುದ್ಧಕ್ಕೆ ಹೊರಡುವರೆಂಬುದು ನನ್ನ ಸಂದೇಹ’ ಎಂದು ಪ್ರೊ. ಕಾರಶ್ಶೇರಿಯವರು ಬರೆದಿದ್ದಾರೆ.

ಕಾರಶ್ಶೇರಿಯವರ ನಿರೀಕ್ಷೆಯಂತೆಯೇ ಈಗ ಇಸ್ಲಾಂ ಸಮಾಜದ ಎಲ್ಲ ಪುರುಷರೂ ಒಟ್ಟು ಸೇರಿ, ಬಾಯಿ ಮಾತಿನಲ್ಲಿ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್ ಹೇಳಿ ಹೆಣ್ಣೊಬ್ಬಳನ್ನು ನಿರ್ಗತಿಕಳನ್ನಾಗಿಸುವ ನಿಯಮದ ತಿದ್ದುಪಡಿಗೆ ಸರ್ಕಾರ ಮುಂದಾಗುವುದನ್ನು ವಿರೋಧಿಸಲು ಪ್ರಾರಂಭಿಸಿದ್ದಾರೆ. ಇಸ್ಲಾಂ ಧಾರ್ಮಿಕ ನಿಯಮದಲ್ಲಿ ಸರ್ಕಾರದ ಹಸ್ತಕ್ಷೇಪವೆಂಬ ಕೂಗು ಆರಂಭವಾಗಿದೆ. ವಿವಾಹ, ವಿಚ್ಛೇದನ, ಜೀವನಾಂಶ ಇವೆಲ್ಲವೂ ನಾಗರಿಕ ನಿಯಮಗಳೇ ಹೊರತು ಧಾರ್ಮಿಕ ನಿಯಮಗಳಲ್ಲ. ‘ನೀವು ಯಾವ ದೇಶದಲ್ಲಿ ಬದುಕುತ್ತಿದ್ದೀರೊ ಆ ದೇಶದ ನಾಗರಿಕ ನಿಯಮಗಳನ್ನು ಅನುಸರಿಸಿ’ ಎಂಬುದು ಪ್ರವಾದಿಗಳ ಉಪದೇಶವಾಗಿದೆ.

ಮುಸ್ಲಿಂ ಧಾರ್ಮಿಕ ನಿಯಮಗಳೆಂದರೆ, ನಿರಾಕಾರನಾದ ಏಕ ದೇವನಲ್ಲಿ ವಿಶ್ವಾಸ, ನಮಾಜ್, ಉಪವಾಸ ವ್ರತ, ಕಡ್ಡಾಯ ದಾನ, ಹಜ್ ಯಾತ್ರೆ ಇತ್ಯಾದಿ. ಈ ನಿಯಮಗಳಲ್ಲಿ ಸರ್ಕಾರ ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಇನ್ನು ಏಕರೂಪ ನಾಗರಿಕ ಸಂಹಿತೆ ಕುರಿತು ಚಿಂತಿಸೋಣ. ನಮಗೆ ಏಕರೂಪ ನಾಗರಿಕ ಸಂಹಿತೆ ಬೇಡವಾದರೆ ಈಗ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿರುವ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಯಾಕೆ ಬೇಕು? ಮುಸ್ಲಿಮರು ತಮ್ಮದೇ ದಂಡ ಪ್ರಕ್ರಿಯಾ ಸಂಹಿತೆಗೇ ಅಂಟಿಕೊಳ್ಳಬಹುದಲ್ಲವೇ?

ಕದ್ದಾತನ ಕೈ ಕಡಿಯಬೇಕು, ಕೊಲೆ ಮಾಡಿದವನ ತಲೆಯನ್ನು ಸಾರ್ವಜನಿಕ ಸ್ಥಳದಲ್ಲಿ ಕಡಿಯಬೇಕು, ಹೆಂಡ ಕುಡಿದವನಿಗೆ ನೂರು ಛಡಿ ಏಟು ನೀಡಬೇಕು, ಅನೈತಿಕ ಸಂಬಂಧ ಹೊಂದಿದ ಗಂಡು ಅಥವಾ ಹೆಣ್ಣಿಗೆ ನೂರು ಛಡಿ ಏಟಿನ ಶಿಕ್ಷೆ ನೀಡಬೇಕು... ಈ ರೀತಿ ಅಪರಾಧ ಎಸಗುವ ಮುಸ್ಲಿಮರಿಗೆ ಈ ದಂಡ ಸಂಹಿತೆಯೇ ಜಾರಿಗೆ ಬರಲಿ ಎನ್ನಲಾಗುತ್ತದೆಯೇ? ಅಂಥ ಶಿಕ್ಷೆ ಅನುಭವಿಸಿದವರಿಗೆ ಸ್ವರ್ಗದಲ್ಲಿ ಸೀಟು ಮೀಸಲಿಡಲಾಗುತ್ತದೆ!

ಕೇರಳದ ಕಾಂತಾಪುರಂ ಅಬೂಬಕ್ಕರ್ ಮೌಲವಿ ಮತ್ತು ಹಲವಾರು ಮದ್ರಸಾ ಧರ್ಮಗುರುಗಳು ಮಹಿಳೆಯರನ್ನು ಅವಮಾನಿಸುವ ರೀತಿ ಹೇಳಿಕೆ ನೀಡುತ್ತಾರೆ. ಆಕೆ ಪುರುಷನ ಸುಖ ಜೀವನಕ್ಕಾಗಿಯೇ ಸೃಷ್ಟಿಯಾದ ಒಂದು ನಿರ್ಜೀವ ವಸ್ತು ಎಂಬಂತೆ ಚಿತ್ರಿಸುತ್ತಾರೆ. ಬಹುಪತ್ನಿತ್ವವನ್ನು ಸಮರ್ಥಿಸುತ್ತಾ ಕಾಂತಾಪುರಂ ಹೀಗೆಂದಿದ್ದರು: ‘ಮಹಿಳೆಯರಿಗೆ ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ಕೆಲವರಿಗೆ ಐದಾರು ದಿನಗಳಾದರೆ ಇನ್ನು ಕೆಲವರಿಗೆ ಹತ್ತು ದಿನಗಳವರೆಗೆ ಇದು ಇರುತ್ತದೆ. ಆಗಲೂ ಪುರುಷರಿಗೆ ಸುಖ ಜೀವನಕ್ಕೆ ಹೆಣ್ಣಿನ (ಆಕೆಯ ದೇಹದ) ಅಗತ್ಯವಿರುತ್ತದೆ. ಅದಕ್ಕಾಗಿ ಇಸ್ಲಾಂ ಧರ್ಮ ಬಹುಪತ್ನಿತ್ವವನ್ನು ಅನುಮತಿಸಿದೆ’.

ಹೆಣ್ಣೆಂದರೆ ಗಂಡಿಗೆ ಬೇಕಾದಾಗ ಬೇಕಾದಂತೆ ಉಪಯೋಗಿಸಲು ಇರುವ ಒಂದು ನಿರ್ಜೀವ ವಸ್ತು. ಬೇಡವಾದರೆ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್ ಎಂದುಬಿಟ್ಟು ಹೊರಗಟ್ಟಿದರಾಯಿತು! ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಕೂಡ ಇದೇ ಮಾತನ್ನು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಧರ್ಮಗುರುಗಳ ಮನದಾಳದಲ್ಲೂ ಹೆಣ್ಣೆಂದರೆ ತಮ್ಮ ಸುಖಕ್ಕಾಗಿಯೇ ಇರುವ ವಸ್ತು ಎಂಬ ಭಾವನೆ ಬೇರೂರಿದೆ.

ಇನ್ನು ‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ ಭಾರತದ ಎಲ್ಲ ಮುಸ್ಲಿಮರ ಪ್ರಾತಿನಿಧಿಕ ಸಂಘಟನೆ ಅಲ್ಲ. ಅವರು ಎಂತಹ ನಿಯಮವನ್ನು ನಮ್ಮ ಮೇಲೆ ಹೇರಿದರೂ ನನ್ನಂತಹವರ ಕುಟುಂಬಕ್ಕೆ ಅದು ಅನ್ವಯಿಸುವುದಿಲ್ಲ. ಪ್ರವಾದಿಗಳು ಎಂದೂ ಇಂತಹ ಸಂಘಟನೆ ಸ್ಥಾಪಿಸಿ ಅದರ ಆದೇಶದಂತೆ ಮುಸ್ಲಿಮರು ಬದುಕಬೇಕೆಂದು ಹೇಳಿಲ್ಲ. ನಾನು ಮತ್ತು ನನ್ನ ಕುಟುಂಬ ಈ ದೇಶದ ಸಂವಿಧಾನಕ್ಕನುಸಾರವಾಗಿ ಬದುಕುತ್ತಿದ್ದೇವೆ.

ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಲು ಎಂತೆಂತಹ ಸುಳ್ಳುಗಳನ್ನೆಲ್ಲ ತೇಲಿ ಬಿಡಲಾಗುತ್ತಿದೆ. ಈ ನಿಯಮ ಜಾರಿಗೆ ಬಂದರೆ ಮುಸ್ಲಿಮರು ಮೃತರಾದಾಗ ಗೋರಿ ಕಟ್ಟಲು ಸಾಧ್ಯವಾಗದು, ಅವರನ್ನು ದಹಿಸಬೇಕಾಗಬಹುದು; ಆದುದರಿಂದ ನಾವು ಈಗಲೇ ಜಾಗೃತರಾಗಿ ಈ ನಿಯಮ ಬರದಂತೆ ತಡೆಯಬೇಕು ಎಂದು ಫೇಸ್ಬುಕ್ನಲ್ಲಿ ಸಂದೇಶ ನೀಡಲಾಗುತ್ತಿದೆ.

ಮೃತರಾದಾಗ ಗೋರಿ ಕಟ್ಟುವುದು ಮುಸ್ಲಿಮರು ಮಾತ್ರವಲ್ಲ, ಹಿಂದೂಗಳಲ್ಲೂ ಹಲವು ಜಾತಿಗಳಲ್ಲಿ ಮಣ್ಣು ಮಾಡುವ ಪದ್ಧತಿ ಇದೆ. ಇಂಥ ಸುಳ್ಳುಗಳನ್ನು ತೇಲಿಬಿಟ್ಟು ಅನಕ್ಷರಸ್ಥ ಮುಸ್ಲಿಂ ಮಹಿಳೆಯರನ್ನು ಹಾದಿ ತಪ್ಪಿಸಲಾಗುತ್ತಿದೆ. ಮುಸ್ಲಿಂ ಮಹಿಳೆಯರು ಈಗಲಾದರೂ ತಮ್ಮ ಮೌನ ಮುರಿದು, ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್ ಹೇಳುವುದರ ವಿರುದ್ಧ ತಮ್ಮ ಅನಿಸಿಕೆಗಳನ್ನು ಹೇಳಬೇಕು.

ಶಾಯಿರಾ ಬಾನು ಎಂಬ ಮಹಿಳೆಗೆ ಗಂಡ ಈ ರೀತಿ ತಲಾಖ್ ನೀಡಿದ್ದು ಮಾತ್ರವಲ್ಲ ಆಕೆ ತನ್ನ ಮಕ್ಕಳೊಡನೆ ಫೋನಿನಲ್ಲೂ ಮಾತನಾಡದಂತೆ ನಿರ್ಬಂಧ ಹೇರಿದ್ದಾನೆ.ಇಬ್ಬರು ಮಕ್ಕಳಾದ ಬಳಿಕ ಆಕೆಗೆ ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಮಹಿಳೆಯರು ಇಂಥ ಸರ್ವಾಧಿಕಾರಿ ಮನೋಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಪಾಕಿಸ್ತಾನ, ಬಾಂಗ್ಲಾದೇಶ, ಅರಬ್ ದೇಶ ಮುಂತಾದೆಡೆಗಳಲ್ಲಿ ಒಮ್ಮೆಗೇ ಮೂರು ಬಾರಿ ತಲಾಖ್ ಹೇಳುವುದನ್ನು ರದ್ದುಪಡಿಸಲಾಗಿದೆ.

ಈ ಸಂದರ್ಭದಲ್ಲಿ ನನಗೆ ಒಂದು ವಿಷಯ ನೆನಪಾಗುತ್ತಿದೆ. ಕಾಂಗ್ರೆಸ್ ಸರ್ಕಾರ, ವಿಚ್ಛೇದಿತ ಮಹಿಳೆಗೆಜೀವನಾಂಶ ಕೊಡುವುದು ಬೇಡ ಎಂಬ ನಿಯಮ ಜಾರಿಗೊಳಿಸಿದ ಸಂದರ್ಭ ಅದಾಗಿತ್ತು. ಆ ಸಮಯದಲ್ಲಿ ಒಂದು ಮದ್ರಸಾದ ಬಡ ಮೌಲ್ವಿಯೊಬ್ಬರು ನನ್ನ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ಅವರು ಸಾಲ ಮಾಡಿ ಮಗಳ ಮದುವೆ ಮಾಡಿ, ಅಳಿಯನನ್ನು ಕೊಲ್ಲಿ ರಾಷ್ಟ್ರವೊಂದಕ್ಕೆ ಕಳುಹಿಸಿದ್ದರು. ಒಂದು ವರ್ಷವಾಗುತ್ತಿದ್ದಂತೆ ಆತ ಅವರ ಮಗಳಿಗೆ ಪತ್ರದ ಮೂಲಕ ತಲಾಖ್ ಕಳುಹಿಸಿದ್ದ.

ಇದಕ್ಕೆ ಏನಾದರೂ ಮಾಡಲು ಸಾಧ್ಯವಿದೆಯೇ ಎಂದು ಕೇಳಲು ಅವರು ನನ್ನ ಬಳಿ ಬಂದಿದ್ದರು. ಆಗ ನಾನೆಂದೆ, ‘ದೇಶದಾದ್ಯಂತ ಮುಸ್ಲಿಮರ ತಲೆ ಕೆಡಿಸಿ, ನಮ್ಮ ಧರ್ಮದಲ್ಲಿ ಸರ್ಕಾರದ ಹಸ್ತಕ್ಷೇಪವೆಂದು ಕೆಲವು ಮತಾಂಧ ಸಂಘಟನೆಗಳು ಕೂಗಾಡಿದವಲ್ಲ. ನೀವು ಹೋಗಿ ಅವರೊಡನೆ ಕೇಳಿ. ತಲಾಖ್ ಪಡೆದ ಮಹಿಳೆಯರಿಗೆ ವಕ್ಫ್ ಮಂಡಳಿ ಜೀವನಾಂಶ ಕೊಡಬೇಕೆಂದು ಸರ್ಕಾರ ನಿಯಮ ಮಾಡಿದೆ! ಅವರೊಡನೆ ಕೇಳಿ.

ನೀವು, ನಿಮ್ಮಂತಹವರು ತಾನೇ ಈ ಮತಾಂಧರಿಗೆ ಬೆಂಬಲ ನೀಡಿದ್ದು? ಈಗ ನಿಮ್ಮ ಮಗಳ ಬದುಕಿನಲ್ಲೇ ಅಂಥ ದುರ್ಘಟನೆ ನಡೆದು ಆಕೆ ನಿರ್ಗತಿಕಳಾದಾಗ ನಿಮಗೆ ನೋವಾಯಿತು. ನಿಮ್ಮಂತಹ ಸಾವಿರಾರು ತಂದೆಯಂದಿರು ಇಂತಹ ನಿಯಮಗಳಿಂದಾಗಿ ನೋವಿನಿಂದ ನರಳುತ್ತಿದ್ದಾರೆ ಎಂಬ ಅರಿವು ನಿಮ್ಮಲ್ಲಿದ್ದಿದ್ದರೆ ಇಂಥ ನಿಯಮ ಜಾರಿಯಾಗುತ್ತಿರಲಿಲ್ಲ’ ಎಂದೆ. ಆ ಮನುಷ್ಯ ದುಃಖದ ಭಾರದಿಂದ ತಲೆ ತಗ್ಗಿಸಿ ನಡೆಯುತ್ತಾ ಮೆಲ್ಲಗೆ ಗೇಟು ದಾಟುತ್ತಿದ್ದುದನ್ನು ನೋಡಿದಾಗ ನನ್ನ ಕಣ್ಣುಗಳು ತುಂಬಿಕೊಂಡವು. ಆ ದೃಶ್ಯ ಇಂದಿಗೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಮುಸ್ಲಿಂ ಹೆಣ್ಣು ಮಕ್ಕಳ ಬದುಕು ಎಷ್ಟೋ ಸುಧಾರಿಸಬಹುದು. ಆದುದರಿಂದ ಅವರ ತಲೆಯ ಮೇಲೆ ತೂಗಾಡುತ್ತಿರುವ ಈ ತ್ರಿವಳಿ ತಲಾಖ್ ಎಂಬ ಖಡ್ಗದಿಂದ ಅವರನ್ನು ರಕ್ಷಿಸಬೇಕಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ತಮ್ಮ ಹಕ್ಕಿನಿಂದ ತಾವು ವಂಚಿತರಾಗುತ್ತೇವೆಂಬ ಭಯ ಮುಸ್ಲಿಂ ಪುರುಷರನ್ನು ಕಾಡುತ್ತಿದೆ. ಆದುದರಿಂದ ಹೇಗಾದರೂ ಇದನ್ನು ತಡೆಯಬೇಕೆಂಬ ಹುನ್ನಾರ ಅವರದಾಗಿದೆ.

ಇತ್ತ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಎಂಬ ಬೆಂಕಿಯಲ್ಲಿ ನರಳುತ್ತಿರುವಾಗ ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಎಚ್.ಡಿ. ದೇವೇಗೌಡರಂಥ ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ರಾಜಕಾರಣಿಗಳ ಹುನ್ನಾರವನ್ನೂ ಅರ್ಥ ಮಾಡಿಕೊಳ್ಳಬೇಕು.

ಇಷ್ಟೆಲ್ಲ ಹೇಳಿದ ಮೇಲೂ ಏಕರೂಪ ನಾಗರಿಕ ಸಂಹಿತೆ ಕುರಿತು ಕೆಲ ಮಾತುಗಳನ್ನು ಹೇಳಬೇಕಾಗಿದೆ. ಈ ಸಂಹಿತೆ ಹೇಗಿರಬೇಕು, ಅದರಲ್ಲಿ ಯಾವ್ಯಾವ ವಿಷಯಗಳು ಒಳಗೊಳ್ಳಬೇಕು ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು, ಈ ಕುರಿತು ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲೂ ಚರ್ಚೆ ನಡೆಯಬೇಕು, ಆಮೇಲಷ್ಟೆ ಇದರ ಕುರಿತು ಕೊನೆಯ ತೀರ್ಮಾನ ಕೈಗೊಳ್ಳಬೇಕು ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿದೆ. ಒಮ್ಮೆ ಜಾರಿಗೆ ಬಂದ ಮೇಲೂ ತಿದ್ದುಪಡಿ ಮಾಡಲು ಅವಕಾಶ ಇದ್ದೇ ಇರುತ್ತದೆ. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ಕುರಿತು ಯಾರೂ ಭಯಪಡಬೇಕಾದ ಆಗತ್ಯವಿಲ್ಲ.

ಇಂದು ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಬದುಕುತ್ತಿರುವವರು ಅಲ್ಲಿ ಜಾರಿಯಲ್ಲಿರುವ ಸಂವಿಧಾನವನ್ನು ಅನುಸರಿಸಬೇಕೇ ಹೊರತು ನಾಗರಿಕ ಜೀವನದಲ್ಲಿ ತಮ್ಮ ಧಾರ್ಮಿಕ ನಿಯಮಗಳಂತೆ ಬದುಕಲು ಸಾಧ್ಯವಿಲ್ಲ. ಒಮ್ಮೆಗೇ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದಕ್ಕಾಗಲಿ, ವಿಚ್ಛೇದಿತೆಗೆ ಜೀವನಾಂಶ ನೀಡದೆ ಇರುವುದಕ್ಕಾಗಲಿ ಅಲ್ಲಿನ ನಿಯಮಗಳು ಅವಕಾಶ ನೀಡುವುದಿಲ್ಲ. ಅಲ್ಲಿ ಬದುಕುವವರೆಲ್ಲರೂ ಅಲ್ಲಿನ ನಾಗರಿಕ ನಿಯಮಗಳಿಗೆ ಅನುಸಾರವಾಗಿ ಬದುಕುವುದು ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.