ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಕನ್ನಡದ ಮಕ್ಕಳು 

Published : 24 ಜುಲೈ 2024, 23:10 IST
Last Updated : 24 ಜುಲೈ 2024, 23:10 IST
ಫಾಲೋ ಮಾಡಿ
Comments

‘ದರ್ಶನ ಕೊಡು ತಾಯಿ’ ಪ್ರಾರ್ಥಿಸಿದೆ. ಪ್ರತ್ಯಕ್ಷಳಾದಳು ಕನ್ನಡ ತಾಯಿ ಭುವನೇಶ್ವರಿ.

‘ಮಾತೆ, ಕನ್ನಡಿಗರೆಲ್ಲ ಸಂಕಷ್ಟದಲ್ಲಿದ್ದೇವೆ’. 

‘ಸರಿ, ನಾನೇನು ಮಾಡಬೇಕು ಹೇಳು’.

‘ತಾಯಿ, ನಮ್ಮ ರಾಜ್ಯಕ್ಕೆ ಒಬ್ಬ ಲೀಡರ್‌ ಬೇಕು’. 

‘ಪುತ್ರ, ಹೀಗೆ ಕೇಳುವ ಮೂಲಕ ರಾಜ್ಯದ ನಾಯಕರನ್ನ ಅವಮಾನಿಸುತ್ತಿರುವೆ’.

‘ಅವಮಾನಿಸುವುದು ಉದ್ದೇಶವಲ್ಲ ತಾಯಿ, ಆಂಧ್ರ–ಬಿಹಾರದ ನಾಯಕರಂತೆ ನಮ್ಮವರೂ ಆಗಬೇಕೆಂಬ ಆಸೆಯಷ್ಟೇ’. 

‘ಅವರವು ಮಿತ್ರಪಕ್ಷಗಳು, ಹಾಗಾಗಿ ಆ ಭಾಗ್ಯ’. 

‘ನಮ್ಮ ರಾಜ್ಯದಲ್ಲೂ ಒಂದು ಮಿತ್ರಪಕ್ಷ ಇದೆಯಲ್ಲವೇ ತಾಯಿ?’

‘ದಡ್ಡನಂತೆ ಮಾತನಾಡಬೇಡ, ರಾಜಕೀಯದಲ್ಲಿ ಸಂಖ್ಯೆಯೇ ಮುಖ್ಯವಲ್ಲವೇ?’

‘ಹೋಗಲಿಬಿಡು ತಾಯಿ, ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚು ಕೊಡುಗೆ ಇರದ ಬಗ್ಗೆಯೂ ಬೇಸರವಿದೆ’.

‘ದೇಶದಲ್ಲಿಯೇ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದಾರಲ್ಲವೇ ಪುತ್ರ’.

‘ಏನ್‌ ಬಿಡಮ್ಮ, ಖಾಸಗಿಯಲ್ಲಿ ಕನ್ನಡದ ಮಕ್ಕಳಿಗೆ ಮೀಸಲಾತಿ ಕಡ್ಡಾಯ ಮಾಡ್ತೀವಿ ಅಂತ ಆಸೆ ತೋರಿಸಿ ಇವರು ಸುಮ್ಮನಾಗಿಬಿಟ್ರು. ಹೆಂಗಾದರೂ ಆಗ್ಲಿ, ನಾವೂ ಇಂಗ್ಲಿಷ್‌ ಕಲಿತು ಐ.ಟಿ. ಕಂಪನಿಗೆ ಸೇರ್ಕೊಂಡು ಕೆಲಸ ಮಾಡ್ತಿದ್ರೆ, ಈಗ ದಿನಕ್ಕೆ 14 ತಾಸು ಕೆಲಸ ಕೊಡೋದಕ್ಕೆ ಯೋಚನೆ ಮಾಡ್ತಿದ್ದಾರೆ, ಹೊಟ್ಟೆ ಉರಿಯಲ್ವ ತಾಯಿ’. 

‘ನೀನು ಸೋಮಾರಿಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಆ ರೀತಿ ಮಾಡುತ್ತಿದೆ ಕಂದ, ಮೇಲಾಗಿ ನೀನು ಹೆಚ್ಚು ದುಡಿದು, ಹೆಚ್ಚು ಟ್ಯಾಕ್ಸ್‌ ಕಟ್ಟಬೇಡವೇ ಮಗು...’

‘ಯಾಕಮ್ಮ, ನಾವು ತೆರಿಗೆ ಕಟ್ಟಿ ಉತ್ತರ, ಪೂರ್ವದ ರಾಜ್ಯಗಳನ್ನ ಉದ್ಧಾರ ಮಾಡೋಕಾ?’ 

‘ಉದ್ಧಟತನ ಬೇಡ, ಇಂಥವೆಲ್ಲ ಮಾತನಾಡಿ ದೇಶದ್ರೋಹಿ ಆಗಬೇಡ’.

‘ತಾಯಿ, ನಾವಿನ್ನೇನು ಮಾಡಬೇಕು ಹೇಳು’.

‘ಕನ್ನಡದವರಿಗೆ ಕೆಲಸ ನೀಡುವ ವಿಚಾರವನ್ನ ವಿರೋಧಿಸಿದವರ ‘ಪೇ ಆ್ಯಪ್‌’ ಅನ್ನು ಕನ್ನಡಿಗರು ಅನ್‌ಇನ್‌ಸ್ಟಾಲ್‌ ಮಾಡಿದರಲ್ಲವೇ?’ 

‘ಹೌದು ತಾಯಿ’. 

‘ಅದೇ ರೀತಿ, ರಾಷ್ಟ್ರೀಯ ಪಕ್ಷಗಳನ್ನೂ ರಾಜ್ಯದಿಂದ ಅನ್‌ಇನ್‌ಸ್ಟಾಲ್‌ ಮಾಡಿಬಿಡಿ’ ಆದೇಶಿಸಿ ಮಾಯವಾದಳು ಮಾತೆ ಭುವನೇಶ್ವರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT