ನಮ್ಮ ರಾಜ್ಯದ ಜನಸಂಖ್ಯಾ ನಿರ್ದೇಶನಾಲಯವು 2011ರ ಜನಗಣತಿಯ ಅಂತಿಮ ಅಂಕಿಸಂಖ್ಯೆಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಕಳೆದ ವರ್ಷ ಅದು ತಾತ್ಕಾಲಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು. ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಾಗಿವೆ. ಉದಾಹರಣೆಗೆ ತಾತ್ಕಾಲಿಕ ಮಾಹಿತಿಯಲ್ಲಿ 0-6 ವಯೋಮಾನದ ಮಕ್ಕಳ ಲಿಂಗ ಅನುಪಾತ 2001 ಮತ್ತು 2011ರ ನಡುವೆ 946 ರಿಂದ 943ಕ್ಕೆ ಕಡಿಮೆಯಾಗಿತ್ತು. ಆದರೆ ಈಗ ಅಂತಿಮ ಮಾಹಿತಿಯಲ್ಲಿ ಅದು 946 ರಿಂದ 948ಕ್ಕೇ ಏರಿರುವುದು ಕಂಡು ಬಂದಿದೆ.

ಒಟ್ಟು ರಾಜ್ಯದ ಜನಸಂಖ್ಯೆಯು ತಾತ್ಕಾಲಿಕ ಮಾಹಿತಿಯಲ್ಲಿ 611.31 ಲಕ್ಷವಿದ್ದರೆ ಈಗ ಅದು 610.95 ಲಕ್ಷವಾಗಿದೆ. ಇದೇನೆ ಇರಲಿ. ಅಂತಿಮ ಜನಸಂಖ್ಯಾ ಮಾಹಿತಿಯನ್ನು ಅಲ್ಪ ಕಾಲಾವಧಿಯಲ್ಲಿ ಬಿಡುಗಡೆ ಮಾಡಿದ ಜನಸಂಖ್ಯಾ ನಿರ್ದೇಶನಾಲಯವು ನಮ್ಮೆಲ್ಲರ ಅಭಿನಂದನೆಗೆ ಅರ್ಹವಾಗಿದೆ. ಈಗ ಬಿಡುಗಡೆ ಮಾಡಿರುವ 2011ರ ಜನಸಂಖ್ಯಾ ವಿವರಗಳಲ್ಲಿ ದುಡಿಯುವ ವರ್ಗದ ಸ್ವರೂಪದಲ್ಲಿ ಉಂಟಾಗಿರುವ ಕೆಲವು ಪ್ರಮುಖ ಬದಲಾವಣೆಗಳನ್ನು ಗುರುತಿಸಬಹುದು. ಈ ಬದಲಾವಣೆಗಳ ಅರ್ಥವೇನು ಮತ್ತು ಅಭಿವೃದ್ಧಿಯ ಮೇಲೆ ಅವುಗಳ ಪರಿಣಾಮವೇನು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ನಮ್ಮ ರಾಜ್ಯದ ಜನಸಂಖ್ಯೆಯ ಗತಿಶೀಲತೆಗೆ ಸಂಬಂಧಿಸಿದಂತೆ ಗುರುತಿಸಬಹುದಾದ ಸಂಗತಿಯೆಂದರೆ ಅದರ ಬೆಳವಣಿಗೆ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದಾಗಿದೆ. ನಮ್ಮ ರಾಜ್ಯದ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ 1991-2001ರ ಅವಧಿಯಲ್ಲಿ ಶೇ 1.75 ರಷ್ಟಿತ್ತು. ಇದು 2001 ರಿಂದ 2011ರ ಅವಧಿಯಲ್ಲಿ ಶೇ 1.56ಕ್ಕಿಳಿದಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ವಾರ್ಷಿಕ ಜನಸಂಖ್ಯಾ ಬೆಳವಣಿಗೆ ಪ್ರಮಾಣ ಶೇ 1ಕ್ಕಿಂತ ಕಡಿಮೆಯಿದೆ. ಬೆಂಗಳೂರು ನಗರ ಜಿಲ್ಲೆಯನ್ನು ಅಪವಾದವೆಂದು ಬಿಟ್ಟರೆ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಅದು ಶೇ 2ಕ್ಕಿಂತ ಅಧಿಕವಿದೆ. ಇದು ಜನಸಂಖ್ಯೆಯ ನಿರ್ವಹಣೆಯಲ್ಲಿ ನಾವು ಸಾಧಿಸಿಕೊಂಡಿರುವ ಹೆಮ್ಮೆಯ ಸಾಧನೆ. ಒಟ್ಟು ಮೊತ್ತದ್ಲ್ಲಲಿ ಜನಸಂಖ್ಯೆ ಏರಿಕೆಯಾಗಿದೆ. ಆದರೆ ಏರಿಕೆಯ ಗತಿಯು ಇಳಿಮುಖವಾಗಿದೆ. ಜನಸಂಖ್ಯೆಯ ತೀವ್ರ ಗತಿಯ ಬೆಳವಣಿಗೆ ಸಮಸ್ಯೆಯಿದ್ದರೆ ಅದು ರಾಜ್ಯದ ಹಿಂದುಳಿದ ಕೆಲವು ಜಿಲ್ಲೆಗಳಲ್ಲಿದೆ. ಅಲ್ಲಿ ಅದು ಕುಟುಂಬ ಯೋಜನೆಗೆ ಸಂಬಂಧಿಸಿದ ಸಂಗತಿಯಾಗಿರದೆ ಅದು ಅಭಿವೃದ್ಧಿಯ ಸಂಗತಿಯಾಗಿದೆ.

ನಮ್ಮ ರಾಜ್ಯದಲ್ಲಿ 2001 ರಿಂದ 2011ರ ನಡುವೆ ಒಟ್ಟು ದುಡಿಯುವ ವರ್ಗದ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಒಟ್ಟು ದುಡಿಮೆಗಾರರ ಸಂಖ್ಯೆಯು 2001ರಲ್ಲಿ 235.34 ಲಕ್ಷದಷ್ಟಿತ್ತು. ಅದು ಈಗ 2011ರಲ್ಲಿ 278.72ಲಕ್ಷದಷ್ಟಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ದುಡಿಯುವ ವರ್ಗದ ಪ್ರಮಾಣ 2001ರಲ್ಲಿ ಶೇ 44.53ರಷ್ಟಿದ್ದರೆ 2011ರಲ್ಲಿ ಅದು ಶೇ 45.53ರಷ್ಟಾಗಿದೆ.

ಇದೊಂದು ಸ್ವಾಗತಾರ್ಹ ಸಂಗತಿ. ಇದು ಅಭಿವೃದ್ಧಿಗೆ ಪೂರಕವಾದ ಪರಿಣಾಮ ಬೀರಬಹುದು. ಆದರೆ ಈ ಏರಿಕೆಯು ಲಿಂಗ ತಾರತಮ್ಯದಿಂದ ಕೂಡಿದೆ. ದುಡಿಮೆಗಾರರಲ್ಲಿನ ಏರಿಕೆಯು ಪುರುಷರಿಗೆ ಸಂಬಂಧಿಸಿದಂತೆ ಶೇ 56.64 ರಿಂದ ಶೇ 59.00ರಷ್ಟಾಗಿದ್ದರೆ ಮಹಿಳಾ ದುಡಿಮೆಗಾರರ ಪ್ರಮಾಣ ಶೇ 31.98ರಿಂದ ಶೇ 31.87ರಷ್ಟಾಗಿ ಒಟ್ಟಾರೆ ಒಂದು ರೀತಿಯಲ್ಲಿ ಸ್ಥಿರವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಟ್ಟು ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ 1991 ರಿಂದ 2011 ರ ಅವಧಿಯಲ್ಲಿ ಶೇ 34ರ ಆಸುಪಾಸಿನಲ್ಲಿ ಸ್ಥಿರವಾಗಿ ನಿಂತು ಬಿಟ್ಟಿದೆ.

ಕೃಷಿಕರೆಲ್ಲ ಕೃಷಿ ಕಾರ್ಮಿಕರು!
ಪ್ರಸ್ತುತ ಜನಗಣತಿಯು ತೋರಿಸುತ್ತಿರುವ ಬಹು ಮುಖ್ಯ ಸಂಗತಿಯೆಂದರೆ ಕೃಷಿಯಲ್ಲಿನ ದುಡಿಮೆಗಾರರ ಸ್ವರೂಪದಲ್ಲಾಗುತ್ತಿರುವ ಬದಲಾವಣೆ. ಕಳೆದ ದಶಕದಲ್ಲಿ ಕೃಷಿ ಭೂಹಿಡುವಳಿಗಾರರ ಸಂಖ್ಯೆ 68.83 ಲಕ್ಷದಿಂದ 65.80 ಲಕ್ಷಕ್ಕೆ ಇಳಿದಿದ್ದರೆ ಭೂರಹಿತ ದಿನಗೂಲಿ ದುಡಿಮೆಗಾರರ ಸಂಖ್ಯೆಯು 2001ರಲ್ಲಿ 62.26 ಲಕ್ಷದಷ್ಟಿದ್ದುದು 2011ರಲ್ಲಿ 71.56 ಲಕ್ಷದಷ್ಟಾಗಿದೆ. ಭೂಹಿಡುವಳಿಗಾರರ ಪ್ರಮಾಣ ಕಳೆದ ಒಂದು ದಶಕದಲ್ಲಿ ಶೇ 3.03ರಷ್ಟು ಇಳಿದಿದ್ದರೆ ಭೂರಹಿತ ದಿನಗೂಲಿ ದುಡಿಮೆಗಾರರ ಪ್ರಮಾಣ ಶೇ 9.3ರಷ್ಟು ಏರಿಕೆಯಾಗಿದೆ.

ಇದರ ಅರ್ಥವೇನು ? ನಮ್ಮ ರಾಜ್ಯದಲ್ಲಿದ್ದ ಸಣ್ಣ ಮತ್ತು ಅತಿಸಣ್ಣ ಭೂಹಿಡುವಳಿಗಾರರು ಕೃಷಿಯನ್ನು ನಿಭಾಯಿಸಲು ಸಾಧ್ಯವಾಗದೆ ಅದನ್ನು ತೊರೆದು ಕೂಲಿಕಾರರಾಗುತ್ತಿದ್ದಾರೆ. ಅವರು ಹಿಡುವಳಿಗಾರರಾಗಿದ್ದಾಗಲೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರು. ಏಕೆಂದರೆ ಅವರ ಹಿಡುವಳಿಯಿಂದ ಜೀವನ ನಿರ್ವಹಿಸುವಷ್ಟು ಉತ್ಪತ್ತಿಯೇನು ಬರುತ್ತಿರಲಿಲ್ಲ. ಈಗಲೂ ಅದೇ ಸ್ಥಿತಿ ಮುಂದುವರಿದಿದೆ. ಇದು ಮತ್ತೇನು ಅಲ್ಲದೆ ಬಡವರು ಮತ್ತಷ್ಟು ಬಡವರಾಗುತ್ತಿರುವ ಪರಿಯಾಗಿದೆ. ಜನಗಣತಿ 2011 ಹೊರಹಾಕುತ್ತಿರುವ ಮುಖ್ಯ ಸಂಗತಿ ಇದಾಗಿದೆ.

ಬಹಳ ಕುತೂಹಲದ ಸಂಗತಿಯೆಂದರೆ ಸಾಪೇಕ್ಷವಾಗಿ ಕೃಷಿಯನ್ನು ಅವಲಂಬಿಸಿ ಕೊಂಡಿರುವವರ ಪ್ರಮಾಣ 1991ರಲ್ಲಿ ಶೇ 57.78ರಷ್ಟಿದ್ದುದು 2001ರಲ್ಲಿ ಶೇ 55.70ರಷ್ಟಾಗಿ ಈಗ 2011ರಲ್ಲಿ ಅದು ಶೇ 49.28ರಷ್ಟಾಗಿದೆ. ನಮ್ಮ ರಾಜ್ಯದಲ್ಲಿ ಕೃಷಿಯೇತರ ದುಡಿಮೆಯನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಪ್ರಥಮ ಬಾರಿಗೆ ಶೇ 50 ಮೀರಿದೆ. ಜನಗಣತಿ 2011ರ ಪ್ರಕಾರ ನಮ್ಮ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವವರ ಸಂಖ್ಯೆಯು 137.36 ಲಕ್ಷವಾದರೆ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವವರ ಸಂಖ್ಯೆ 141.35 ಲಕ್ಷವಾಗಿದೆ. ನಮ್ಮ ರಾಜ್ಯವನ್ನು ಇನ್ನು ಮುಂದೆ ಕೃಷಿಯನ್ನು ಆಧರಿಸಿದ ಆರ್ಥಿಕತೆ ಎಂದು ವಿವರಿಸಲು ಬರುವುದಿಲ್ಲ. ಬಡವರು ಮತ್ತಷ್ಟು ಬಡವರಾಗುತ್ತಿರುವುದಕ್ಕೆ ಮತ್ತೊಂದು ಸೂಚನೆಯೆಂದರೆ ದುಡಿಯುವ ವರ್ಗದ ಲಿಂಗ ಅನುಪಾತ.

ಜನಗಣತಿಯಲ್ಲಿ ದುಡಿಮೆಗಾರರನ್ನು ಭೂಹಿಡುವಳಿಗಾರರು, ಭೂರಹಿತ ದಿನಗೂಲಿಗಳು, ಕೌಟುಂಬಿಕ ಕೈಗಾರಿಕಾ ದುಡಿಮೆಗಾರರು ಮತ್ತು ಇತರೆ ದುಡಿಮೆಗಾರರು ಎಂದು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ. ಈ ನಾಲ್ಕು ಗುಂಪುಗಳನ್ನು ಕೂಡಿಸಿದರೆ ನಮಗೆ ಒಟ್ಟು ದುಡಿಮೆಗಾರರ ಸಂಖ್ಯೆ ದೊರೆಯುತ್ತದೆ. ಈ ನಾಲ್ಕು ಗುಂಪುಗಳ ಪೈಕಿ ಭೂರಹಿತ ದಿನಗೂಲಿಗಳಲ್ಲಿ ಮತ್ತು ಕೌಟುಂಬಿಕ ಕೈಗಾರಿಕಾ ಕಾರ್ಮಿಕರಲ್ಲಿ ಮಾತ್ರ ಮಹಿಳಾ ದುಡಿಮೆಗಾರರ ಪ್ರಮಾಣ ಪುರುಷರಿಗಿಂತ ಅಧಿಕವಾಗಿದೆ. ಉಳಿದ ಎರಡು ಗುಂಪುಗಳಲ್ಲಿ ಅವರ ಪ್ರಮಾಣ ಶೇ 35 ದಾಟುವುದಿಲ್ಲ. ಅಂದರೆ ಎಲ್ಲಿ ದುಡಿಮೆಯು ತಾತ್ಪೂರ್ತಿಕವಾಗಿರುತ್ತದೋ ಮತ್ತು ಸಂಭಾವನೆ ಕೆಳಮಟ್ಟದಲ್ಲಿರುತ್ತದೋ ಅಲ್ಲಿ ಮಹಿಳೆಯರ ಪ್ರಮಾಣ ಅಧಿಕವಾಗಿರುತ್ತದೆ. ಇದು ಬಡತನವನ್ನು ಸೂಚಿಸುವ ಮತ್ತೊಂದು ಮುಖ್ಯ ಸಂಗತಿಯಾಗಿದೆ. ಭೂಹಿಡುವಳಿಗಾರರು ಮತ್ತು ಇತರೆ ದುಡಿಮೆಗಾರರು `ಉಳ್ಳವರನ್ನು ಪ್ರತಿನಿಧಿಸಿದರೆ ಭೂರಹಿತ ದಿನಗೂಲಿ ದುಡಿಮೆಗಾರರು ಮತ್ತು ಕೌಟುಂಬಿಕ ಕೈಗಾರಿಕಾ ದುಡಿಮೆಗಾರರು `ಉಳಿದವರನ್ನು ಪ್ರತಿನಿಧಿಸುತ್ತಾರೆ. ಜನಗಣತಿ ಮಾಹಿತಿಯು ಕೇವಲ ಅಂಕಿಅಂಶಗಳ ಕೋಶ ಮಾತ್ರವಲ್ಲ. ಅವು ಸಮಾಜದಲ್ಲಿನ ಉಳ್ಳವರು ಮತ್ತು ಉಳಿದವರ ನಡುವಿನ ರಾಜಕೀಯಾರ್ಥಿಕ ಸಂಬಂಧದ ನೆಲೆಗಳ ಮೇಲೆ ಬೆಳಕು ಚೆಲ್ಲುತ್ತವೆ.

ಆಸ್ಫೋಟಕಾರಿ ನಗರೀಕರಣ
ಕೃಷಿಯನ್ನು ಅವಲಂಬಿಸಿ ಕೊಂಡಿರುವವರ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೂ ಮತ್ತು ತೀವ್ರ ಗತಿಯಲ್ಲಿ ನಡೆಯುತ್ತಿರುವ ನಗರೀಕರಣಕ್ಕೂ ನಡುವೆ ಸಂಬಂಧವಿದೆ. ನಮ್ಮ ರಾಜ್ಯದಲ್ಲಿ ನಗರೀಕರಣ ಅತಿ ವೇಗವಾಗಿ ನಡೆಯುತ್ತಿದೆ. ಗ್ರಾಮೀಣ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ 1991-2001ರಲ್ಲಿ ವಾರ್ಷಿಕ ಶೇ 1.29ರಷ್ಟಿದ್ದುದು 2001-2011ರಲ್ಲಿ ಅದು ಶೇ 0.74ಕ್ಕೆ ಕುಸಿದಿದೆ. ಇದಕ್ಕೆ ಪ್ರತಿಯಾಗಿ ನಗರ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ 1991-2001ರಲ್ಲಿ ಶೇ 2.91ರಷ್ಟಿದ್ದುದು 2001-2011ರಲ್ಲಿ ಶೇ 3.15ಕ್ಕೆ ಏರಿಕೆಯಾಗಿದೆ. ಕಳೆದ ದಶಕದಲ್ಲಿ ಜನಸಂಖ್ಯೆಯಲ್ಲಿ ಆದ ನಿವ್ವಳ ಏರಿಕೆ 82.45 ಲಕ್ಷ. ಇದರಲ್ಲಿ ಗ್ರಾಮೀಣದ ಪಾಲು 25.80 ಲಕ್ಷವಾದರೆ (ಶೇ 31.29) ನಗರ ಪ್ರದೇಶದ ಪಾಲು 56.64 ಲಕ್ಷ (ಶೇ 68.71). `ಕೆಟ್ಟು ಪಟ್ಟಣ ಸೇರು' ಎಂಬ ನಾಣ್ಣುಡಿಯಂತೆ ಕೃಷಿಯನ್ನು ನಿರ್ವಹಿಸಲಾಗದೆ ಬದುಕನ್ನು ಮಾಡುವುದು ಕಷ್ಟವಾಗಿ ಬಡವರು ಕೃಷಿಯನ್ನು ಮತ್ತು ಗ್ರಾಮಗಳನ್ನು ತ್ಯಜಿಸಿ ನಗರ ಸೇರುತ್ತಿದ್ದಾರೆ. ಕೃಷಿ ಭೂಮಿಯೂ ಕೂಡ ಮೂಲಭೂತ ಸೌಲಭ್ಯ, ನೀರಾವರಿ ಯೋಜನೆಗಳು, ಎಸ್‌ಈಜಡ್‌ಗಳು, ನಗರ ಬಡಾವಣೆಗಳು, ಗಣಿಗಾರಿಕೆ, ಉದ್ದಿಮೆಗಳು ಮುಂತಾದವುಗಳ ಕಾರಣವಾಗಿ ಆಕ್ರಮಣಕ್ಕೆ ತುತ್ತಾಗಿ ಕುಗ್ಗುತ್ತಿದೆ.

ಬಹು ವಿಶಿಷ್ಟವಾದ ಸಂಗತಿಯೆಂದರೆ 2001ರಿಂದ 2011ರ ದಶಕದಲ್ಲಿ ಜನಸಂಖ್ಯೆಯಲ್ಲಿ ಉಂಟಾದ ನಿವ್ವಳ ಏರಿಕೆಯಲ್ಲಿ ಮಹಿಳೆಯರ ಮತ್ತು ಪುರುಷರ ಪ್ರಮಾಣ ಸಮಸಮವಾಗಿದೆ. ನಗರದ ಜನಸಂಖ್ಯೆಯಲ್ಲಿನ ಏರಿಕೆಯಲ್ಲಿ ಸಂತಾನೋತ್ಪತ್ತಿ-ನೈಸರ್ಗಿಕ ಏರಿಕೆಯ ಕಾಣಿಕೆಗಿಂತ ವಲಸೆಯಿಂದ ಉಂಟಾದ ಏರಿಕೆಯ ಕಾಣಿಕೆಯು ಅಧಿಕವಾಗಿರುವ ಸಾಧ್ಯತೆಯಿದೆ. ಈ ವಲಸೆಯಲ್ಲಿ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣಕ್ಕೆ ಸಮವಾಗಿದೆ ಎಂಬುದು ಜನಗಣತಿ ಮಾಹಿತಿಯಿಂದ ಸ್ಪಷ್ಟವಾಗುತ್ತದೆ. ಇದನ್ನು ಗ್ರಾಮೀಣ ಪ್ರದೇಶದಲ್ಲಿನ ಜನರ ದುಃಸ್ಥಿತಿಯ ಸೂಚಿಯಾಗಿ ಪರಿಗಣಿಸಬಹುದು. ಸಾಮಾನ್ಯ ಸಂದರ್ಭದಲ್ಲಿ ಜನಸಂಖ್ಯೆ ವಿಷಯದಲ್ಲಿದ್ದಂತೆ ಉಳಿದ ವಿಷಯಗಳಲ್ಲಿಯೂ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಕಡಿಮೆಯಿರಬೇಕು. ಆದರೆ ನಗರಕ್ಕೆ ಬರುತ್ತಿರುವ ವಲಸೆಗಾರರಲ್ಲಿ, ಭೂರಹಿತ ದಿನಗೂಲಿಗಳಲ್ಲಿ, ಕೌಟುಂಬಿಕ ಕೈಗಾರಿಕೆಗಳಲ್ಲಿನ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿರುವುದನ್ನು ಜನರ ದುಸ್ಥಿತಿಯ ಸೂಚಿಯಾಗಿ ಪರಿಗಣಿಸಬಹುದು. ಇವೆಲ್ಲವೂ ನಮ್ಮ ರಾಜ್ಯದಲ್ಲಿ ಬಡವರು ಮತ್ತಷ್ಟು ಬಡವರಾಗುತ್ತಿರುವ ಬೆಳವಣಿಗೆಯನ್ನು ತೋರಿಸುತ್ತವೆ.

ಜನಗಣತಿಯಲ್ಲಿ ದುಡಿಮೆಗಾರರನ್ನು ಪೂರ್ಣ ಮತ್ತು ಅರೆ ದುಡಿಮೆಗಾರರೆಂದು ವರ್ಗೀಕರಿಸಲಾಗುತ್ತದೆ. ಈ ಬಗೆಯ ವರ್ಗೀಕರಣದಲ್ಲಿನ ಲಿಂಗ ಅನುಪಾತ ತಾರತಮ್ಯದಿಂದ ಕೂಡಿರುವುದನ್ನು ಕಾಣಬಹುದು. ಪೂರ್ಣಾವಧಿ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ 30.12ರಷ್ಟಾದರೆ ಅರೆಕಾಲಿಕ (3 ರಿಂದ 6 ತಿಂಗಳು) ದುಡಿಮೆಗಾರರಲ್ಲಿ ಅವರ ಪ್ರಮಾಣ ಶೇ 57.10. ಬಡತನದ ಬವಣೆಯು ಸಾಮಾನ್ಯವಾಗಿ ಮಹಿಳೆಯರ ಮೇಲೆ ಹೆಚ್ಚು ಬೀಳುತ್ತದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ನಮ್ಮ ರಾಜ್ಯದಲ್ಲಿರುವ 71.56 ಲಕ್ಷ ಭೂರಹಿತ ದಿನಗೂಲಿ ದುಡಿಮೆಗಾರರು ಅತ್ಯಂತ ಅಭದ್ರತೆಯ ಬದುಕನ್ನು ದೂಡುತ್ತಿದ್ದಾರೆ. ಅರೆಕಾಲಿಕ ದುಡಿಮೆಯಲ್ಲಿ ನಿರತರಾಗಿರುವ ಮಹಿಳೆಯರ ಸಂಖ್ಯೆ 25.55 ಲಕ್ಷ. ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಬಡತನ ನಿವಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜನಗಣತಿ ಮಾಹಿತಿಯನ್ನು ಮಾರ್ಗದರ್ಶಿ ಸೂಚಿಯನ್ನಾಗಿ ಬಳಸಿಕೊಳ್ಳಬಹುದು.

ಜನಗಣತಿ ಅಂಕಿಅಂಶಗಳು ಅಭಿವೃದ್ಧಿಯ ಬಗ್ಗೆ ನೇರವಾಗಿ ಏನನ್ನೂ ಹೇಳುವುದಿಲ್ಲ. ಆದರೆ ಆ ಅಂಕಿಅಂಶಗಳ ಸೂಕ್ತ ವಿಶ್ಲೇಷಣೆ ಮೂಲಕ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಅದರಲ್ಲೂ ದುಡಿಮೆಗಾರರ ರಚನೆ-ಒಳರಚನೆ, ಅದರ ಲಿಂಗ ಸಂಬಂಧಿ ನೆಲೆಗಳು, ದುಡಿಮೆಗಾರ ವರ್ಗದ ಪ್ರಾದೇಶಿಕ ಆಯಾಮಗಳು ಮುಂತಾದವುಗಳ ಮೇಲೆ ಅದು ಬೆಳಕು ಚೆಲ್ಲುತ್ತದೆ. ನಾವು ಇಲ್ಲಿ ಯಾರನ್ನು ಭೂರಹಿತ ದಿನಗೂಲಿ ದುಡಿಮೆಗಾರರೆಂದು ಕರೆಯುತ್ತಿದ್ದೇವೆಯೋ ಅವರಲ್ಲಿ ಹೆಚ್ಚಿನ ಭಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಿರುತ್ತಾರೆ. ಬಡತನ, ಹಸಿವು, ಅಸಮಾನತೆ, ಅನಕ್ಷರತೆ ಮುಂತಾದವು ಈ ವರ್ಗದಲ್ಲಿ ಮಡುಗಟ್ಟಿಕೊಂಡಿರುತ್ತವೆ. ಜನಗಣತಿ ವರದಿಯು ಸರ್ಕಾರದ ನೀತಿ-ಕಾರ್ಯತಂತ್ರಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಪಡೆದಿರುತ್ತದೆ. ಈ ಬಗ್ಗೆ 2011ರ ಜನಗಣತಿ ಅಂಕಿಅಂಶಗಳನ್ನು ನಾವು ಪರಿಶೀಲಿಸಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.