ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ದೇವಮೂಲೆ ಅದೃಷ್ಟ!

ಚುರುಮುರಿ: ದೇವಮೂಲೆ ಅದೃಷ್ಟ! 
Published 26 ಜೂನ್ 2024, 18:47 IST
Last Updated 26 ಜೂನ್ 2024, 18:47 IST
ಅಕ್ಷರ ಗಾತ್ರ

ಗಂಡ–ಹೆಂಡತಿ ಸಂಬಳದಲ್ಲಿ ಖರ್ಚು ಕಳೆದು, ಇಬ್ಬರೂ ಒಂದಿಷ್ಟು ಹಣ ತೆಗೆದಿಡುವುದು ನಮ್ಮ ಮನೆಯ ಅಲಿಖಿತ ನಿಯಮ. 

‘ಏನು ಈ ಸಲ ಸೇವಿಂಗ್ಸ್‌ ದುಡ್ಡು ಕಡಿಮೆ ಆಗಿದೆಯಲ್ಲ’ ಹೆಂಡತಿಗೆ ಕೇಳಿದೆ. 

‘ಏನು ಮಾಡೋದು ರೀ, ಹಾಲು, ತರಕಾರಿ ರೇಟ್ ಜಾಸ್ತಿಯಾಗಿದೆ. ಅದಕ್ಕೆ, ದುಡ್ಡು ಕಡಿಮೆ ಆಗಿದೆ. ನೀವು ಕೂಡ ಕಡಿಮೆ ದುಡ್ಡು ಇಟ್ಟಿದ್ದೀರಲ್ಲ’ ಹಣ ಎಣಿಸುತ್ತಾ ಕೇಳಿದಳು. 

‘ಪೆಟ್ರೋಲ್‌ ರೇಟ್‌ ಜಾಸ್ತಿಯಾಗಿ, ಆಲ್ಕೊಹಾಲಿನ ರೇಟು ಸ್ವಲ್ಪ ಕಡಿಮೆಯಾಯ್ತಲ್ಲ, ಹಾಗಾಗಿ...’ ನಕ್ಕೆ. 

ಕೆಕ್ಕರಿಸಿ ನೋಡಿದ ಪತ್ನಿ, ‘ನೋಡಿ, ನೀವು ಸಪೋರ್ಟ್‌ ಮಾಡೋ ಪಾರ್ಟಿಯವರಿಗೆ ಸೆಂಟ್ರಲ್‌ನಲ್ಲಿ ಫುಲ್‌ ಮೆಜಾರಿಟಿ ಬರಲಿಲ್ಲ ಅಂತ ಎಲ್ಲದರ ರೇಟ್‌ ಜಾಸ್ತಿ ಮಾಡ್ತಿದ್ದಾರೆ’ ಎಂದಳು.  

‘ನೀನು ಸಪೋರ್ಟ್‌ ಮಾಡೋ ಪಾರ್ಟಿಯವರಿಗೆ ರಾಜ್ಯದಲ್ಲಿ ಜಾಸ್ತಿ ಸೀಟು ಬರಲಿಲ್ಲ ಅಂತ ಇವರೂ ರೇಟ್‌ ಜಾಸ್ತಿ ಮಾಡ್ತಿದಾರಲ್ಲ’ ತಿರುಗೇಟು ನೀಡಿದೆ. 

‘ಮತ್ತೆ ನೀವೇ ಆಗ ಹೇಳ್ತಿದ್ರಿ, ಪೆಟ್ರೋಲ್‌ ರೇಟ್‌ 500 ರೂಪಾಯಿ ಆದರೂ ಕೊಡ್ತೀವಿ ಅಂತ, ಈಗ ನೋಡಿದ್ರೆ ವಟ ವಟ ಅಂತಿದೀರಿ’.

‘ಆಗ ನೀವೂ ಊರ್‌ ತುಂಬಾ ಪ್ರೊಟೆಸ್ಟ್‌ ಮಾಡಿದ್ರಿ, ಈಗ ನೀವೇ ಜಾಸ್ತಿ ಮಾಡಿಲ್ವ’ ಸಮರ್ಥಿಸಿಕೊಂಡೆ. 

‘ರೇಟ್‌ ಜಾಸ್ತಿ ಮಾಡಿದ್ರೇನಾಯ್ತು ಬಿಡ್ರೀ, ನಮ್ಮಿಬ್ಬರದೂ ಸ್ಯಾಲರಿ ಜಾಸ್ತಿ ಆಗಿಲ್ವ’ ವಾದಿಸಿದಳು ಮಡದಿ. 

‘ಹಂಗಂತ, ಸಂಬಳದ ಹಣ ಪೂರ್ತಿ ಖಾಲಿ ಮಾಡಿಸಲೇಬೇಕು ಅಂತ ಡಿಸೈಡ್‌ ಮಾಡಿದಾರಾ ನಿಮ್‌ ಸರ್ಕಾರದವರು’ ರೇಗಿದೆ. 

‘ಯಾವ ಪಾರ್ಟಿಯವರು ರೇಟ್‌ ಜಾಸ್ತಿ ಮಾಡಿದ್ರೂ ನಮ್ಮಿಬ್ಬರ ಸಂಬಳ ತಾನೆ ಖಾಲಿ
ಯಾಗೋದು’ ಎಂದಳು ಸಮಾಧಾನದ ದನಿಯಲ್ಲಿ. 

‘ಈ ಎಲ್ಲ ಕಷ್ಟ ಬೇಡವೇ ಬೇಡಮ್ಮ. ಹೋಗಿ ಚನ್ನಪಟ್ಟಣದಲ್ಲಿ ಸೆಟಲ್‌ ಆಗೋಣ’ 

‘ಅಲ್ಲಿಗ್ಯಾಕ್ರಿ?’

‘ಅದು ದೇವಮೂಲೆಯಲ್ಲಿದೆ. ಅಲ್ಲಿಗೆ ಹೋದಮೇಲಾದರೂ ನಮ್ ಅದೃಷ್ಟ ಖುಲಾಯಿಸಿ ಜಾಸ್ತಿ ದುಡ್ಡು ಉಳಿಯುತ್ತೋ ನೋಡೋಣ’ ಎಂದೆ. ಇಬ್ಬರೂ ನಗತೊಡಗಿದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT