ಸ್ವಾಯತ್ತ ಮತ್ತು ಸಾಂವಿಧಾನಿಕ ಸಂಸ್ಥೆಗಳ ನಡೆ, ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಇದ್ದರಷ್ಟೇ ಸಾಲದು, ಅದು ಪ್ರತೀ ಹಂತದಲ್ಲಿ ಜನರಿಗೆ ಮನವರಿಕೆಯೂ ಆಗಬೇಕು. ಶಾಸಕರ ಅನರ್ಹತೆಯಿಂದಾಗಿ ರಾಜ್ಯದ 15 ಕ್ಷೇತ್ರಗಳಿಗೆ ಘೋಷಣೆಯಾದ ಉಪಚುನಾವಣೆಗೆ ಸಂಬಂಧಿಸಿ, ಚುನಾವಣಾ ಆಯೋಗದ ನಡೆಯಿಂದಾಗಿ ಈ ವಿಚಾರವನ್ನು ನೆನಪಿಸಬೇಕಾಗಿದೆ.

ಇದೇ 21ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯು ‘ಅನರ್ಹ ಶಾಸಕರಿಗೆ ಸ್ಪರ್ಧಿಸುವ ಹಕ್ಕು ಇದೆಯೇ ಎಂಬುದು ನಮ್ಮ ವ್ಯಾಪ್ತಿಯಲ್ಲಿರುವ ವಿಚಾರ ಅಲ್ಲ’ ಎಂದಿದ್ದರು. ಆದರೆ, ಶಾಸಕರ ಅನರ್ಹತೆಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಂದೆ ಚುನಾವಣಾ ಆಯೋಗದ ಪರ ವಕೀಲರು, ‘ಅನರ್ಹ ಶಾಸಕರು ಸ್ಪರ್ಧಿಸುವುದಕ್ಕೆ ಆಯೋಗದ ಅಡ್ಡಿ ಇಲ್ಲ’ ಎಂದು ಸ್ವಯಂಪ್ರೇರಣೆಯಿಂದ ಹೇಳಿದರು.

ವಿರೋಧಾಭಾಸದ ಈ ನಿಲುವು ಜನರಿಗೆ ನೀಡುವ ಸಂದೇಶವಾದರೂ ಏನು? ಗುರುವಾರ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಕರಣ ಇತ್ಯರ್ಥ ಆಗುವವರೆಗೆ ಉಪಚುನಾವಣೆ ಮುಂದೂಡುವುದಾಗಿ ಆಯೋಗವು ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತಾವವನ್ನು ಇರಿಸಿತು. ಅದಕ್ಕೆ ಕೋರ್ಟ್ ಸಮ್ಮತಿ ಸೂಚಿಸಿದ ಪರಿಣಾಮವಾಗಿ ಚುನಾವಣೆ ಮುಂದಕ್ಕೆ ಹೋಯಿತು.ಅನರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರವು ಚುನಾವಣೆ ಘೋಷಿಸುವುದಕ್ಕೆ ಮುನ್ನ ಆಯೋಗಕ್ಕೆ ತಿಳಿದಿರಲಿಲ್ಲವೇ? ಹಾಗಿದ್ದೂ ಉಪಚುನಾವಣೆ ಘೋಷಿಸುವ ತರಾತುರಿ ಏನಿತ್ತು ಎನ್ನುವ ಪ್ರಶ್ನೆ ಕಾಡದಿರದು. ಈಗ ಮತ್ತೊಂದು ಅಚ್ಚರಿಯ ನಿರ್ಧಾರ ಆಯೋಗದಿಂದ ಹೊರಬಿದ್ದಿದೆ. ಚುನಾವಣೆ ಮುಂದೂಡಿದ ಮಾರನೆಯ ದಿನವೇ ಉಪಚುನಾವಣೆಯ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಿ ಆಯೋಗ ಅಧಿಸೂಚನೆ ಹೊರಡಿಸಿದೆ. ಇದನ್ನು ಇನ್ನೊಂದು ರೀತಿಯ ಎಡವಟ್ಟು ಎನ್ನದೆ ವಿಧಿಯಿಲ್ಲ.

ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆ ಮತ್ತು ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಮಹತ್ತರವಾದ ಹೊಣೆಗಾರಿಕೆ ಇದೆ. ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಮೂಡುವ ಅನುಮಾನ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಯೋಗದ ನಡೆ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಮೂಡಿವೆ.

ಈ ವರ್ಷ ನಡೆದ ಲೋಕಸಭಾ ಚುನಾವಣೆ ವೇಳೆ, ಆಯೋಗದ ತೀರ್ಮಾನಗಳ ಬಗ್ಗೆ ಎನ್‌ಡಿಎಯೇತರ ಪಕ್ಷಗಳು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಪ್ರಕರಣಗಳಲ್ಲಿ, ‘ನೀತಿ ಸಂಹಿತೆ ಉಲ್ಲಂಘಿಸಿಲ್ಲ’ ಎಂದು ಆಯೋಗವು ತೀರ್ಪು ಕೊಟ್ಟಿತ್ತು. ಆದರೆ, ಆಯೋಗದ ಮೂವರು ಆಯುಕ್ತರಲ್ಲಿ ಒಬ್ಬರಾದ ಅಶೋಕ್ ಲವಾಸಾ ಅವರು ಈ ಸಭೆಯಲ್ಲಿ ಭಿನ್ನಮತ ವ್ಯಕ್ತಪಡಿಸಿದ್ದರು ಎಂದು ಆಗ ವರದಿಯಾಗಿತ್ತು. ಅವರ ಪತ್ನಿಗೆ ಆದಾಯ ತೆರಿಗೆ ಇಲಾಖೆಯು ಕೆಲ ದಿನಗಳ ಹಿಂದೆ ನೋಟಿಸ್ ನೀಡಿದೆ.

ಇದು ಕಾಕತಾಳೀಯವೇ ಇರಬಹುದು. ಆದರೆ, ಆಯೋಗದ ಮೇಲೆ ನಿಯಂತ್ರಣ ಹೇರಲು ಅಧಿಕಾರಸ್ಥರು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನವನ್ನು ಇದು ಜನರ ಮನಸ್ಸಿನಲ್ಲಿ ಮೂಡಿಸದೇ ಇರದು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆರೋಪಗಳು ಕೇಳಿಬಂದ ಬಳಿಕವಾದರೂ ಆಯೋಗವು ತನ್ನ ವಿಶ್ವಾಸಾರ್ಹತೆಯ ಬಗ್ಗೆ ಶಂಕೆ ಮೂಡದಂತೆ ಹೆಚ್ಚಿನ ಎಚ್ಚರ ವಹಿಸಬೇಕಿತ್ತು. ಆದರೆ, ಆಯೋಗವು ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ ಎಂದು ಹೇಳುವ ರೀತಿಯಲ್ಲಿ ಅದರ ವರ್ತನೆ ಇಲ್ಲ. ಕರ್ನಾಟಕದ ಉಪಚುನಾವಣೆ ವಿಚಾರದಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಿದೆ.

‘ಅನರ್ಹ ಶಾಸಕರ ಸ್ಪರ್ಧೆಗೆ ಅಡ್ಡಿ ಇಲ್ಲ’ ಎಂದು ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದರ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಅಷ್ಟಕ್ಕೂ ಅರ್ಹತೆ ಅಥವಾ ಅನರ್ಹತೆಯನ್ನು ನಿರ್ಧರಿಸುವುದು ಆಯೋಗದ ವ್ಯಾಪ್ತಿಗೆ ಬರುವ ವಿಚಾರವೇ? ವಿವೇಚನಾರಹಿತವಾಗಿ ಚುನಾವಣೆ ದಿನಾಂಕ ಘೋಷಿಸುವುದು, ಬಳಿಕ ಮುಂದೂಡುವ ಪ್ರಸ್ತಾವ ಇಡುವುದು, ಅದರ ಬೆನ್ನಿಗೇ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಿ ಪ್ರಕಟಿಸುವುದು ಆಯೋಗದ ದಕ್ಷತೆಯನ್ನು ಪ್ರಶ್ನಿಸುವಂತೆ ಮಾಡುವುದಿಲ್ಲವೇ? 15 ಕ್ಷೇತ್ರಗಳ ಉಪಚುನಾವಣೆಯ ವಿಚಾರದಲ್ಲಿ ವಿವೇಚನಾಯುತ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ ಆಯೋಗವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯನ್ನು ಲೋಪರಹಿತವಾಗಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಜನರು ಭಾವಿಸುವುದು ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.