ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ನೆಟ್‌ವರ್ಕಿಂಗ್‌ ಸಿ.ಎಂ! 

Published : 11 ಸೆಪ್ಟೆಂಬರ್ 2024, 21:57 IST
Last Updated : 11 ಸೆಪ್ಟೆಂಬರ್ 2024, 21:57 IST
ಫಾಲೋ ಮಾಡಿ
Comments

‘ಹೊರಗೆ ಬನ್ರೀ... ಮೂವರು ಎಮ್ಮೆಲ್ಲೆಗಳು ನಿಮಗಾಗಿ ಕಾಯ್ತಿದ್ದಾರೆ’ ಕೂಗಿದಳು ಹೆಂಡತಿ. 

‘ಬಂದೆ’ ಎನ್ನುತ್ತಾ ಹಾಲ್‌ಗೆ ಬಂದೆ. 

‘ಏನ್ ಸರ್, ನಮ್ಮನ್ನು ಕರೆಸಿದ ಉದ್ದೇಶ’ ಕೇಳಿದರು ಶಾಸಕರು. 

‘ನಿಮಗೆ ಗೊತ್ತಿಲ್ಲದ್ದು ಏನಿದೆ ಇವರೇ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆ ನಡೆಯುತ್ತಿದೆಯಲ್ವ. ಸದ್ಯಕ್ಕೆ ಆ ಹುದ್ದೆ ಖಾಲಿ ಇಲ್ಲ ಅಂತ ನಂಗೊತ್ತು. ಆದರೂ, ಒಂದು ವೇಳೆ ಖಾಲಿಯಾದರೆ ನಾನೇ ಏಕೆ ಸಿ.ಎಂ. ಆಗಬಾರದು ಅನಿಸಿತು. ಅದಕ್ಕೆ ನಿಮ್ಮ ಅಭಿಪ್ರಾಯ ಕೇಳಲು ಕರೆದೆ’ ಎಂದೆ.

ನನ್ನನ್ನು ಅಡಿಯಿಂದ ಮುಡಿಯವರೆಗೂ ನೋಡಿದ ಶಾಸಕರು, ‘ಸರ್, ನೀವಾ?’ ಎಂದರು!

ಶಾಸಕರ ಪ್ರತಿಕ್ರಿಯೆ ನೋಡಿ ನನಗೆ ಇರುಸುಮುರುಸು ಎನಿಸಿದರೂ ಮುಂದುವರಿದು ಹೇಳಿದೆ, ‘ಹ್ಞೂಂ... ಯಾಕಾಗಬಾರದು?’ 

‘ಆಗಬಹುದು ಸರ್. ಆದರೆ, ನಾವೊಂದು ಮೂವರು ಶಾಸಕರು ಬಿಟ್ಟರೆ ಯಾರೂ ನಿಮ್ಮ ಪರವಾಗಿ ಇಲ್ಲ. ಎಷ್ಟೋ ಎಮ್ಮೆಲ್ಲೆಗಳಿಗೆ ನಿಮ್ಮ ಹೆಸರೂ ಗೊತ್ತಿಲ್ಲ, ಅಂಥದ್ದರಲ್ಲಿ...’ ಸ್ವಲ್ಪ ಹಿಂಜರಿಕೆಯಿಂದಲೇ ಹೇಳಿದರು ಬಂದವರಲ್ಲಿ ಸ್ವಲ್ಪ ಹಿರಿಯರಾಗಿದ್ದ ಶಾಸಕರೊಬ್ಬರು. 

‘ನೋಡಿ ಇವರೇ, ನಾನು ರಾಜಕೀಯಕ್ಕೆ ಬರುವ ಮೊದಲು ನೆಟ್‌ವರ್ಕಿಂಗ್ ಜಾಬ್‌ನಲ್ಲಿದ್ದೆ’ 

‘ಹೌದು, ಅದಕ್ಕೇನೀಗ?’ 

‘ಅದೇ ಸ್ಟ್ರ್ಯಾಟಜಿಯನ್ನು ಇಲ್ಲಿ ಫಾಲೋ ಮಾಡೋಣ. ಅಂದರೆ, ನೀವು ಮೂವರು ಶಾಸಕರು, ಒಬ್ಬೊಬ್ಬರು ಮೂವರು ಶಾಸಕರನ್ನು ನನ್ನ ಬಳಿ ಕರೆದುಕೊಂಡು ಬನ್ನಿ. ಆ 9 ಜನ ಎಮ್ಮೆಲ್ಲೆಗಳು ಮತ್ತೆ 9 ಎಮ್ಮೆಲ್ಲೆಗಳನ್ನು ಕರೆದುಕೊಂಡು ಬರಲಿ. ಆಗ ನನ್ನ ನೆಟ್‌ವರ್ಕ್‌ ದೊಡ್ಡದಾಗುತ್ತೆ. ಹೆಚ್ಚು ಶಾಸಕರ ಬೆಂಬಲ
ಹೊಂದಿರುವವರನ್ನೇ ಸಿ.ಎಂ. ಮಾಡಬೇಕು ತಾನೆ?’ ಎಂದು ಖುಷಿಯಲ್ಲಿ ಜೋರಾಗಿ ನಗು
ತ್ತಿರುವಾಗಲೇ ಮುಖದ ಮೇಲೆ ನೀರು ಬಿತ್ತು!

‘ಏಳ್ರೀ ಸಾಕು, ಯಾವಾಗಲೂ ಬಡಬಡಸ್ತಿರ್ತೀರ’ ಎಂದು ಜೋರು ಮಾಡಿದ ಹೆಂಡತಿ, ‘ಏನ್‌ ಕನಸು ಕಾಣ್ತಿದ್ರಿ’ ಎಂದು ಕೇಳಿದಳು.

‘ಸಿ.ಎಂ ಆಗಿದ್ದೆ ಕಣೆ’ ಅಂದೆ. 

‘ಸಿಯೆಮ್ಮಾ?!’ 

‘ಹ್ಞೂಂ, ಕಾಮನ್‌ ಮ್ಯಾನ್‌’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT